ಕನ್ನಡ ಚಿತ್ರನಟ, ಸಿಸಿಎಲ್ ಆಟಗಾರ ಧ್ರುವ ಶರ್ಮಾ ನಿಧನ

ಸ್ಯಾಂಡಲ್‌ವುಡ್‌ ನಟ ಹಾಗೂ ಸಿಸಿಎಲ್‌ ಟೂರ್ನಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರ ಧ್ರುವ ಶರ್ಮಾ ಮಂಗಳವಾರ ನಿಧನರಾಗಿದ್ದು, ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಹಾಗೂ ಸಿಸಿಎಲ್‌ ಟೂರ್ನಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರ ಧ್ರುವ ಶರ್ಮಾ ಮಂಗಳವಾರ ನಿಧನರಾಗಿದ್ದು, ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಧ್ರುವ ಅವರನ್ನು ಶನಿವಾರ ಬೆಂಗಳೂರಿನ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಧ್ರುವ  ಸಾವನ್ನಪ್ಪಿದ್ದಾರೆ ಎಂದು ಅವರ ಸ್ನೇಹಿತ ಮೂಲಗಳು ತಿಳಿಸಿವೆ. 35 ವರ್ಷದ  ಧ್ರುವ ಶರ್ಮಾ ಪತ್ನಿ ಮತ್ತು 7 ವರ್ಷದ ಮಗಳು, 4 ವರ್ಷದ ಮಗನನ್ನು ಅಗಲಿದ್ದಾರೆ. ಧ್ರುವ ಅವರ ತಂದೆ ಸುರೇಶ್ ಶರ್ಮಾ ಕೂಡ ನಟ, ನಿರ್ಮಾಪರ,  ಫೈನಾನ್ಶಿಯರ್ ಹಾಗೂ ನಿರ್ದೇಶಕರಾಗಿದ್ದು, ಈ ಹಿಂದೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಮೂಗ ಮತ್ತು ಕಿವುಡರಾಗಿದ್ದ ಧ್ರುವ ತಮ್ಮ ಅಮೋಘ ಅಭಿನಯ ಹಾಗೂ ಕ್ರಿಕೆಟ್‌ ನಿಂದ ಎಲ್ಲರ ಗಮನ ಸೆಳೆದಿದ್ದರು. "ಸ್ನೇಹಾಂಜಲಿ", "ಬೆಂಗಳೂರು 560023" "ನೀನಂದ್ರೆ ಇಷ್ಟ ಕಣೋ", "ತಿಪ್ಪಜ್ಜಿ ಸರ್ಕಲ್‌", "ಹಿಟ್‌ ಲಿಸ್ಟ್‌"  ಚಿತ್ರಗಳಲ್ಲಿ ಧ್ರುವ ಅಭಿನಯಿಸಿದ್ದರು. ಇನ್ನು ಸಿಸಿಎಲ್‌ (ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌) ಪಂದ್ಯಾವಳಿಯಲ್ಲಿ ಕಿಚ್ಚ ಸುದೀಪ್‌ ನಾಯಕತ್ವದ "ಕರ್ನಾಟಕ ಬುಲ್ಡೋಜರ್ಸ್‌" ತಂಡದಲ್ಲಿ ಅಕ್ರಮಣಕಾರಿ ಬ್ಯಾಟ್ಸ್‌ಮನ್‌ ಆಗಿ ಧ್ರುವ ಮಿಂಚಿದ್ದರು.

ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಏರ್ಪಾಟು
ಇದೇ ವೇಳೆ ಇಂದು ಸಂಜೆ 4 ಗಂಟೆಗೆ ಕುಂಬ್ರಹಳ್ಳಿಯಲ್ಲಿ ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅಮೆರಿಕದಿಂದ ಧ್ರುವ ಅವರ ಸಹೋದರ ಆಗಮಿಸಬೇಕಿದ್ದು, ಅವರ  ಆಗಮನದ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲು ನಿರ್ಧರಿಸಲಾಗಿದೆ. ಇದಕ್ಕೂ ರಾಜಾನುಕುಂಟೆ ಮುಖ್ಯರಸ್ತೆಯಲ್ಲಿರುವ ಪ್ರೆಸ್ಟೀಜ್ ವಿಲ್ಲಾದ ನಿವಾಸದಲ್ಲಿ ಮೊದಲು ಧ್ರುವ ಅವರ ಪಾರ್ಥೀವ ಶರೀರರವನ್ನು ಅಂತಿಮ ದರ್ಶನಕ್ಕೆ  ಇಡಲಾಗುತ್ತದೆ.

ಆಸ್ಪತ್ರೆಗೆ ಚಿತ್ರರಂಗದ ಗಣ್ಯರ ದಂಡು
ಇದೇ ಮೃತ ಧ್ರುವ ಅವರನ್ನು ನೋಡಲು ಚಿತ್ರರಂಗದ ಗಣ್ಯರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ನಟ ಧ್ರುವ ನಟ ಕಿಚ್ಚಾ ಸುದೀಪ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ವೈಯುಕ್ತಿಕವಾಗಿಯೂ ನಟ ಕಿಚ್ಚಾ ಸುದೀಪ್ ಅವರಿಗೆ  ಧ್ರುವ ಶರ್ಮಾ ಆಪ್ತರಾಗಿದ್ದರು. ಇದೀಗ ಧ್ರುವ ಅವರನ್ನು ಕಾಣಲು ಸುದೀಪ್ ಅವರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com