ಸಾವಿರಾರು ರುಪಾಯಿ ನೀಡಿ ಮುಗಿಬಿದ್ದ ಪ್ರೇಕ್ಷಕ ಬೇಸ್ತು; ಜಸ್ಟಿನ್‌ ಬೀಬರ್ ಮೇಲೆ ಲಿಪ್ ಸಿಂಕ್ ಮಾಡಿದ ಆರೋಪ‌

ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಅವರ ಬಹು ನಿರೀಕ್ಷಿತ ಸಂಗೀತ ಗೋಷ್ಠಿ ಮುಕ್ತಾಯವಾಗಿದೆಯಾದರೂ, ವಿವಾದಗಳು ಮಾತ್ರ ಇನ್ನೂ ಮುಗಿದಿಲ್ಲ.
ಮುಂಬೈ ಕಾರ್ಯಕ್ರಮದಲ್ಲಿ ಗಾಯಕ ಜಸ್ಟಿನ್ ಬೀಬರ್
ಮುಂಬೈ ಕಾರ್ಯಕ್ರಮದಲ್ಲಿ ಗಾಯಕ ಜಸ್ಟಿನ್ ಬೀಬರ್

ಮುಂಬೈ: ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಅವರ ಬಹು ನಿರೀಕ್ಷಿತ ಸಂಗೀತ ಗೋಷ್ಠಿ ಮುಕ್ತಾಯವಾಗಿದೆಯಾದರೂ, ವಿವಾದಗಳು ಮಾತ್ರ ಇನ್ನೂ ಮುಗಿದಿಲ್ಲ.

ಅಭಿಮಾನಿಗಳ ಬಹುದಿನದ ನಿರೀಕ್ಷೆಯನ್ನು ತಣಿಸುವ ನಿಟ್ಟಿನಲ್ಲಿ ಬುಧವಾರ ಮುಂಬೈನಲ್ಲಿ ನಡೆದ ಖ್ಯಾತ ಗಾಯಕ ಜಸ್ಟಿನ್‌ ಬೀಬರ್‌ ಅವರ ಸಂಗೀತ ರಸಸಂಜೆ ಕಾರ್ಯಕ್ರಮ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಖ್ಯಾತ  ಗಾಯಕನ ವಿರುದ್ಧ ಇದೀಗ ಲಿಪ್ ಸಿಂಕ್ (ಹಾಡುಗಳಿಗೆ ತುಟಿ ಅಲ್ಲಾಡಿಸುವುದು) ಮಾಡಿದ ಗಂಭೀರ ಆರೋಪ ಕೇಳಿಬಂದಿದೆ.  ಇಡೀ ಕಾರ್ಯಕ್ರಮದಲ್ಲಿ ಬೀಬರ್‌ ಹಾಡಿದ ಹಾಡುಗಳ ಪೈಕಿ ಕೇವಲ ನಾಲ್ಕು ಹಾಡುಗಳನ್ನು ಮಾತ್ರವೇ  ಅವರು ಸ್ಥಳದಲ್ಲಿ ಹಾಡಿದ್ದು, ಉಳಿದಿದ್ದೆಲ್ಲಾ ಹಾಡುಗಳು ಧ್ವನಿಮುದ್ರಣಗೊಂಡು ವೇದಿಕೆಯಲ್ಲಿ ಪ್ಲೇ ಆಗಿತ್ತು. ಈ ಹಾಡುಗಳಿಗೆ ಗಾಯಕ ಬೀಬರ್ ತುಟಿಯಾಡಿಸಿದ್ದಾರೆ (ಲಿಪ್‌ ಸಿಂಕ್‌) ಎಂದು ಹೇಳಲಾಗುತ್ತಿದೆ.

ಆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಸಂಗೀತ ರಸಸಂಜೆ ಕಾರ್ಯಕ್ರಮಕ್ಕೆ ದುಬಾರಿ ಹಣ ತೆತ್ತು ಹೋಗಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಜಸ್ಟಿನ್ ಬೀಬರ್ ಅವರ ಮುಂಬೈ ಕಾರ್ಯಕ್ರಮಕ್ಕೆ  ಕಣ್ತುಂಬಿಕೊಳ್ಳಲು ಕನಿಷ್ಠ 5000 ರು.ನಿಂದ ಗರಿಷ್ಠ 75000 ರು.ವರೆಗೆ ತೆತ್ತು ಬಂದಿದ್ದ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೆಲ ಅಭಿಮಾನಿಗಳು ಆಯೋಜಕರ ಮತ್ತು ಗಾಯಕನ ವಿರುದ್ಧ ಟ್ವೀಟ್ ಮಾಡಿ ಆಕ್ರೋಶ  ವ್ಯಕ್ತಪಡಿಸುತ್ತಿದ್ದಾರೆ. ಕೇವಲ ಲಿಪ್‌ ಸಿಂಕ್‌ ಮಾಡುವುದಿದ್ದಲ್ಲಿ ನಾವು ಮೊಬೈಲ್‌, ಟಿವಿಯಲ್ಲೇ ಕಾರ್ಯಕ್ರಮ ನೋಡುತ್ತಿದ್ದೆವು. ಇಷ್ಟೊಂದು ದುಬಾರಿ ಹಣ ತೆತ್ತು ಬರುವ ಅವಶ್ಯಕತೆಯೇ ಇಲ್ಲ ಎಂದು ಬಾಲಿವುಡ್‌ ನ ಖ್ಯಾತನಾಮರು  ಸೇರಿದಂತೆ ಹಲವು ಅಭಿಮಾನಿಗಳು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಿಪ್ ಸಿಂಕ್ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೀಡಾಗುತ್ತಿದ್ದಂತೆಯೇ ಪಾಪ್ ಗಾಯಕ ಬೀಬರ್ ದೆಹಲಿ, ಜೈಪುರ ಮತ್ತು ಆಗ್ರಾದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಸ್ವದೇಶಕ್ಕೆ ವಾಪಸ್ ಆಗಿದ್ದಾರೆ  ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com