ರಜನಿ ಬಳಿ ಬಾಲಿವುಡ್!

ಹುಡುಗಿಯರಿಗೆ ವಯಸ್ಸೇ ಆಗುವುದಿಲ್ಲ ಎನ್ನುತ್ತೇವೆ. ಆದರೆ, ರಜನೀಕಾಂತ್...
ರಜನೀಕಾಂತ್
ರಜನೀಕಾಂತ್
Updated on: 

ಹುಡುಗಿಯರಿಗೆ ವಯಸ್ಸೇ ಆಗುವುದಿಲ್ಲ ಎನ್ನುತ್ತೇವೆ. ಆದರೆ, ರಜನೀಕಾಂತ್ ವಿಷಯಕ್ಕೆ ಬಂದರೆ ಆತ ಕಾಲಾತೀತನೇ ಸರಿ! ರಜನಿಯ ಜೊತೆ ನಟಿಸಿದ ನಟಿಯರೆಲ್ಲ ಮೊಮ್ಮಕ್ಕಳನ್ನು ಆಡಿಸುತ್ತಾ ಕೂರುವಂತಾದರೂ, ರಜನಿ ಮಾತ್ರ ಮಗಳ, ಮೊಮ್ಮಗಳ ವಯಸ್ಸಿನ ಹುಡುಗಿಯರೊಂದಿಗೆ ಲವ್ವು, ಡವ್ವು ಎಂದುಕೊಂಡು ಚಿತ್ರಗಳಲ್ಲಿ ಕೈ ಕೈ ಹಿಡಿದು ಕುಣಿಯುತ್ತಿದ್ದಾನೆ.

ಅಷ್ಟೇ ಅಲ್ಲ, ದಕ್ಷಿಣ ಭಾರತದ ಚಿತ್ರಗಳೆಂದರೆ ಮೂಗು ಮುರಿವ ಬಾಲಿವುಡ್ ಬೆಡಗಿಯರು, ರಜನಿ ಜೊತೆ ನಟಿಸಲು ಮಾತ್ರ ಮುಗಿಬಿದ್ದು ಕಾಯುತ್ತಾರೆ. ಕನವರಿಸುತ್ತಾರೆ. ರಜನಿಯೊಂದಿಗೆ ಒಂದು ಚಿತ್ರದಲ್ಲಿ ಅವಕಾಶ ಸಿಕ್ಕರೆ ತಮ್ಮ ಜೀವನದ ಗತಿಯೇ ಬದಲಾಗುತ್ತದೆ. ಜೀವಮಾನದ ಸಾಧನೆಯಾಗುತ್ತದೆ ಎಂದು ನಂಬುತ್ತಾರೆ. ಅದಕ್ಕೇ ಹೇಳುವುದು, ರಜನೀ ಕ್ಯಾನ್ ಡು ಮಿರಾಕಲ್ಸ್ ಅಂತ. ಎಲ್ಲ. ಓ.ಕೆ., ಆದರೂ ರಜನಿ ಮಾತ್ರ ಹೊಸ ನಟಿಯರಿಗೆ ಅವಕಾಶ ಕೊಡುವುದರತ್ತ ಗಮನ ಹರಿಸುವುದಿಲ್ಲ. ಯಾಕೆ?

ಗೊತ್ತಿಲ್ಲ, ಆದರೂ, ಈ ರಜನಿಗೆ ಹೀರೋಯಿನ್‌ಗಳು ಸ್ಟಾರ್ ನಟಿಯರೇ ಆಗಿರಬೇಕು. ಆದೂ ಅವರೆಲ್ಲ ಬಾಲಿವುಡ್ ಬತ್ತಳಿಕೆಯಿಂದಲೇ ಬಳಕುತ್ತಾ ಬರಬೇಕು. ಪ್ರಾದೇಶಿಕ ಚಿತ್ರಗಳ ನಟಿಯರಿಗೆ ಇಲ್ಲಿ ಕಿಮ್ಮತ್ತಿಲ್ಲ. ರಜನಿಯ ಈ ಸಂಪ್ರದಾಯಕ್ಕೆ ಕೆಲವೊಂದು ಉದಾಹರಣೆ ಗಮನಿಸಿ...

ರೇಖಾ

ರಜನಿ 'ಬುಲಂದಿ', 'ಫೂಲ್ ಬನೆ ಅಂಗಾರೆ', 'ಭ್ರಷ್ಟಾಚಾರ್‌' ಸೇರಿ 3 ಹಿಂದಿ ಚಿತ್ರಗಳಲ್ಲಿ ನಟಿ ರೇಖಾಳೊಂದಿಗೆ ಕಾಣಿಸಿಕೊಂಡಿದ್ದಾನೆ. ಈ ಎಲ್ಲ ಚಿತ್ರಗಳೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿವೆ. ಆದರೆ ಇಲ್ಲೆಲ್ಲೂ ರಜನಿ ಪೂರ್ಣ ಪ್ರಮಾಣದ ನಾಯಕನಾಗಿಲ್ಲ. ಭ್ರಷ್ಟಾಚಾರ್‌ನಲ್ಲಿ ಬಂದುಹೋಗುವ ವಿಶೇಷ ಪಾತ್ರದಲ್ಲಿ ಕಾಣಸಿಕೊಂಡರೆ. ಫೂಲ್ ಬನ್ ಅಂಗಾರೆನಲ್ಲಿ ಕೂಡಾ ರೇಖಾಳದೇ ಮುಖ್ಯ ಪಾತ್ರ. ಪೊಲೀಸ್ ಅಧಿಕಾರಿಯಾಗಿ ರಜನಿ ಗಮನ ಸೆಳೆಯುತ್ತಾನೆ. ಇನ್ನು 14 ವರ್ಷಗಳ ಹಿಂದೆ ತೆರೆ ಕಂಡ 'ಬುಲಂದಿ'ಯಲ್ಲಿ ನಾಯಕ ನಟ ಅನಿಲ್‌ಕಪೂರ್‌ನ ತಂದೆಯಾಗಿ ರಜನಿ ಕಾಣಿಸಿಕೊಂಡಿತದ್ದಾನೆಂದರೆ ನಂಬಲೇಬೇಕು!

ಶ್ರೀದೇವಿ
ಒಂದು ಕಾಲದಲ್ಲಿ ಮೋಡಿ ಮಾಡಿದ ಜೋಡಿ ರಜನಿ-ಶ್ರೀದೇವಿಯದು. ತಮಿಳು, ಹಿಂದಿ ಸೇರಿದಂತೆ ಸುಮಾರು 26 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಕೆ.ಬಾಲಚಂದಿರ್ ನಿರ್ದೇಶನದ 'ಮೂಂಡ್ರು ಮುಡಿಚು' ತಮಿಳಿಗರ ಮನಗೆದ್ದ ಅದ್ಭುತ ಚಿತ್ರ. ಇದರಲ್ಲಿ ರಜನಿಯದು ಮುಖ್ಯ ಪಾತ್ರವೇ ಆದರೂ ಸ್ವಾರ್ಥಕ್ಕಾಗಿ ಗೆಳೆಯ (ಕಮಲ್ ಹಾಸನ್) ಸಾಯುತ್ತಿದ್ದರೂ ನೋಡಿಕೊಂಡು ಸುಮ್ಮನಿರುವಂಥ ಖಳನಟ.

ತನ್ನನ್ನು ಪ್ರೀತಿಸಿದ ರಜನಿಯನ್ನು ಬಿಟ್ಟು ಆತನ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ರಜನಿಯ ತಂದೆಯನ್ನು ಮದುವೆಯಾಗುವ ಶ್ರೀದೇವಿ. ಒಟ್ಟಿನಲ್ಲಿ ಈ ಚಿತ್ರ ಇಂದಿಗೂ ಜನಮಾನಸವನ್ನು ಕಲಕುತ್ತದೆ. ಇನ್ನು ಭಾರತಿರಾಜ ನಿರ್ದೇಶನದ '16ವಯತಿನಿಲೆ' ಚಿತ್ರದಲ್ಲೂ ಇವರಿಬ್ಬರೊಂದಿಗೆ ಕಮಲ್‌ಹಾಸನ್ ಕೂಡಾ ಇದ್ದಾನೆ. 16 ವರ್ಷದ ಹುಡುಗಿಯೊಬ್ಬಳ ಹಿಂದೆ ಬೀಳುವ ಹಳ್ಳಿ ಹುಡುಗರ ಕತೆಯಿದು. ಉಳಿದಂತೆ ಕವಿಕ್ಕುಯಿಲ್, ಅದುತವರಿಸು, ಚಾಲ್‌ಬಾಜ್, ಭಗವಾನ್ ದಾದಾ, ಪ್ರಿಯಾ ಹಲವಾರು ಚಿತ್ರಗಳಲ್ಲಿ ಇವರಿಬ್ಬರ ಪ್ರೀತಿಪ್ರೇಮ ಕತೆಗಳು ತೆರೆದುಕೊಳ್ಳುತ್ತವೆ.

ಶಬಾನಾ ಅಜ್ಮಿ

'ಗಂಗ್ವಾ' ಚಿತ್ರದಲ್ಲಿ ನಾಯಕಿಯಾಗಿ ಶಬಾನಾ ಅಜ್ಮಿ ನಟಿಸಿದ್ದಾಳೆ. ಜಮೀಂದಾರನ ಠಕ್ಕುತನಕ್ಕೆ ಬುದ್ಧಿ ಕಲಿಸುವ ಗಾಂಗ್‌ಸ್ಟರ್ ಆಗಿ ರಜನಿಕಾಂತ್ ನಟಿಸಿದ್ದಾನೆ.

ಮನೀಷಾ ಕೊಯಿರಾಲಾ

2002ರಲ್ಲಿ ತಮಿಳಿನಲ್ಲಿ ಬಿಡುಗಡೆಯಾದ ರಜನಿಯ ನಿರ್ಮಾಣ, ಕತೆ, ಚಿತ್ರಕತೆ, ನಟನೆ ಹೊಂದಿರುವ 'ಬಾಬಾ'ದಲ್ಲಿ ನೇಪಾಳಿ ಬೆಡಗಿ ಮನಿಷಾ ಕೊಯಿರಾಲಾ ರಜನಿಗೆ ಜೊತೆಯಾಗಿದ್ದಾಳೆ. ಬಿಸಿರಕ್ತದ ತರುಣನೊಂದಿಗೆ ಪಕ್ಕದ ಮನೆಯ ಹುಡುಗಿ ಪ್ರೀತಿಗೆ ಬೀಳುವ ಕತೆ ಚಿತ್ರದ್ದು.

ಜಯಪ್ರದಾ

ಜಯಪ್ರದಾ ಜತೆಗೂ ರಜನಿ ನಟಿಸಿದ್ದುಂಟು. ಇದ್ದರು ಅಸಾಧ್ಯುಲೆ, ಅಂತಲೇನಿ ಕಥಾ, ನಿನ್ನೈತಾಳೆ ಇನಕ್ಕುಂ ಚಿತ್ರಗಳಲ್ಲಿ ಇಬ್ಬರೂ ಜತೆಯಾಗಿ ನಟಿಸಿದ್ದರು.

ಫರಿಷ್ತೇ, ಇನ್ಸಾಫ್ ಕೌನ್ ಕರೇಗಾ, ತ್ಯಾಗಿ, ಇನ್ಸಾನಿಯತ್ ಕೆ ದೇವತಾ ಮುಂತಾದ ಹಿಂದಿ ಚಿತ್ರಗಳಲ್ಲೂ ಇವರಿಬ್ಬರೂ ಜೊತೆಯಾಗಿದ್ದ ಸಂದರ್ಭಗಳಿವೆ.

ಶ್ರೀಯಾಶರಣ್

2007ರಲ್ಲಿ 600 ಮಿಲಿಯನ್ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣವಾದ 'ಶಿವಾಜಿ' ಚಿತ್ರದಲ್ಲಿ ಖ್ಯಾತ ನಟಿ ಶ್ರೀಯಾ ಶರಣ್ ಸಂಪ್ರದಾಯಸ್ಥ ಮನೆತನದ ಹೆಣ್ಣುಮಗಳಾಗಿ ಕಾಣಿಸಿಕೊಂಡಿದ್ದಾಳೆ.

ಐಶ್ವರ್ಯಾ ರೈ
2010ರಲ್ಲಿ ತೆರೆ ಕಂಡ ಎಂದಿರನ್ (ರೊಬೋಟ್)ನಲ್ಲಿ ವಿಶ್ವಸುಂದರಿ ಪಟ್ಟದ ನಟಿ ಐಶ್ವರ್ಯಾ ರೈ ತಮಿಳಿಗೆ ಬಂದು ರಜನಿಯೊಂದಿಗೆ ರೊಮ್ಯಾನ್ಸ್ ಮಾಡಿದ್ದಾಳೆ. ಒಂದೂವರೆ ಬಿಲಿಯನ್ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರ, ಬಾಕ್ಸ್ ಆಫೀಸನ್ನು ಧೂಳೆಬ್ಬಿಸಿ ಎರಡು ಪಟ್ಟು ಹಣವನ್ನು ಕೊಳ್ಳೆ ಹೊಡೆಯಿತು. ಅಸಾಧ್ಯವಾದುದನ್ನು ಸುಲಭಸಾಧ್ಯವಾಗಿಸೋ ರಜನಿಕಾಂತ್ ಜೋಕ್ಸ್‌ಗಳಿಗೂ ನಾಂದಿ ಹಾಡಿತು.

ದೀಪಿಕಾ ಪಡುಕೋಣೆ

ಈ ವರ್ಷ ತೆರೆ ಕಂಡ ರಜನಿಯ ಮಗಳು ಸೌಂದರ್ಯ ತೆಗೆದ ಬಹುನಿರೀಕ್ಷಿತ ಅನಿಮೇಶನ್ 3ಡಿ ಚಿತ್ರ 'ಕೊಚಾಡಿಯನ್‌'ನಲ್ಲಿ ಬಾಲಿವುಡ್‌ನ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ ನಟಿಸಿದ್ದಾಳೆ. 1.25ಬಿಲಿಯನ್ ಬಜೆಟ್‌ನೊಂದಿಗೆ ನಿರ್ಮಿಸಿ ಹಿಂದಿ ಮತ್ತು ತಮಿಳಿನಲ್ಲಿ ಬಿಡುಗಡೆ ಮಾಡಿದರೂ, ಆದರೆ ಅನಿಮೇಶನ್‌ನ ಕಾರಣದಿಂದಲೇ ಏನೋ ಫ್ಲಾಪ್ ಆಯಿತು.

ಸೋನಾಕ್ಷಿ ಸಿನ್ಹಾ
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ, ಕೆ.ಎಸ್. ರವಿಶಂಕರ್ ನಿರ್ದೇಶನದ ಚಿತ್ರ 'ಲಿಂಗಾ'-ರಜನೀಕಾಂತ್ 65ನೇ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಕೊಡುಗೆಯಾಗಿ ಮೊನ್ನೆ ಬಿಡುಗಡೆಯಾಗಿದೆ. ನೂರು ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಚಿತ್ರ ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ತೆರೆ ಕಂಡಿದ್ದು, ರಜನಿ ಮಗಳ ವಯಸ್ಸಿನ ದೊಡ್ಡ ಕಂಗಳ ಚೆಲುವೆ ಸೋನಾಕ್ಷಿ ಸಿನ್ಹಾ ರಜನಿಯೊಂದಿಗೆ ಹಾಡಿ ಕುಣಿದಿದ್ದಾಳೆ.

ಈ ರಜನಿಗೆ ಹೀರೋಯಿನ್‌ಗಳು ಸ್ಟಾರ್ ನಟಿಯರೇ ಆಗಿರಬೇಕು. ಅದೂ ಅವರೆಲ್ಲ ಬಾಲಿವುಡ್ ಬತ್ತಳಿಕೆಯಿಂದಲೇ ಬಳುಕುತ್ತಾ ಬರಬೇಕು. ಪ್ರಾದೇಶಿಕ ಚಿತ್ರಗಳ ನಟಿಯರಿಗೆ ಇಲ್ಲಿ ಕಿಮ್ಮತ್ತಿಲ್ಲ. ರಜನಿಯ ಈ ಸಂಪ್ರದಾಯಕ್ಕೆ ಕೆಲವೊಂದು ಉದಾಹರಣೆ ಗಮನಿಸಿ...

ರಜನಿಗೆ ವಯಸ್ಸಾಗುವುದಿಲ್ಲ. ಏಕೆಂದರೆ ಕಾಲಕ್ಕೆ ಆತನನ್ನು ನಿಭಾಯಿಸಲಾಗುವುದಿಲ್ಲ. ಹಾಗಾಗೇ 35ರ ಈ ಯುವಕ, ಜಾಕಿಚಾನ್‌ನ ನಂತರ, ಇಡೀ ಏಷ್ಯಾದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆವ ಎರಡನೇ ನಟ. 'ಲಿಂಗಾ' ಚಿತ್ರಕ್ಕೆ ರಜನಿಯ ಸಂಭಾವನೆ ಬರೋಬ್ಬರಿ 60ಕೋಟಿ!

1975ರಲ್ಲಿ ಚಿತ್ರರಂಗ ಪ್ರವೇಶಿಸಿದಂದಿನಿಂದ ಇಂದಿನವರೆಗೂ ರಜನೀಕಾಂತ್ ಜೊತೆ ನಟಿಸಿದ ನಟಿಮಣಿಯರ ವಯಸ್ಸನ್ನು ನೋಡುತ್ತಾ ಹೋದರೆ ಮೇಲಿನ ಮಾತು ಅಕ್ಷರಶಃ ಸತ್ಯವೆನಿಸದೇ ಇರದು. ಅವಿವಾಹಿತ, ನವವಿವಾಹಿತ ಯುವಕ ಯುವತಿಯರು ಎಣಿಸಲಾರದ ಸಂಗತಿಯೆಂದರೆ, ಯಾರಿಗೆ ಗೊತ್ತು, ಭವಿಷ್ಯದಲ್ಲಿ ಹುಟ್ಟಲಿರುವ ನಿಮ್ಮ ಮಗಳೂ ಅಕಸ್ಮಾತ್ ಚಿತ್ರರಂಗ ಸೇರಿ, ರಜನಿಯೊಂದಿಗೆ ಹೀರೋಯಿನ್ ಆಗಿ ಕಾಣಿಸಿಕೊಳ್ಳಬಹುದು. ಎಷ್ಟೇ ಆದರೂ ವಯಸ್ಸಾಗುವುದು ನಿಮಗೆ, ನಿಮ್ಮ ಮಕ್ಕಳಿಗೆ, ರಜನಿಗಲ್ಲ!

ಏನಾಗಿದ್ರು?

  • ರಜನಿ ತನ್ನ 25ನೇ ವಯಸ್ಸಿನಲ್ಲಿ ತೆರೆಯ ಮೇಲೆ (ಅಪೂರ್ವ ರಾಗಂಗಳ್-1975) ಕಾಣಿಸಿಕೊಳ್ಳುವಾಗ...
  • ಐಶ್ವರ್ಯಾ ರೈ 2 ವರ್ಷದ ಕೂಸಾಗಿ ಮನೆಯ ತುಂಬಾ ತೊದಲು ಹೆಜ್ಜೆಗಳನ್ನಿಡುತ್ತಿದ್ದಳು.
  • ಶ್ರೀದೇವಿ 7ನೇ ತರಗತಿಗೆ ಹೋಗುತ್ತಿದ್ದಳು.
  • ಮನೀಷಾ ಕೊಯಿರಾಲ 5 ವರ್ಷದವಳಿದ್ದು, ಶಾಲೆಗೆ ಸೇರುವ ಕಾತರದಲ್ಲಿದ್ದಳು.
  • ರೇಖಾ ಹದಿಹರೆಯ ಮುಗಿಸಿ, 21ನೇ ವಯಸ್ಸಿಗೆ ಕಾಲಿಟ್ಟಿದ್ದಳು.
  • ಕೊಚಾಡಿಯನ್‌ನಲ್ಲಿ ರಜನಿ ಜೊತೆ ರೊಮ್ಯಾನ್ಸ್ ಮಾಡಿರುವ ದೀಪಿಕಾ, ಲಿಂಗಾದಲ್ಲಿ ಪ್ರೇಮಿಯಾಗಿ ಕಾಣಿಸಿಕೊಂಡಿರುವ ಸೊನಾಕ್ಷಿ ಸಿನ್ಹಾ ಹುಟ್ಟುವುದಿರಲಿ, ಅವರಿಬ್ಬರ ತಂದೆತಾಯಿಗಳ ವಧುವರಾನ್ವೇಷಣೆಯೇ ಆರಂಭವಾಗಿರಲಿಲ್ಲ!

- ರೇಶ್ಮ ರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com