ತಾರಾಗ್ರಹ

ತಾರಾಗ್ರಹ
Updated on: 

ಇವು 'ತಾರಾ ಬೇಡಿಕೆ'ಗಳು. ಕನ್ನಡ ಚಿತ್ರರಂಗದಲ್ಲಿ ತಾರಾ, ಈಗಲೂ ಬೇಡಿಕೆ ಇರುವ ನಟಿ ನಿಜ. ಆದರೆ ಈಗವರು ರಾಜಕೀಯ ತಾರೆ ಕೂಡ. ಹಾಗಾಗಿ ಚಿತ್ರರಂಗದ ಒಳಿತಿಗಾಗಿ ನಟಿ ತಾರಾ ಹಲವು ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದೆ ಇಟ್ಟಿದ್ದಾರೆ. ಮತ್ತು ಅವುಗಳಿಗೆ ಸಿದ್ದರಾಮಯ್ಯ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂಬುದು ವಿಶೇಷ. ಇತ್ತೀಚೆಗೆ ಸುದ್ದಿಗೋಷ್ಠಿಯೊಂದರಲ್ಲಿ ಲೋಕಾಭಿರಾಮವಾಗಿ ಮಾತನಾಡುವಾಗ ನಟಿ ತಾರಾ ಈ ವಿಷಯ ಬಿಚ್ಚಿಟ್ಟರು. ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಮತ್ತು ಕೆಲವು ಹೊಸ ಬೇಡಿಕೆಗಳನ್ನು ಈಡೇರಿಸುವಂತೆ ನಟಿ ಕಮ್ ಶಾಸಕಿ ತಾರಾ ಅನುರಾಧ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ಸದಭಿರುಚಿಯ ಚಿತ್ರಗಳಿಗೆ ನೀಡುವ ಸಬ್ಸಿಡಿ ಹಣವನ್ನು ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡುವುದು, ಕನ್ನಡ ಚಿತ್ರರಂಗದ ಅಮೃತಮಹೋತ್ಸವ ಭವನದ ನಿರ್ಮಾಣಕ್ಕೆ ಅನುದಾನ ಬಿಡುಗಡೆ, ಮೈಸೂರು ಲ್ಯಾಂಪ್ಸ್ ಪ್ರದೇಶವನ್ನು ಚಿತೀಕರಣಕ್ಕಾಗಿ ಮೀಸಲಿಡುವುದು, ಹಲವು ತೆರಿಗೆಗಳ ಪುನರ್‌ವಿಮರ್ಶೆ, ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ, ಆಧುನಿಕ ಉಪಕರಣಗಳ ಖರೀದಿಗೆ ಸಹಾಯಧನ, ಹೆಸರುಘಟ್ಟ, ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ, ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳ ಕಡ್ಡಾಯ ಬಿಡುಗಡೆ, ಟಿಕೇಟ್ ದರದ ಮೇಲೆ ನಿಯಂತ್ರಣ, ರಾಜ್ಯದ ಹಲವು ಪ್ರವಾಸೀ ತಾಣಗಳಲ್ಲಿ ಚಿತ್ರೀಕರಣ ಮಾಡಲು ಅನುಮತಿ ಮತ್ತು ಸರ್ಕಾರೀ ಪ್ರಾಯೋಜಕತ್ವ, ಡಾ.ರಾಜ್‌ಕುಮಾರ್ ಅವರ ಸಮಾಧಿ ಬಳಿ ಮಿನಿ ಥಿಯೇಟರ್, ರಂಗಮಂದಿರ, ರಾಜ್ ಸಾಧನೆಗಳನ್ನೊಳಗೊಂಡ ಎಕ್ಸಿಬಿಷನ್ ಸೆಂಟರ್ ನಿರ್ಮಾಣ, ಬಿಡಿಎ, ಮೂಡಾ ಮತ್ತು ಖಾಸಗಿ ಪ್ರಾಧಿಕಾರಗಳ ಬಡಾವಣೆಗಳಲ್ಲಿ ಕಡ್ಡಾಯ ಚಿತ್ರಮಂದಿರ ನಿರ್ಮಾಣ, ಮಾಲ್‌ಗಳಲ್ಲಿ ಕಡ್ಡಾಯ ಚಿತ್ರಮಂದಿರ ನಿರ್ಮಾಣ ಮತ್ತು ಕಡಿಮೆ ಬಾಡಿಗೆಯಲ್ಲಿ ಚಿತ್ರಪ್ರದರ್ಶನಕ್ಕೆ ಅವಕಾಶ, ಕಡಿಮೆ ದರದ ಟಿಕೇಟ್ ದರ ನಿಗದಿ, ಇವಿಷ್ಟೂ ತಾರಾ ಅನುರಾಧ ಅವರು ಮುಖ್ಯಮಂತ್ರಿಗಳಿಗೆ ಕೊಟ್ಟಿರುವ ಅಹವಾಲಿನಲ್ಲಿರುವ ಅಂಶಗಳು. ಇವುಗಳಲ್ಲಿ ಬಡಾವಣೆಗಳಲ್ಲಿ ಚಿತ್ರಮಂದಿರ ನಿರ್ಮಾಣದ ಬಗೆಗೆ 'ಚರ್ಚಿಸಬೇಕು' ಎಂದು ಹೇಳಿರುವ ಮುಖ್ಯಮಂತ್ರಿಗಳು ಉಳಿದ ಎಲ್ಲ ಬೇಡಿಕೆಗಳಿಗೂ ಓಕೆ ಎಂದಿದ್ದಾರಂತೆ ಎಂದು ಸ್ವತಃ ತಾರಾ ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ಕ್ಷೇತ್ರದಲ್ಲಿ ಚಿತ್ರರಂಗದ ಪ್ರತಿನಿಧಿಗಳು ಇರುವುದು ಹಳೆಯ ವಿಷಯವಾದರೂ ಚಿತ್ರರಂಗಕ್ಕೆ ದೊಡ್ಡ ಮಟ್ಟದ ಸಹಾಯ ಆಗಿದ್ದು ಕಡಿಮೆ. ಆದರೆ ಪ್ರಯತ್ನಗಳು ನಡೆಯುತ್ತಲೇ ಇವೆ. ಅಂಥ ಪ್ರಾಮಾಣಿಕ ಪ್ರಯತ್ನವನ್ನು ತಾರಾ ಅನುರಾಧ ಅವರಂತೂ ಮಾಡಿದ್ದಾರೆ. ಇನ್ನೇನಿದ್ದರೂ ಈ ಬೇಡಿಕೆಗಳು ಈಡೇರುತ್ತವೆಯೇ ಎಂಬುದೇ ಮುಂದಿನ ಕುತೂಹಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಈ ವಿಭಾಗದ ಇತರ ಸುದ್ದಿ

No stories found.

X
Kannada Prabha
www.kannadaprabha.com