

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿನಯದ ಕಬಾಲಿ ಚಿತ್ರ ತೆರೆಕಂಡಿದೆ. ಕೋಟ್ಯಂತರ ಅಭಿಮಾನಿಗಳು ಅತ್ತ ಕಬಾಲಿ ಚಿತ್ರ ವೀಕ್ಷಣೆಗಾಗಿ ಎದುರು ನೋಡುತ್ತಿದ್ದರೆ, ಇತ್ತ ಅಭಿಮಾನಿಗಳ ಆರಾಧ್ಯ ದೈವ ರಜನಿಕಾಂತ್ ಮಾತ್ರ ಓರ್ವ ವ್ಯಕ್ತಿಯ ಚಿತ್ರ ವಿಮರ್ಶೆಗಾಗಿ ಕಾಯುತ್ತಿರುತ್ತಾರಂತೆ.
ರಜನಿಕಾಂತ್ ಮಾತ್ರವಲ್ಲ.. ಪ್ರಮುಖ ಚಿತ್ರಮಂದಿರಗಳ ಮಾಲೀಕರು ಕೂಡ ಇವರನ್ನು ಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಿಸುವಂತೆ ಆಹ್ವಾನ ನೀಡುತ್ತಾರಂತೆ. ಇವರು ಚಿತ್ರ ವೀಕ್ಷಿಸಿದರೆ ಸ್ವತಃ ರಜನಿಕಾಂತ್ ಅವರೇ ಚಿತ್ರ ವೀಕ್ಷಿಸಿದಷ್ಟು ಸಂತಸ ಪಡುತ್ತಾರಂತೆ. ಹಾಗಾದರೆ ಆ ವಿಶೇಷ ಚಿತ್ರ ವಿಮರ್ಶಕ ಯಾರು? ಎಂಬ ಪ್ರಶ್ನೆಗೆ ಉತ್ತರ ಅವರ ಬಹುದಿನಗಳ ಆಪ್ತ ಸ್ನೇಹಿತ ರಾಜ್ ಬಹದ್ದೂರ್..... ಹೌದು.. ರಜನಿಕಾಂತ್ ಅವರು ಚಿತ್ರೋಧ್ಯಮಕ್ಕೆ ಕಾಲಿಡಲು ನೆರವಾದ ಅದೇ ಹಳೆಯ ಸ್ನೇಹಿತ ರಾಜ್ ಬಹದ್ದೂರ್..
ಇಡೀ ವಿಶ್ವ ರಜನಿಕಾಂತ್ ಅವರ ಚಿತ್ರ ವೀಕ್ಷಣೆಗಾಗಿ ಕಾತುರದಿಂದ ಕಾಯುತ್ತಿದ್ದರೆ, ಸೂಪರ್ ಸ್ಟಾರ್ ಮಾತ್ರ ಇವರಿಂದ ಬರುವ ದೂರವಾಣಿ ಕರೆಗೆ ತುದಿಗಾಲಲ್ಲಿ ಕಾಯುತ್ತಿರುತ್ತಾರಂತೆ. ರಜನಿಕಾಂತ್ ನಂಬುವ ಪ್ರಬಲ ಮತ್ತು ಕಠಿಣ ಚಿತ್ರ ವಿಮರ್ಶಕ ಇವರೇ ನಂತೆ... ಹೀಗಾಗಿ ಸ್ವತಃ ರಾಜ್ ಬಹದ್ದೂರ್ ಕೂಡ ರಜನಿಕಾಂತ್ ಅಭಿನಯದ ಯಾವುದೇ ಚಿತ್ರ ಬಿಡುಗಡೆಯಾದರೂ ಮೊದಲ ದಿನವೇ ಅದನ್ನು ವೀಕ್ಷಿಸಿ ಬಳಿಕ ಮನೆಗೆ ಬಂದು ರಜನಿಕಾಂತ್ ಅವರಿಗೆ ಕರೆ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.
ಈ ಬಗ್ಗೆ "ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್" ನೊಂದಿಗೆ ಮಾತನಾಡಿರುವ ರಾಜ್ ಬಹದ್ದೂರ್ ಅವರು, "ನನಗೆ ಈ ಬಗ್ಗೆ ನಿಜಕ್ಕೂ ಹೆಮ್ಮೆ ಇದೆ. ನನ್ನ ಸ್ನೇಹಿತ ಚಿತ್ರರಂಗದಲ್ಲಿ ವಿಶ್ವವೇ ಅಚ್ಚರಿ ಪಡುವಂತೆ ಬೆಳೆದಿದ್ದಾನೆ. ಆತನ ಕಠಿಣ ಪರಿಶ್ರಮವೇ ಆತನನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. ಕೇವಲ ರಜನಿಕಾಂತ್ ನ ಸಾಧಿಸುವ ಛಲವೇ ಆತನನ್ನು ಸೂಪರ್ ಸ್ಟಾರ್ ಮಾಡಿದೆ" ಎಂದು ರಾಜ್ ಬಹದ್ದೂರ್ ಹೇಳಿದ್ದಾರೆ.
1970ರ ದಶಕದಲ್ಲಿ ಬೆಂಗಳೂರಿನ ಸರ್ಕಾರಿ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಈ ಸ್ಟಾರ್ ಜೋಡಿ ನಿತ್ಯ ರೂಟ್ ನಂಬರ್ 10ಎನಲ್ಲಿ ಶ್ರೀನಗರದಿಂದ ಮೆಜೆಸ್ಟಿಕ್ ಗೆ ಜನರನ್ನು ತಂದು ಸೇರಿಸುತ್ತಿದ್ದರು. ಬಸ್ ಚಾಲಕನಾಗಿ ರಾಜ್ ಬಹದ್ದೂರ್ ಕಾರ್ಯ ನಿರ್ವಹಿಸಿದರೆ, ಅದೇ ಬಸ್ ನಲ್ಲಿ ರಜನಿಕಾಂತ್ ನಿರ್ವಾಹಕರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಈ ಬಗ್ಗೆ ನೆನಪು ಮಾಡಿಕೊಳ್ಳುವ ರಾಜ್ ಬಹದ್ದೂರ್ ಅವರು, "ನಾವು ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೂ ನಿತ್ಯ 8 ಟ್ರಿಪ್ ಹೊಡೆಯುತ್ತಿದ್ದೆವು. ಆಗ ರಜನಿ ತುಂಬಾ ಚಟುವಟಿಕೆಯಿಂದ ಇದ್ದ. ಚಿತ್ರರಂಗದಲ್ಲಿ ಏನಾದರೂ ಸಾಧಿಸಬೇಕು ಎಂಬ ಹಂಬಲ ಆತನಲ್ಲಿ ಇತ್ತು. ನಾಟಕಗಳಲ್ಲಿ ರಜನಿ ಮನೋಜ್ಞ ಅಭಿನಯ ಎಲ್ಲರನ್ನೂ ಸೆಳೆಯುತ್ತಿತ್ತು. ಇದೇ ಕಾರಣಕ್ಕಾಗಿ ನಾನು ಆತನನ್ನು ನಟನಾ ತರಬೇತಿ ಪಡೆಯುವಂತೆ ಹೇಳಿ ಚೆನ್ನೈಗೆ ಕಳುಹಿಸಿದೆ. ಆದರೆ ಆರ್ಥಿಕವಾಗಿ ಶಕ್ತನಲ್ಲದ ರಜನಿಗೇ ನಾನೇ ನನ್ನ ಕೈಯಲ್ಲಾದ ಸಹಾಯ ಮಾಡಿದೆ".
2 ವರ್ಷಗಳ ನಟನೆಯ ತರಬೇತಿ ಮುಗಿಸಿದ ರಜನಿಯನ್ನು ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಅವರು ಗುರುತಿಸಿ ತಮ್ಮ "ಅಪೂರ್ವ ರಾಗಂಗಳ್" ಚಿತ್ರದಲ್ಲಿ ಮೊದಲ ಬಾರಿಗೆ ಅವಕಾಶ ನೀಡಿದರು. ಆ ಬಳಿಕ ರಜನಿ ಮುಟ್ಟಿದ್ದೆಲ್ಲಾ ಚಿನ್ನವಾಗಿ ಇಂದು ಸೂಪರ್ ಸ್ಚಾರ್ ಆಗಿ ಇಡೀ ವಿಶ್ವವೇ ಬೆರಗಾಗುವಂತೆ ದೈತ್ಯನಾಗಿ ನಿಂತಿದ್ದಾನೆ. ನಾನೆಂದೂ ಆತ ಈ ಮಟ್ಟಿಗೆ ಬೆಳೆಯುತ್ತಾನೆ ಎಂದೆಣಿಸಿರಲಿಲ್ಲ ಎಂದು ರಾಜ್ ಬಹದ್ದೂರ್ ಹೆಮ್ಮೆಯಿಂದ ಹೇಳುತ್ತಾರೆ.
ಇನ್ನು ಕಬಾಲಿ ಚಿತ್ರದ ಕುರಿತು ಮಾತನಾಡಿದ ರಾಜ್ ಬಹದ್ದೂರ್ ಅವರು, "ನಾನು ಕೂಡ ಕಬಾಲಿ ಚಿತ್ರವನ್ನು ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದೇನೆ. ಖ್ಯಾತನಾಮ ಥಿಯೇಟರ್ ಮಾಲೀಕರು ನಮ್ಮ ಚಿತ್ರಮಂದಿರದಲ್ಲೇ ಬಂದು ಚಿತ್ರ ವೀಕ್ಷಿಸುವಂತೆ ಆಹ್ವಾನಿಸಿದ್ದಾರೆ. ನಾನು ಅವರ ಚಿತ್ರ ಮಂದಿರದಲ್ಲಿ ಚಿತ್ರ ವೀಕ್ಷಿಸಿದರೆ ಸ್ವತಃ ರಜನಿಕಾಂತ್ ಅವರೇ ಚಿತ್ರ ವೀಕ್ಷಿಸಿದಷ್ಟು ಸಂತಸ ಪಡುತ್ತಾರೆ. ನಾನು ಮೊದಲ ದಿನವೇ ಚಿತ್ರ ವೀಕ್ಷಿಸಿ ರಜನಿಗೆ ಕರೆ ಮಾಡಿ ನನ್ನ ಅಭಿಪ್ರಾಯ ತಿಳಿಸುತ್ತೇನೆ" ಎಂದು ರಾಜ್ ಬಹುದ್ದೂರ್ ಹೇಳಿದ್ದಾರೆ.
ರಜನಿಕಾಂತ್ ಆಪ್ತ ವಿಮರ್ಶಕ ರಾಜ್ ಬಹದ್ದೂರ್
ರಜನಿಕಾಂತ್ ಅವರ ಅಭಿಮಾನಿಗಳ ಪಾಲಿಗೆ ಚಿತ್ರ ಹೇಗಿದ್ದರೂ ಅದು ಮೃಷ್ಟಾನ್ನ ಭೋಜನವೇ.. ಪತ್ರಿಕೆಗಳು ಚಿತ್ರದ ಬಗ್ಗೆ ಏನೇ ಬರೆದರೂ ಸೂಪರ್ ಸ್ಟಾರ್ ತಲೆಕೆಡಿಸಿಕೊಳ್ಳುವುದಿಲ್ಲವಂತೆ. ಅವರ ಪ್ರತೀ ಚಿತ್ರ ಬಿಡುಗಡೆಯಾದಾಗಲೂ ರಜನಿಕಾಂತ್ ಒಂದು ದೂರವಾಣಿ ಕರೆಗಾಗಿ ತುದಿಗಾಲಲ್ಲಿ ನಿಂತು ಕಾಯುತ್ತಿರುತ್ತಾರಂತೆ. ಅದು ರಾಜ್ ಬಹದ್ದೂರ್ ಅವರ ಕರೆಗಾಗಿ.. ಏಕೆಂದರೆ ರಜನಿಕಾಂತ್ ಅವರ ಚಿತ್ರಗಳ ಪ್ರಬಲ ಮತ್ತು ಕಠಿಣ ವಿಮರ್ಶಕರೆಂದರೆ ಅದು ರಾಜ್ ಬಹದ್ದೂರ್ ಅವರಂತೆ. ಚಿತ್ರದಲ್ಲಿನ ಯಾವುದೇ ಬಗೆಯ ತಪ್ಪುಗಳು ಕಂಡುಬಂದರೂ ಮುಲಾಜಿಲ್ಲದೇ ರಾಜ್ ಬಹದ್ದೂರ್ ರಜನಿಕಾಂತ್ ಅವರಿಗೆ ತಿಳಿಸುತ್ತಾರಂತೆ. ಇದೇ ಕಾರಣಕ್ಕೆ ರಜನಿ ಪ್ರತೀ ಬಾರಿ ತಮ್ಮ ಚಿತ್ರ ಬಿಡುಗಡೆಯಾದಾಗಲೂ ರಾಜ್ ಬಹದ್ದೂರ್ ಅವರ ಕರೆಗೆ ಕಾಯುತ್ತಿರುತ್ತಾರಂತೆ.
ಬೆಂಗಳೂರಿಗೆ ಆಗಮಿಸಿದರೆ ರಾಜ್ ಬಹದ್ದೂರ್ ಭೇಟಿ ಗ್ಯಾರಂಟಿ
ಸೂಪರ್ ಸ್ಟಾರ್ ರಜನಿಕಾಂತ್ ಯಾವಾಗಲೇ ಬೆಂಗಳೂರಿಗೆ ಆಗಮಿಸಿದರೂ ಅವರ ಸ್ನೇಹಿತ ರಾಜ್ ಬಹದ್ದೂರ್ ಅವರನ್ನು ಭೇಟಿ ಮಾಡದೇ ಹೋಗುವುದೇ ಇಲ್ಲವಂತೆ. ಬೆಂಗಳೂರಿಗೆ ಆಗಮಿಸುತ್ತಿರುವಾಗಲೇ ರಾಜ್ ಬಹದ್ದೂರ್ ಅವರಿಗೆ ಕರೆಮಾಡಿ ವಿಮಾನ ನಿಲ್ದಾಣಕ್ಕೆ ಆಗಮಿಸುವಂತೆ ಹೇಳುತ್ತಾರಂತೆ. ಬಳಿಕ ರಾಜ್ ಬಹದ್ದೂರ್ ಮತ್ತು ರಜನಿಕಾಂತ್ ಚಾಮರಾಜಪೇಟೆಯಲ್ಲಿರುವ ನಿವಾಸಕ್ಕೆ ತೆರಳಿ ಚರ್ಚೆ ನಡೆಸುತ್ತಾರೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಗಾಲ್ಫ್ ಕೋರ್ಟ್ ಬಳಿ ಇರುವ ರಜನಿಕಾಂತ್ ಅವರ ಆಪಾರ್ಟ್ ಮೆಂಟ್ ಗೆ ರಾಜ್ ಬಹದ್ದೂರ್ ಹೋಗಿ ಉಭಯ ಕುಶಲೋಪರಿ ವಿಚಾರಿಸುತ್ತಾರೆ.
ರಜನಿ ಮತ್ತು ರಾಜ್ ಬಹದ್ದೂರ್ ಅವರ ಸ್ನೇಹ ಎಷ್ಟು ಗಾಢವಾಗಿದೆಯೆಂದರೆ ರಜನಿಕಾಂತ್ ಅವರೊಂದಿಗೆ ನೆಲೆಸಲು ರಾಜ್ ಬಹದ್ದೂರ್ ಅವರು ತಮ್ಮ ಸರ್ಕಾರಿ ಉದ್ಯೋಗಕ್ಕೂ ಗುಡ್ ಬೈ ಹೇಳಿದ್ದಾರಂತೆ. ಹಲವು ಬಾರಿ ರಜನಿಕಾಂತ್ ಅವರು ರಾಜ್ ಬಹದ್ದೂರ್ ಅವರಿಗೆ ನೆರವಿಗೆ ಮುಂದಾಗಿದ್ದರೂ, ಅದರಿಂದ ಅವರ ಸ್ನೇಹಕ್ಕೆ ಧಕ್ಕೆ ಬರಬಹುದು ಎಂಬ ಕಾರಣಕ್ಕೆ ಅದನ್ನು ರಾಜ್ ಬಹದ್ದೂರ್ ನಿರಾಕರಿಸಿದ್ದರಂತೆ. ಯಾವುದೇ ಕಾರಣಕ್ಕೂ ತಮ್ಮ ಸ್ನೇಹಕ್ಕೆ ಯಾವುದೇ ಅಡೆ-ತಡೆ ಬರಬಾರದು ಎಂಬುದು ರಾಜ್ ಬಹದ್ದೂರ್ ಅವರ ಹೆಬ್ಬಯಕೆಯಾಗಿದೆಯಂತೆ.