

ನಟ ಶಿವರಾಜ್‌ಕುಮಾರ್ ಅಭಿನಯದ ಮತ್ತೊಂದು ಚಿತ್ರ ಸದ್ದು ಮಾಡಲಾರಂಭಿಸಿದೆ. ಬಹು ನಿರೀಕ್ಷೆಯೊಂದಿಗೆ ಆರಂಭಗೊಂಡ 'ಅಂದರ್ ಬಾಹರ್' ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು.
ಮಲಯಾಳಿ ಬೆಡಗಿ ಪಾರ್ವತಿ ಮೆನನ್ ನಾಯಕಿ. ರಜನೀಶ್, ಪ್ರಸಾದ್‌ರಾವ್, ಅಂಬರೀಷ್, ಭಾಸ್ಕರ್, ಅವಿನಾಶ್ ನಿರ್ಮಾಪಕರು. ಫಣೀಶ್ ಎಸ್.ರಾಮನಾಥ್‌ಪುರ ನಿರ್ದೇಶಕರು. ಅರುಂಧತಿ ನಾಗ್, ಶ್ರೀನಾಥ್, ಶಶಿಕುಮಾರ್, ಸೃಜನ್ ಲೋಕೇಶ್, ರಘುರಾಮ್, ಸ್ಫೂರ್ತಿ ಮತ್ತಿತರರು ಅಭಿನಯಿಸಿದ್ದಾರೆ. 'ಜೈಹೋ...' ಹಾಡಿನ ಖ್ಯಾತಿಯ ವಿಜಯಪ್ರಕಾಶ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಟ ಶಶಿಕುಮಾರ್ ಒಂದಷ್ಟು ಮನಂರಜನೆಯ ಜತೆಗೆ ತರಲೆ, ತುಂಟಾಗಳನ್ನೂ ಮಾಡಿ ಕಾರ್ಯಕ್ರಮಕ್ಕೆ ರಂಗೇರಿಸಿದರು. ನಟ ಜಗ್ಗೇಶ್ ಆಡಿಯೋ ಸಿಡಿ ಬಿಡುಗಡೆ ಮಾಡಿದರು. ಈಗಾಗಲೇ ನಿರ್ದೇಶಕ ಎ.ಪಿ.ಅರ್ಜುನ್ ಬರೆದಿರುವ 'ನನ್ನ ವಂಶ ರಾಜಂದು, ಹೆಸರೊಂದು ಮುತ್ತಿಂದು ಈ ಗುಂಡಿಗೆ ಬಾರಿ ಗಟ್ಟಿ...' ಎನ್ನುವ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿದೆ ಎಂಬುದು ಮಾರುಕಟ್ಟೆಯ ಸುದ್ದಿ. 'ಶಿವಣ್ಣರೊಂದಿಗೆ ಮೊದಲ ಬಾರಿಗೆ ಚಿತ್ರ ಮಾಡಿದ್ದೇನೆ. ಒಳ್ಳೆಯ ಸಿನಿಮಾ. ಆ್ಯಕ್ಷನ್ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಕೂಡ ಇದೆ. ನೂರಕ್ಕೆ ನೂರು ಮನರಂಜನಾ ಸಿನಿಮಾ ಇದು' ಎನ್ನುವುದು ನಿರ್ದೇಶಕ ಫಣೀಶ್‌ರ ಮಾತು.
ಶಿವರಾಜ್‌ಕುಮಾರ್ ಕುಟುಂಬ ಸಮೇತ ಬಂದಿದ್ದರು. ಜೊತೆಗೆ ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಕೂಡ ಇದ್ದರು. ತುಂಬಿದ ಸಭಾಂಗಣದಲ್ಲಿ ಮೈಕ್ ಹಿಡಿದು ನಿಂತ ಶಿವಣ್ಣ, 'ಇಡೀ ತಂಡ ಸೇರಿ ಒಂದು ಒಳ್ಳೆಯ ಸಿನಿಮಾ ಮಾಡಿದ್ದೇವೆ. ಎಲ್ಲರಿಗೂ ಇಷ್ಟವಾಗುತ್ತದೆ. ಇವತ್ತಿನ ನಿಜವಾದ ಹೀರೋ ಸಂಗೀತ ನಿರ್ದೇಶಕ ವಿಜಯಪ್ರಕಾಶ್. ತುಂಬಾ ಒಳ್ಳೆಯ ಹಾಡುಗಳನ್ನು ಮತ್ತು ಟ್ಯೂನ್‌ಗಳನ್ನು ಕೊಟ್ಟಿದ್ದಾರೆ' ಎಂದು ಸಂಭ್ರಮ ವ್ಯಕ್ತಪಡಿಸಿದರು. ವಿಜಯಪ್ರಕಾಶ್ ದಿಲ್ ಖುಷ್ ಆಗಿದ್ದರು. ಆಶ್ವಿನಿ ಆಡಿಯೋ ಸಂಸ್ಥೆ ಸಿಡಿಯನ್ನು ಮಾರುಕಟ್ಟೆಗೆ ತಂದಿದೆ.