ಇಲ್ಲಿ ಫೋಟೋ ತೆಗೆಸಿಕೊಂಡ್ರೆ ಸ್ಟಾರ್ ಆಗ್ತಾರೆ!

'ಫೋಟೋ ಅಂದರೆ ಅದು ಬರೀ ಕ್ಯಾಮರಾದಲ್ಲಿ ಸೆರೆಯಾದ ಮುಖವಲ್ಲ. ಅದರ ಹಿಂದೆ ಒಂದು ಕಥೆ ಇರಬೇಕು' ಎನ್ನುತ್ತಿದ್ದ ಪುಟ್ಟಣ್ಣ ಕಣಗಾಲ್ ಅವರ ಮಾತುಗಳಿಂದಲೇ ನನ್ನಿಂದ ಗ್ಲಾಮರ್ನ ಹೊರತಾದ ಗ್ರಾಮರ್ ಫೋಟೋಗಳನ್ನು ತೆಗೆಯಲಿಕ್ಕೆ ಸಾಧ್ಯವಾಯಿತು. -ಅಶ್ವತ್ಥನಾರಾಯಣ
ಅದೊಂದು ಕಾಲವಿತ್ತು. ಅಶ್ವತ್ಥನಾರಾಯಣ ಅವರ ಪ್ರಗತಿ ಸ್ಟುಡಿಯೋದಲ್ಲಿ ಒಂದು ಫೋಟೋ ತೆಗೆಸಿಕೊಂಡರೆ ಸ್ಟಾರ್ ನಟರಾಗುತ್ತೇವೆಂಬ ನಂಬಿಕೆ. ಹೀಗಾಗಿ ದಿಗ್ಗಜ ನಟರಿಂದ ಆರಂಭಗೊಂಡು ಎಲ್ಲರೂ ಇಲ್ಲಿ ಫೋಟೊ ತೆಗೆಸಿಕೊಳ್ಳಲು ಮುಗಿಬೀಳುತ್ತಿದ್ದರು. ಪವರ್ಸ್ಟಾರ್ ಪುನೀತ್ರಾಜ್ಕುಮಾರ್ ಕೂಡ ಪ್ರಗತಿ ಸ್ಟುಡಿಯೋದ ಕ್ಯಾಮೆರಾಗೆ ಮುಖ ಒಡ್ಡಿದವರೇ. 2005ರಲ್ಲಿ ಪ್ರಗತಿ ಸ್ಟುಡಿಯೋ ಮುಚ್ಚಿದಾಗ ಖುದ್ದು ಅಶ್ವತ್ಥನಾರಾಯಣ ಅವರೇ ಸಾಕಷ್ಟು ರೀಲುಗಳನ್ನು ಬಿಸಾಕಿದ್ದಾರೆ. ಸದ್ಯ ಅವರ ಬಳಿ 4.5 ಲಕ್ಷಕ್ಕೂ ಹೆಚ್ಚು ನೆಗೆಟಿವ್ಗಳು ಇವೆ. ಸಹಾಯಕ ನಿರ್ದೇಶಕರಾಗಿ, ಒಂದೆರಡು ಸಾಕ್ಷ್ಯ ಚಿತ್ರಗಳಿಗೆ ಛಾಯಾಗ್ರಹಕರಾಗಿ ಕೆಲಸ ಮಾಡಿದ್ದಾರೆ.
ಪುಟ್ಟಣ್ಣ ಕಣಗಾಲ್ ನಿರ್ದೇಶನದ 10, ದ್ವಾರಕೀಶ್ ನಿರ್ಮಾಣದ 12, ಸಿದ್ದಲಿಂಗಯ್ಯ ನಿರ್ದೇಶನದ 12 ಚಿತ್ರಗಳು ಹಾಗೂ ಕೆ.ಎಸ್.ಎಲ್. ಸ್ವಾಮಿ ಸೇರಿದಂತೆ ಹತ್ತಾರು ನಿರ್ದೇಶಕರ ಸಿನಿಮಾಗಳಿಗೆ ಕಾಯಂ ಸ್ಥಿರ ಛಾಯಾಗ್ರಹಕರಾಗಿದ್ದರು ಅಶ್ವತ್ಥನಾರಾಯಣ. ಪುಟ್ಟಣ್ಣ ಅವರದ್ದೇ 600ಕ್ಕೂ ಹೆಚ್ಚು ಅಪರೂಪದ ಫೋಟೋಗಳನ್ನು ತೆಗೆದಿದ್ದಾರೆ ಇವರು. ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಆರತಿ, ಭಾರತಿ, ಜಯಂತಿ, ಕಲ್ಪನಾ, ರಾಮಕೃಷ್ಣ, ಕಲಾವಿದ ಅಶೋಕ್, ಫಂಡರಿಬಾಯಿ, ಭವ್ಯ, ಅನಂತ್ನಾಗ್, ಶಂಕರ್ನಾಗ್, ಅಶ್ವತ್ಥ್, ಬಾಲಣ್ಣ, ನರಸಿಂಹರಾಜು, ವಜ್ರಮುನಿ, ತೂಗದೀಪ, ಶಕ್ತಿಪ್ರಸಾದ್, ಶ್ರೀನಾಥ್, ಅಂಕಲ್ ಲೋಕ್ನಾಥ್... ಪಟ್ಟಿ ದೊಡ್ಡದಾಗುತ್ತದೆ. ಆರಂಭ ದಿನಗಳ ಚಿತ್ರರಂಗದ ಎಲ್ಲ ನಟ, ನಟಿಯರು, ತಂತ್ರಜ್ಞರು, ನಿರ್ದೇಶಕರು ಇವರ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. ಇದು ಅಶ್ವತ್ಥನಾರಾಯಣ ಅವರ ಸಂಕ್ಷಿಪ್ತ ಪರಿಚಯ. 'ಸ್ಟಿಲ್ ಫೋಟೋಗ್ರಾಫರ್ಗಳು ಕನ್ನಡ ಚಿತ್ರಗಳಿಗೂ ಮದ್ರಾಸಿನಿಂದಲೇ ಬರುತ್ತಿದ್ದರು. 'ಅಯ್ಯೋ ಕನ್ನಡದವರಿಗೆ ಫೋಟೋ ತೆಗೆಯುವುದು ಬರಲ್ಲ. ಮದ್ರಾಸ್ನಿಂದಲೇ ಕರೆಸಿಬಿಟ್ಟರೆ ಆಯಿತು' ಎನ್ನುತ್ತಿದ್ದರು. ಹೀಗಾಗಿ ನಮ್ಮವರೂ ಕೂಡ ಕನ್ನಡಿಗರನ್ನು ಹೆಚ್ಚು ಪ್ರೋತ್ಸಾಹಿಸುತ್ತಿರಲಿಲ್ಲ. ಅಂಥ ಕಾಲದಲ್ಲಿ ನಾನು ಕ್ಯಾಮೆರಾ ಹಿಡಿದಿದ್ದು. ಮದ್ರಾಸಿನಿಂದ ಬಂದವರಿಗೆ ಆಗ ಬೆಲೆ ಇತ್ತು. ಈ ಕಾರಣಕ್ಕೆ ಕನ್ನಡ ಚಿತ್ರರಂಗ ಬೆಂಗಳೂರಿಗೆ ಬಂದ ಮೇಲೂ ನಾನು ಚಲಾವಣೆಯಲ್ಲಿದ್ದೆ. ಅಲ್ಲದೆ ತಮ್ಮ ಚಿತ್ರಗಳಿಗೆ ನಾನೇ ಬೇಕು ಅಂತ ಕರೆಸಿಕೊಳ್ಳುವವರೇ ಆಗ ಹೆಚ್ಚು. ನನ್ನ ಜರ್ನಿಯಲ್ಲಿ ಸಾವಿರಾರು ಫೋಟೋಗಳನ್ನು ತೆಗೆದಿದ್ದೇನೆ. ವಿಶೇಷ ಅಂದರೆ, ನೂರಾರು ನಟ, ನಟಿಯರು ಮೊದಲು ಬಣ್ಣ ಹಚ್ಚಿದಾಗ ಅವರ ಫಸ್ಟ್ ಲುಕ್ ಸೆರೆ ಹಿಡಿದಿದ್ದು ನಾನೇ. 1970ರಿಂದ 2005ರವರೆಗೂ ಪ್ರಗತಿ ಸ್ಟುಡಿಯೋ ನಡೆಯಿತು. ನಂತರ ಮುಚ್ಚಬೇಕಾಯಿತು. ಮುಚ್ಚಿದಾಗ ನೋವಾಯಿತು. ಆದರೆ, ಇಷ್ಟು ವರ್ಷಗಳ ನನ್ನ ಫೋಟೋಗ್ರಫಿಯನ್ನು ತಿರುಗಿ ನೋಡಿದಾಗ ಖುಷಿಯಾಗುತ್ತದೆ. ಚಿತ್ರರಂಗದ ಗೋಲ್ಡ್ನ್ ಪಿರಿಯಡ್ನಲ್ಲಿ ನಾನೂ ಒಬ್ಬನಾಗಿದ್ದೆ ಎಂಬುದು ಸಂತಸದ ವಿಷಯ' ಎನ್ನುತ್ತಾರೆ ಅಶ್ವತ್ಥನಾರಾಯಣ.
ಹಿರಿಯ ಪತ್ರಕರ್ತ ವಿ.ಎನ್. ಸುಬ್ಬರಾವ್ ನಡೆಸುತ್ತಿದ್ದ 'ಮೇನಕಾ' ಎನ್ನುವ ಸಿನಿಮಾ ಪತ್ರಿಕೆಗೂ ಛಾಯಾಗ್ರಹಕರಾಗಿದ್ದರು ಅಶ್ವತ್ಥನಾರಾಯಣ. ಇವರೇ ತೆಗೆದ ಕಲರ್ ಸಿನಿಮಾ ಫೋಟೋ ಮೊಟ್ಟ ಮೊದಲ ಬಾರಿಗೆ ಪ್ರಕಟವಾಗಿದ್ದು ಕನ್ನಡಪ್ರಭದಲ್ಲಿ. ಆಗ ಕನ್ನಡಪ್ರಭದ ಸಿನಿಮಾ ವಿಭಾಗದ ಸೇರಿದಂತೆ ಪುರವಣಿ ಸಂಪಾದಕನಾಗಿದ್ದವರು ನಟಿ ಅಪರ್ಣಾ ಅವರ ತಂದೆ ಕೆ.ಎಸ್. ನಾರಾಯಣ ಸ್ವಾಮಿ. 'ಈಗ ಸಿನಿಮಾ ಫೋಟೋಗಳು ಅರ್ಥ ಕಳೆದುಕೊಂಡಿವೆ. ಸಿನಿಮಾಗಿಂತ ಮುಂಚೆಯೇ ಫೋಟೋ ಸೆಷನ್ ಮಾಡುತ್ತಾರೆ. ಫೋಟೋಗಳಲ್ಲಿ ಗ್ರಾಮರ್ಗಿಂತ ಗ್ಲಾಮರ್ ಮುಖ್ಯವಾಗಿದೆ. ಯಾವ ಸಿನಿಮಾದ ಫೋಟೋ ನೋಡಿದರೂ ಮಾಡೆಲ್ಗಳು ನೆನಪಾಗುತ್ತಾರೆ. ಚಿತ್ರದ ಬಗ್ಗೆ ಯಾವ ಕುತೂಹಲವೂ ಮೂಡದು. ನಾಯಕಿ ಕಡಿಮೆ ಬಟ್ಟೆ ಹಾಕಿದ್ದಾಳೋ ಇಲ್ಲವೋ ಎನ್ನುವುದರ ಮೇಲೆ ಒಂದು ಫೋಟೋ ಹಣೆಬರಹ ನಿರ್ಧಾರವಾಗುತ್ತದೆ. ಆದರೆ, 'ಫೋಟೋ ಅಂದರೆ ಅದು ಬರೀ ಕ್ಯಾಮರಾದಲ್ಲಿ ಸೆರೆಯಾದ ಮುಖವಲ್ಲ. ಅದರ ಹಿಂದೆ ಒಂದು ಕಥೆ ಇರಬೇಕು' ಎನ್ನುತ್ತಿದ್ದ ಪುಟ್ಟಣ್ಣ ಕಣಗಾಲ್ ಅವರ ಮಾತುಗಳಿಂದಲೇ ನನ್ನಿಂದ ಗ್ಲಾಮರ್ನ ಹೊರತಾದ ಗ್ರಾಮರ್ ಫೋಟೋಗಳನ್ನು ತೆಗೆಯಲಿಕ್ಕೆ ಸಾಧ್ಯವಾಯಿತು' ಎನ್ನುವ ಅಶ್ವತ್ಥನಾರಾಯಣ, ಈಗಲೂ ಹುರುಪಿನಿಂದ ಓಡಾಡುತ್ತೈರೆ. ಆದರೆ, 'ಈ ತಲೆಮಾರಿನ ಚಿತ್ರರಂಗದಿಂದ ಮರೆಯಾಗಿದ್ದು ಯಾಕೆ' ಎಂದರೆ, 'ಸಾಕು ಅನಿಸಿತು. ಈಗ ಸಂತೋಷವಾಗಿದ್ದೇನೆ. ಮನಸ್ಸು ಮಾಡಿದ್ದರೆ ಸಿನಿಮಾ ನಿರ್ದೇಶಕನಾಗಬಹುದಿತ್ತು. ಇಲ್ಲ, ಸಿನಿಮಾ ಛಾಯಾಗ್ರಹಕನಾಗಬಹುದಿತ್ತು. ಆದರೆ, ಸ್ಟಿಲ್ ಫೋಟೋಗ್ರಫಿಯಲ್ಲಿರುವ ಖುಷಿ ಬೇರೆ ಎಲ್ಲೂ ಇಲ್ಲ. ನಮ್ಮಂಥವರು ಈಗಿನ ಚಿತ್ರರಂಗಕ್ಕೆ ಬೇಕಿಲ್ಲ. ನಮಗೂ ಇವರು ಬೇಕಿಲ್ಲ. ಹೀಗಾಗಿ ಕ್ಯಾಮರಾ ಬದಿಗಿಟ್ಟೆ. ನಾನೇ ತೆಗೆದ ಸಾವಿರಾರು ಫೋಟೋಗಳನ್ನು ಚರಿತ್ರೆಯಾಗಿ ಉಳಿಯಬೇಕೆಂದು ಓಡಾಡುತ್ತಿದ್ದೇನೆ' ಎಂದರು ಅಶ್ವತ್ಥನಾರಾಯಣ. ಎರಡು ಸಂಪುಟಗಳಲ್ಲಿ ಇವರ ಕ್ಯಾಮೆರಾ ಮೋಡಿಯಲ್ಲಿ ಮೂಡಿದ ಫೋಟೋಗಳು ಪುಸ್ತಕವಾಗುವ ಸಾಧ್ಯತೆಗಳಿವೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ ಎನ್ನಲಾಗುತ್ತಿದೆ. ಅಶ್ವತ್ಥನಾರಾಯಣ ಅವರ ಕ್ಯಾಮರಾದ ನೆರಳು- ಬೆಳಕಿನ ಮೋಡಿ ಈ ತಲೆಮಾರಿನ ಸಿನಿಮಾ ಜಗತ್ತು ಕೂಡ ನೋಡುವಂತಾಗಲಿ. ಸದ್ಯ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಮಗ ಕಿಶೋರ್ ಹಾಗೂ ಮೊಮ್ಮಕ್ಕಳ ಜೊತೆ ಇರುವ ಅಶ್ವತ್ಥನಾರಾಯಣ, ನಿತ್ಯ ತಾವೇ ಅಂದು ತೆಗೆದ ಫೋಟೋಗಳನ್ನು ನೋಡುತ್ತ ಅವುಗಳನ್ನು ಕ್ರಮಬದ್ಧವಾಗಿ ಜೋಡಿಸುವುದು, ಅಗತ್ಯವಿರುವ ನೆಗೆಟಿವ್ಗಳನ್ನು ಪ್ರಿಂಟ್ ಹಾಕಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ, ಚಿತ್ರರಂಗದ ಒಂದು ಭಾಗ ಎನಿಸಿಕೊಂಡಿರುವ ಸ್ಟಿಲ್ ಫೋಟೋಗ್ರಫರ್ಗಳನ್ನು ಗುರುತಿಸುವ ಯಾವ ಪ್ರಶಸ್ತಿ ಇಲ್ಲವಲ್ಲ ಎನ್ನುವ ಬೇಸರ ಅವರದ್ದು.
- ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


