ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾಲಿವುಡ್ ಬಾದ್ ಶಾಗೇ ಯಶ್ ಠಕ್ಕರ್; ಜೀರೋ ಹಿಂದಿಕ್ಕಿದ ಕೆಜಿಎಫ್ ಗಳಿಸಿದ್ದೆಷ್ಟು ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ನಿರೀಕ್ಷೆಯಂತೆಯೇ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದು, ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅಭಿನಯದ ಜೀರೋ ಚಿತ್ರಕ್ಕೂ ಕೂಡ ಠಕ್ಕರ್ ನೀಡುವ ಮೂಲಕ ತನ್ನ ಹವಾ ಏನು ಎಂದು ತೋರಿಸಿಕೊಟ್ಟಿದೆ.
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ನಿರೀಕ್ಷೆಯಂತೆಯೇ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದು, ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅಭಿನಯದ ಜೀರೋ ಚಿತ್ರಕ್ಕೂ ಕೂಡ ಠಕ್ಕರ್ ನೀಡುವ ಮೂಲಕ ತನ್ನ ಹವಾ ಏನು ಎಂದು ತೋರಿಸಿಕೊಟ್ಟಿದೆ.
ಹೌದು... ಕನ್ನಡದ ಕೆಜಿಎಫ್ ಚಿತ್ರ ಕರ್ನಾಟಕ ಚಿತ್ರೋಧ್ಯಮದಲ್ಲೇ ಹೊಸದೊಂದು ದಾಖಲೆ ಬರೆದಿದ್ದು, ಮೊದಲ ದಿನವೇ ಎಲ್ಲಾ ದಾಖಲೆಗಳನ್ನು ಪುಡಿ ಪುಡಿ ಮಾಡಿದೆ. ದೇಶ-ವಿದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದ್ದ ಕೆಜಿಎಫ್ ಚಿತ್ರ ಮೊದಲ ದಿನ ಬರೊಬ್ಬರಿ 24.5 ಕೋಟಿ ರೂ ಗಳಿಕೆ ಕಾಣುವ ಮೂಲಕ ನೂತನ ಇತಿಹಾಸ ಬರೆದಿದೆ. 
‘ಕೆಜಿಎಫ್’ ಮತ್ತು ಶಾರುಖ್ ಖಾನ್ ನಟನೆಯ ‘ಜೀರೋ’ ಚಿತ್ರಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಭಾರತದಲ್ಲಿ ಮೊದಲ ದಿನ 4380 ಪರದೆಗಳಲ್ಲಿ ತೆರೆಕಂಡ ‘ಜೀರೋ’ 20.14 ಕೋಟಿ ರೂ. ಬಾಚಿಕೊಂಡಿದೆ. ಆ ಚಿತ್ರಕ್ಕೆ ಹೋಲಿಸಿದರೆ, ಎರಡು ಸಾವಿರ ಪರದೆಗಳಲ್ಲಿ ಪ್ರದರ್ಶನ ಕಂಡು 18 ಕೋಟಿ ರೂ. (ಭಾರತೀಯ ಮಾರುಕಟ್ಟೆ) ಕಲೆಕ್ಷನ್ ಮಾಡಿರುವ ‘ಕೆಜಿಎಫ್’ ಸಾಧನೆಯೇ ದೊಡ್ಡದು ಎನ್ನಬಹುದು. ಶೋಗಳ ಹಂಚಿಕೆ ವಿಚಾರದಲ್ಲೂ ಈ ಸಿನಿಮಾಗಳ ನಡುವೆ ಹಣಾಹಣಿ ನಡೆದಿತ್ತು. ಆದರೆ ಈಗ ‘ಜೀರೋ’ ಚಿತ್ರಕ್ಕೆ ವಿಮರ್ಶಕರು ಮತ್ತು ಪ್ರೇಕ್ಷಕರ ವಲಯದಿಂದ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ಸಿಗದ ಕಾರಣ, ಮುಂಬೈ ಮುಂತಾದೆಡೆ ‘ಕೆಜಿಎಫ್’ ಶೋ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಶನಿವಾರ, ಭಾನುವಾರ ಮತ್ತು ಕ್ರಿಸ್​ವುಸ್ (ಜ.25) ಸರಣಿ ರಜೆಯ ಕಾರಣ ಚಿತ್ರಮಂದಿರದತ್ತ ಇನ್ನಷ್ಟು ಪ್ರೇಕ್ಷಕರು ಹರಿದುಬರುವ ನಿರೀಕ್ಷೆ ಇದೆ.
ತಜ್ಞರ ಲೆಕ್ಕಾಚಾರಗಳನ್ನೇ ತಲೆಕೆಳಗೆ ಮಾಡಿದ ಕೆಜಿಎಫ್
ನಿನ್ನೆ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಚಿತ್ರ 20 ಕೋಟಿ ಗಳಿಸುವ ನಿರೀಕ್ಷೆ ಇತ್ತು. ಆದರೆ ಇಂದು ಸಂಪೂರ್ಣ ಅಂಕಿ ಅಂಶಗಳು ಲಭ್ಯವಾಗಿದ್ದು, ತಜ್ಞರ ಲೆಕ್ಕಾಚಾರಗಳನ್ನೇ ಕೆಜಿಎಫ್ ಚಿತ್ರ ತಲೆ ಕೆಳಗೆ ಮಾಡಿದೆ. ಹೌದು ಕೆಜಿಎಫ್ ಚಿತ್ರ ದೇಶ-ವಿದೇಶಗಳಲ್ಲಿ ಒಟ್ಟು 2460 ಸ್ಕ್ರೀನ್ ಗಳಲ್ಲಿ ತೆರೆ ಕಂಡಿತ್ತು. ಈ ಪೈಕಿ ಹಿಂದಿ ವರ್ಷನ್ ಚಿತ್ರ ಅತೀ ಹೆಚ್ಚು ಅಂದರೆ 1500 ಸ್ಕ್ರೀನ್ ಗಳಲ್ಲಿ, ತೆಲುಗು ಮತ್ತು ಕನ್ನಡ ಭಾಷೆಯ ಚಿತ್ರ ತಲಾ 400 ಚಿತ್ರ ಮಂದಿರಗಳಲ್ಲಿ ಹಾಗೂ ತಮಿಳು ಭಾಷೆಯ ಚಿತ್ರ 100 ಮತ್ತು ಮಲಯಾಳಂ ಭಾಷೆಯ ಚಿತ್ರ 60 ಸ್ಕ್ರೀನ್ ಗಳಲ್ಲಿ ತೆರೆ ಕಂಡಿತ್ತು. ಇದಲ್ಲದೆ ಅಮೆರಿಕ ಮತ್ತು ಕೆನಡಾ ಸೇರಿದಂತೆ ವಿವಿಧೆಡೆ ಚಿತ್ರ ಬಿಡುಗಡೆಯಾಗಿತ್ತು. 
ಇದೀಗ ಈ ಚಿತ್ರದ ಮೊದಲ ದಿನದ ಗಳಿಕೆಯ ಸಂಪೂರ್ಣ ಮಾಹಿತಿ ಲಭ್ಯವಾಗಿದ್ದು, ಚಿತ್ರ ಮೊದಲ ದಿನ ಒಟ್ಟು 24.5  ಕೋಟಿ ರೂಗಳನ್ನು ಗಳಿಕೆ ಮಾಡಿದೆ. ಈ ಪೈಕಿ ಕರ್ನಾಟಕವೊಂದರಲ್ಲೇ ಚಿತ್ರ 18 ಕೋಟಿ ಗಳಿಸಿದ್ದು, ವಿದೇಶಗಳಲ್ಲಿ ಒಂದು ದಿನಕ್ಕೆ 40 ಲಕ್ಷ ರೂ ಗಳಿಸಿದೆ.
ಶಾರುಖ್ ಖಾನ್ ಅಭಿನಯದ ಜೀರೋ ಗೂ ಠಕ್ಕರ್ ಕೊಟ್ಟ ಯಶ್ ಕೆಜಿಎಫ್
ಇನ್ನು ಕೆಜಿಎಫ್ ಚಿತ್ರ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ರ ಜೀರೋ ಚಿತ್ರಕ್ಕೂ ಠಕ್ಕರ್ ನೀಡಿದ್ದು, ಜೀರೋವನ್ನು ಹಿಂದಿಕ್ಕಿದೆ ಕೆಜಿಎಫ್. ಕೆಜಿಎಫ್ ಗೆ ಠಕ್ಕರ್ ಕೊಡುವಲ್ಲಿ ಜೀರೋ ವಿಫಲವಾಗಿದ್ದು ಕೇವಲ 20 ಕೋಟಿ ಗಳಿಕೆ ಕಂಡಿದೆ. ಇನ್ನು ಜೀರೋ ಚಿತ್ರ ದೇಶ-ವಿದೇಶಗಳೂ ಸೇರಿದಂತೆ ಒಟ್ಟು 5965 ಸ್ಕ್ರೀನ್  ಗಳಲ್ಲಿ ತೆರೆ ಕಂಡಿತ್ತು. ಈ ಪೈಕಿ ಭಾರತದಲ್ಲಿ 4380 ಸ್ಕ್ರೀನ್ ಗಳು ಮತ್ತು ವಿದೇಶಗಳಲ್ಲಿ 1585 ಸ್ಕ್ರೀನ್ ಗಳಲ್ಲಿ ಜೀರೋ ತೆರೆಕಂಡಿತ್ತು. ಕೆಜಿಎಫ್ ತೆರೆಕಂಡ ಸ್ಕ್ರೀನ್ ಗಳನ್ನು ಜೀರೋ ತೆರೆಕಂಡ ಸ್ಕ್ರೀನ್ ಗಳಿಗೆ ಹೋಲಿಕೆ ಮಾಡಿದರೆ ಅರ್ಧಕ್ಕರ್ಧ ಕಡಿಮೆ ಸ್ಕ್ರೀನ್ ಗಳಲ್ಲಿ ಕೆಜಿಎಫ್ ತೆರೆ ಕಂಡಿತ್ತು. ಇದಾಗ್ಯೂ ಕೆಜಿಎಫ್ ಚಿತ್ರಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿದ್ದ ಪರಿಣಾಮ ಬಾಕ್ಸ್ ಆಫೀಸ್ ಗಳಿಕೆ ಹೆಚ್ಚಾಗಿದೆ.
ಇನ್ನು ಕೆಜಿಎಫ್ ಚಿತ್ರ ಶಾರುಖ್ ಖಾನ್ ಜೀರೋ ಚಿತ್ರದೊಂದಿಗೆ ತೆರೆಕಾಣುತ್ತಿದೆ ಎಂದಾಗ ಹಿಂದಿ ಮತ್ತು ಶಾರುಖ್ ಅಭಿಮಾನಿಗಳು ಯಶ್ ಮತ್ತು ಕೆಜಿಎಫ್ ಚಿತ್ರ ತಂಡದ ವಿರುದ್ಧ ಕೆಂಡಕಾರಿದ್ದರು. ಅಲ್ಲದೆ ಕೆಜಿಎಫ್ ಆಟ ನಡೆಯೊಲ್ಲ ಎಂದೆಲ್ಲಾ ಕಾಲೆಳೆಯುವ ಪ್ರಯತ್ನ ಮಾಡಿದ್ದರು. ಇದೀಗ ಈ ಎಲ್ಲ ಟೀಕೆಗಳಿಗೂ ಕೆಜಿಎಫ್ ಚಿತ್ರ ತನ್ನ ಗಳಿಕೆಯಿಂದಲೇ ಉತ್ತರ ನೀಡಿದೆ.

Related Stories

No stories found.

Advertisement

X
Kannada Prabha
www.kannadaprabha.com