

ರಣವಿಕ್ರಮ ಸಿನಿಮಾ ನಂತರ ಬಿಡುಗಡೆಯಾಗಲಿರುವ ಪುನೀತ್ ರಾಜ್ ಕುಮಾರ್ ಅವರ ಮುಂದಿನ ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅಭಿನಯದ ಚಕ್ರವ್ಯೂಹ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದ್ದು ಮಾರ್ಚ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಚಕ್ರವ್ಯೂಹ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಪುನೀತ್ ರಾಜ್ ಕುಮಾರ್ ತಮ್ಮ ಭಾಗದ ಡಬ್ಬಿಂಗ್ ಮುಕ್ತಾಯಗೊಳಿಸಿದ್ದಾರೆ. ಇನ್ನು ಕೆಲವು ಕಲಾವಿದರ ಡಬ್ಬಿಂಗ್ ಬಾಕಿ ಇದ್ದು ಶೀಘ್ರವೇ ಆಡಿಯೋ ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರದ ನಿರ್ಮಾಪಕ ಎನ್ ಕೆ ಲೋಹಿತ್ ಹೇಳಿದ್ದಾರೆ.
ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಆಸುಪಾಸಿನಲ್ಲಿ ಚಕ್ರವ್ಯೂಹ ಸಿನಿಮಾ ಬಿಡುಗಡೆ ಮಾಡಬೇಕೆಂಬುದು ಚಿತ್ರ ತಂಡದ ಯೋಜನೆ. ಆದರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ ಚಕ್ರವ್ಯೂಹ ಸಿನಿಮಾಗೆ ಸಂಬಂಧಿಸಿದಂತೆ ಹಲವು ಅಚ್ಚರಿಗಳು ಅಭಿಮಾನಿಗಳಿಗೆ ಕಾದಿವೆ ಎಂದಿದ್ದಾರೆ ಲೋಹಿತ್.
ರಚಿತಾ ರಾಮ್ ಚಕ್ರವ್ಯೂಹ ಸಿನಿಮಾ ನಾಯಕಿಯಾಗಿದ್ದು ತಮಿಳು ನಟ ಅರುಣ್ ವಿಜಯ್ ಮುಖ್ಯಪಾತ್ರವೊಂದರಲ್ಲಿ ನಟಿಸಿದ್ದಾರೆ. ಎಸ್‌ಎಸ್ ತಮನ್ ಸಂಗೀತ ನಿರ್ದೇಶನ ಮಾಡಿದ್ದು ಶಣ್ಮುಗಂ ಸುಂದರಂ ಅವರ ಛಾಯಾಗ್ರಾಹನ ಚಕ್ರವ್ಯೂಹ ಸಿನಿಮಾದಲ್ಲಿದೆ. ಫೆ.22 ರಿಂದ ಪುನೀತ್ ರಾಜ್ ಕುಮಾರ್ ದೊಡ್ಮನೆ ಹುಡುಗ ಸಿನಿಮಾ ಚಿತ್ರೀಕರಣದಲ್ಲಿ ತೊಡಗಲಿದ್ದಾರೆ.