

ನವದೆಹಲಿ: ಬಾಲಿವುಡ್ ಸಿನೆಮಾ 'ಮೊಹಲ್ಲಾ ಅಸ್ಸಿ' ಬಿಡುಗಡೆಗೆ ದೆಹಲಿ ಉಚ್ಛ ನ್ಯಾಯಾಲಯ ತಡೆ ಹಾಕಿದೆ. ಇದು ಮೇಲ್ನೋಟಕ್ಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದನ್ನು ಕೋರ್ಟ್ ಗಮನಿಸಿರುವುದರಿಂದ, ಆ ಭಾಗಗಳಿಗೆ ಕತ್ತರಿ ಹಾಕಿದರಷ್ಟೇ ಬಿಡುಗಡೆ ಭಾಗ್ಯ ಎಂದು ಕೋರ್ಟ್ ತಿಳಿಸಿದೆ.
ಮುಂದಿನ ತೀರ್ಪು ಬರುವವರೆಗೆ, ಜುಲೈ ೩ ರಂದು ಸಿನೆಮಾ ಬಿಡುಗಡೆ ಮಾಡದಂತೆ ಸಿನೆಮಾ ನಿರ್ದೇಶಕ, ನಿರ್ಮಾಪಕ ಮತ್ತು ಸೆನ್ಸಾರ್ ಮಂಡಲಿಗೆ ಸೂಚನೆ ನೀಡಿದೆ. ಈ ಚಿತ್ರದಲ್ಲಿ ಸನ್ನಿ ಡಿಯೋಲ್, ರವಿ ಕಿಶನ್, ಸಾಕ್ಷಿ ತನ್ವಾರ್ ಇನ್ನಿತರು ಅಭಿನಯಿಸಿದ್ದಾರೆ.
ಪವಿತ್ರ ನದಿ ಗಂಗಾದ ತೀರದಲ್ಲಿರುವ ವಾರಣಾಸಿಯ ಅಸ್ಸಿ ಘಾಟ್ ಅನ್ನು ಸಿನೆಮಾದ ಟ್ರೇಲರ್ ನಲ್ಲಿ ಅತಿ ಗಲೀಜು ಭಾಷೆಯಲ್ಲಿ ತೋರಿಸಲಾಗಿದೆ ಎಂದು ಕೋರ್ಟ್ ಹೇಳಿದೆ.
"ಒಂದು ದೃಶ್ಯದಲ್ಲಿ ಶಿವನ ವೇಷ ಹಾಕಿದ ಪಾತ್ರಧಾರಿ ಗಲೀಜು ಮಾತನಾಡುತ್ತಾನೆ. ಶಿವನ ವೇಷ ಹಾಕಿದ ಪಾತ್ರಧಾರಿ ಹಾಗೆ ಮಾತನಾಡುವುದು ನಿಜಕ್ಕೂ ಆಘಾತಕಾರಿ. ಈ ಸಿನೆಮಾ ಸಾರ್ವಜನಿಕ ವೀಕ್ಷಣೆಗೆ ಬಿಡುಗಡೆಯಾದರೆ ಹಲವರ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ"
"ಆದುದರಿಂದ ಈ ಘಟ್ಟದಲ್ಲಿ ಮೇಲ್ನೋಟಕ್ಕೆ ಧಾರ್ಮಿಕ ಭಾವನೆಗೆ ಧಕ್ಕೆ ತರಬಹುದಾದ ಕೆಟ್ಟ ಭಾಷೆ ಬಳಸಲಾಗಿರುವ ದೃಶ್ಯಗಳಿಗೆ ಕತ್ತರಿ ಹಾಕದೆ ಸಿನೆಮಾ ಬಿಡುಗಡೆ ಮಾಡಲಾಗುವುದಿಲ್ಲ" ಎಂದು ಸಿವಿಲ್ ನ್ಯಾಯಧೀಶ ಕಿಶೋರ್ ಕುಮಾರ್ ತಿಳಿಸಿದ್ದಾರೆ.