ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರ ಮುಂದಿನ ಬಹು ನಿರೀಕ್ಷಿತ 'ಬೈರತಿ ರಣಗಲ್' ಚಿತ್ರಕ್ಕೆ ಕೆಜಿಎಫ್ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ನೀಡಲಿದ್ದಾರೆ.
ಇತ್ತೀಚೆಗಷ್ಟೇ ಬೈರತಿ ರಣಗಲ್ ಚಿತ್ರತಂಡ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿತ್ತು. ಈ ಬೆನ್ನಲ್ಲೇ ಸಿನಿಮಾ ಬಗ್ಗೆ ಚಿತ್ರತಂಡ ಮತ್ತೊಂದು ಅಪ್‌ಡೇಟ್ ಹಂಚಿಕೊಂಡಿದ್ದು, ಚಿತ್ರ ತಂಡಕ್ಕೆ ಸಂಗೀತ ನಿರ್ದೇಶಕ ರವಿ ಬಸ್ರೂರು ಆಗಮನದ ಕುರಿತು ಚಿತ್ರ ತಂಡ ಮಾಹಿತಿ ನೀಡಿದೆ.
2017ರಲ್ಲಿ ಶ್ರೀಮುರಳಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ‘ಮಫ್ತಿ’ (Mufti) ಸಿನಿಮಾದಲ್ಲಿ ಶಿವಣ್ಣ ನಿರ್ವಹಿಸಿದ್ದ `ಭೈರತಿ ರಣಗಲ್’ ಪಾತ್ರ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾಕ್ಕೆ ಗೆಲ್ಲುವ ಶಕ್ತಿ ತಂದುಕೊಟ್ಟಿದ್ದೇ ಶಿವಣ್ಣನ ಪಾತ್ರ. ಈಗ ಅದೇ ಪಾತ್ರವನ್ನು ಪ್ರಧಾನವಾಗಿರಿಸಿಕೊಂಡು ಸಿನಿಮಾ ತೆರೆಗೆ ಬರುತ್ತಿದ್ದು, ಪಾತ್ರದ ಹೆಸರಾದ `ಭೈರತಿ ರಣಗಲ್’ ಅನ್ನು ಈ ಸಿನಿಮಾಕ್ಕೂ ಇಡಲಾಗಿದೆ. ಭೈರತಿ ರಣಗಲ್ 'ಮಫ್ತಿ' ಚಿತ್ರದ ಪ್ರೀಕ್ವೆಲ್ ಆಗಿದ್ದು, ಚಿತ್ರವನ್ನು ನರ್ತನ್ ನಿರ್ದೇಶನ ಮಾಡಲಿದ್ದಾರೆ.
ಇದೀಗ ಚಿತ್ರದ ನೂತನ ಅಪ್ಡೇಟ್ ನೀಡಲಾಗಿದ್ದು, ಚಿತ್ರಕ್ಕೆ `ಕೆಜಿಎಫ್ 2′ (KGF 2) ಖ್ಯಾತಿಯ ರವಿ ಬಸ್ರೂರು (Ravi Basrur) ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂಬುದನ್ನು ಚಿತ್ರತಂಡ ಘೋಷಿಸಿದೆ. ಈ ಕುರಿತು ಪೋಸ್ಟರ್ ಒಂದನ್ನು ಬಿಡುಗಡೆ ಮಾಡುವ ಮೂಲಕ ರವಿ ಬಸ್ರೂರು ಅವರನ್ನು ತಂಡಕ್ಕೆ ಸ್ವಾಗತಿಸಿದೆ. ಈ ಹಿಂದೆ ಇದೇ ತಂಡದ ಜೊತೆ ಕೈ ಜೋಡಿಸಿ `ಮಫ್ತಿ’ಗೂ ಸಂಗೀತ ನಿರ್ದೇಶನ ಮಾಡಿ ಗೆದ್ದಿದ್ದ ರವಿ ಬಸ್ರೂರು ಈಗ `ಭೈರತಿ ರಣಗಲ್’ ಸಿನಿಮಾಗೂ ಕೆಲಸ ನಿರ್ವಹಿಸಲಿದ್ದಾರೆ. ಈ ಮೂಲಕ ಹಿಟ್ ಕಾಂಬಿನೇಷನ್ ಮತ್ತೆ ಒಂದಾದಂತಾಗಿದೆ.
ಶಿವರಾಜ್ ಕುಮಾರ್ ಅವರ ಹೋಂ ಬ್ಯಾನರ್ ಗೀತಾ ಪಿಕ್ಚರ್ಸ್‌ಗೆ ಇದು ಎರಡನೇ ಸಿನಿಮಾ ಆಗಿದ್ದು, ಮೊದಲ ಸಿನಿಮಾ `ವೇದ’ ಮೂಲಕ ಹಿಟ್ ನೀಡಿರುವ ನಿರ್ಮಾಪಕಿ ಗೀತಾ `ಭೈರತಿ ರಣಗಲ್’ ಪ್ಯಾನ್ ಇಂಡಿಯಾ ಸಿನಿಮಾಗೂ ಸಾಥ್ ನೀಡುತ್ತಿದ್ದಾರೆ. ಸದ್ಯದಲ್ಲಿಯೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
Advertisement