

ಬೆಂಗಳೂರಿಗೆ ಒಂದೇ ಅಶೋಕ ಪಿಲ್ಲರ್. ಕನ್ನಡ ಚಿತ್ರರಂಗದಲ್ಲೂ ಒಬ್ಬರೇ ಅಶೋಕ್. ಆದರೆ, ಇಲ್ಲಿ ಮೂರು ಪಿಲ್ಲರ್‌ಗಳು ಇವೆ. ಅವು ಅಶೋಕ ಪಿಲ್ಲರ್‌ನಷ್ಟೇ ಮಹತ್ವ. ಆ ಮೂವರು ಬೇರ್ಯಾರೂ ಅಲ್ಲ, ನಟ ರವಿಶಂಕರೇಗೌಡ, ತಬಲಾ ನಾಣಿ, ಹರೀಶ್‌ರಾಜ್. 'ಜೈಲಲಿತ' ಚಿತ್ರದಲ್ಲಿ ಪ್ರೇಕ್ಷಕರಿಗೆ ಪಕ್ಕಾ ಮನರಂಜನೆ ಸಿಗುತ್ತಿದೆ ಎಂದರೆ ಅದಕ್ಕೆ ಕಾರಣ ಈ ಮೂರು ಮಂದಿ. ಹೌದು, ಚಿತ್ರದ ನಾಯಕ ಶರಣ್ ಅವರಷ್ಟೇ 'ಜೈಲಲಿತ'ಳಿಗೆ ಬ್ಯಾಕ್ ಬೋನ್ ಆಗಿರುವ ಇವರು ಚಿತ್ರದ ನಿಜವಾದ ಅಶೋಕ ಪಿಲ್ಲರ್‌ಗಳು.
ಕಿರುತೆರೆಯಿಂದ ಬಂದ ರವಿಶಂಕರೇಗೌಡರನ್ನು ಆರಂಭದಲ್ಲಿ ಅದೇ ಕಿರು ಇಮೇಜಿನಲ್ಲಿ ಗಾಂಧಿನಗರ ನೋಡಿದರೂ, ರವಿಶಂಕರ್ ಮಾತ್ರ 'ನಾನು ಡಾ.ವಿಠಲ್‌ರಾವ್ ಅಲ್ಲ...' ಎಂದು ಸಾಕಷ್ಟು ಬಾರಿ ಸಮಜಾಯಿಷಿ ನೀಡಿದ್ದಾರೆ. ಆದರೂ, ಈಗಲೂ ಕೆಲವರು ಇವರ ಮಾತನ್ನು ತೀರಾ 'ಸಿಲ್ಲಿ ಲಲ್ಲಿ'ಯಾಗಿ ತೆಗೆದುಕೊಳ್ಳುತ್ತಾರೆ. ಯಾಕೆ? ಎಂಬುದು ರವಿಶಂಕರ್ ಪ್ರಶ್ನೆ. ಇರಲಿ, ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದ ರವಿಶಂಕರ್, 'ನಂಜನ ಕೂಡು ನಂಜುಂಡು' ಚಿತ್ರದಲ್ಲಿ ತಮ್ಮ ಇನ್ನೋಸೆಂಟ್ ಪ್ರತಿಭೆಯನ್ನು ಸಾಬೀತು ಮಾಡಿದ್ದಾರೆ. ಈ ಚಿತ್ರಕ್ಕೂ ಮುನ್ನ ಕಿರಣ್ ಗೋವಿ ನಿರ್ದೇಶನದ 'ಪಯಣ' ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಯ ಕ್ಯಾಮೆರಾ ಮುಂದೆ ನಿಂತುಕೊಂಡರು. 'ಪಯಣ', 'ನಗೆಬಾಂಬ್', 'ನವರಂಗಿ', 'ಗಾಂಧಿ ಜಯಂತಿ', 'ಸ್ನೇಹಿತರು', 'ದೇವ್ರಾಣೆ', 'ನಮ್ ಏರಿಯಾದಲ್ ಇನ್ನೊಂದಿನಾ', 'ಒಂದ್ ಚಾನ್ಸ್ ಕೊಡಿ ಪ್ಲೀಸ್' ಹೀಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ ರವಿಶಂಕರೇಗೌಡ ಅವರಿಗೆ 'ನಂಜನಗೂಡು ನಂಜುಂಡ', 'ಪಯಣ' ಚಿತ್ರಗಳು ಹೆಚ್ಚು ಹೆಸರು ತಂದು ಕೊಟ್ಟಿವೆ.
ಇದರ ನಡುವೆ 'ಚಿಟ್ಟೇಸ್ವಾಮಿ'ಯಾಗಿಯೂ ಪ್ರೇಕ್ಷಕರನ್ನು ನಗಿಸಿ, 'ಜೋಗಯ್ಯ' ಚಿತ್ರದಲ್ಲೂ ಹೆಚ್ಚು ಮಾರ್ಕ್ಸ್ ಪಡೆದ ನಟ.
ಪಾತ್ರ ಎಷ್ಟೇ ಚಿಕ್ಕದಿರಲಿ ಅದಕ್ಕೆ ಜೀವ ತುಂಬುವುದು ರವಿಶಂಕರೇಗೌಡರ ಪ್ರತಿಭೆ. ಹೀಗಾಗಿಯೇ 'ಜೈಲಲಿತ' ಚಿತ್ರದಲ್ಲಿ ಲಾಯರ್ ಲಕ್ಷ್ಮಿ ಆಗಿ ಬರುವ ರವಿಶಂಕರ್, ಟೈಮಿಂಗ್ ಡೈಲಾಗ್‌ಗಳಿಂದಲೇ ಫೇಮ್. ಹೆಣ್ಣು ವೇಷದಲ್ಲಿರುವ ಶರಣ್‌ರನ್ನು ಪ್ರೀತಿಸುವ ಪಾತ್ರದಲ್ಲಿ ರವಿಶಂಕರ್ ಅವರದ್ದು ಅಪ್ಪಟ 'ಬೆಳ್ಳಿತೆರೆಯ' ನಟನೆ. ಇನ್ನು ಶ್ರೀಮಂತ ಮನೆತನದ ಹುಡುಗನಾಗಿ ಹರೀಶ್ ರಾಜ್ ಅವರ ಪಾತ್ರದ ಬಗ್ಗೆಯೂ ಎರಡು ಮಾತಿಲ್ಲ. 'ಕಲಾಕಾರ್' ಚಿತ್ರದ ಮೂಲಕ ನಾಯಕ, ನಿರ್ದೇಶಕ, ನಿರ್ಮಾಪಕನಾಗಿ ಬಂದ ಹರೀಶ್ ರಾಜ್, ಮುಂದೆ 'ಗನ್' ಹಿಡಿದು ಜಂಪಿಂಗ್ ಸ್ಟಾರ್ ಎನಿಸಿಕೊಂಡರು. ಗಾಂಧಿನಗರ ಅವರನ್ನು ಜಂಪಿಂಗ್ ಸ್ಟಾರ್ ಅಂತ ಕಾಲೆಳೆದರೂ ಹರೀಶ್ ರಾಜ್ ಮಾತ್ರ ಎಲ್ಲಿಗೂ ಜಂಪ್ ಆಗದೆ ಕನ್ನಡ ತೆರೆಯಲ್ಲೇ ಉಳಿದುಕೊಂಡಿದ್ದಾರೆ. ಹಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತ ಬಂದಿರುವ ಹರೀಶ್, 'ಜೈಲಲಿತ' ಚಿತ್ರಕ್ಕೆ ಎರಡನೇ ಪಿಲ್ಲರ್. ಪ್ರೀತಿಸಿದ ಹುಡುಗಿ ದೂರವಾದ ಮೇಲೆ ಸೋದರ ಮಾವನಿಂದ ಅಸ್ತಿ ಪಡೆಯಲು ತಾತ್ಕಾಲಿಕ ಪತ್ನಿಯನ್ನು ಪಡೆಯುವ ಹರೀಶ್ ರಾಜ್ ತಾಪತ್ರಯಗಳೇ ಚಿತ್ರದ ಅಸಲಿ ಜೀವಾಳ. ಪತ್ನಿಯಾಗಿ ಬರುವ ಶರಣ್ ಮುಂದೆ ಹರೀಶ್ ಕಳೆದು ಹೋಗದೆ ನಿಂತುಕೊಂಡಿದ್ದಾರೆ ಎನ್ನುವುದು ಅವರ ನಟನೆ ಬಗ್ಗೆ ಹೇಳಬಹುದಾದ ಮೆಚ್ಚುಗೆ ಮಾತು.
ನಟರಾದ ರವಿಶಂಕರೇಗೌಡ ಹಾಗೂ ಹರೀಶ್ ರಾಜ್ ನಡುವೆ ತಮ್ಮ ಪಂಚಿಂಗ್ ಸಂಭಾಷಣೆಗಳಿಂದ ಗಮನ ಸೆಳೆಯುವ ಮತ್ತೊಬ್ಬ ನಟ ತಬಲನಾಣಿ. ಮೇಕಪ್ ಕಲಾವಿದನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಣಿ, ಕುಡುಕನ ದ್ವನಿಯಲ್ಲಿ ಪ್ರೇಕ್ಷಕರನ್ನು ಇದ್ದಕ್ಕಿದ್ದಂತೆ ನಗಿಸುತ್ತಾರೆ. ಅದರಲ್ಲೂ ಕ್ಲೈಮ್ಯಾಕ್ಸ್‌ಕ್ಕಿಂತ ಎರಡು ನಿಮಿಷ ಮುಂಚೆ ಬರುವ ದೃಶ್ಯದಲ್ಲಿ ನಾಣಿಯೇ ಹೀರೋ. 'ಮಠ'ದಲ್ಲಿ ಕುರುಡನಾಗಿ ಕಾಣಿಸಿಕೊಂಡರೂ ಪ್ರತಿಭೆಯಲ್ಲಿ ಮಾತ್ರ ಕುರುಡ ಅನಿಸಿಕೊಂಡಿಲ್ಲ. ಎಂದಿನ ತಮ್ಮ ಎಣ್ಣೆ ಮಾತಿನ ಮ್ಯಾನರಿಸಂನಲ್ಲೇ 'ಜೈಲಲಿತ'ಗೂ ಕಿಕ್ ಕೊಡುತ್ತಾರೆ.
= ಕೇಶವ