ಹೆಚ್ ಐವಿ ಪಾಸಿಟಿವ್ ಟು "ರನ್ನಿಂಗ್ ಪಾಸಿಟಿವ್": ಡಾಕ್ಯೂಮೆಂಟರಿಯತ್ತ ನಿರ್ದೇಶಕ ಜೇಕಬ್ ಚಿತ್ತ!

ಸವಾರಿ, ಸವಾರಿ-2 ಮತ್ತು ಪೃಥ್ವಿಯಂತಹ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ಜೇಕಬ್ ವರ್ಗಿಸ್ ಇದೀಗ ಪ್ರಯೋಗಾತ್ಮಕ ಚಿತ್ರವೊಂದರ ಜವಾಬ್ದಾರಿ ಹೊತ್ತಿದ್ದು, ಮಾರಕ ಹೆಚ್ ಐವಿ ಪೀಡಿತ ಬೆಂಗಳೂರು ಬಾಲಕರಿಬ್ಬರ ಮ್ಯಾರಥಾನ್ ಯಶೋಗಾಥೆಯನ್ನು ಬೆಳ್ಳಿ ಪರದೆ ಮೇಲೆ ತರಲು ಜೇಕಬ್ ಸಿದ್ಧತೆ ನಡೆಸಿದ್ದಾರೆ.
ನಿರ್ದೇಶಕ ಜೇಕಬ್ ಹಾಗೂ ಮ್ಯಾರಥಾನ್ ಹುಡುಗರು
ನಿರ್ದೇಶಕ ಜೇಕಬ್ ಹಾಗೂ ಮ್ಯಾರಥಾನ್ ಹುಡುಗರು

ಬೆಂಗಳೂರು: ಸವಾರಿ, ಸವಾರಿ-2 ಮತ್ತು ಪೃಥ್ವಿಯಂತಹ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ಜೇಕಬ್ ವರ್ಗಿಸ್ ಇದೀಗ ಪ್ರಯೋಗಾತ್ಮಕ ಚಿತ್ರವೊಂದರ ಜವಾಬ್ದಾರಿ ಹೊತ್ತಿದ್ದು, ಮಾರಕ ಹೆಚ್ ಐವಿ ಪೀಡಿತ ಬೆಂಗಳೂರು ಬಾಲಕರಿಬ್ಬರ  ಮ್ಯಾರಥಾನ್  ಯಶೋಗಾಥೆಯನ್ನು ಬೆಳ್ಳಿ ಪರದೆ ಮೇಲೆ ತರಲು ಜೇಕಬ್ ಸಿದ್ಧತೆ ನಡೆಸಿದ್ದಾರೆ.

ಚಿತ್ರದಲ್ಲಿ ಸತೀಶ್ ನೀನಾಸಂ, ಸೋನುಗೌಡ ಮತ್ತು ರೋಜರ್ ನಾರಾಯಣ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು. ಚಿತ್ರದ ನಿರ್ದೇಶ ಮಾಡಿದ್ದಲ್ಲದೇ ಚಿತ್ರಕ್ಕೆ ಬಂಡವಾಳವನ್ನೂ ಕೂಡ ಹೂಡಿರುವ ಜೇಕಬ್,   ಇದೊಂದು ಚಿತ್ರಕ್ಕಾಗಿ ತಮ್ಮ ಅಮೂಲ್ಯ ನಾಲ್ಕು ವರ್ಷಗಳನ್ನು ಕಳೆದಿದ್ದಾರಂತೆ. ಚಿತ್ರದ ವಿಶೇಷ ಕಥೆಯೇ ತಮ್ಮನ್ನು ನಿರ್ಮಾಪಕನಾಗಿ ಮಾಡಿದ್ದು, ಸಾಮಾನ್ಯ ಚಿತ್ರಗಳಿಂದ ಸಾಕ್ಷ್ಯ ಚಿತ್ರಕ್ಕೆ ಕರೆದು ತಂದು ನಿಲ್ಲಿಸಿದೆ ಎಂದು ಜೇಕಬ್  ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.

ಬೆಂಗಳೂರು ಮೂಲದ ಬಾಬು ಮತ್ತು ಮಾಣಿಕ್ ಎಂಬ 14 ರಿಂದ 15 ವರ್ಷದ ಹೆಚ್ ಐ ವಿ ಪೀಡಿತ ಬಾಲಕರಿಬ್ಬರ ಕಥೆಯನ್ನು ಹೇಳ ಹೊರಟಿರುವ ಜೇಕಬ್ ಚಿತ್ರಕ್ಕಾಗಿ ಕಳೆದ ನಾಲ್ಕು ವರ್ಷಗಳಿಂದ ಸುಮಾರು ದೇಶಗಳನ್ನು  ಸುತ್ತಿದ್ದಾರೆ. ಬಾಬು ಮತ್ತು ಮಾಣಿಕ್ 10ಕೆ ಮ್ಯಾರಥಾನ್ ಓಟಗಾರರಾಗಿದ್ದು, ವಿಶ್ವದ ಮೂಲೆಮೂಲೆಯಲ್ಲಿ ಆಯೋಜನೆಗೊಳ್ಳುವ ವಿವಿಧ ಮ್ಯಾರಥಾನ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿರುತ್ತಾರೆ. ಬಾಲಕರೊಂದಿಗೆ ಜೇಕಬ್ ಕೂಡ  ನೆದರ್ಲ್ಯಾಂಡ್, ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಇರುವ ಜಿನೀವಾ, ರೋಮ್, ಸೇರಿದಂತೆ ಹಲವು ದೇಶಗಳನ್ನು ಸುತ್ತಿದ್ದಾರೆ.

ಈ ಕಥೆಯನ್ನು ಚಿತ್ರವನ್ನಾಗಿ ಮಾಡುವ ಸಂದರ್ಭದಲ್ಲಿ ನನ್ನ ತಲೆಯಲ್ಲಿ ಯಾವುದೇ ಆಲೋಚನೆಗಳೂ ಇರಲಿಲ್ಲ. ಆದರೆ ಚಿತ್ರದ ಚಿತ್ರೀಕರಣ ಆರಂಭವಾದ ಮೇಲೆಯೇ ನನಗೆ ಕಥೆಯ ಆಳ ಏನು ಎಂಬುದು ತಿಳಿಯಿತು. ಕಳೆದ 8  ತಿಂಗಳಿನಿಂದಲೂ ಚಿತ್ರದ ಎಡಿಟಿಂಗ್ ನಡೆಯುತ್ತಿದೆ ಎಂದರೆ ಚಿತ್ರದ ಪ್ರಾಮುಖ್ಯತೆ ಎಷ್ಟಿದೆ ಎಂಬುದನ್ನು ನೀವೇ ಆರ್ಥ ಮಾಡಿಕೊಳ್ಳಿ. ಎರಡನೇ ಭಾಗದ ಚಿತ್ರೀಕರಣಕ್ಕಾಗಿ ಫುಕೆಟ್ ಮ್ಯಾರಥಾನ್, ಕೊಲಂಬೋ, ಸಿಡ್ನಿಯಲ್ಲಿ ನಡೆದ  ಗೋಲ್ಡ್ ಕೋಸ್ಚ್ ಮ್ಯಾರಥಾನ್ ಗೆ ಹೋಗಿದ್ದೆ. ಪ್ರಸ್ತುತ ಚಿತ್ರ ಅಂತಿಮ ಘಟ್ಟದಲ್ಲಿದ್ದು, ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಸಂಗೀತ ನೀಡಿದ್ದಾರೆ ಎಂದು ಜೇಕಬ್ ವಿವರ ನೀಡಿದರು.

ಓರ್ವ ನಿರ್ದೇಶಕನಾಗಿ ನಾನು ಮನರಂಜನೆ ಮತ್ತು ಲಾಭಾಂಶವನ್ನು ಮನದಲ್ಲಿಟ್ಟುಕೊಂಡೇ ಚಿತ್ರ ನಿರ್ಮಿಸಬೇಕಾದರೂ, ಕೆಲವೊಮ್ಮೆ ಇಂತಹ ಪ್ರಯೋಗಾತ್ಮಕ ಚಿತ್ರಗಳ ಕಡೆಗೂ ಗಮನ ಹರಿಸಬೇಕಾಗುತ್ತದೆ. ಈ ಚಿತ್ರ  ನೋಡಿದ ಪ್ರೇಕ್ಷಕ ಏನ್ನನಾದರೂ ಕಲಿತು ಹೋದರೆ ಚಿತ್ರ ಮಾಡಿದ ನನಗೆ ಅತೀವ ಸಂತಸವಾಗುತ್ತದೆ. ಚಿತ್ರ ನಿರ್ಮಾಣ ಮಾಡಲು ಮಕ್ಕಳೇ ನನನ್ನು ಪರೋಕ್ಷವಾಗಿ ಪ್ರೋತ್ಸಾಹ ಮಾಡಿದರು. ಅವರ ನಿತ್ಯ ಚಟುವಟಿಕೆಗಳೇ  ನನ್ನನ್ನು ಚಿತ್ರ ನಿರ್ಮಾಣ ಮಾಡುವಂತೆ ಮಾಡಿತು ಎಂದು ಜೇಕಬ್ ಹೇಳಿಕೊಂಡಿದ್ದಾರೆ.

ಈ ಚಿತ್ರ ನಟನೆ ಅಲ್ಲ. ಇದು ಆ ಹುಡುಗರ ನಿತ್ಯ ಕಾಯಕದ ಚಿತ್ರೀಕರಣವಷ್ಟೇ ಎಂದು ಜೇಕಬ್ ಹೆಮ್ಮೆಯಿಂದ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com