

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಓ ಮೈ ಗಾಡ್ ಚಿತ್ರದ ಕನ್ನಡದ ಅವತರಣಿಕೆಗೆ ಕೃಷ್ಣ ನೀ ಬೇಗನೆ ಬಾರೋ ಎಂಬ ಶೀರ್ಷಿಕೆ ಇಡಲಾಗಿದ್ದು ಚಿತ್ರವನ್ನು ರನ್ನ ಖ್ಯಾತಿಯ ನಂದ ಕಿಶೋರ್ ನಿರ್ದೇಶಿಸಲಿದ್ದಾರೆ.
ಕೃಷ್ಣ ನೀ ಬೇಗನೆ ಬಾರೋ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಉಪೇಂದ್ರ-ಸುದೀಪ್ ಜತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಿಂದಿಯಲ್ಲಿ ಕೃಷ್ಣನ ಪಾತ್ರಧಾರಿ ಅಕ್ಷಯ್ ಕುಮಾರ್ ಜಾಗದಲ್ಲಿ ಸುದೀಪ್ ನಟಿಸುತ್ತಿದ್ದು, ದೇವರನ್ನು ದ್ವೇಷಿಸುವ ಪರ್ವೇಶ್ ರಾವಲ್ ಪಾತ್ರವನ್ನು ಉಪೇಂದ್ರ ನಿಭಾಯಿಸಲಿದ್ದಾರೆ.
2012ರಲ್ಲಿ ಬಿಡುಗಡೆಯಾಗಿದ್ದ ಓ ಮೈ ಗಾಡ್ ಚಿತ್ರ ಸೂಪರ್ ಹಿಟ್ ಆಗಿತ್ತು. ಚಿತ್ರವನ್ನು ಉಮೇಶ್ ಶುಕ್ಲಾ ನಿರ್ದೇಶಿಸಿದ್ದರು. ಇದೇ ಚಿತ್ರ ತೆಲುಗಿನಲ್ಲಿ ಗೋಪಾಲ ಗೋಪಾಲ ಹೆಸರಿನಲ್ಲಿ ತೆರೆಗೆ ಬಂದಿತ್ತು. ಚಿತ್ರದಲ್ಲಿ ಪವನ್ ಕಲ್ಯಾಣ್ ಕೃಷ್ಣನ ಪಾತ್ರ ನಿಭಾಯಿಸಿದ್ದರೆ, ವಿಕ್ಟರಿ ವೆಂಕಟೇಶ್ ಪರ್ವೇಶ್ ರಾವಲ್ ಪಾತ್ರದಲ್ಲಿ ಅಭಿನಯಿಸಿದ್ದರು.
ಕೃಷ್ಣ ನೀ ಬೇಗನೆ ಬಾರೋ ಚಿತ್ರದ ಪ್ರೀ ಪ್ರೋಡಕ್ಷನ್ ಹಂತದಲ್ಲಿದ್ದು ತಾರಾಗಣ ಆಯ್ಕೆ ನಡೆಯುತ್ತಿದೆ.