

ಪೂಜಾಗಾಂಧಿ ನಿರ್ಮಾಣದ ಅಭಿನೇತ್ರಿ ಚಿತ್ರಕ್ಕೆ ಸಂಬಂಧಿಸಿದಂತೆ ಒಂದು ವಿವಾದ ಕೋರ್ಟ್ ಮೆಟ್ಟಿಲೇರಿರುವ ಸಂದರ್ಭದಲ್ಲಿ 'ವಿವಾದ ಸೃಷ್ಟಿಸಿ ಸುದ್ದಿಯಾಗುವ ತಂತ್ರ'ಗಳ ಬಗ್ಗೆ ಒಂದು ಚರ್ಚೆ.
ಚಿತ್ರೋದ್ಯಮದಲ್ಲಿ ಈಗ ಚಿತ್ರನಿರ್ಮಾಣ ವೆಚ್ಚ, ಪರಿಷ್ಕರಣೆ, ಬಿಡುಗಡೆ, ನಟನಟಿಯರ ಸಂಭಾವನೆ ಇವೆಲ್ಲಕ್ಕಿಂತ ಹೆಚ್ಚು ಬಜೆಟ್ ಪ್ರಚಾರಕ್ಕೇ ಮೀಸಲಿಡಲಾಗುತ್ತೆ. ಪ್ರಚಾರ ಮಾಡಲು ಮಾಧ್ಯಮಗಳಿವೆ ಎಂಬ ಕಾರಣಕ್ಕೆ ಹೆಚ್ಚಿನ ಪ್ರಚಾರ ನಡೆಯುತ್ತಿದೆಯೋ ಅಥವಾ ಪ್ರಚಾರ ನೀಡಲೆಂದೇ ಮಾಧ್ಯಮಗಳು ಸೃಷ್ಟಿ ಆಗುತ್ತಿವೆಯೋ ಎಂಬ ಗೊಂದಲ ಮೂಡಿಸುವಷ್ಟರ ಮಟ್ಟಿಗೆ ಪ್ರಚಾರದ ಅಬ್ಬರ ಹೆಚ್ಚುತ್ತಿದೆ. ಮೊದಲೆಲ್ಲ ಶುಕ್ರವಾರದ ಒಂದು ಪತ್ರಿಕಾ ಜಾಹೀರಾತು, ಸಿನಿಮಾ ಬಿಡುಗಡೆಯ ಆಸುಪಾಸಿನಲ್ಲಿ ಒಂದಷ್ಟು ಪೋಸ್ಟರ್‌ಗಳು, ಇದನ್ನು ಬಿಟ್ಟರೆ ಯಾವ ಪ್ರಚಾರವೂ ಇರುತ್ತಿರಲಿಲ್ಲ. ಬಿಡುಗಡೆಯಾಗಿ ಆರು ತಿಂಗಳಾದರೂ ರೇಡಿಯೋದಲ್ಲಿ ಕೂಡ ಚಿತ್ರದ ಹಾಡು ಕೇಳಲು ಕಷ್ಟವಿರುತ್ತಿತ್ತು. ಪ್ರಚಾರ ಮಾಡದೆ ಗೋಪ್ಯತೆ ಮೂಲಕ ಕುತೂಹಲ ಹುಟ್ಟಿಸುವುದೇ ಅಂದಿನ ಮಟ್ಟಿಗೆ ಪ್ರಚಾರ ತಂತ್ರ. ಆದರೆ ಈಗ? ಅಂದು ಅಗತ್ಯವೇ ಕಾಣಿಸದಿದ್ದ ಪ್ರಚಾರ ತಂತ್ರಗಳು ಈಗ ಏಕೆ ಚಿತ್ರ ವೊಂದರ ಅವಿಭಾಜ್ಯ ಅಂಗ ಎಂಬಂತಾಗಿದೆ? ಚಿತ್ರದಲ್ಲಿ ಸತ್ವ ಇಲ್ಲದಿರುವುದೇ? ಹೆಚ್ಚಿದ ಸ್ಪರ್ಧೆಯೇ?
ಅಥವಾ ಒಬ್ಬರು ಮಾಡಿದರೆಂದು ಅವರನ್ನು ಮೀರಿಸಹೊರಡುವ ಸಮೂಹ ಸನ್ನಿಯೇ? ಅಥವಾ ಇದೂ ಕೂಡ ಸಿನಿಮಾದಂತೆ ಕ್ರಿಯೇಟಿವಿಟಿಯ ಒಂದು ಭಾಗವೇ? ನಿಜಕ್ಕೂ ಚರ್ಚಾರ್ಹ ವಿಷಯ!
ಪ್ರಚಾರಕ್ರಿಯೆ ಒಂದು ಸೃಜನಶೀಲ ವಿಚಾರ ಅಂದುಕೊಂಡು, ಅದರ ಮೂಲಕ ಚಿತ್ರ ಗೆಲ್ಲುವುದಾದರೆ ಅದನ್ನು ಒಪ್ಪೋದ್ರಲ್ಲಿ ತಪ್ಪೇನಿಲ್ಲ. ಆದರೆ ಅಗ್ಗದ ಪ್ರಚಾರಗಳು, ವಿವಾದಗಳ ಮೂಲಕ ಪ್ರಚಾರ ಪಡೆಯುವ ಹುನ್ನಾರಗಳನ್ನು ಬಹುಶಃ ಯಾರಿಂದಲೂ ಒಪ್ಪಲು ಸಾಧ್ಯವಿಲ್ಲ. ದುರಂತವೆಂದರೆ ಇಂದಿನ ಬಹುತೇಕ ಚಿತ್ರಗಳು ವಿವಾದಗಳ ಮೂಲಕ ಪ್ರಚಾರ ಗಿಟ್ಟಿಸಲು ಪ್ರಯತ್ನಿಸುತ್ತಿರುವುದು.
ಟೀವಿ ಚಾನೆಲ್‌ಗಳು, ಸಾಮಾಜಿಕ ತಾಣಗಳು ಚಿತ್ರೋದ್ಯಮಕ್ಕೆ ತುಂಬಾ ಸುಲಭ ಸಂಪರ್ಕಕ್ಕೆ ಸಿಗುತ್ತಿದ್ದು ಇವುಗಳ ಮೂಲಕ ಜನಕ್ಕೆ ತಲುಪುವುದು ಬಹು ಸುಲಭವಾದ ಈ ಹೊತ್ತಿನಲ್ಲಿ ಜನರ ಕಣ್ಣಿಗೆ ತಾಕಬೇಕು ಅಂದರೆ ಕೇವಲ ಧನಾತ್ಮಕ ಜಾಹೀರಾತು ಸಾಲುವುದಿಲ್ಲ. ಹೆಚ್ಚೇನೋ ಬೇಕು ಎಂಬ ಭಾವ ಚಿತ್ರರಂಗದವರಲ್ಲಿ ಮೂಡಿರುವುದು ಇದಕ್ಕೆ ಕಾರಣವಿರಬಹುದಾ?
ಟೀವಿಯಲ್ಲಿ ಚಿತ್ರದ ಪರ ಒಂದು ಜಾಹೀರಾತು ನೀಡಬೇಕಾದರೆ ಅಥವಾ ಪ್ರಮೋಟ್ ಮಾಡಬೇಕಾದರೆ, ಶೋ ಅಥವಾ ಸಂದರ್ಶನ ಮಾಡಿಕೊಳ್ಳಬೇಕೆಂದರೂ ನಿಮಿಷಕ್ಕಿಷ್ಟು ಎಂಬಂತೆ ತೆರಬೇಕಾಗುತ್ತದೆ. ಅದೇ ಒಂದು ವಿವಾದ ತೇಲಿಬಿಟ್ಟರೆ? ನ್ಯೂಸ್ ಚಾನೆಲ್‌ಗಳು ಮತ್ತು ಪತ್ರಿಕೆಯವರು ತಮ್ಮನ್ನೇ ಹುಡುಕಿಕೊಂಡು ಬಂದು ಪುಕ್ಕಟೆ ಸುದ್ದಿ ಮಾಡುತ್ತಾರೆ. ಹೇಗೋ ಸಿನಿಮಾ ಧಿಡೀರ್ ಜನರ ಕಣ್ಣಿಗೆ ಬೀಳುತ್ತದೆ, ಚರ್ಚೆಯ ಭಾಗ ಆಗುತ್ತದೆ. ಕುತೂಹಲ ಕೆರಳಿಸುತ್ತದೆ. ಸಾಕಲ್ಲವೇ? ಹೀಗೊಂದು ಮಾಧ್ಯಮದವರನ್ನೇ ಬೇಸ್ತು ಬೀಳಿಸುವ ತಂತ್ರ ನಡೆಯುತ್ತಿದೆಯೇ? ಅಗೈನ್ ಚರ್ಚಾರ್ಹ!
ಹಾಗಾದರೆ ಈ ಥರದ ವಿವಾದ ಎಷ್ಟರ ಮಟ್ಟಿಗೆ ಸಹಕಾರಿ? ವಿವಾದದ ಬಿಸಿ ಹಾಗೂ ನಂತರದ ಎಫೆಕ್ಟುಗಳನ್ನೂ ನೋಡಿದಾಗ ಗೊತ್ತಾದ ಅಂಶವೆಂದರೆ, ಈ ರೀತಿಯ ವಿವಾದಗಳು ಸಿನಿಮಾಗೆ ಎಂದಿಗೂ ಪೂರಕ ಫಲಿತಾಂಶ ನೀಡಲು ಸಾಧ್ಯವಿಲ್ಲ. ವಿವಾದದಲ್ಲಿ ಭಾಗಿಯಾದ ವ್ಯಕ್ತಿಗಳು ಕೇವಲ ಹಾಸ್ಯಾಸ್ಪದ ಎಲಿಮೆಂಟುಗಳಾಗಿ ಮರೆತುಹೋಗುತ್ತಾರೆ ಅಷ್ಟೇ.
ಈ ಥರ ವಿವಾದಕ್ಕೆ ಕಾರಣವಾಗೋ ಚಿತ್ರದ ವಿರುದ್ಧದ ವ್ಯಕ್ತಿಗಳಿಗೂ ಇದೇ ಮಾತು ಅನ್ವಯ. 'ಯಾವತ್ತೋ ನಾನು ಬರೆದ ಕಥೆ ಕದ್ದು ಚಿತ್ರ ಮಾಡುತ್ತಿದ್ದಾರೆ, ನನ್ನ ಟ್ಯೂನ್ ಕದ್ದಿದ್ದಾರೆ, ಸಾಹಿತ್ಯ ಕದ್ದಿದ್ದಾರೆ, ನನ್ನ ಹೆಸರಿಗೆ ಮಸಿ ಬಳಿಯೋಕೆ ನನ್ನ ಥರದ ಪಾತ್ರ ಸೃಷ್ಟಿಸಿದ್ದಾರೆ, ನಮ್ಮ ಜಾತಿಗೆ, ಧರ್ಮಕ್ಕೆ ಅವಮಾನ ಎಸಗಿದ್ದಾರೆ' ಈ ಥರ ಹೇಳಿಕೆ ಕೊಟ್ಟು ವಿವಾದ ಸೃಷ್ಟಿಸೋ ಹಲವು ವ್ಯಕ್ತಿಗಳು ಸೂಕ್ತ ಪುರಾವೆಗಳಿಲ್ಲದೆ ಒಣ ವಾದ ಮಾಡಿ, ಮೂಲೆಯಿಂದ ಬಂದು ಸುಖಾಸುಮ್ಮನೆ ಪ್ರಚಾರ ಗಿಟ್ಟಿಸಿ ನಂತರ ಎಲ್ಲರಿಂದ ಛೀ ಥೂ ಎನಿಸಿಕೊಳ್ಳುತ್ತಾರೆ. ಕೆಲವರಿಗೆ ಇದು ದುಡ್ಡು ಕೀಳುವ ಬ್ಲಾಕ್‌ಮೇಲ್ ತಂತ್ರ ಕೂಡ. ಹಾಗೆಯೇ ತಮ್ಮ ಚಿತ್ರದ ಬಗ್ಗೆ ಯಾರೋ ಕ್ಯಾತೆ ತೆಗೆದಾಗ, ಅವರನ್ನು ಕರೆದು ಗೌರವಯುತವಾಗಿ ಚರ್ಚಿಸಿ ವಿವಾದವೇ ಹುಟ್ಟದಂತೆ ಮುಗಿಸಿ ಹಾಕುವ ವ್ಯವಧಾನ ಸಿನಿಮಂದಿಗೆ ಬರಬೇಕಿದೆ.
ಪೂಜಾಗಾಂಧಿ ನಿರ್ಮಾಣದ ಅಭಿನೇತ್ರಿ ಚಿತ್ರಕ್ಕೆ ಸಂಬಂಧಿಸಿದಂತೆ ಒಂದು ವಿವಾದ ಕೋರ್ಟ್ ಮೆಟ್ಟಿಲೇರಿರುವ ಈ ಸಂದರ್ಭದಲ್ಲಿ ಮೇಲಿನ ಮಾತುಗಳು ಪ್ರಸ್ತುತ ಅನಿಸುತ್ತ್ತಿದೆ. ಅಭಿನೇತ್ರಿ ಚಿತ್ರದ ವಿಷಯದಲ್ಲಿ ವಿವಾದದ ಅಗತ್ಯ ಇತ್ತೇ? ಇದು ಪರಸ್ಪರ ಮಾತುಕತೆಯ ಮೂಲಕ ಬಗೆಹರಿದು ಸುದ್ದಿಯೇ ಆಗದಂತೆ ಮುಗಿದು ಹೋಗುವ ವಿಷಯ ಅಲ್ಲವೇ?
ಲೇಖಕಿ ಭಾಗ್ಯ ಕೃಷ್ಣಮೂರ್ತಿ ಅವರ ಅಭಿನೇತ್ರಿಯ ಅಂತರಂಗ ಪುಸ್ತಕವನ್ನು ಆಧರಿಸಿ ಅಭಿನೇತ್ರಿ ಚಿತ್ರ ತಯಾರಾಗಿದೆ ಎಂಬುದು ತಕರಾರು. ಇದನ್ನು ಭಾಗ್ಯ ನೇರವಾಗಿ ಪೂಜಾ ಗಾಂಧಿ ಅವರನ್ನು ಸಂಪರ್ಕಿಸಿ ಚರ್ಚಿಸಿ ಪೂರ್ಣವಿರಾಮ ಇಡಬಲ್ಲ ವಿಷಯವಾಗಿತ್ತು. ಹಾಗಾದ್ರೆ ಕೋರ್ಟ್ ಮೆಟ್ಟಿಲು ಹತ್ತೋ ಅಗತ್ಯ ಬಂದದ್ದೇಕೆ? ಮಾಧ್ಯಮದಲ್ಲಿ ಸುದ್ದಿ ಆದದ್ದೇಕೆ?
ಪೂಜಾ ಗಾಂಧಿ ಪ್ರೊಡಕ್ಷನ್ ಚಿತ್ರ ಇದು. ಅವರು ಹೇಳೋದು ಇಷ್ಟು: ನನ್ನ ಚಿತ್ರಕ್ಕೆ ಈ ಥರದ ಪ್ರಚಾರ ಬೇಕಿಲ್ಲ. ಚಿತ್ರದ ಗುಣಮಟ್ಟವೇ ಸಾಕು. ಜಾಹೀರಾತುಗಳು ಸಾಕು. ಲೇಖಕಿಯ ಬಗ್ಗೆ ಗೌರವವಿದೆ. ಅವರು ನನ್ನನ್ನೇ ಸಂಪರ್ಕಿಸಿದ್ದರೆ ನಾನೇ ವಿಷಯ ತಿಳಿಸಿಕೊಡುತ್ತಿದ್ದೆ. ಕೋರ್ಟ್ ಅಗತ್ಯ ಇರಲಿಲ್ಲ. ಕೋರ್ಟ್ ಮೆಟ್ಟಿಲೇರಿದ ನಂತರ ನಾನು ಆ ಪುಸ್ತಕ ನೋಡಿದೆ. ಅದಕ್ಕೂ ನಮ್ಮ ಚಿತ್ರಕ್ಕೂ ಯಾವ ಸಂಬಂಧವೂ ಇಲ್ಲ. ಇದು ನಟಿಯೊಬ್ಬಳ, ಇನ್ನೂ ಸರಿಯಾಗಿ ಹೇಳೋದಾದರೆ ಮಿನುಗುತಾರೆ ಕಲ್ಪನಾ ಜೀವನಗಾಥೆಯಿಂದ ಸ್ಫೂರ್ತಿಪಡೆದಿದೆ. ಅವರ ಪುಸ್ತಕದಲ್ಲಿ ಹಲವು ನಟಿಯರ ಬದುಕಿನ ಪ್ರಸ್ತಾಪವಿದೆ. ಬಹುಶಃ ಕೋರ್ಟ್ ಆದೇಶದಂತೆ ನಾವು ಚಿತ್ರ ಪ್ರದರ್ಶಿಸಿದಾಗ ಸತ್ಯಾಸತ್ಯ ಅವರಿಗೇ ತಿಳಿಯುತ್ತದೆ.
ಭಾಗ್ಯ ಕೃಷ್ಣಮೂರ್ತಿ ಯಾಕೆ ಪೂಜಾ ಗಾಂಧಿಯನ್ನು ಸಂಪರ್ಕಿಸದೆ ಕೋರ್ಟ್‌ಗೆ ಹೋದರು? ಅವರನ್ನು ತಲುಪುವ ಪ್ರಯತ್ನ ಮಾಡಿ ಸೋತರೆ? ಅಥವಾ ಈ ಮೂಲಕ ಸುದ್ದಿಯಾಗುವ ಇರಾದೆಯೆ? ಅಥವಾ ಪೂಜಾ ಗಾಂಧಿ ಅವರ ಮಾತನ್ನು ಸಂಶಯಿಸಬೇಕೆ?
ಹೋಗಲಿ. ಈ ವಿವಾದದಿಂದ ಯಾರಿಗೆ ಯಾವ ಲಾಭವಿದೆ? ಕೋರ್ಟ್‌ಗೆ ಹೋಗಿ ಇಬ್ಬರೂ ಸಮಯ ಹಣ ಖರ್ಚು ಮಾಡಿಕೊಳ್ಳುವ ಜೊತೆಗೆ ಮಾಧ್ಯಮದವರಿಗೂ ಉತ್ತರಿಸುವ ಭಾರ. ಈ ಥರದ ವಿವಾದಗಳಿಂದ ಆಗುವ ನಷ್ಟವನ್ನು ಭವಿಷ್ಯದಲ್ಲಿ ವಿವಾದ ಮಾಡಿ ಪ್ರಚಾರ ಪಡೆಯುವ ದುರಾಲೋಚನೆ ಇಟ್ಟುಕೊಂಡಿರುವ ಬೇರೆ ಸಿನಿಮಾ ಮಂದಿಗಳೂ ಯೋಚಿಸಬೇಕಿದೆ.
-ನವೀನ್ ಸಾಗರ್