ನಿಮ್ಮ ಸಮಯ ಇದೀಗ...

ನಿಮ್ಮ ಸಮಯ ಇದೀಗ...
Updated on: 

ಚಿತ್ರರಂಗ ಎಂದರೆ ಏಳುಬೀಳುಗಳು ಅತಿ ಸ್ಪಷ್ಟವಾಗಿ ಕಾಣಿಸುವ ಲೋಕ. ಜೀವನದಲ್ಲಿ ಹಲವಾರು ಸುವರ್ಣಯುಗಗಳನ್ನು, ಏಳು ಬೀಳುಗಳನ್ನು, ರೋಚಕ ತಿರುವುಗಳನ್ನು ಕಂಡು, ಮಹತ್ವದ ಸಾಧನೆ ಮಾಡಿದ, ಮಾಡುತ್ತಿರುವ ಹಲವು ಸಿನಿಮಾ ಕಲಾವಿದರು, ತಂತ್ರಜ್ಞರು, ಲೇಖಕರು ಇಲ್ಲಿ ತಮ್ಮ ಜೀವನದ ಸುವರ್ಣಯುಗವನ್ನು ಮತ್ತು ಮಹತ್ವದ ತಿರುವುಗಳನ್ನು ನೆನಪಿಸಿಕೊಂಡಿದ್ದಾರೆ. ಅವರಿಗೆ ಕೇಳಲಾದ ಎರಡು ಪ್ರಶ್ನೆಗಳು ಇವು.

1ನಿಮ್ಮ ಜೀವನದ ಇಲ್ಲಿಯವರೆಗಿನ ಸುವರ್ಣ ಯುಗ ಎನಿಸಿದ ಕಾಲಘಟ್ಟ ಯಾವುದು?
2  ಇಲ್ಲಿಯವರೆಗೆ ನಿಮ್ಮ ಜೀವನದಲ್ಲಿ ನಿಮಗೆ ಸಿಕ್ಕ ಮಹತ್ವದ ತಿರುವು ಯಾವುದು?

ಈ ಪ್ರಶ್ನೆಗಳಿಗೆ ಸಿಕ್ಕ ಉತ್ತರಗಳು ನಿಮ್ಮ ಮುಂದೆ...

ಎವ್ವೆರಿ ಡೇ ಈಸ್ ಸಂಡೇ...- ರಮೇಶ್ ಅರವಿಂದ್
1.     ನನ್ನ ಜೀವನದ ಎಲ್ಲಾ ಕಾಲವೂ ನನಗೆ ಸುವರ್ಣ ಯುಗವೇ. ಅಥವಾ ನಾನು ಹಾಗಂದುಕೊಳ್ಳಲು ಇಷ್ಟಪಡುತ್ತೇನೆ.
2.     ಎಂಜಿನಿಯರಿಂಗ್ ಬಿಟ್ಟು 'ಮೌನಗೀತೆ' ಮತ್ತು 'ಸುಂದರ ಸ್ವಪ್ನಗಳು' ಚಿತ್ರಗಳ ಮೂಲಕ ನಟನಾಗಿದ್ದು ಮತ್ತು 'ರಾಮಶಾಮಭಾಮ' ಚಿತ್ರದ ಮೂಲಕ ನಿರ್ದೇಶಕನಾಗಿದ್ದು ನನ್ನ ಜೀವನದ ಮಹತ್ವದ ತಿರುವುಗಳು.

ಪಟ ಹಾರಲೇ ಇಲ್ಲ- ಶ್ರೀನಿವಾಸಮೂರ್ತಿ

1.    ನಾನು ಯಾವತ್ತೂ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ ಎಂಬಂತೆಯೇ ಇದ್ದೆ. ಸುವರ್ಣಯುಗ ಎಂಬುದು ನನ್ನ ಜಾಯಮಾನಕ್ಕೆ ಬರಲೇ ಇಲ್ಲ. ಎಲ್ಲ ಜನಪ್ರಿಯ ನಟರಿಗೂ ಒಂದೊಂದು ದೊಡ್ಡ ಅವಧಿ, ಸುವರ್ಣಯುಗ ಅನ್ನೋದು ಇರುತ್ತೆ. ಆದರೆ ನನಗೆ ಅದು ಸಿಗಲೇ ಇಲ್ಲ. ಇನ್ನೇನು ಎತ್ತರಕ್ಕೆ ಏರ್ತಾ ಇದೀನಿ ಎನ್ನುವಷ್ಟರಲ್ಲಿ ರಪ್ಪನೆ ನೆಲಕ್ಕೆ ಬಿದ್ದಿರುತ್ತಿದ್ದೆ.
2.    ಸಿದ್ದಲಿಂಗಯ್ಯನವರು ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೇ ನನ್ನ ಜೀವನದ ಮಹತ್ವದ ತಿರುವು.


ಪೀಕ್ ಅವರ್- ರಾಮಕೃಷ್ಣ
1.     ಸುವರ್ಣಯುಗ ಯಾವುದು ಅಂತ ನನಗೇ ಸ್ಪಷ್ಟವಾಗಿಲ್ಲ. ಬಹುಷಃ ನಾನು ಸುವರ್ಣಯುಗ ನೋಡಿಯೇ ಇಲ್ಲವೇನೋ. ಅಥವಾ ಅದರ ಬಗ್ಗೆ ಯೋಚನೆ ಮಾಡಿಲ್ಲವೇನೋ. ನಾನು ನೆಲ ಬಿಟ್ಟು ಎತ್ತರಕ್ಕೆ ಹೋಗಿದ್ದೆ ಎನಿಸಿಯೇ ಇಲ್ಲ. ಹಾಗನ್ನಿಸಿದ್ದು ಒಮ್ಮೆ ಮಾತ್ರ. ವಿಮಾನದಲ್ಲಿ ವಿದೇಶಗಳಿಗೆ ಹೋದಾಗ ನಮ್ಮ ವಿಮಾನ ನೆಲ ಬಿಟ್ಟು ಎಷ್ಟೋ ಎತ್ತರದಲ್ಲಿ ಹಾರುತ್ತಿತ್ತಲ್ಲ, ಆಗ! ನನ್ನ ಗಡಿಯಾರದಲ್ಲಿ ರಾತ್ರಿ 2 ಗಂಟೆ ಆದಾಗ ಅಲ್ಲಿ ಆಕಾಶದಲ್ಲಿ ಸೂರ್ಯನನ್ನು ನೋಡುತ್ತಿದ್ದೆನಲ್ಲಾ ಅದೇ ನನಗೆ ಪೀಕ್ ಅವರ್! ತಮಾಷೆಗೆ ಹೇಳಿದೆ. ನಾನು ಯಾವತ್ತೂ ಪೀಕ್‌ನಲ್ಲಿದ್ದೆನಾ ಇಲ್ಲವಾ ಎಂದು ಯೋಚನೆ ಮಾಡಿಲ್ಲ. ಯಾರೋ ಮಹನೀಯರುಗಳು ನಮ್ಮ ಜೀವನ ರೂಪಿಸಿದರು. ಅವರ ಜೊತೆ ಕೆಲಸ ಮಾಡಿದ್ದರಿಂದ ಇವತ್ತು ಜನ ನಮ್ಮನ್ನೂ ಗುರುತಿಸಿ ಗೌರವಿಸುತ್ತಾರೆ, ಪ್ರೀತಿಸುತ್ತಾರೆ ಅಷ್ಟೆ.
2.     ಇಲ್ಲೂ ಅದನ್ನೇ ಹೇಳಬಹುದು. ಅಮೆರಿಕ, ರಷ್ಯಾ ಅಂತ ಯಾವ್ಯಾವುದೋ ದೇಶಕ್ಕೆ ವಿಮಾನದಲ್ಲಿ ತೆಗೆದುಕೊಂಡ ತಿರುವುಗಳಷ್ಟೇ ನನಗೆ ಗೊತ್ತು. ಇಲ್ಲಿಯವರೆಗೂ, ಖುಷಿಯಾಗಿ, ಆರೋಗ್ಯವಂತನಾಗಿ, ನಾಲ್ಕು ಜನಕ್ಕೆ ಬೇಕಾದವನಾಗಿ ಇದ್ದೀನಲ್ಲ, ಅದೇ ನನ್ನ ಖುಷಿ.

ರಾ ರಾ... ಎಂದ ಬದುಕು- ಅವಿನಾಶ್
1. ಬಹುಶಃ ನನ್ನ ಜೀವನದಲ್ಲಿ ಸುವರ್ಣಯುಗ ಶುರುವಾಗಿದ್ದು ನಾನು ಮದುವೆಯಾದ ಮೇಲೆ, ಅಂದರೆ 2001ರ ನಂತರ. ಟಿ.ಎನ್. ಸೀತಾರಾಮ್‌ರ 'ಮತದಾನ', ರಾಜ್ಯ ಪ್ರಶಸ್ತಿ, ಕಾಸರವಳ್ಳಿಯವರ 'ದ್ವೀಪ', ನಾಗಾಭರಣರ 'ಸಿಂಗಾರೆವ್ವ', ಅದಾದ ಮೇಲೆ 'ಆಪ್ತಮಿತ್ರ', 'ಚಂದ್ರಮುಖಿ', ನಂತರ ಅನೇಕ ತೆಲುಗು ತಮಿಳು ಚಿತ್ರಗಳು, ಹೀಗೆ ಕಳೆದ 12 ವರ್ಷದಿಂದ ನನ್ನ ಜೀವನದಲ್ಲಿ ಸುವರ್ಣಯುಗ ಮುಂದುವರೆಯುತ್ತಿದೆ.
2. ಪುನೀತ್‌ರ ನಾಯಕತ್ವದ 'ಅಪ್ಪು' ಚಿತ್ರದಲ್ಲಿ ಅಭಿನಯಿಸಿದ್ದು ಮತ್ತು ರಜನೀಕಾಂತ್‌ರೊಂದಿಗೆ 'ಚಂದ್ರಮುಖಿ' ಚಿತ್ರದಲ್ಲಿ ಅಭಿನಯಿಸಿದ್ದನ್ನು ಮಹತ್ವದ ತಿರುವುಗಳು ಎನ್ನಬಹುದು. ಏಕೆಂದರೆ 'ಅಪ್ಪು' ನಂತರ ನನಗೆ ಹಲವು ವಿವಿಧ ಬಗೆಯ ಅವಕಾಶಗಳು ಸಿಕ್ಕವು. ಇನ್ನು 'ಚಂದ್ರಮುಖಿ' ಚಿತ್ರದ ಅನುಭವವನ್ನು ರಜನೀಕಾಂತ್ ಶೈಲಿಯಲ್ಲೇ ಹೇಳುವುದಾದರೆ, ಅವರ ಜೊತೆ ಒಂದು ಚಿತ್ರದಲ್ಲಿ ಅಭಿನಯಿಸಿದರೆ 100 ಚಿತ್ರಗಳಲ್ಲಿ ಅಭಿನಯಿಸಿದಂತೆ. ಹಾಗಾಗಿ ಈ ಚಿತ್ರದ ನಂತರ ನಾನೀಗ ಕನ್ನಡ, ತೆಲುಗು, ತಮಿಳು 3 ಭಾಷೆಗಳಲ್ಲಿ ಬ್ಯುಸಿ.

ಇಟಲಿ ಬದಲು ಗಾಂಧಿನಗರ- ಎಸ್.ಮಹೇಂದರ್
1.     ನನ್ನ ನೆಚ್ಚಿನ ಪೇಂಟಿಂಗ್ ಕಲೆಯನ್ನಾಗಲೀ ನಿರ್ದೇಶನವನ್ನಾಗಲೀ ನಾನು ಯಾರ ಬಳಿಯೂ ಕಲಿಯಲಿಲ್ಲ. 91-92 ರಲ್ಲಿ ನಾನು ನಿರ್ದೇಶಕನಾದೆ. ಆ ನಂತರ 2004ರವರೆಗೆ ಸುಮಾರು 30 ಸಿನಿಮಾಗಳನ್ನು ನಿರ್ದೇಶಿಸಿದೆ. ಇದೇ ನನ್ನ ಜೀವನದ ಸುವರ್ಣಯುಗ ಎನ್ನಬಹುದು.
2.     82ರವರೆಗೆ ನಾನೊಬ್ಬ ಪೇಂಟರ್ ಆಗಿದ್ದೆ. ಒಂದು ಚರ್ಚ್‌ನ ಬಿಷಪ್ ಒಬ್ಬರು ನನ್ನ ಕಲೆಯನ್ನು ಗುರುತಿಸಿ ನನ್ನ ಪೇಂಟಿಂಗ್ ಅಭ್ಯಾಸಕ್ಕಾಗಿ ನನ್ನನ್ನು ಇಟಲಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದರು. ಆದರೆ ದುರದೃಷ್ಟವಶಾತ್ ಆ ಸಮಯದಲ್ಲಿ ಅವರು ತೀರಿಕೊಂಡರು. ಆಗ ನಾನು ಪೇಪರ್ ಬದಲು ಸೆಲ್ಯುಲಾಯ್ಡ್ ಪೇಂಟಿಂಗ್ ಮಾಡಬೇಕು ಎಂಬ ನಿರ್ಧಾರದಿಂದ ಸಿನಿಮಾ ನಿರ್ದೇಶಕನಾದೆ. ಅದು ನನ್ನ ಜೀವನದ ಮಹತ್ವದ ಕ್ಷಣವಾಗಿತ್ತು.

ಆಹಾ ಆ ದಿನಗಳು!- ಶರತ್ ಲೋಹಿತಾಶ್ವ
1.    ಕಳೆದ ಎರಡು ವರ್ಷಗಳಿಂದ ಪೂರ್ತಿ ಬ್ಯುಸಿಯಾಗಿದ್ದೇನೆ. ಆದರೆ ಈ ವರ್ಷದ ಕೊನೆ ಮತ್ತು ಮುಂದಿನ 2013ರ ವರ್ಷ ತುಂಬಾ ಆಶಾದಾಯಕವಾಗಿ ಕಾಣುತ್ತಿದೆ. ಈಗಾಗಲೇ ಮುಂದಿನ ವರ್ಷದ ಹಲವು ತಿಂಗಳುಗಳವರೆಗೆ ಬುಕ್ ಆಗಿದ್ದೇನೆ. ಪರಭಾಷೆಯ ಚಿತ್ರಗಳಲ್ಲಿ ನಟಿಸುವ ಅವಕಾಶವೂ ಬರುತ್ತಿದೆ. ಬಹುಷಃ ಇದೇ ನನ್ನ ಜೀವನದ ಸುವರ್ಣಯುಗ.
2.    ಮಹತ್ವದ ತಿರುವು ಎಂದರೆ ಅದು ಖಂಡಿತಾ 'ಆ ದಿನಗಳು' ಚಿತ್ರ.

ಜನುಮದ ಜೋಡಿ- ವಿ. ಮನೋಹರ್
1.    ಸುವರ್ಣಯುಗ ಅಂದರೆ ನನಗೆ 'ಜನುಮದ ಜೋಡಿ' ಸಿನಿಮಾ ಸಿಕ್ಕಿದ್ದು.
2.    ಮಹತ್ವದ ತಿರುವು ಎಂದರೆ ನನಗೆ 'ಜನುಮದ 'ಜೋಡಿ' ಸಿಕ್ಕಿದ್ದು!

ಇನ್ನೂ ಬಂದಿಲ್ಲ- ಗುರುಕಿರಣ್
1. ನನಗೆ ಆಸೆ ಜಾಸ್ತಿ. ನಾನು ಮಹತ್ವಾಕಾಂಕ್ಷಿ ಎನ್ನಬಹುದು. ಹಾಗಾಗಿ ನನ್ನ ಜೀವನದ ಸುವರ್ಣಯುಗ ಇನ್ನೂ ಬಂದಿಲ್ಲ ಎಂದೇ ನನ್ನ ಅನಿಸಿಕೆ.
2. ಇನ್ನು ಮಹತ್ವದ ತಿರುವು ಎಂದರೆ ಅದು 'ಎ' ಚಿತ್ರಕ್ಕೆ ಸಂಗೀತ ನೀಡಿದ್ದು.

ಗುರು ಭಕ್ತಿ- ಕವಿರಾಜ್
1.    ಈ ಎರಡು ವರ್ಷಗಳಲ್ಲಿ ಬಹಳಷ್ಟು ಪ್ರಶಸ್ತಿಗಳು ಸಿಕ್ಕಿವೆ, ಒಳ್ಳೊಳ್ಳೆಯ ಹಾಡುಗಳನ್ನು ಬರೆದಿದ್ದೇನೆ, ಈಗ ನಿರ್ಮಾಪಕನೂ ಆಗುತ್ತಿದ್ದೇನೆ. ಹಾಗಾಗಿ, 2011ರಿಂದ ಈಗ ನಡೆಯುತ್ತಿರುವ ಕಾಲದವರೆಗಿನ ಅವಧಿಯೇ ನನ್ನ ಸುವರ್ಣಯುಗ.
2.    ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿದ್ದ ನಾನು ಗುರುಕಿರಣ್ ಅವರನ್ನು ಭೇಟಿ ಮಾಡಿದ್ದು ಮತ್ತು ಆ ಮೂಲಕ ಚಿತ್ರಸಾಹಿತಿಯಾಗಿದ್ದು ನನ್ನ ಜೀವನದ ದೊಡ್ಡ ತಿರುವು.

ಹತ್ತಕ್ಕೆ ಐದು-ನಾಗೇಂದ್ರ ಪ್ರಸಾದ್
1.    ನನಗೇನೋ ಕಳೆದ 12 ವರ್ಷಗಳಿಂದ ಪ್ರತಿವರ್ಷವೂ ಸುವರ್ಣಯುಗವೇ ಆಗಿದೆ. ಪ್ರತಿವರ್ಷ 10 ಹಾಡುಗಳು ಹಿಟ್ ಆಗಿವೆ ಎಂದರೆ ಅದರಲ್ಲಿ ನನ್ನದು 5 ಹಾಡಿರುತ್ತೆ. ಹಾಗಾಗಿ ನನ್ನ ಜೀವನದ ಸುವರ್ಣಯುಗ ಸತತವಾಗಿ ಮುದುವರಿಯುತ್ತಿದೆ.
2.    ಮಹತ್ವದ ತಿರುವು ಎಂದರೆ ನಾನು ನಿರ್ದೇಶಕನಾಗಿದ್ದು.

ತಾಯಿ ದೇವರು- ದುನಿಯಾ ವಿಜಯ್
1.    ಸುವರ್ಣಯುಗದ ಬಗ್ಗೆ ಸ್ಪಷ್ಟವಾಗಿ ಹೇಳಲಾರೆ. ಆದರೆ ನನಗೊಂದು ಆಸೆಯಿದೆ. ನನ್ನ ತಾಯಿ ಆರೋಗ್ಯ ಸರಿ ಇಲ್ಲ. ಯಾವಾಗ ಏನು ಬೇಕಾದರೂ ಆಗಬಹುದು ಎನ್ನುವಂಥ ಪರಿಸ್ಥಿತಿ. ಮೊನ್ನೆ ತುಂಬಾ ಸೀರಿಯಸ್ ಆಗಿದ್ದರು. ನನಗಿರೋದೊಂದೇ ಆಸೆ, ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ಆದರೆ, ಸಾವು ನಮ್ಮ ಕೈಯಲ್ಲಿಲ್ಲ. ಹಾಗಾಗಿ, ತಾಯಿಯನ್ನು ಕೊನೆಯ ಘಳಿಗೆಯಲ್ಲಿ ನಗುನಗುತ್ತಾ ಕಳಿಸಿಕೊಡುವಂತಾಗಬೇಕು. ಅಷ್ಟಾದರೆ ನನಗೆ ಅದೇ ಖುಷಿ.
2.    ನನ್ನ ಅಮ್ಮ ನನ್ನನ್ನು ಅದ್ಯಾವ ಘಳಿಗೆಯಲ್ಲಿ ಹೆತ್ತಳೋ ಗೊತ್ತಿಲ್ಲ. ಬಹುಷಃ ನಾನು ಹುಟ್ಟಿದ ದಿನವೇ ನನಗೆ ಮಹತ್ವದ ತಿರುವು ಎನಿಸುತ್ತದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com