

ನಿರ್ದೇಶಕ ನಂದ ಕಿಶೋರ್ ಸೋದರ ತರುಣ್ ಸುಧೀರ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಚೌಕ ಚಿತ್ರಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಚಿತ್ರಕ್ಕಾಗಿ ಕನ್ನಡ ಚಿತ್ರರಂಗದ ಟಾಪ್ 25 ತಂತ್ರಜ್ಞರು ಕೆಲಸ ಮಾಡಲಿದ್ದಾರೆ.
ಭಾರತೀಯ ಚಿತ್ರರಂಗದಲ್ಲೆ ಇದೇ ಮೊದಲ ಬಾರಿಗೆ ಒಂದೇ ಚಿತ್ರಕ್ಕೆ ಐವರು ಛಾಯಾಗ್ರಾಹಕರು, ಸಂಭಾಷಣೆಕಾರರು, ಸಂಗೀತ ನಿರ್ದೇಶಕರು ಕಲಾ ನಿರ್ದೇಶಕರು ಸೇರಿದಂತೆ ಐವರಂತೆ ತಂತ್ರಜ್ಞರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪರದೆ ಮೇಲಿನ ಹಿರೋಗಳಂತೆ ಇವರೆಲ್ಲಾ ಪರದೆ ಹಿಂದಿನ ಹಿರೋಗಳು ಎಂದು ನಿರ್ದೇಶಕ ತರುಣ್ ಸುದೀರ್ ಹೇಳಿದ್ದಾರೆ.
ಚೌಕಾ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ಪ್ರೇಮ್, ವಿಜಯ್, ರಾಘವೇಂದ್ರ ಮತ್ತು ದಿಗಂತ್ ಅಭಿನಯಿಸುತ್ತಿದ್ದು, ಐದರಂತೆ ನಿರ್ದೇಶಕರು ಕಲಾವಿದರು ಹಾಗೂ ತಂತ್ರಜ್ಞರನ್ನು ಆಯ್ಕೆ ಮಾಡಿಕೊಂಡಿರುವುದು ನಿರ್ದೇಶಕ ತರುಣ್ ಐದನ್ನು ತಮ್ಮ ಲಕ್ಕಿ ನಂಬರ್ ಅಂದುಕೊಂಡಂತಿದೆ. ಇನ್ನು ಚಿತ್ರದಲ್ಲಿ ಸದ್ಯ ನಾಲ್ವರು ನಟಿಯರಾದ ಮಲಯಾಳಂ ನಟಿ ಭಾವನ, ಪ್ರಿಯಮಣಿ, ದೀಪು ಸನ್ನಿಧಿ, ಮತ್ತು ಐಂದ್ರಿತಾ ರೈ ಅಭಿನಯಿಸುತ್ತಿದ್ದಾರೆ.
ಐವರು ಛಾಯಾಗ್ರಾಹಕರು
ಚಿತ್ರಕ್ಕೆ ಕನ್ನಡ ಚಿತ್ರರಂಗದ ಪ್ರಖ್ಯಾತ ಛಾಯಾಗ್ರಾಹಕರಾದ ಸತ್ಯ ಹೆಗ್ಡೆ, ಎಸ್. ಕೃಷ್ಣಾ, ಶೇಖರ್ ಚಂದ್ರ, ಸಂತೋಷ್ ರಾಯ್ ಪತಾಜೆ, ಸುಧಾಕರ್ ಎಸ್ ರಾಜ್ ವಿವಿಧ ಕ್ಲೈಮಟ್ ಗಳಿಗೆ ತಕ್ಕಂತೆ ಕೆಲಸ ಮಾಡಲಿದ್ದಾರೆ.
ಐವರು ಸಂಗೀತ ನಿರ್ದೇಶಕರು
ತರುಣ್ ತಮ್ಮ ಚೌಕ ಚಿತ್ರಕ್ಕಾಗಿ ಗುರುಕಿರಣ್, ವಿ. ಹರಿಕೃಷ್ಣ, ಅರ್ಜುನ್ ಜನ್ಯ, ಅನೂಪ್ ಸೀಳಿನ್ ಮತ್ತು ವಿ. ಶ್ರೀಧರ್ ರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅರ್ಜುನ್ ಜನ್ಯ ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಲಿದ್ದಾರೆ.
ಐವರು ಸಂಭಾಷಣಕಾರರು
ಐವರು ನಟರಿಗಾಗಿ ಐವರು ಸಂಭಾಷಣಕಾರರು ಸಂಭಾಷಣೆ ಬರೆಯುತ್ತಿದ್ದಾರೆ. ವಿಜಯ ರಾಘವೇಂದ್ರ ಅವರಿಗಾಗಿ ಎಪಿ ಅರ್ಜುನ್, ದಿಗಂತ್ ಗೆ ಸಿಂಪಲ್ ಸುನಿ, ಪ್ರಜ್ವಲ್ ದೇವರಾಜ್ ಗೆ ಅನಿಲ್ ಕುಮಾರ್, ಪ್ರೇಮ್ ಗಾಗಿ ಎವಿ ಚಿಂತನ್ ಸಂಭಾಷಣೆ ಬರೆಯುತ್ತಿದ್ದಾರೆ.
ಕಲಾ ನಿರ್ದೇಶಕರು
ಚೌಕ ಚಿತ್ರಕ್ಕಾಗಿ ಐವರು ಕಲಾ ನಿರ್ದೇಶಕರು ಕೆಲಸ ಮಾಡಲಿದ್ದಾರೆ. ಅರುಣ್ ಸಾಗರ್, ಮೋಹನ್ ಬಿ ಕೆರೆ, ರವಿ ಸಂತೆ ಹೈಕ್ಲು, ಶಿವಕುಮಾರ್ ಮತ್ತು ಹೊಸಮನೆ ಮೂರ್ತಿ. ಇನ್ನು ಚಿತ್ರವನ್ನು ಕೆಎಂ ಪ್ರಕಾಶ್ ಎಡಿಟ್ ಮಾಡಲಿದ್ದಾರೆ.
ಇನ್ನು ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರ ದ್ವಾರಕೀಶ್ ಚಿತ್ರ ಸಂಸ್ಥೆ ನಿರ್ಮಾಣದಲ್ಲಿ ತಯಾರಾಗುತ್ತಿರುವ 50ನೇ ಚಿತ್ರ ಚೌಕ. ಸುಮಾರು 80ರಷ್ಟು ಚಿತ್ರೀಕರಣ ಮುಗಿಸಿಕೊಂಡಿರುವ ಚೌಕ ಚಿತ್ರದ ಮೊದಲ ಪ್ರೋಮೋ ಕಾರ್ಮಿಕರ ದಿನಾಚರಣೆ ಮೇ 1 ರಂದು ಬಿಡುಗಡೆಯಾಗಲಿದೆ.