ಚೆನ್ನೈನ ರಾಘವೇಂದ್ರ ಮಂಟಪಂ ನಲ್ಲಿ ನಡೆಯುತ್ತಿರುವ ಅಭಿಮಾನಿಗಳ ಸಭೆ ಸತತ ಐದನೇ ದಿನವೂ ಮುಂದುವರೆದಿದ್ದು, ಇಂದು ಅಭಿಮಾನಿಗಳ ಉದ್ದೇಶಿಸಿ ಮಾತನಾಡಿದ ರಜನಿಕಾಂತ್ ತಮ್ಮ ಬಾಲ್ಯ ಮತ್ತು ಚಿತ್ರರಂಗದ ಆರಂಭಿಕ ದಿನಗಳನ್ನು ನೆನೆದರು. ಈ ವೇಳೆ ತಮ್ಮ ಬಾಲ್ಯ ಹಾಗೂ ಕುಟುಂಬದ ಕುರಿತು ಮಾತನಾಡಿದ ರಜನಿಕಾಂತ್, ಕರ್ನಾಟಕದಲ್ಲಿ ತಮ್ಮದು ಮಧ್ಯಮವರ್ಗಕ್ಕಿಂತ ಕೆಳಗಿರುವ ಬಡ ಕುಟುಂಬ. ಜೀವನ ನಿರ್ವಹಣೆಗಾಗಿ ಸರ್ಕಾರಿ ಬಸ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ನಾನು ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಿದ್ದು, ನನ್ನ ಕುಟುಂಬದವರೂ ಕೂಡ ಕನ್ನಡದಲ್ಲೇ ಮಾತನಾಡುತ್ತಾರೆ. ಅಲ್ಲದೆ ಇಂದಿಗೂ ತಾವು ತಮ್ಮ ಸಹೋದರರೊಂದಿಗೆ ಕನ್ನಡದಲ್ಲೇ ಮಾತನಾಡುತ್ತೇವೆ ಎಂದು ರಜನಿ ಹೇಳಿದ್ದಾರೆ.