ಅರ್ಜುನ್ ಸರ್ಜಾ ವಿರುದ್ಧದ #MeToo ಆರೋಪಕ್ಕೆ ಹೊಸ ಟ್ವಿಸ್ಟ್, ಆರೋಪದ ಹಿಂದೆ ನಟನೋರ್ವನ ಕೈವಾಡ?

ಕನ್ನಡ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿರುವ ನಟ ಅರ್ಜುನ್ ಸರ್ಜಾ ವಿರುದ್ಧ #MeToo ಆರೋಪದ ಹಿಂದೆ ನಟನೋರ್ವನ ಕೈವಾಡವಿದೆ ಎಂಬ ಆರೋಪ ಕೇಳಿಬರುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿರುವ ನಟ ಅರ್ಜುನ್ ಸರ್ಜಾ ವಿರುದ್ಧ #MeToo ಆರೋಪದ ಹಿಂದೆ ನಟನೋರ್ವನ ಕೈವಾಡವಿದೆ ಎಂಬ ಆರೋಪ ಕೇಳಿಬರುತ್ತಿದೆ.
ಭಾರತೀಯ ಚಿತ್ರರಂಗದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿರುವ ಮೀಟೂ ಅಭಿಯಾನದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಆರೋಪದ ಹಿಂದೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅವರ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ನಿಂಬರಿಗೆ ಚೇತನ್ ವಿರುದ್ಧ ಆರೋಪಿಸಿದ್ದಾರೆ. ವೈಯಕ್ತಿಕ ಹಿತಾಸಕ್ತಿಗಾಗಿ ಆ ದಿನಗಳು ಸಿನಿಮಾದ ನಟ ಚೇತನ್ ಅವರು ಮೀಟೂ ಅಭಿಯಾನ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪ್ರಶಾಂತ್ ನಿಂಬರಗಿ ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕೆಯೊಂದು ವರದಿ ಮಾಡಿರುವಂತೆ ಈ ಹಿಂದೆ ನಟ ಚೇತನ್ ಪ್ರೇಮ ಬರಹ ಸಿನಿಮಾಗೆ ಆಯ್ಕೆಯಾಗಿ ಕಾರಣಾಂತರಗಳಿಂದ ಆ ಚಿತ್ರ ಅವರ ಕೈ ತಪ್ಪಿತ್ತು. ಆದರೆ ಈ ಚಿತ್ರಕ್ಕಾಗಿ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದ ನಟ ಅರ್ಜುನ್ ಸರ್ಜಾ ಚಿತ್ರಕ್ಕೆ ನಾಯಕ ನಟರಾಗಿ ನಟ ಚೇತನ್ ರನ್ನು ಮೊದಲು ಆಯ್ಕೆ ಮಾಡಿದ್ದರಂತೆ. ಇದಕ್ಕಾಗಿ ಚೇತನ್ ಗೆ 10 ಲಕ್ಷ ರೂ ಹಣವನ್ನು ಅಡ್ವಾನ್ಸ್ ಆಗಿ ನೀಡಿದ್ದರಂತೆ. ಆದರೆ ಬಳಿಕ ಕಾರಣಾಂತರ ನಟ ಚೇತನ್ ಆ ಚಿತ್ರದಲ್ಲಿ ಅಭಿನಯಿಸಲು ಸಾಧ್ಯವಾಗಿರಲಿಲ್ಲ. ಆ ಪಾತ್ರಕ್ಕೆ ಕಿರುತೆರೆ ನಟ ಚಂದನ್ ಆಯ್ಕೆಯಾಗಿದ್ದರು. ಸಿನಿಮಾ ಬಿಡುಗಡೆಯಾಗಿ, ಪ್ರೇಕ್ಷಕರ ಮನಗೆದ್ದಿತ್ತು.
ಆದರೆ ಆ ಬಳಿಕ ನಟ ಅರ್ಜುನ್ ಸರ್ಜಾ ನಟ ಚೇತನ್ ಗೆ ನೀಡಿದ್ದ 10 ರೂ ಹಣವನ್ನು ವಾಪಸ್ ಕೇಳಿದ್ದು, ಇದೇ ದ್ವೇಷದಿಂದ ನಟ ಚೇತನ್ ಅರ್ಜುನ್ ವಿರುದ್ಧ #ಮೀಟೂ ಆರೋಪ ಹೊರಿಸಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಆರೋಪ ತಿರಸ್ಕರಿಸಿದ ನಟ ಚೇತನ್?
ಇನ್ನು ತಮ್ಮ ವಿರುದ್ಧ ಕೇಳಿ ಬರುತ್ತಿರುವ ಆರೋಪವನ್ನು ನಟ ಚೇತನ್ ಸಾರಾಸಗಟಾಗಿ ತಿರಸ್ಕರಿಸಿದ್ದು, ಈ ಬಗ್ಗೆ ಮಾತನಾಡಿರುವ ನಟ ಚೇತನ್, 'ನನ್ನ ವಿರುದ್ಧದ ಹತ್ತು ಲಕ್ಷ ರೂಪಾಯಿ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಇದೊಂದು ಷಡ್ಯಂತ್ರವಷ್ಟೇ. ನನ್ನ ಬಳಿ ಅರ್ಜುನ್ ಸರ್ಜಾ ಅವರು ದುಡ್ಡು ಕೇಳಿಯೇ ಇಲ್ಲ. ನನ್ನ ಜೊತೆ ಸರ್ಜಾ ಅವರು ಸ್ನೇಹದಿಂದಲೇ ಇದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಾರೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸುದ್ದಿಗೆ ಗ್ರಾಸವಾಗುತ್ತಿರುವ ಮೀಟೂ ಅಭಿಯಾನ ದಿನಕ್ಕೊಂದು ತಿರುವು ಪಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com