ಸಿನಿಮಾ ತಲೆ ಇಲ್ಲದವರಿಗಲ್ಲ; ಟ್ರೈಲರ್ ಕಣ್ಣಿರೋವ್ರಿಗಲ್ಲ

ಇದು ತಲೆ ಇಲ್ಲದವರಿಗಲ್ಲ' ಎಂಬ ತಲೆಬರಹ(?) ಹೊತ್ತು ಬರುತ್ತಿರುವ ಉಪೇಂದ್ರ ಅಭಿನಯದ 'ಟೋಪಿವಾಲಾ' ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನೆರವೇರಿತು. ತಲೆಗೆ ಕೆಲಸ ಕೊಡಬೇಕು ಎಂಬ ಕಾರಣಕ್ಕೋ ಏನೋ ಅಂದಿನ ಸಮಾರಂಭದಲ್ಲೂ ಕೂಡ ಒಂದಿಷ್ಟು ತಲೆಹರಟೆಯ ಫ್ಲೇವರ್ ಇದ್ದುದು ವಿಶೇಷ.
'ತಲೆ ಇಲ್ಲದವರಿಗಲ್ಲ' ಎನ್ನುವುದು ಚಿತ್ರದ ಧೋರಣೆಯಾದರೆ ಅಂದಿನ ಕಾರ್ಯಕ್ರಮದ ನಿರೂಪಕ, ಈ ಸಮಾರಂಭ 'ಕೈ ಇಲ್ಲದವರಿಗಲ್ಲ' ಎನ್ನುವ ಪಾಲಿಸಿ ಪಾಲಿಸುವವರಂತೆ 'ಕೈಯಿದ್ದವರು ಚಪ್ಪಾಳೆ ಹೊಡೀಬಹುದು' ಎನ್ನುವ ಮಾತುಗಳನ್ನು ಮತ್ತೆ ಮತ್ತೆ ರಿಪೀಟ್ ಮಾಡುತ್ತಿದ್ದರು. ಅಲ್ಲದೆ ಸಮಾರಂಭಕ್ಕೆ ಬಂದ ಅತಿಥಿಗಳನ್ನೆಲ್ಲಾ 'ಎಷ್ಟು ಚೆನ್ನಾಗಿ ಕಾಣ್ತೀರಾ ಸರ್, ನೀವ್ಯಾಕೆ ಹೀರೋ ಆಗಬಾರದು? ಎನ್ನುವುದರಲ್ಲೇ ಬ್ಯುಸಿಯಾಗಿದ್ದ ಅವರು ಅಲ್ಲಿಗೆ ಶಿವರಾಜ್‌ಕುಮಾರ್ ಆಗಮನವಾದಾಗ 'ಎಷ್ಟು ಯಂಗ್ ಆಗಿ ಕಾಣ್ತೀರಾ ಸರ್?' ಎಂಬುದನ್ನು ಬಿಟ್ಟು ಬೇರೇನೂ ಹೇಳಲು ತೋಚದೆ, ನಂತರ ಚಿತ್ರತಂಡದ ಒಬ್ಬೊಬ್ಬರನ್ನೇ ವೇದಿಕೆಯ ಬಳಿ ಕರೆದು ಮಾತನಾಡಿಸಿದರು.
ಪಾಪ, ಹೆಸರು ಹರಿಕೃಷ್ಣ ಆದರೂ 'ಸಾಧು' ಎಂಬ ಇಮೇಜ್ ಇರುವ 'ಟೋಪಿವಾಲಾ' ಸಂಗೀತ ನಿರ್ದೇಶಕ ಹರಿಕೃಷ್ಣ, ನಿರೂಪಕರಿಂದ ದರ್ಪ, ದೌಲತ್ತು ತುಂಬಿರುವ ವ್ಯಕ್ತಿತ್ವ ಎಂಬ ಹೊಗಳಿಕೆಗೆ ಪಾತ್ರರಾದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದ ರಾಜ್ ಪುತ್ರರಾದ ಶಿವರಾಜ್‌ಕುಮಾರ್, ಪುನೀತ್, ರಾಘವೇಂದ್ರ ರಾಜ್‌ಕುಮಾರ್, ಉಪೇಂದ್ರರನ್ನು ಕೊಂಡಾಡಿದರು. ನಂತರ ಅದೇ ಹೊಗಳಿಕೆ ಮೂವರಿಗೂ ಸಮನಾಗಿ ವಾಪಸು ಸಂದಾಯವಾಯಿತು.
ಶಿವರಾಜ್‌ಕುಮಾರ್ ಮಾತನಾಡಿ, 'ನನ್ನ, ಉಪೇಂದ್ರ ಅವರದ್ದು ತುಂಬಾ ಒಳ್ಳೆಯ
ಸ್ನೇಹ. ಒಮ್ಮೊಮ್ಮೆ ಉಪ್ಪಿ ನನ್ನ ಪತ್ನಿ ಗೀತಾ ಅವರ ಬಳಿ 'ನಾನೇನಾದ್ರೂ ಹುಡುಗಿ ಆಗಿದ್ರೆ ನಿಮಗೆ ಸವತಿ ಆಗಿರ್ತಿದ್ದೆ' ಎನ್ನುತ್ತಿರುತ್ತಾರೆ' ಎಂದು ಹೇಳಿ ಮಾತು ಮುಗಿಸಿದ ಮೇಲೆ ಆಡಿಯೋ ಸಂಭ್ರಮ ಶುರುವಾಯ್ತು.
ತೆರೆಯ ಮೇಲೆ ಒಂದು ಹಾಡಿನ ಜೊತೆಗೆ ಅಂದು ಚಿತ್ರದ ಟ್ರೈಲರ್ ಅನ್ನೂ ತೋರಿಸಲಾಯ್ತು. ಆದರೆ, 'ತೋರಿಸಲಾಯಿತು' ಎನ್ನುವುದಕ್ಕಿಂತ 'ಕೇಳಿಸಲಾಯ್ತು' ಎಂಬುದು ಹೆಚ್ಚು ಸೂಕ್ತವಾಗಬಹುದು. ಏಕೆಂದರೆ ಅಲ್ಲಿದ್ದುದು ಕೇವಲ ಒಂದು ಮಗುವಿನ ವಾಯ್ಸು. 'ಓಹೋ ನಿಮಗೆ ಟ್ರೈಲರ್ ಬೇರೆ ತೋರಿಸ್‌ಬೇಕಾ, ಸುಮ್ನೆ ಥಿಯೇಟರ್‌ಗೆ ಬಂದು ಸಿನಿಮಾ ನೋಡ್ರೀ' ಎಂದು ಸುಖಾಸುಮ್ಮನೆ ಬೈಯ್ದು ಖುಶಿಪಡುವ ಆ ಮಗುವಿನಂತೆಯೇ ಟ್ರೈಲರ್ ಕೂಡಾ ಬಾಲಿಶ ಎನಿಸಿದ್ದು ಸುಳ್ಳಲ್ಲ. ಅಂತೂ, ಸಮಾರಂಭ ಮುಗಿಯುವ ಹೊತ್ತಿಗೆ, ಥೇಟ್ ಉಪೇಂದ್ರರ ಶೈಲಿಯಲ್ಲಿ 'ಸಿನಿಮಾ ತಲೆ ಇಲ್ಲದವರಿಗಲ್ಲ, ಟ್ರೈಲರ್ ಕಣ್ಣಿರೋವ್ರಿಗಲ್ಲ' ಎಂಬ ಮಾತು ಚಾಲ್ತಿಗೆ ಬಂದಿದ್ದು ಅಂದಿನ ಇನ್ನೊಂದು ವಿಶೇಷ.
ಅಂದಹಾಗೆ, ಚಿತ್ರದ ನಿರ್ಮಾಪಕರಾದ ಶ್ರೀನಿವಾಸ್, ಶ್ರೀಕಾಂತ್, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಭಾಷಾ, ಕೆ. ಮಂಜು, ಎಂ.ಎಸ್.ರಮೇಶ್, ಮುಂತಾದವರು ಅಂದಿನ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಕೊನೆಯಲ್ಲಿ ವಿಶೇಷ ಅತಿಥಿಯಾಗಿದ್ದ ರಾಜಕಾರಣಿ ಡಿ.ಕೆ. ಶಿವಕುಮಾರ್ ಮತ್ತು ಶಿವರಾಜ್‌ಕುಮಾರ್ ಇತರ ಗಣ್ಯರೊಡನೆ ಟೋಪಿವಾಲನ ಆಡಿಯೋ ಬಿಡುಗಡೆ ಮಾಡಿದರು. ಎಲ್ಲರಲ್ಲೂ ಬೈಯ್ಯುವ ಹುಮ್ಮಸ್ಸು ತುಂಬುವಂತಿದ್ದ ಬೇರೆ ಯಾರಾದ್ರೂ ಬೈತಾರ, ಬೈಯೋನೊಬ್ನೇ ಉಪೇಂದ್ರ ಎಂಬ ಹಾಡಿನ ಸಾಲುಗಳನ್ನು ಕೇಳುವ ಮುನ್ನ ಉಪೇಂದ್ರ ಅವರು ತಮ್ಮ ಮಾತಿನ ಸರದಿಯನ್ನೂ ಮುಗಿಸಿದರು. ತಮ್ಮ 'ಎ' ಚಿತ್ರದ ಸಮಯದಲ್ಲಿ ಬುದ್ಧಿವಂತರಿಗೆ ಮಾತ್ರ ಎಂದು ಗಿಮಿಕ್ ಮಾಡಿದ್ದ ಉಪೇಂದ್ರ ಅವರಿಗೆ ಈಗಲೂ ಇಂಥ ಗಿಮಿಕ್‌ಗಳು ಬೇಕಿತ್ತೇ ಎನ್ನುವ ಪ್ರಶ್ನೆ ಏಳುವ ಮುಂಚೆ ಮಾತನಾಡಿದ ನಾಯಕ ಉಪೇಂದ್ರ 'ಜನ ಖಂಡಿತಾ ಈ ಸಿನಿಮಾಕ್ಕೆ ಟೋಪಿ ಹಾಕೊಲ್ಲ ಎನ್ನುವ ಭರವಸೆ ಇದೆ' ಎಂದರು. ಆದರೆ, ಅದರರ್ಥ ಟೋಪಿಪಾಲನಿಗೆ ತಲೆ ಇಲ್ಲ ಎಂದಲ್ಲ!
- ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


