ಬೆಂಗಳೂರು: ಇನ್ನು ಮುಂದೆ ತಾವು ಜನ್ಮ ದಿನಾಚರಣೆ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ನಟ ಕಿಚ್ಚಾ ಸುದೀಪ್ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ನಟ ಕಿಚ್ಚಾ ಸುದೀಪ್, "ಈವರೆಗೂ ನನ್ನ ಜನ್ಮದಿನವನ್ನು ನಿಮ್ಮದೇ ಜನ್ಮದಿನವೆಂಬಂತೆ ಆಚರಿಸಿದ್ದೀರಿ. ಎರಡು ದಶಕಗಳ ಕಾಲ ನೀವು ತೋರಿದ ಈ ಪ್ರೀತಿಗೆ ಧನ್ಯವಾದಗಳು. ನೀವು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಲ್ಲಿ ಕೇಕ್, ಉಡುಗೊರೆ ತಂದಿದ್ದನ್ನು, ಶುಭಾಶಯ ಕೋರಲು ಹತ್ತಾರು ಮೈಲಿಗಳಿಂದ ಬಂದಿದ್ದನ್ನೂ ಗಮನಿಸಿದ್ದೇನೆ. ನಮ್ಮ ಮನೆ ಸುತ್ತಮುತ್ತ ವಾತಾವರಣವನ್ನು ಸಿಂಗರಿಸಲು ಸಾಕಷ್ಟು ಹಣ ಖರ್ಚು ಮಾಡಿದ್ದೀರಿ. ಆ ಎಲ್ಲ ಹಣವನ್ನು ಅಗತ್ಯ ಇರುವವರಿಗೆ ನೀಡಿ ಎಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಇದರಿಂದ ಕಷ್ಟದಲ್ಲಿರುವ ಹಲವರ ಬದುಕು ಉಳಿಯುತ್ತದೆ. ಇದೇ ನೀವು ನನಗೆ ಕೊಡಬಹುದಾದ ಅತ್ಯುತ್ತಮ ಗಿಫ್ಟ್ ಇದೇ ಎಂದು ಹೇಳಿಕೊಂಡಿದ್ದಾರೆ.
ಅಂತೆಯೇ ಇನ್ಮುಂದೆ ಬರ್ತ್ ಡೇ ಆಚರಿಸಿಕೊಳ್ಳಲೇ ಬಾರದು ಎಂದು ಸುದೀಪ್ ನಿರ್ಧರಿಸಿದ್ದು, ಜನ್ಮದಿನದಂದು ತಾವು ಮನೆಯಲ್ಲೇ ಇರುವುದಿಲ್ಲ. ‘ನನ್ನ ಈ ಮಾತಿಗೆ ನೀವೆಲ್ಲ ಗೌರವ ನೀಡುತ್ತೀರಿ ಎಂಬ ನಂಬಿಕೆ ನನಗಿದೆ. ಆ ದಿನ ನಿಮ್ಮ ಸುತ್ತಮುತ್ತ ಇರುವವರನ್ನು ನೋಡಿ. ನಿಜಕ್ಕೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ’ ಎನ್ನುವ ಮೂಲಕ ಇಡೀ ಅಭಿಮಾನಿ ಬಳಗಕ್ಕೆ ಕಿವಿಮಾತು ಹೇಳಿದ್ದಾರೆ.
ಸೆಪ್ಟೆಂಬರ್ 2 ಸುದೀಪ್ ಅವರ ಜನುಮ ದಿನವಾಗಿದ್ದು, ಜನ್ಮ ದಿನಾಚರಣೆಗೆ ಕಿಚ್ಚನ ಅಭಿಮಾನಿಗಳ ಸಿದ್ಧತೆಯಲ್ಲಿ ತೊಡಗಿರುವಾಗಲೇ ಸುದೀಪ್ ಅವರ ಈ ಟ್ವೀಟ್ ಅಭಿಮಾನಿಗಳಲ್ಲಿ ನಿರಾಶೆ ಕಾರಣವಾಗಿದೆ.
Advertisement