ಸಿನಿಮಾ ಲೇಖನ

ಏ ಬುಲ್‌ಬುಲ್.. ಯಾಕೆ, ಮಾತಾಡಕಿಲ್ವಾ?

ಏ ಬುಲ್‌ಬುಲ್.. ಯಾಕೆ, ಮಾತಾಡಕಿಲ್ವಾ?
Published On :

ನಟ ದರ್ಶನ್ ಆಂಡ್ ಟೀಮ್ ಮತ್ತೆ 'ಶೌರ್ಯ' ಪ್ರದರ್ಶಿಸಲಿದೆಯೇ? 'ಕ್ರಾಂತಿವೀರ ಸಂಗೊಳ್ಳಿರಾಯಣ್ಣ' ಚಿತ್ರದ ನಂತರ ಬರುತ್ತಿರುವ 'ಬುಲ್ ಬುಲ್‌' ಇಂಥ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಒಂದು ಚಿತ್ರ ಗೆದ್ದರೆ ಆ ಚಿತ್ರತಂಡದ ಮುಂದಿನ ಸಿನಿಮಾದ ಮೇಲೆ ನಿರೀಕ್ಷೆದುಬಾರಿಯಾಗುವುದು ಸಹಜ. ದರ್ಶನ್ ಪಾಲಿಗೆ 'ಸಂಗೊಳ್ಳಿ ರಾಯಣ್ಣ' ಹೊಸ 'ಕ್ರಾಂತಿ'ಹಾಡಿದೆ ಎನ್ನುವುದು ಬಾಕ್ಸ್ ಆಫೀಸ್‌ನ ಲೆಕ್ಕಾಚಾರ. ಸಂಗೊಳ್ಳಿ ರಾಯಣ್ಣ ಚಿತ್ರದ ನಂತರ 'ಬುಲ್ ಬುಲ್‌' ತೆರೆಕಾಣುತ್ತಿದೆ. ಹೀಗಾಗಿ 'ಕ್ಯಾರೆ ಬುಲ್ ಬುಲ್ ಮಾತಾಡಕಿಲ್ವಾ' ಎನ್ನುತ್ತಿದ್ದ ದರ್ಶನ್ ಅಭಿಮಾನಿಗಳಲ್ಲಿ ಸಹಜ ನಿರೀಕ್ಷೆ.

ದಶಕಗಳ ಹಿಂದೆ ತೆರೆಕಂಡ 'ನಾಗರಹಾವು' ಚಿತ್ರದ ಜಲೀಲ್‌ನ ಪಾತ್ರಧಾರಿ ಅಂಬರೀಷ್‌ರ ಈ ಜನಪ್ರಿಯ ಡೈಲಾಗ್ ಅವರ ವೃತ್ತಿ ಜೀವನದ ಬಾಂಡ್. ಇದನ್ನೇ ಈಗ ಚಿತ್ರದ ಶೀರ್ಷಿಕೆಯನ್ನಾಗಿಸಿಕೊಂಡಿದೆ ದರ್ಶನ್ ಟೀಮ್. ದರ್ಶನ್‌ರ ಹುಟ್ಟು ಹಬ್ಬದಂದು ಸೆಟ್ಟೇರಿದ 'ಬುಲ್ ಬುಲ್‌'ನ ಟ್ಯಾಂಗ್ ಲೈನ್ ನೋಡಿಯೇ ಅವರ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಕೊಂಡಿತು. ತೆರೆ ಹಿಂದೆ ಕೆಲಸ ಮಾಡಿದವರೇ ಚಿತ್ರದ ನಿರ್ಮಾಪಕರು ಸಹ. ಮೀನಾ ತೂಗದೀಪ್, ದಿನಕರ್ ತೂಗದೀಪ್, ನಿರ್ದೇಶಕ ಎಂ.ಡಿ. ಶ್ರೀಧರ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ಸಾಹಿತಿ ಕವಿರಾಜ್, ಛಾಯಾಗ್ರಹಕ ಎ.ವಿ. ಕೃಷ್ಣಕುಮಾರ್... ಈ ಆರೂ ಮಂದಿ ಸಮಾನವಾಗಿ ಹಣ ಹೂಡಿದ್ದಾರೆ. ದರ್ಶನ್ ಇವರಿಗೆ ಕಾಲ್‌ಶೀಟ್ ಮಾತ್ರ ಕೊಟ್ಟಿದ್ದಾರಂತೆ. ಇನ್ನು 'ತೂಗದೀಪ್ ಪ್ರೊಡಕ್ಷನ್‌' ಎಂಬ ಬ್ಯಾನರ್ ತಂಡಕ್ಕೆ ನೆರಳಾಗಿ ನಿಂತಿದೆ. 'ಬುಲ್ ಬುಲ್‌' ಚಿತ್ರ ಒಂದು ರೀತಿಯಲ್ಲಿ ತೂಗದೀಪ್ ಸಹಕಾರ ಸಂಘದಡಿ ನಿರ್ಮಾಣಗೊಂಡಿದ್ದೆನ್ನಲು ತಪ್ಪಿಲ್ಲ.

ರೆಬೆಲ್ ಸ್ಟಾರ್ ಅಂಬರೀಷ್ ಇಲ್ಲಿ ದರ್ಶನ್‌ರ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಇದು ತೆಲುಗಿನ 'ಡಾರ್ಲಿಂಗ್‌' ಚಿತ್ರದ ಕನ್ನಡ ರೂಪ. ಆದರೆ ತೆಲುಗಿನಿಂದ ಯಥಾವತ್ತಾಗಿ ರಿಮೇಕ್ ಮಾಡಿಲ್ಲ. ಮೂಲ ಚಿತ್ರದ ಎಳೆಯನ್ನಿಟ್ಟುಕೊಂಡು ಕನ್ನಡಕ್ಕೆ ತಕ್ಕಂತೆ ಬದಲಾಯಿಸಿಕೊಂಡಿದ್ದಾರಂತೆ. ನಾಯಕಿ ರಚಿತಾ ರಾಮ್.

 ವಿಶೇಷ ಎಂದರೆ ದರ್ಶನ್ ಈ ಚಿತ್ರದಲ್ಲಿ ಸಖತ್ ಕಾಮಿಡಿ ಮಾಡಿದ್ದಾರಂತೆ. ಮೊದಲ ಬಾರಿಗೆ ದರ್ಶನ್‌ರ ಪಾತ್ರದಲ್ಲಿ ಹಾಸ್ಯವೂ ಸೇರಿಕೊಂಡಿರುವುದು ಪ್ರೇಕ್ಷಕರಿಗೆ ನೂರಕ್ಕೆ ನೂರು ಭಾಗ ಮನರಂಜನೆ ಕೊಡುವುದರಲ್ಲಿ ಎರಡು ಮಾತಿಲ್ಲ ಎನ್ನುವುದು 'ಬುಲ್ ಬುಲ್‌' ಮಾತು. ಕಲಾವಿದ ಅಶೋಕ್, ಚಿತ್ರಾಶೆಣೈ, ಶರಣ್, ರಮೇಶ್ ಭಟ್, ಸಿಹಿಕಹಿ ಚಂದ್ರು, ಸಾಧುಕೋಕಿಲಾ, ಟೆನ್ನಿಸ್ ಕೃಷ್ಣ ಮುಂತಾದವರು ಚಿತ್ರದ ಪ್ರಮುಖ ಪಾತ್ರಧಾರಿಗಳು.

ಮಾತಾಡಿದ ಬುಲ್
'ಸಂಗೊಳ್ಳಿರಾಯಣ್ಣ....' ನಂತರ 'ಬುಲ್ ಬುಲ್‌' ಬರುತ್ತಿದೆ. ನಿರೀಕ್ಷೆ ಹೆಚ್ಚಿದೆಯೇ?
ಒಂದು ಸಿನಿಮಾದ ಗೆಲುವು ಮುಂದಿನ ಚಿತ್ರದ ಬಿಡುಗಡೆಯ ಹೊತ್ತಿಗೆ ಸಹಜವಾಗಿ ನಿರೀಕ್ಷೆ ಹೆಚ್ಚಿಸುತ್ತದೆ. ಆದರೆ ನನಗೆ 'ಬುಲ್ ಬುಲ್‌' ವಿಚಾರದಲ್ಲಿ ಹಾಗನಿಸುತ್ತಿಲ್ಲ. ನನ್ನ ಎಲ್ಲ ಸಿನಿಮಾಗಳನ್ನ ತೆಗೆದುಕೊಳ್ಳುವಂತೆ ಈ ಚಿತ್ರವನ್ನು ಅಭಿಮಾನದಿಂದ ಸ್ವೀಕರಿಸುವ ನಂಬಿಕೆ ಇದೆ. ಹಾಗೆ ನೋಡಿದರೆ ಸಂಗೊಳ್ಳಿರಾಯಣ್ಣ ಗಂಭೀರ ಸಿನಿಮಾ. ಆರಂಭದಿಂದ ಕೊನೆ ತನಕ ರಪ ರಪನೇ ಡೈಲಾಗ್‌ಗಳು ಬರುತ್ತಿರುತ್ತವೆ. ಆದರೆ 'ಬುಲ್ ಬುಲ್‌' ಬೇರೆಯದ್ದೇ ರೀತಿಯದ್ದು.

 ಜಲೀಲ್‌ನ ಡೈಲಾಗ್ ಮುಂದೆ ನಿಮಗೂ ಬಾಂಡ್ ಆಗಬಹುದೇ?
ಅಪ್ಪಾಜಿ (ಅಂಬರೀಷ್) ಅವರ ಕೆರಿಯರ್‌ನ ತುಂಬಾ ಫೇಮಸ್ ಡೈಲಾಗ್ ಇದು. ಅದನ್ನು ಈಗಿನ ಟ್ರೆಂಡ್‌ಗೆ ತಕ್ಕಂತೆ ಬದಲಾಯಿಸಿದ್ದೇನೆ. ಒಂದೇ ಒಂದು ಸಲ ಆ ಡೈಲಾಗ್ ನಮ್ಮ ಚಿತ್ರದಲ್ಲಿ ಬರುತ್ತದೆ. ಅವರು 'ಕ್ಯಾರೆ ಬುಲ್ ಬುಲ್...' ಅಂದಿದ್ರು. ನಾನು 'ವಾಟ್ ಬುಲ್ ಬುಲ್...' ಎನ್ನುತ್ತೇನೆ ಅಷ್ಟೇ. ಉಳಿದಂತೆ ಅದನ್ನೇ ಬಂಡವಾಳ ಮಾಡಿಕೊಂಡಿಲ್ಲ.

ಚಿತ್ರದ ಟ್ಯಾಗ್ ಲೈನ್‌ನಂತೆ ಇಲ್ಲಿ ನಾಯಕ ಸಿಕ್ಕಾಪಟ್ಟೆ ಮಾತುಗಾರನೇ?
ತುಂಬಾ ಮಾತಾಡುತ್ತಾನೆ. ಆದರೆ ಪ್ರತಿ ಮಾತಿನಲ್ಲೂ ನಿಮ್ಮ ಸ್ನೇಹಿತನೋ, ಪಕ್ಕದ್ಮನೆ ತಲಹರಟೆ ಹುಡುಗನೋ ಆಗಿ, ಚೇಷ್ಟೆ ಮಾಡುವವನಾಗಿ, ತಮಾಷೆಗಾರನಾಗಿ ಕಾಣುತ್ತಾನೆ. ಸುಖಾ ಸುಮ್ಮನೆ ಪಂಚ್ ಡೈಲಾಗ್‌ಗಳು ಇಲ್ಲಿಲ್ಲ. ಪ್ರತಿ ಡೈಲಾಗ್‌ನಲ್ಲೂ ಮನರಂಜನೆ ಇದೆ.

ನಿಮ್ಮ ಹಿಂದಿನ ಚಿತ್ರಗಳಿಗೂ ಈ ಚಿತ್ರಕ್ಕೂ ಇರುವ ವ್ಯತ್ಯಾಸಗಳೇನು?
ಸಾಮಾನ್ಯವಾಗಿ ದರ್ಶನ್ ಸಿನಿಮಾಗಳೆಂದರೆ ಸಿಕ್ಕಾಪಟ್ಟೆ ಫೈಟು, ಅಬ್ಬರದ ಸಂಭಾಷಣೆಗಳೇ ಹೆಚ್ಚು ಎಂದುಕೊಳ್ಳುತ್ತಾರೆ. ಆದರೆ 'ಬುಲ್ ಬುಲ್‌' ಆ ಎಲ್ಲ ಛಾಯೆಗಳಿಂದ ಹೊರ ಬಂದಿರುವ ಕಂಪ್ಲೀಟ್ ಫ್ಯಾಮಿಲಿ ಚಿತ್ರ. ಆರು ವರ್ಷದ ಮಕ್ಕಳಿಂದ ಹಿಡಿದು ಎಲ್ಲ ವರ್ಗದ ಪ್ರೇಕ್ಷಕರ ಸಿನಿಮಾ ಇದು.

 ಚಿತ್ರದ ಹೈಲೈಟ್ಸ್‌ಗಳ ಕುರಿತು ಹೇಳ್ತೀರಾ?
ಇಲ್ಲಿ ಹೈಲೆಟ್ ಅಂಬರೀಷ್. ಸಾಮಾನ್ಯವಾಗಿ ಕಮರ್ಷಿಯಲ್ ಚಿತ್ರಗಳೆಂದರೆ ಐಟಂ ಸಾಂಗು, ಫೈಟ್‌ಗಳನ್ನು ತುರುಕುತ್ತೇವೆ. ಒಮೊಮ್ಮೆ ಎಲ್ಲ ವರ್ಗದ ಪ್ರೇಕ್ಷಕರು ನೋಡಲಾಗದು. ಆದರೆ 'ಬುಲ್ ಬುಲ್‌' ಕಮರ್ಷಿಲ್ ಚಿತ್ರವಾದರೂ ಐಟಂ ಸಾಂಗು ಇಲ್ಲ. ಎರಡ್ಮೂರು ಸಾಹಸಗಳಿದ್ದರೂ ಅದನ್ನು ವೈಭವೀಕರಿಸಿಲ್ಲ. ಕಾಮಿಡಿ, ಸೆಂಟಿಮೆಂಟ್, ಫ್ಯಾಮಿಲಿ ಡ್ರಾಮ... ಇವೇ ಚಿತ್ರದ ಹೈಲೈಟ್. ಮುಖ್ಯವಾಗಿ ತಂದೆ, ಮಗನ ಸೆಂಟಿಮೆಂಟ್ ತುಂಬಾ ಚೆನ್ನಾಗಿದೆ. ಒಂದು ಪೂರ್ಣ ಪ್ರಮಾಣದ ಮನರಂಜನೆಯ ಚಿತ್ರ ನೋಡಬೇಕು ಎಂದುಕೊಂಡವರು ನಮ್ಮ ಚಿತ್ರವನ್ನು ನೋಡಿ.

'ಇದೊಂದು ರಿಮೇಕ್‌' ಅಂತ ಅನ್ನಿಸಲ್ವ?
ಮೂಲ ಚಿತ್ರದ ಒಂದು ಎಳೆ ಅಷ್ಟೇ ಇಲ್ಲಿ ಕೆಲಸ ಮಾಡಿದೆ. ಉಳಿದಂತೆ ಎಲ್ಲವನ್ನೂ ಬದಲಾಯಿಸಿದ್ದೇವೆ. ಹಿಂದಿಯಲ್ಲಿ ಬಂದ 'ದಬಾಂಗ್‌' ತೆಲುಗಿನಲ್ಲಿ 'ಗಬ್ಬರ್‌ಸಿಂಗ್‌' ಆಯಿತು. ಆದರೆ 'ಗಬ್ಬರ್‌ಸಿಂಗ್‌' ನೋಡಿದವರಿಗೆ ಹಿಂದಿ ರಿಮೇಕ್ ಅನ್ನಿಸಲೇ ಇಲ್ಲ. ನಮ್ಮ 'ಬುಲ್ ಬುಲ್‌' ಚಿತ್ರವೂ ಅಷ್ಟೇ.

ಹಾಗಾದರೆ ಮೂಲ ಚಿತ್ರಕ್ಕೂ ಈ ಚಿತ್ರಕ್ಕೂ ಏನೇನು ಬದಲಾವಣೆಗಳಾಗಿವೆ?
ನಾನು ಈಗಲೇ ಹೇಳಲ್ಲ. ನೀವು ಒಮ್ಮೆ ತೆಲುಗಿನ 'ಡಾರ್ಲಿಂಗ್‌' ಚಿತ್ರವನ್ನೂ ನೋಡಿ, ನಮ್ಮ ಸಿನಿಮಾನೂ ನೋಡಿ. ಅದರ ಯಥಾವತ್ ಕಾಫಿ ಅನ್ನಿಸಿದರೆ ನೀವು ಹೇಳಿದಂತೆ ನಾನು ಕೇಳುತ್ತೇನೆ. ಪ್ರೇಕ್ಷಕರಿಗೂ ಇದನ್ನೇ ಹೇಳುತ್ತೇನೆ, ರಿಮೇಕ್ ಸಿನಿಮಾ ಎನ್ನುವ ಭಾವನೆ ಬೇಡ. ರಿಮೇಕ್ ಸಿನಿಮಾ ನೋಡಿದ್ದೇವೆಂಬ ಭಾವನೆ ಉಂಟಾಗುವುದಿಲ್ಲ. ನಾನು ಭರವಸೆ ಕೊಡುತ್ತೇನೆ.

ಸಹಕಾರ ಪದ್ಧತಿಯಲ್ಲಿ ಸಿನಿಮಾ ಮಾಡಿದ್ದೀರಿ. ನಿಮ್ಮ ತಂಡದ ಕುರಿತು ಹೇಳಿ?
ದೇವರು ನನ್ನ ಚೆನ್ನಾಗಿಟ್ಟಿದ್ದಾನೆ. ನನ್ನ ಜೊತೆ ಇರೋರೂ ಚೆನ್ನಾಗಿರಲಿ ಅಂತ ಕೋ- ಅಪರೇಟಿವ್ ಸಿಸ್ಟಮ್‌ನಲ್ಲಿ ಈ ಚಿತ್ರ ಮಾಡಿದ್ದೇವೆ. ಬಹಳಷ್ಟು ವರ್ಷಗಳಿಂದ ನನ್ನ ಜೊತೆ ಇದ್ದವರೇ ಈ ಚಿತ್ರವನ್ನು ಮಾಡಿದ್ದಾರೆ. ತುಂಬಾ ಶ್ರಮ ಹಾಕಿದ್ದಾರೆ. ನಾನು ಚೆನ್ನಾಗಿರುವಂತೆ ಅವರೂ ಚೆನ್ನಾಗಾದರೆ ನನ್ನ ಪ್ರಯತ್ನ ಸಾರ್ಥಕ.

ಮುಂದೆಯೂ ನಿಮ್ಮ ಪ್ರೊಡಕ್ಷನ್‌ನಲ್ಲಿ ಈ ಪದ್ಧತಿಯಲ್ಲಿ ಚಿತ್ರಗಳು ನಿರ್ಮಾಣಗೊಳ್ಳುತ್ತವೆಯೇ?
ನಿರ್ಮಾಣ ಮಾಡುವ ಯೋಚನೆ ಇದೆ. ಹಾಗಂತ 'ನಾನು ಕಷ್ಟದಲ್ಲಿದ್ದೀನಿ, ನನಗೆ ಲಾಸ್ ಆಗಿದೆ, ನನಗೊಂದು ಸಿನಿಮಾ ಮಾಡಿಕೊಡಿ' ಅಂತ ಯಾರ್ಯಾರೋ ಬಂದರೆ ಅವರಿಗೆಲ್ಲ ಸಿನಿಮಾ ಮಾಡಿಕೊಂಡು ಕೂರಕ್ಕಾಗಲ್ಲ. ಆದರೆ ಮುಂದೆ ನನ್ನ ಜೊತೆ ಕೆಲಸ ಮಾಡಿದ ಮೇಕಪ್ ಕಲಾವಿದರು, ಕಾಸ್ಟ್ಯೂಮರ್ಸ್‌ಗಾಗಿ ಒಂದು ಚಿತ್ರ ಮಾಡುವ ಆಸೆ ಇದೆ.

- ಕೇಶವ
--------------------------------------
ಬ್ಯಾರೆ ಮಾತಾಡೋದಲ್ವಾ?
ಈ ವಾರ ದರ್ಶನ್, ಅಂಬರೀಷ್ ಅಭಿನಯದ 'ಬುಲ್‌ಬುಲ್‌' ಚಿತ್ರ ಬಿಡುಗಡೆ. ಕನ್ನಡ ಚಿತ್ರರಂಗಕ್ಕೆ 'ಬುಲ್‌ಬುಲ್‌' ಎಂದ ಕೂಡಲೇ ಹಾಡು ಹೇಳುವುದಕ್ಕಿಂತ 'ಮಾತಾಡಕಿಲ್ವಾ?' ಎಂಬ ಮಾತೇ ಥಟ್ಟನೆ ನೆನಪಾಗುತ್ತದೆ ಎಂದರೆ ಅದಕ್ಕೆ ಕಾರಣ ನಾಗರಹಾವಿನ ಜಲೀಲ ರೆಬೆಲ್‌ಸ್ಟಾರ್ ಅಂಬರೀಷ್ ಅವರ ಮಾತುಗಳು. ಆದರೆ, ಆಫ್ ದಿ ಸ್ಕ್ರೀನ್, ನಮ್ಮ ಚಿತ್ರರಂಗದ ನುಡಿಗಳ ಜಾಡು ಹಿಡಿದು ಹೊರಟರೆ, ಅಲ್ಲಿ ಯಾರೂ ನಡೆಯದ ಹಾದಿ ಗೋಚರಿಸುವುದು ಕಡಿಮೆ. ಬಹುತೇಕ ಎಲ್ಲ ಸಂದರ್ಶನ, ಪತ್ರಿಕಾಗೋಷ್ಠಿಗಳಲ್ಲಿ ಅವವೇ ಮಾತುಗಳು ಕೇಳಿಬರುತ್ತವೆ. ಮಾತೆತ್ತಿದರೆ, 'ಡಿಫರೆಂಟ್ ಆಗಿ ಸಿನಿಮಾ ಮಾಡಿದೀವಿ' ಎನ್ನುವ ನಮ್ಮ ಸಿನಿಮಾ ಮಂದಿ ಡಿಫರೆಂಟ್ ಆಗಿ ಮಾತನಾಡುವುದರಿಂದಲೇ ಆ ಕೆಲಸ ಶುರುಮಾಡಲಿ ಎಂಬುದಷ್ಟೇ ಇದರ ಉದ್ದೇಶ. ಪತ್ರಕರ್ತರ ಪ್ರಶ್ನೆಗಳಿಗೆ, ಕನ್ನಡದ ಬಹುತೇಕ ನಟ, ನಟಿ, ತಂತ್ರಜ್ಞ ನಿರ್ಮಾಪಕರ ಮಾತಿನ ವರಸೆ ಹೇಗಿರುತ್ತದೆ ಎಂಬುದರ ಒಂದು ಸ್ಯಾಂಪಲ್. ಇಂಥ ಪ್ರಶ್ನೆಗೆ ಇದೇ ಉತ್ತರ ಎಂದು ಫಿಕ್ಸ್ ಆದವರಂತೆ ಇದೇ ನನ್ನ ಉತ್ತರ ಎನ್ನುವ ಟ್ರೆಂಡ್ ಬದಲಾಗಬೇಡವೇ? ಜೊತೆಗೆ, ಪತ್ರಕರ್ತರ ಪ್ರಶ್ನೆಗಳೂ ಬದಲಾಗಬೇಕೆ? ಎಂದೆಲ್ಲ ತಲೆಕೆಡಿಸಿಕೊಳ್ಳದೆ ಸುಮ್ಮನೆ ಓದಿ ನೋಡಿ.

ನಟರಿಗೆ:
ನಿಮ್ಮ ನೆಚ್ಚಿನ ನಟ?
ಡಾ.ರಾಜ್‌ಕುಮಾರ್

ನಿರ್ದೇಶಕ?
ಪುಟ್ಟಣ್ಣ ಕಣಗಾಲ್

ನಟಿ?
ಎಲ್ಲರೂ ಇಷ್ಟ.

ನಟಿಯರಿಗೆ:
ನಿಮ್ಮ ಡ್ರೀಮ್‌ರೋಲ್ ಯಾವುದು?
ಶರಪಂಜರದಲ್ಲಿ ಕಲ್ಪನಾ ಮಾಡಿದಂಥ ಪಾತ್ರ ಅಥವಾ ಹುಚ್ಚಿ ಪಾತ್ರ ಮಾಡಬೇಕು.

ನೀವು ಎಕ್ಸ್‌ಪೋಸ್ ಮಾಡೋಕೆ ರೆಡೀನಾ?
ಎಕ್ಸ್‌ಪೋಸ್ ಮಾಡೋದನ್ನು ನಾನು ವಿರೋಧಿಸ್ತೀನಿ. ಅದು ನಂಗೆ ಇಷ್ಟ ಇಲ್ಲ. ಆದ್ರೆ ಪಾತ್ರಕ್ಕೆ ಅಗತ್ಯ ಇದ್ರೆ ಓಕೆ.

ನಿಮಗೆ ಆ ಹೀರೋ ಜೊತೆ ಅಫೇರ್ ಇದೆಯಂತೆ?
ಅಯ್ಯೋ, ಅದೆಲ್ಲ ಏನೂ ಇಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರು ಅಷ್ಟೆ.

ನಿಮ್ಮ ಮದುವೆ ಯಾವಾಗ?
ಸದ್ಯಕ್ಕೆ ನನಗೆ ನನ್ನ ಕೆರಿಯರ್ ಮುಖ್ಯ. ಇನ್ನೈದು ವರ್ಷ ಮದುವೆ ಪ್ಲ್ಯಾನ್ ಇಲ್ಲ.

ಈ ಚಿತ್ರದಲ್ಲಿ ನಿಮ್ಮದು ಎಂಥ ಪಾತ್ರ?
ಇಲ್ಲಿ ನನ್ನದು ಬಬ್ಲೀ ಹುಡುಗಿಯ ಪಾತ್ರ. ಅಭಿನಯಕ್ಕೂ ಸಾಕಷ್ಟು ಸ್ಕೋಪ್ ಇದೆ. ತುಂಬಾ ಚೆನ್ನಾಗಿ ಬಂದಿದೆ. ಎಲ್ಲರಿಗೂ ಇಷ್ಟ ಆಗುವಂಥ ಕ್ಯಾರೆಕ್ಟರ್ ನಂದು.

ಚಿತ್ರೀಕರಣದ ಅನುಭವ?
ನನಗಂತೂ ಅದು ಚಿತ್ರೀಕರಣ ಅನ್ನಿಸಲೇ ಇಲ್ಲ, ಒಳ್ಳೆ ಪಿಕ್‌ನಿಕ್ ಥರಾ ಇತ್ತು. ನಾವೆಲ್ಲಾ ಒಳ್ಳೆ ಫ್ಯಾಮಿಲಿ ಥರಾ ಇದ್ವಿ.

ಯಶಸ್ಸಿನ ಹುಡುಕಾಟದಲ್ಲಿರುವ ನಾಯಕ ನಟನಿಗೆ:
ನಿಮ್ಮ ಮುಂದಿನ ಚಿತ್ರ ಹೇಗಿದೆ?
ಅದೊಂದು ಫ್ರೆಷ್ ಅನಿಸುವಂಥ ಲವ್ ಸ್ಟೋರಿ. ಈ ಥರಾ ಚಿತ್ರ ಇಲ್ಲಿಯವರೆಗೆ ಬಂದಿಲ್ಲ. ಲವ್ ಜೊತೆಗೆ ಕಾಮಿಡಿ, ಆ್ಯಕ್ಷನ್, ಫ್ಯಾಮಿಲಿ ಅಥವಾ ತಾಯಿ ಸೆಂಟಿಮೆಂಟ್ ಎಲ್ಲ ಇದೆ. ಜೊತೆಗೆ ಒಂದು ಒಳ್ಳೆ ಮೆಸೇಜ್ ಇದೆ. ತುಂಬಾ ಡಿಫರೆಂಟ್ ಆಗಿದೆ. ಹೊಸ ಥರಾ ಸ್ಕ್ರಿಪ್ಟ್. ಈ ಸಿನಿಮಾದಲ್ಲಿ ಸ್ಕ್ರಿಪ್ಟೇ ಹೀರೋ.

ನಿಮ್ಮ ಹಳೇ ಸಿನಿಮಾಗೂ ಹೀಗೇ ಹೇಳಿದ್ರಿ. ಆದ್ರೆ ಅದು ಯಾಕೆ ಓಡಲಿಲ್ಲ?
ಇಲ್ಲ, ಅದೇನಾಯ್ತು ಅಂದ್ರೆ, ನಿರ್ಮಾಪಕರು ಚಿತ್ರಕ್ಕೆ ಸರಿಯಾದ ಪ್ರಚಾರ ಕೊಡಲಿಲ್ಲ. ಇದ್ದಕ್ಕಿದ್ದಂತೆ ಕೆಟ್ಟ ಥಿಯೇಟರ್‌ನಲ್ಲಿ ರಿಲೀಸ್ ಮಾಡಿದ್ರು. ಅಲ್ಲದೆ ರಿಲೀಸ್ ಮಾಡಿದ ಟೈಮೂ ಸರಿ ಇರಲಿಲ್ಲ. ಎಕ್ಸಾಮ್, ಕ್ರಿಕೆಟ್ ಮ್ಯಾಚು ಇದ್ದಾಗ ರಿಲೀಸ್ ಮಾಡಿದ್ರೆ ಯಾರ್ ನೋಡ್ತಾರೆ ಹೇಳಿ?

ನಟ/ನಟಿಗೆ
ಆ ಸ್ಟಾರ್ ನಟನ ಜೊತೆ ನಟಿಸಿದ ಅನುಭವ ಹೇಗಿತ್ತು?
ಯಂಗ್ ಹೀರೋ ಆದ್ರೆ-
ಅವರು ಯಾವಾಗ್ಲೂ ಲೈವ್ಲೀ ಆಗಿರ್ತಾರೆ. ಸೆಟ್‌ನಲ್ಲಿ ಯಾವಾಗ್ಲೂ ಜೋಕ್ ಮಾಡ್ತಾ ನಗಿಸ್ತಿರ್ತಾರೆ. ಸ್ಟಾರ್ ಅನ್ನೋ ಯಾವ ಜಂಭನೂ ಇಲ್ಲ ಅವರಿಗೆ. ಹೀ ಈಸ್ ವೆರಿ ಡೌನ್ ಟು ಅರ್ಥ್.

ಸೀನಿಯರ್ ಆಗಿದ್ರೆ -
ಅವರ ಜೊತೆ ಅಭಿನಯಿಸೋ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ನಾವೆಲ್ಲ ಚಿಕ್ಕಂದಿನಿಂದ ಅವರ ಚಿತ್ರಗಳನ್ನು  ನೋಡಿಕೊಂಡು ಬೆಳೆದವರು. ಸೆಟ್‌ನಲ್ಲಿ ನನಗೆ ಅದು ಹಂಗಲ್ಲಾ, ಹಿಂಗೆ ಎನ್ನುತ್ತಾ ತುಂಬಾ ವಿಷಯಗಳನ್ನು ಹೇಳಿಕೊಟ್ರು. ನಾನು ಅವರಿಂದ ಸಾಕಷ್ಟು ಕಲಿತೆ.

ನೂರಾರು ಸಿನಿಮಾ ಮುಗಿಸಿರುವ ಸೀನಿಯರ್ ನಟ ನಟಿಯರ ಮಾತು
ಎಷ್ಟೇ ಸಿನಿಮಾ ಮಾಡಿದ್ರೂ ನಾವಿನ್ನೂ ವಿದ್ಯಾರ್ಥಿಗಳೇ. ಪ್ರತಿದಿನ ಕಲಿಯೋದು ಇದ್ದೇ ಇರುತ್ತೆ. ನಾನು ಇನ್ನೂ ಕಲೀತಾ ಇದೀನಿ. ಹೊಸಬರಿಂದಲೂ ಕಲಿಯೋದು ತುಂಬಾನೇ ಇರುತ್ತೆ.

ಸಾಧಾರಣ ಕನ್ನಡ ಚಿತ್ರವೊಂದರ ಬಜೆಟ್‌ನ ಕನಿಷ್ಠ 5 ಪಟ್ಟು ಸಂಭಾವನೆ ಪಡೆಯುವ ಪರಭಾಷೆಯ ಸೂಪರ್‌ಸ್ಟಾರ್‌ಗಳು ಬೆಂಗಳೂರಿಗೆ ಭೇಟಿ ಕೊಟ್ಟಾಗ:
ಬೆಂಗಳೂರ್ ಈಸ್ ಎ ನೈಸ್ ಪ್ಲೇಸ್, ಐ ಲೈಕ್ ದಿ ಪೀಪಲ್ ಓವರ್ ಹಿಯರ್. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಖಂಡಿತಾ ನಾನು ಕನ್ನಡ ಚಿತ್ರಗಳಲ್ಲಿ ಅಭಿನಯಿಸಲು ಸಿದ್ಧ. (ಆದರೆ ಅವರ್ಯಾವತ್ತೂ ಕನ್ನಡ ಸಿನಿಮಾ ಮಾಡೋದೇ ಇಲ್ಲ ಬಿಡಿ)

ನಿರ್ದೇಶಕ, ನಿರ್ಮಾಪಕ, ನಟ ನಟಿ ಯಾರಿಗಾದರೂ ಸರಿ:
ನಿಮ್ಮದು ಕಮರ್ಷಿಯಲ್ ಸಿನಿಮಾನಾ, ಕಲಾತ್ಮಕ ಸಿನಿಮಾನಾ?
ಸಿನಿಮಾಗಳಲ್ಲಿ ಆ ಥರಾ ಕೆಟಗರೀನೇ ಇಲ್ಲ. ಇರೋದು ಎರಡೇ, ಒಳ್ಳೆ ಸಿನಿಮಾ ಮತ್ತು ಕೆಟ್ಟ ಸಿನಿಮಾ.

ಸಿನಿಮಾ ಬಿಡುಗಡೆಗೆ ಮುಂಚೆ ಎಲ್ಲ ನಿರ್ಮಾಪಕರ ಆತ್ಮವಿಶ್ವಾಸದ ಮಾತು:
ಒಳ್ಳೆ ಸಿನಿಮಾ ಕೊಟ್ರೆ ನಮ್ಮ ಜನ ನೋಡೇ ನೋಡ್ತಾರೆ. ಕನ್ನಡದ ಪ್ರೇಕ್ಷಕರು ಯಾವತ್ತೂ ಒಂದು ಒಳ್ಳೆ ಸಿನಿಮಾನ ಕೈಬಿಟ್ಟಿಲ್ಲ.

ಕಷ್ಟಪಟ್ಟು 50 ದಿನ ಓಡಿಸಿದ ನಂತರ ನಿರ್ದೇಶಕ/ನಿರ್ಮಾಪಕ:
50 ದಿನ ಆದ ಮೇಲೂ, ಸೋಮವಾರದ ಮಾರ್ನಿಂಗ್ ಶೋ ಕೂಡ ಬಾಲ್ಕನಿ ಫುಲ್ ಇದೆ. ಬೇರೆ ಸಿನಿಮಾಗಳು ಕ್ಯೂನಲ್ಲಿವೆ ಅಂತ ಥಿಯೇಟರ್ ಬಿಟ್ಟುಕೊಡ್ತಾ ಇದೀನಿ ಅಷ್ಟೆ.

ಹಿಂದಿನ ಚಿತ್ರ ಫ್ಲಾಪ್ ಆಗಿ ಇದೂ ಫ್ಲಾಪ್ ಆದ್ರೆ ಹೆಂಗೆ ಅಂತ ಮುಂದಿನ ಕೆರಿಯರ್ ಬಗ್ಗೆ ಆತಂಕಗೊಂಡಿರುವ ನಿರ್ದೇಶಕ:
ನನ್ನ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಸದ್ಯದಲ್ಲೇ ಇದರ ಪಾರ್ಟ್ 2 ಸಿನಿಮಾ ಮಾಡುತ್ತೇನೆ.

ಹೊಸ ಹೀರೋಗೆ
ನಟನೆಯಲ್ಲಿ ಏನು ಅನುಭವ ಇದೆ ನಿಮಗೆ?
ಕಾಲೇಜು ಟೈಮಲ್ಲಿ ನಾಟಕಗಳಲ್ಲಿ ಅಭಿನಯಿಸ್ತಿದ್ದೆ. ಈಗ ಪುಣೆ ಇನ್ಸ್ಟಿಟ್ಯೂಟ್‌ನಲ್ಲಿ ಒಂದು ವರ್ಷ ಅಭಿನಯದ ಕೋರ್ಸ್ ಮಾಡಿದೀನಿ. ಡ್ಯಾನ್ಸ್, ಹಾರ್ಸ್ ರೈಡಿಂಗ್, ಫೈಟ್ ಎಲ್ಲದರಲ್ಲೂ ತರಬೇತಿ ಪಡೆದೇ ಚಿತ್ರರಂಗಕ್ಕೆ ಬಂದಿದ್ದೇನೆ.

ನಿರ್ದೇಶಕರ ಮಗ ಹೀರೋ ಆಗಿದ್ದಾಗ:
ಸೆಟ್‌ನಲ್ಲಿ ನಿಮ್ಮ ತಂದೆ ಹೇಗಿರ್ತಿದ್ರು?
ಸೆಟ್‌ನಲ್ಲಿ ಅಪ್ಪ, ಮಗ ಅನ್ನೋ ಮಾತೇ ಇಲ್ಲ. ಅಲ್ಲೇನಿದ್ರೂ ಅವರು ನಿರ್ದೇಶಕರು, ನಾನು ನಟ ಅಷ್ಟೇ.

ನಟ/ನಟಿಗೆ (ವಿಶೇಷವಾಗಿ ನಾವು ಎಂದೂ ನಂಬರ್ 1 ಆಗುವುದಿಲ್ಲ ಎಂದು ಗೊತ್ತಿರುವವರು):
ನಿಮಗೆ ನಂ.1 ಎನಿಸಿಕೊಳ್ಳೋ ಆಸೆ ಇಲ್ವಾ? / ನಿಮ್ಮ ಪ್ರಕಾರ ಸದ್ಯಕ್ಕೆ ಯಾರು ನಂಬರ್ ಒನ್?
ನನಗೆ ಈ ನಂಬರ್‌ಗಳಲ್ಲಿ ಆಸಕ್ತಿಯಿಲ್ಲ. ಒಳ್ಳೆಯ ನಟ ನಟಿ ಅನ್ನಿಸ್ಕೋಬೇಕು, ಒಳ್ಳೆ ಸಿನಿಮಾ ಮಾಡಬೇಕು ಅನ್ನೋದಷ್ಟೇ ನನ್ನ ಉದ್ದೇಶ.

ಕೊನೆಯದಾಗಿ ಕರ್ನಾಟಕದ ಜನತೆಗೆ ಏನು ಹೇಳ್ತೀರಿ?
ನಮಗೆ ನಿಮ್ಮ ಆಶೀರ್ವಾದ ಬೇಕು. ಕನ್ನಡ ಸಿನಿಮಾ ನೋಡಿ ಪ್ರೋತ್ಸಾಹಿಸಿ. ಅದರಲ್ಲೂ ಕನ್ನಡ ಚಿತ್ರಗಳನ್ನು ದಯವಿಟ್ಟು ಥಿಯೇಟರ್‌ಗೇ ಬಂದು ನೋಡಿ. ಆಗ ನಾವು ಇನ್ನೂ ಒಳ್ಳೆಯ ಸಿನಿಮಾ ಮಾಡೋಕೆ ಸಾಧ್ಯ ಆಗುತ್ತೆ.

ಲಾಸ್ಟ್ ಪಂಚ್
ಹೊಸದಾಗಿ ಬಂದ ಕೆಟ್ಟ ಯುವ ನಟ, ನಟಿಯರಿಗೊಂದು ಪ್ರಶ್ನೆ:
ನೀವು ಅಭಿನಯ ಕಲಿತಿದ್ದು ಎಲ್ಲಿ ?
ಪುಣೆ ಇನ್ಸ್ಟಿಟ್ಯೂಟ್‌ನಲ್ಲಿ.
ಹೌದಾ? ಹಾಗಿದ್ರೆ, ಅದನ್ಯಾಕೆ ಯೂಸ್ ಮಾಡ್ಕೊತಾ ಇಲ್ಲ...??!!

-ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.