ದೇಶದ ರಾಜಧಾನಿ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದು, ಅದರ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದಾಗ ಸಿನಿ ಜಗತ್ತು ನಿರ್ದೇಶಕ ರಾಮ್‌ಗೋಪಾಲ್ ವರ್ಮನ ಕಡೆ ನೋಡಿತು. ಯಾಕೆಂದರೆ ರಕ್ತಚರಿತ್ರೆಯ ಹಿಂದೆ ಮಾತ್ರವಲ್ಲ, ಇಂಥ ನೈಜ ಘಟನೆಗಳ ಹಿಂದೆಯೂ ವರ್ಮನ ಕ್ಯಾಮೆರಾ ಕೆಲಸ ಮಾಡುತ್ತದೆ. ವರ್ಮ ಇದಕ್ಕೆ ಕೈ ಹಾಕಲಿಲ್ಲ ಎನ್ನುವುದೇನೋ ನಿಜ. ಆದರೆ, ವರ್ಮ ಮಾಡದಿದ್ದರೆ ಏನಂತೆ ನಾವಿದ್ದೇವೆ ಎಂದುಕೊಂಡು ಹೊಸ ಕೃಷ್ಣ ಆಂಡ್ ತಂಡ ಸೇರಿಕೊಂಡು ದೆಹಲಿ ಅತ್ಯಾಚಾರ ಘಟನೆಯನ್ನು ಸಿನಿಮಾ ಮಾಡಿದ್ದಾರೆ. ಅದೇ 'ಜಾಸ್ಮಿನ್.5' ದೆಹಲಿ ದೇವತೆಯ ದುರಂತ ಕಥೆ ಎನ್ನುವ ಟ್ಯಾಗ್‌ಲೈನ್‌ನೊಂದಿಗೆ ಬಂದಿರುವ ಈ ಚಿತ್ರ ಇದೇ ಶುಕ್ರವಾರ (ಜು.4) ಬಿಡುಗಡೆಯಾಗುತ್ತಿದೆ.
ಕೃಷ್ಣ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಈ ಹಿಂದೆ ಸಹ ನಿರ್ದೇಶಕರಾಗಿ, ನಿರ್ದೇಶನದ ಕೋರ್ಸ್ ಮುಗಿಸಿಕೊಂಡು ಬಂದಿರುವ ಕೃಷ್ಣ, ಹೊಸ ರೀತಿಯ ಕಥೆ ಹುಡುಕಾಟದಲ್ಲಿದ್ದಾಗ ದೆಹಲಿ ಘಟನೆ ನಡೆದಿದೆ. ಹೀಗಾಗಿ ಅದನ್ನೇ ಸಿನಿಮಾ ಮಾಡಿದ್ದಾರೆ. 'ನಮ್ಮ ಈ ಚಿತ್ರ ಸಂಪೂರ್ಣವಾಗಿ ದೆಹಲಿ ಘಟನೆಯನ್ನೇ ಒಳಗೊಂಡಿಲ್ಲ. ಇಂಥ ಅತ್ಯಾಚಾರಗಳು ಯಾಕೆ ನಡೆಯುತ್ತಿವೆ, ಅದರ ಹಿಂದಿನ ಸತ್ಯಗಳೇನು ಎಂಬುದನ್ನು ಸಾಕಷ್ಟು ಅಧ್ಯಯನ ಮಾಡಿ ಈ ಕಥೆ ಮಾಡಿದ್ದೇನೆ. ಪಕ್ಕಾ ಕಮರ್ಷಿಯಲ್ ಸಿನಿಮಾ. ಒಂದು ನೈಜ ಘಟನೆ ಜೊತೆಗೆ ಪ್ರೇಮ ಕಥೆ ಇವೆರಡನ್ನೂ ಚಿತ್ರದಲ್ಲಿ ನೋಡಬಹುದು' ಎಂದರು ಕೃಷ್ಣ. ವಿರಾಮ ಹಾಗೂ ಕ್ಲೈಮ್ಯಾಕ್ಸ್‌ನಲ್ಲಿ ಬರುವ ದೃಶ್ಯಗಳು ಇದುವರೆಗೂ ಎಲ್ಲಿಯೂ ಬಂದಿಲ್ಲವಂತೆ. ಎಲ್ಲಿಯೂ ನೋಡಿರದ ಮತ್ತು ನಿರೀಕ್ಷೆಯೇ ಮಾಡಿರದ ಈ ಎರಡು ತಿರುವುಗಳೇ ಚಿತ್ರದ ಜೀವಾಳ ಎಂಬುದು ನಿರ್ದೇಶಕರ ನಂಬಿಕೆ.
ಹೊಸ ಹುಡುಗ ಮೋಹನ್ ನಾಯಕನಾಗಿ ನಟಿಸುತ್ತಿದ್ದಾರೆ. ಅತ್ಯಾಚಾರಕ್ಕೆ ಬಲಿಯಾಗುವ ಪಾತ್ರದಲ್ಲಿ ನವ್ಯ ಕಾಣಿಸಿಕೊಂಡಿದ್ದಾರೆ. 'ಒಳ್ಳೆಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದೇನೆ' ಎಂದು ಹೇಳಿಕೊಂಡರು ನವ್ಯ. ಇನ್ನು ಲವ್ ಟ್ರ್ಯಾಕ್‌ನಲ್ಲಿ ಮಾನಸ ನಾಯಕಿ. ಈಕೆ 'ಜಾಲಿಬಾರು ಪೋಲಿ ಹುಡುಗ್ರು' ಚಿತ್ರದಲ್ಲಿ ಅಭಿನಯಿಸಿದ್ದಾರೆ. 'ನಾನು ಹಳ್ಳಿ ಹುಡುಗಿ ಪಾತ್ರ ಮಾಡುತ್ತಿದ್ದೇನೆ. ನಾಯಕನ ಜೀವನದಲ್ಲಿ ಎಂಟ್ರಿಯಾಗಿ ಏನೆಲ್ಲ ಬದಲಾವಣೆಗಳನ್ನು ಮಾಡುತ್ತೇನೆ ಎಂದು ನನ್ನ ಪಾತ್ರದ ಮೂಲಕ ತೋರಿಸಲಾಗಿದೆ' ಎಂದರು ಮಾನಸ. ಇನ್ನು ಚಿತ್ರಕ್ಕೆ ಶ್ರೀಹರ್ಷ ಸಂಗೀತ ಸಂಯೋಜಿಸಿದ್ದಾರೆ. ಹಿರಿಯ ನಟಿ ಸರೋಜಮ್ಮ ನವ್ಯಳ ಅಮ್ಮನ ಪಾತ್ರದಲ್ಲಿ ಅಭಿನಯಿಸಿದ್ದಾರೆ.