Bad ಗರ್ಲ್

Bad ಗರ್ಲ್
Updated on: 

ಅಪ್ಪಿ, ತಪ್ಪಿ ನೊಣವೋ ಸೊಳ್ಳೆಯೊ ಈಕೆಯ ಮೈ ಮೇಲೆ ಒರಗಿದರೆ ಸರ್ರನೆ ಜಾರಿ ಬೀಳುತ್ತದೆ. ಅಷ್ಟರ ಮಟ್ಟಿಗೆ ನೈಸ್ ರಸ್ತೆಗಿಂತಲೂ ಸ್ಪೈಸಿ ಮೈನುಣುಪಿನ ಬಾಲಿವುಡ್ ಬಾಲೆ. ಮೈ ಬಣ್ಣ ನೋಡಿ ಈಕೆಯನ್ನು ವಿದೇಶದ ಬಾಲೆ ಎಂದುಕೊಳ್ಳುವ ಹಾಗಿಲ್ಲ. ಏಕೆಂದರೆ ಈಕೆ ಶಿಮ್ಲಾದ ಮಂಜು ಗಡ್ಡೆಯಿಂದ ಜಾರಿ, ಬಾಂಬೆಗೆ ಬಂದು ಚಿತ್ರರಸಿಕರ ಎದೆಯಾಳದಲ್ಲಿ ಮಂಜಿನಂತೆ ಕರಗುತ್ತಿದ್ದಾಳೆ. ಹೆಸರು ಪ್ರೀತಿ ಸೂದ್. ಅಂದಹಾಗೆ ಈಕೆ ಖಳನಟ ಸೋನು ಸೂದ್‌ರ ಖಾಸಾ ತಂಗಿಯೂ ಅಲ್ಲ, ಅವರ ಪಕ್ಕದ ಮನೆಯ ಗೊಂಬೆಯೂ ಅಲ್ಲ.
 ಈಗಾಗಲೇ ಒಂದಿಷ್ಟು ಸುದ್ದಿ ಮಾಡಿರುವ 'ಬ್ಯಾಡ್ ಗರ್ಲ್‌' ಎನ್ನುವ ಮ್ಯೂಸಿಕ್ ಅಲ್ಬಂನಲ್ಲಿ ಈಕೆ ಮೈ ಚಳಿ ಬಿಟ್ಟು ಕುಣಿದು ರಸಿಕರ ಎದೆಗೆ ಬಿಸಿ ಏರಿಸಿದ್ದಾಳೆ. ಸಂಜಯ್ ಲೀಲಾ ಬನ್ಸಾಲಿ ಅವರ ಸಹಾಯಕ ದಿರಾಜ್ ಸಿಂಗ್ ನಿರ್ದೇಶಿಸಿರುವ ಆ ಅಲ್ಬಂಗೆ ಸಂಜೀವ್ ಶ್ರೀವತ್ಸ ಸಂಗೀತ, ಸಾಯಿ ಕಬೀರ್ ಸಾಹಿತ್ಯ ಇದೆ. ಅಲ್ಬಂ ಬಿಡುಗಡೆ ಸಂದರ್ಭದಲ್ಲಿ 'ನಾನು ಚಿತ್ರರಂಗದಲ್ಲಿ ನೆಲೆಯೂರಬೇಕು ಎಂದುಕೊಂಡಿದ್ದೇನೆ. ಬಾಲಿವುಡ್ ನನಗೆ ಅವಕಾಶ ಕೊಡುತ್ತದೆ ಎನ್ನುವ ನಂಬಿಕೆ ಇದೆ' ಎಂದು ನಗೆ ಚೆಲ್ಲಿದ್ದ ಪ್ರೀತಿ ಸೂದ್‌ಗೆ ಬಾಲಿವುಡ್ ಅವಕಾಶ ಕೊಟ್ಟಿತೋ ಇಲ್ಲವೋ ಕನ್ನಡಿಗರಂತೂ ಈ ಬೆಡಗಿಯನ್ನು ಗಾಂಧಿನಗರಕ್ಕೆ ತಂದು ಪುನೀತರಾಗಿದ್ದಾರೆ.

 ಲಕ್ಕಿಶಂಕರ್ ನಿರ್ದೇಶನದ, ಇತ್ತೀಚೆಗೆ ಬಿಡುಗಡೆಯಾದ 'ದೇವ್ರಾಣೆ' ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ನೂರಾರು ಸಹ ಕಲಾವಿದರ ನಡುವೆ ನಿಂತು 'ಹುಚ್ಚುಮುಂಡೆ ಮದುವೆಯಲಿ ಉಂಡೋನೆ ಜಾಣ ಉಂಡುಕೊಂಡು ಹೋಗೋ...' ಎನ್ನುತ್ತಿದ್ದರೆ ಈಕೆಯ ದೇಹ ಸಿರಿಗೆ ಚಿತ್ರ ನೋಡುತ್ತಿದ್ದವರು ಫಿದಾ! ಬ್ಯಾಲೆ, ಸಾಲ್ಸಾ, ಕಥಕ್ ಕಲಿತಿರುವ ಈಕೆ ನೃತ್ಯದ ಎಲ್ಲ ಮಟ್ಟುಗಳನ್ನೂ ಬಲ್ಲ ಮದನಾರಿ. ಕುಣಿದೂ ಕುಣಿದು ಕ್ಯಾಮೆರಾ ಮುಂದೆ ಬಂದವಳು. ರ್ಯಾಂಪ್ ಶೋಗಳಲ್ಲಿ ಕ್ಯಾಟ್ ವಾಕ್ ಮಾಡುತ್ತಲೇ ಮಾಡೆಲಿಂಗ್ ಲೋಕದಲ್ಲೂ ಮಾಡ್ ಆಗಿ ಕಾಣಿಸಿಕೊಂಡು ಜಾಹೀರಾತು ಲೋಕಕ್ಕೆ ಜ್ವರ ಹುಟ್ಟಿಸಿದವಳು ಪ್ರೀತಿ ಸೂದ್.
 ಸದ್ಯ ಈಗಷ್ಟೆ ಬಾಲಿವುಡ್ 'ಮೈ'ದಾನ ಸ್ಪರ್ಶಕ್ಕೆ ಕಾತರಿಸುತ್ತಿರುವ ಈಕೆಯನ್ನು ಬಾಂಬೆ ಮಂದಿ, ಪೇಜ್3 ಪಾರ್ಟಿಗಳಿಗೆ ಸೀಮಿತ ಮಾಡಿದ್ದಾರೆ. ರಾತ್ರಿ ಪಾರ್ಟಿಗಳಲ್ಲಿ ರಾರಾಜಿಸುತ್ತಿರುವ ಈಕೆ ಮುಂದೆ ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ಐಟಂ ಹಾಡುಗಳ ರಾಣಿಯಾದರೂ ಅಚ್ಚರಿ ಇಲ್ಲ. ಯಾಕೆಂದರೆ ಕ್ಯಾಮೆರಾ ಕಣ್ಣಿಗೆ ಯಾರೂ ಬೇಲಿ ಹಾಕಿಲ್ಲ. ಹೀಗಾಗಿ ಯಾವಾಗ ಎಲ್ಲಿಗೆ ಬೇಕಾದರೂ ಬೇಲಿ ಹಾರಿಕೊಂಡು ಹೋಗಬಹುದು!

-ಕೇಶು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com