ಪಾರ್ವತಮ್ಮ ರಾಜ್ ಕುಮಾರ್: ಸಾಲಿಗ್ರಾಮದಲ್ಲಿ ಹುಟ್ಟಿ ಕನ್ನಡ ಚಿತ್ರರಂಗಕ್ಕೆ ನಡೆದು ಬಂದ ಹಾದಿ

ಕನ್ನಡ ಚಲನ ಚಿತ್ರರಂಗದ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರು ಇಂದು ನಿಧನರಾಗಿದ್ದು, ಚಿತ್ರರಂಗದ ಮತ್ತೊಂದು ಪ್ರಮುಖ ಕೊಂಡಿ ಕಳಚಿದಂತಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕನ್ನಡ ಚಲನ ಚಿತ್ರರಂಗದ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರು ಇಂದು ನಿಧನರಾಗಿದ್ದು, ಚಿತ್ರರಂಗದ ಮತ್ತೊಂದು ಪ್ರಮುಖ ಕೊಂಡಿ ಕಳಚಿದಂತಾಗಿದೆ.

1939 ಡಿಸೆಂಬರ್ 6 ರಂದು ಮೈಸೂರಿನ ಕೆಆರ್ ನಗರದ ಸಾಲಿಗ್ರಾಮದಲ್ಲಿ ಜನಿಸಿದ್ದ ಪಾರ್ವತಮ್ಮ ರಾಜ್ ಕುಮಾರ್ ಅವರು ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ್ದಾರೆ. ಇವರ ತಂದೆ ಅಪ್ಪಾಜಿ ಗೌಡ ಮತ್ತು ತಾಯಿ ಲಕ್ಷ್ಮಮ್ಮ. ರಾಜ್  ಕುಮಾರ್ ಅವರ ಅತ್ತೆಯ ಹೆಸರೂ ಕೂಡ ಲಕ್ಷ್ಮಮ್ಮ ಎಂದೇ..ಪಾರ್ವತಮ್ಮ ಅವರ ತಂದೆ ಅಪ್ಪಾಜಿ ಗೌಡ ಅವರು ಸಂಗೀತ ಶಿಕ್ಷಕರಾಗಿದ್ದು, ಇವರ ಬಳಿಯಲ್ಲೇ ರಾಜ್ ಕುಮಾರ್ ಅವರೂ ಕೂಡ ಸಂಗೀತ ಅಭ್ಯಾಸ ಮಾಡಿದ್ದರು.  ಪಾರ್ವತಮ್ಮ ಅವರು ತಮ್ಮ 13ನೇ ವಯಸ್ಸಿನಲ್ಲೇ ರಾಜ್ ಕುಮಾರ್ ಅವರನ್ನು ಮದುವೆಯಾದರು. 25-06-1953 ರಂದು ಪಾರ್ವತಮ್ಮ ಹಾಗೂ ರಾಜ್ ಕುಮಾರ್ ಅವರ ವಿವಾಹ ನೆರವೇರಿತ್ತು. ನಂಜನಗೂಡಿನ ರಾಣಪ್ಪ ಛತ್ರದಲ್ಲಿ  ಮದುವೆ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ವಿವಾಹ ಕಾರ್ಯಕ್ರಮ ನೆರವೇರಿತ್ತು.

ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ರಾಜ್ ಕುಮಾರ್ ಅವರು ಆರಂಭಿಕ ದಿನಗಳಲ್ಲಿ ಚಿತ್ರರಂಗದಲ್ಲಿ ನೆಲೆಯೂರಲು ಸಾಕಷ್ಟು ಕಷ್ಟ ಅನುಭವಿಸಿದ್ದರು. ಈ ಹಂತದಲ್ಲಿ ಪಾರ್ವತಮ್ಮ ಅವರು ರಾಜ್ ಕುಮಾರ್ ಅವರ ಬೆನ್ನೆಲುಬಾಗಿದ್ದರು.  ಆದರೆ ಕ್ರಮೇಣ ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟರಾದರು. 70ರದಶಕದಲ್ಲಿ ವೃತ್ತಿ ಜೀವನದ ಅತ್ಯಂತ ಉತ್ತುಂಗ ಸ್ಥಿತಿಗೆ ರಾಜ್ ಕುಮಾರ್ ತಲುಪಿದ್ದರು. ಈ ಸಮಯದಲ್ಲಿ ರಾಜ್ ಕುಮಾರ್ ಅವರಿಗೆ  ಸಾಕಷ್ಟು ಬೇಡಿಕೆ ಇತ್ತಾದರೂ ನಿರ್ಮಾಪಕರು ಮಾತ್ರ ಕಡಿಮೆ ಸಂಭಾವನೆ ನೀಡುತ್ತಿದ್ದರು.

ಈ  ಹಂತದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರು ತಮ್ಮದೇ ನಿರ್ಮಾಣ ಸಂಸ್ಥೆ ಹುಟ್ಟುಹಾಕಲು ಮುಂದಾದರು. ಆಗ ತಲೆ ಎತ್ತಿದ್ದೇ ಪೂರ್ಣಿಮಾ ಎಂಟರ್ ಪ್ರೈಸಸ್ ಅಥವಾ ವಜ್ರೇಶ್ವರಿ ಕಂಬೈನ್ಸ್. 1975ರಲ್ಲಿ ತಲೆ ಎತ್ತಿದ  ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿತು. 1975ರಲ್ಲಿ ಈ ಸಂಸ್ಥೆ ನಿರ್ಮಿಸಿದ್ದ ಮೊದಲ ಚಿತ್ರ ತ್ರಿಮೂರ್ತಿ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.  ಈ ವರೆಗೂ ಈ ಸಂಸ್ಥೆಯಿಂದ ಸುಮಾರು 80 ಚಿತ್ರಗಳು  ಮೂಡಿಬಂದಿವೆ. ಕೇವಲ ಯಶಸ್ವಿ ಚಿತ್ರಗಳನ್ನಷ್ಟೇ ಅಲ್ಲದೆ ಕನ್ನಡ ಚಿತ್ರರಂಗಕ್ಕೆ ಅನೇಕ ಖ್ಯಾತ ನಟಿಯರನ್ನು ಈ ಸಂಸ್ಥೆ ಪರಿಚಯಿಸಿದೆ. ಕನ್ನಡ ಚಿತ್ರರಂಗದ ಪ್ರಮುಖ ತಾರೆಯರಾದ ಸುಧಾರಾಣಿ, ಮಾಲಾಶ್ರೀ, ಪ್ರೇಮಾ, ಅನು  ಪ್ರಭಾಕರ್, ರಕ್ಷಿತಾ, ರಮ್ಯ ಅವರು ಕೂಡ ಇದೇ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯಿಂದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.

ಕೇವಲ ನಿರ್ಮಾಪಕಿಯಾಗಿ ಮಾತ್ರವಲ್ಲದೇ ಹಂಚಿಕೆದಾರರಾಗಿಯೂ ಪಾರ್ವತಮ್ಮ ಅವರು  ಸೇವೆಸಲ್ಲಿಸಿದ್ದಾರೆ. ಚಿತ್ರರಂಗಕ್ಕೆ ಇವರು ನೀಡಿರುವ ಸೇವೆಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ರಾಜ್ಯೋತ್ಸವ  ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com