ಲೇಟೆಸ್ಟ್ ಸ್ಟಾರ್ ನಾಗೇಂದ್ರ

'ಯು/ಎ' ಎಂಬ ಹೆಸರಿಂದ ಶುರುವಾಗಿ 'ದಿ ಎಂಡ್' ಎಂಬ ಹೆಸರಿನೊಂದಿಗೆ ಮುಕ್ತಾಯ ಹಂತಕ್ಕೆ ಬಂದಿರುವ, ಹೊಸತಲೆಮಾರಿನ ಹುಡುಗರ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಉಪೇಂದ್ರ ಬರುವವರಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದ್ದುದು ಹೌದಾದರೂ ಕೊನೆಗೆ ಬಂದಿದ್ದು ಉಪೇಂದ್ರ ಅಲ್ಲಾ ಅವರ ಅಭಿಮಾನಿ ದೇವರು 'ದಿ ಎಂಡ್' ಚಿತ್ರದ ನಿರ್ದೇಶಕ-ನಟ ನಾಗೇಂದ್ರ.
ತಾವು ನಟ-ನಿರ್ದೇಶಕ ಉಪೇಂದ್ರ ಅವರಿಂದ ಪ್ರಭಾವಿತರಾಗಿರುವುದನ್ನು ಚಿತ್ರದ ಶೀರ್ಷಿಕೆಯ ಮೂಲಕವೇ ಸೂಚಿಸಿರುವ ನಾಗೇಂದ್ರ ಅವರು, ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಇನ್ನಷ್ಟು ಗೊಂದಲಮಯವಾಗಿಸುವ ಮೂಲಕ ಅದಕ್ಕೆ ಇನ್ನಷ್ಟು ಪುಷ್ಟಿ ನೀಡಿದರು.
ಚಿತ್ರದ ಟೈಟಲ್ಲು 'ಯು ದಿ ಎಂಡ್ ಎ' ಅಂತಲೋ ಅಥವಾ 'ದಿ ಎಂಡ್' ಅಂತಷ್ಟೇನೋ ಎಂಬ ಗೊಂದಲ ಕೊಂಚಮಟ್ಟಿಗೆ ನಿವಾರಣೆಯಾಗಿದ್ದು ಲಹರಿ ವೇಲು ಅವರು ಟೈಟಲನ್ನು ಉಚ್ಚರಿಸಿದಾಗಲೇ. ಆದ್ದರಿಂದ ಚಿತ್ರದ ಹೆಸರು 'ದಿ ಎಂಡ್' ಅಂತಲೂ ಮಿಕ್ಕಿದ್ದೆಲ್ಲವನ್ನು ಟ್ಯಾಗ್ ಲೈನ್ ಅಂತಲೂ ಅಂದುಕೊಳ್ಳಲಡ್ಡಿಯಿಲ್ಲ.
ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿದ್ದು ಸರ್ಪದೋಷದಿಂದ! ಸಿಡಿ ಕವರಿನ ಮೇಲೆ ತಮ್ಮ ಹೆಸರಿನ ಬದಲು ಸರ್ಪದ ಚಿತ್ರ ಛಾಪಿಸಿಕೊಂಡಿರುವ ನಾಗೇಂದ್ರ ಲೇಟಾಗಿ ಬಂದರೂ ಲೇಟೆಸ್ಟಾಗಿ ಬರಬೇಕು ಎಂಬ ಪಾಲಿಸಿಯನ್ನು ಬಲವಾಗಿ ನಂಬಿಕೊಂಡವರು ಅಂತ ಅವರ ಉತ್ಸಾಹದ ಮಾತುಗಳು ಹೇಳಿದವು.
ಫಟಾಫಟ್ ಆಡಿಯೋ ರಿಲೀಸಿನ ನಂತರ ಮಾತನಾಡಿದ ಲಹರಿ ವೇಲು ವೇದಿಕೆಯ ಮೇಲೆಯೇ ಲಘುವಾಗಿ ಯುವನಿರ್ದೇಶಕರಿಗೆ ಸಮಯಪಾಲನೆಯ ಬಗ್ಗೆ ಕಿವಿಮಾತು ಹೇಳಿದರು ಹಾಗೂ ನಿರ್ದೇಶಕರ ಪರವಾಗಿ ಕ್ಷಮೆಯಾಚಿಸಿದರು.
ಲಹರಿ ಸಂಸ್ಥೆಯಿಂದಲೇ ಬಿಡುಗಡೆಯಾಗಿದ್ದ ಉಪೇಂದ್ರರ 'ಎ' ಚಿತ್ರದ ಹಾಗೆಯೇ 'ದಿ ಎಂಡ್' ಕೂಡ ಯಶಸ್ವಿಯಾಗಲಿ ಅಂತ ಹಾರೈಸಿದ ವೇಲು, ಈ ವರ್ಷ ಬಿಡುಗಡೆಯಾಗುತ್ತಿರೋ ಈ ಚಿತ್ರ ಮುಂದಿನವರ್ಷದ ತನಕವೂ ಚಿತ್ರಮಂದಿರದಲ್ಲಿ ಉಳಿದುಕೊಳ್ಳುವಂತಾಗಲಿ ಅಂತ ಶುಭಕೋರಿದರು.
ವಾಣಿಜ್ಯ ಮಂಡಳಿಯ ನೂತನಾಧ್ಯಕ್ಷರಾದ ಹೆಚ್.ಡಿ. ಗಂಗರಾಜ್, ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ನಿರ್ಮಾಪಕರಾದ ಭಾ.ಮಾ.ಹರೀಶ್, ಮಹದೇವು, ನಟ ಶ್ರೀನಗರ ಕಿಟ್ಟಿ, ಚಿತ್ರದ ಛಾಯಾಗ್ರಾಹಕ ಮನೋಹರ್ ಜೋಷಿ, ಶಾರ್ಟ್ ಅಂಡ್ ಸ್ವೀಟಾಗಿ ಶುಭ ಹಾರೈಸಿದರು. ಕೊನೆಯವರಾಗಿ ಬಂದು ಅತಿಥಿಗಳ ಕುರ್ಚಿ ಅಲಂಕರಿಸಿದ ಸಾಯಿ ಗೋಲ್ಡ್ ಸರವಣ ನಿರ್ದೇಶಕರಿಗೆ ಶುಭ ಹಾರೈಸಿ, ಒಂದೆರಡು ಕನ್ನಡ ಘೋಷ ವಾಕ್ಯಗಳನ್ನು ನುಡಿದು ತಮ್ಮ ಕನ್ನಡಪ್ರೇಮ ಪ್ರಕಟಪಡಿಸಿದರು.
ಚಾರ್ಮಿನಾರ್ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ಕುಮುದ, ಈ ಚಿತ್ರದಿಂದ ನಾಯಕಿಯಾಗಿ ಬಡ್ತಿ ಪಡೆದಿದ್ದಾರೆ. ಚಿತ್ರ ಶೀಘ್ರದಲ್ಲೇ ತೆರೆಕಾಣಲಿದೆಯೆಂದೂ, ನೋಡಿ ಇಡೀ ತಂಡವನ್ನು ಬೆಂಬಲಿಸಬೇಕೆಂದು ಕೋರಿ ಮಾತು ಮುಗಿಸಿದರು. ಚೊಚ್ಚಲ ಚಿತ್ರದ ಆಡಿಯೋ ಬಿಡುಗಡೆಯ ಬಗ್ಗೆ ಥ್ರಿಲ್ಲಾಗಿದ್ದ ಸಂಗೀತ ನಿರ್ದೇಶಕ ಮನುಶ್ರೀ, ಒರಿಜಿನಲ್ ಎಂಬಂಥ ಪ್ರಯತ್ನ ಮಾಡಿದ್ದಾರಂತೆ.
ಕಾರ್ಯಕ್ರಮದ ನಂತರ ಹಾಡುಗಳನ್ನು ದೊಡ್ಡ ಪರದೆಯ ಮೇಲೆ 'ಕೇಳಿಸಲಾಯಿತು'. ಹಾಡಿನ ವಿಡಿಯೋ ಪ್ರದರ್ಶಿಸಬಹುದೆಂದು ಕಾದಿದ್ದ ಮಂದಿ ಬರೀ ಆಡಿಯೋ ಕೇಳಿ ನಿರಾಶರಾದಾಗ, ಚಿತ್ರದ ಟ್ರೈಲರ್ ತೋರಿಸಿ ಸಮಾಧಾನಪಡಿಸಲಾಯಿತು.
ಈ ಮಧ್ಯೆ ಲಹರಿ ವೇಲು ಎಫ್ ಎಂ ಚಾನಲ್ಗಳ ಕನ್ನಡ ವಿರೋಧಿ ಧೋರಣೆಯ ವಿರುದ್ಧ ಗುಡುಗಿ, ಬದಲಾಗದಿದ್ದರೆ ಇಂಥ ರೇಡಿಯೋ ವಾಹಿನಿಗಳನ್ನು ಈ ನೆಲದಿಂದ ಓಡಿಸಬೇಕೆಂದೂ, ಅದಕ್ಕೆ ಚೇಂಬರ್ ಸಹಕಾರ ನೀಡಬೇಕೆಂದೂ ಮನವಿ ಮಾಡಿದರು. ಅವರ ಮನವಿಗೆ ವೇದಿಕೆಯ ಮೇಲೆಯೇ ಗಂಗರಾಜು ಅವರೂ ಪೂರಕವಾಗಿ ಸ್ಪಂದಿಸಿದರು. ನಿರೂಪಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಬಿಗ್ ಎಫ್.ಎಮ್ ನ ಆರ್ಜೆ ಮಯೂರ ಅವರೆದುರಲ್ಲೇ ಈ ಚರ್ಚೆ ಜರುಗಿದ್ದು ಹಾಗೂ ಅವರು ಇದಕ್ಕೆ ಮೂಕಪ್ರೇಕ್ಷಕನಾಗುವಂತಾಗಿದ್ದು ಯಾರ ಗಮನಕ್ಕೂ ಬರಲಿಲ್ಲ ಎಂಬುದು ಗಮನಾರ್ಹ. <
- ನವೀನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


