

ಬೆಂಗಳೂರು: ದಕ್ಷಿಣ ಭಾರತದಲ್ಲಿ ಸೆಕ್ಸ್ ಕೇಂದ್ರಿತ ಸಿನೆಮಾಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದ ನಟಿ ಶಕೀಲ ತಮ್ಮ ಆತ್ಮಕಥೆಯ ಮೂಲಕ ಇತ್ತೀಚೆಗೆ ಕೇಂದ್ರದಲ್ಲಿದ್ದವರು. ಈ ಸ್ಫೋಟಕ ಆತ್ಮಕಥೆ ಕೇರಳದಲ್ಲಿ ದಾಖಲೆ ಮಾರಾಟ ಕಂಡಿತ್ತು.
ಈಗ ಬಲ್ಲ ಮೂಲಗಳ ಪ್ರಕಾರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಶಕೀಲ ಆತ್ಮಕತೆಯಿಂದ ಸ್ಫೂರ್ತಿ ಪಡೆದಿದ್ದು, ಇದನ್ನು ಸಿನೆಮಾ ಮಾಡುವ ಹಕ್ಕುಗಳನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಶಕೀಲಾ ಪಾತ್ರ ನಿರ್ವಹಿಸಬಲ್ಲ ನಟಿಯ ಶೋಧದಲ್ಲಿದ್ದಾರೆ ಇಂದ್ರಜಿತ್.
ತಮ್ಮ ಕಷ್ಟ ಜೀವನವನ್ನು ಆತ್ಮಕತೆಯಲ್ಲಿ ನಿವೇದಿಸಿಕೊಂಡಿರುವ ಶಕೀಲ "ನನ್ನನ್ನು ಎಲ್ಲರೂ ಸೆಕ್ಸ್ ಬಾಂಬ್ ರೀತಿಯಲ್ಲೇ ಕಾಣುತ್ತಿದ್ದರು ನಾನೂ ಕೂಡ ಒಳ್ಳೆಯ ನಟಿ ಎಂದು ಯಾರೂ ಗಮನಿಸಲೇ ಇಲ್ಲ ಮತ್ತು ಇತರ ಸಿನೆಮಾ ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸುತ್ತಲೇ ಇರಲಿಲ್ಲ" ಎಂದು ನೋವನ್ನು ತೋಡಿಕೊಂಡಿದ್ದಾರೆ.
ಈ ಹಿಂದೆ ಮತ್ತೊಬ್ಬ ದಕ್ಷಿಣ ಭಾರತದ ನಟಿ 'ಸಿಲ್ಕ್ ಸ್ಮಿತಾ' ಅವರ ಜೀವನಾಧಾರಿತ 'ದ ಡರ್ಟಿ ಪಿಕ್ಚರ್' ಕೂಡ ವೀಕ್ಷಕರ ಗಮನ ಸೆಳೆದಿತ್ತು. ಇಂದ್ರಜಿತ್ ಅವರ ಈ ಯೋಜನೆಯೂ ಜನರ ಕಣ್ಣು ತೆರೆಸಬಲ್ಲುದೇ ಕಾದು ನೋಡಬೇಕು.