
ಬೆಂಗಳೂರು: ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಗಿಚ್ಚಿಗಿಲಿ ಖ್ಯಾತಿಯ ಹಾಸ್ಯನಟ ಹುಲಿ ಕಾರ್ತಿಕ್ ವಿರುದ್ಧ FIR ದಾಖಲಾಗಿದೆ.
ಕಲರ್ಸ್ ಕನ್ನಡ ವಾಹಿನಿಯ ‘ಅನುಬಂಧ’ ಕಾರ್ಯಕ್ರಮದಲ್ಲಿ ಬೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಗಿಚ್ಚಿಗಿಲಿಗಿಲಿ ಖ್ಯಾತಿಯ ಹಾಸ್ಯನಟ ಹುಲಿ ಕಾರ್ತಿಕ್ (Huli karthik) ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿದೆ.
ಕಳೆದ ತಿಂಗಳು ಖಾಸಗಿ ಚಾನಲ್‌ನಲ್ಲಿ ಪ್ರಸಾರವಾಗಿದ್ದ ಅನುಬಂಧ ಅವಾರ್ಡ್ ಎಂಬ ಕಾರ್ಯಕ್ರಮದಲ್ಲಿ ನಡೆದ ಘಟನೆ ಇದಾಗಿದ್ದು, ಬೋವಿ ಜನಾಂಗಕ್ಕೆ ಅವಮಾನ ಮಾಡುವ ರೀತಿಯಲ್ಲಿ ಪದ ಬಳಕೆ ಮಾಡಲಾಗಿದೆ. ಜತೆಗೆ ಜನಾಂಗವನ್ನು ತುಚ್ಛವಾಗಿ ಕಾಣಲಾಗಿದೆ ಎಂದು ಲೋಕೇಶ್ ಎಂಬುವವರು ದೂರು ನೀಡಿದ್ದರು.
ಹೀಗೆ ಒಂದು ಜನಾಂಗವನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ನಿಷೇಧಿತ ಪದ ಬಳಕೆ ಮಾಡಲಾಗಿದೆ ಎಂದು ದೂರಿನಲ್ಲಿ ಲೋಕೇಶ್ ಆರೋಪಿಸಿದ್ದಾರೆ.
ಇಲ್ಲಿ ಕಾರ್ತಿಕ್ ಮಾತ್ರವಲ್ಲದೆ ಸ್ಕ್ರಿಪ್ಟ್ ರೈಟರ್ , ಕಾರ್ಯಕ್ರಮ ಆಯೋಜಕ, ನಿರ್ಮಾಪಕ , ನಿರ್ದೇಶಕ ವಿರುದ್ಧ ಕೂಡ ದೂರು ದಾಖಲಾಗಿದೆ.
ನಟನಿಂದ ಸ್ಪಷ್ಟನೆ
ಇನ್ನು ಇದಕ್ಕೆ ಸ್ಪಷ್ಟನೆ ನೀಡಿರುವ ನಟ ಕಾರ್ತಿಕ್ , ನಾನು ಹೊಂಡ ಅಂದಿದ್ದೇ ಹೊರತು ಜನಾಂಗಕ್ಕೆ ನೋವಾಗುವ ಶಬ್ಧವನ್ನ ಬಳಕೆ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ಹುಲಿ ಕಾರ್ತಿಕ್ ವಿರುದ್ಧ ಜಾತಿ ನಿಂದನೆ ಆರೋಪದಡಿ ಎಫ್‌ಐಆರ್ ದಾಖಲಾದ ಬೆನ್ನಲ್ಲಿಯೇ ಸ್ಪಷ್ಟೀಕರಣ ನೀಡುವುದಕ್ಕೆ ಒಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
'ಯಾವುದೇ ಸಮುದಾಯವನ್ನು ನೋವಾಗುವ ರೀತಿಯಲ್ಲಿ ಮಾತನಾಡಿಲ್ಲ. ಒಂದು ವೇಳೆ ಜಾತಿ ನಿಂದನೆ ಮಾಡಿದ ಪದದ ರೀತಿ ಕೇಳಿಸಿದ್ದಲ್ಲಿ ಕ್ಷಮಿಸಿ. ಅದರಲ್ಲಿ ನಾವು ಎಲ್ಲ ಸಮುದಾಯವನ್ನು ನಗಿಸುವ ಕೆಲಸ ಮಾಡುತ್ತೇವೆ. ಯಾವುದೇ ಸಮುದಾಯವನ್ನು ನೋವಾಗುವ ರೀತಿಯಲ್ಲಿ ಮಾತನಾಡಿಲ್ಲ. ಯಾವುದೇ ಜಾತಿ, ಧರ್ಮದ ಬಗ್ಗೆ ಹಾಸ್ಯ ಮಾಡುವುದಕ್ಕೆ ಖಾಸಗಿ ವಾಹಿನಿಯಲ್ಲಿ ಅವಕಾಶ ಇರುವುದಿಲ್ಲ. ಸೂಕ್ತವಾಗಿ ವ್ಯವಸ್ಥೆ ಇದ್ದು ಅದರಂತೆ ಸ್ಕ್ರಿಪ್ಟ್ ತಯಾರಾಗುತ್ತದೆ ಎಂದು ಹೇಳಿದ್ದಾರೆ.
ಕಾಮಿಡಿ ಸ್ಕಿಟ್‌ನಲ್ಲಿ ನಾನು ಬಳಸಿರುವ ಪದ 'ಹೊಂಡಾ' ಜಾತಿ ಸೂಚಕ ಪದವಲ್ಲ. ತುಕಾಲಿ ಸಂತೋಷ್ ಹೇಳಿದ ಡೈಲಾಗ್‌ಗೆ ಕೌಂಟರ್ ಡೈಲಾಗ್ ಹೇಳುವಾಗ 'ನೀನು ಗುಂಡನಾ? ರೋಡ್ ನಲ್ಲಿ ಬಿದ್ದಿರುವ ಹೊಂಡಾ ಇದ್ದಂಗ್ ಇದ್ದೀಯಾ' ಎಂದು ಹೇಳಿದ್ದೇನೆ ಎಂದು ನಟ ಹುಲಿ ಕಾರ್ತಿಕ್ ಸ್ಪಷ್ಟನೆ ನೀಡಿದ್ದಾರೆ.
ಸದ್ಯ ಈ ವಿಡಿಯೋ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು ಸ್ಥಳ ಮಹಜರನ್ನು ಮುಗಿಸಿದ್ದಾರೆ. ಇನ್ನು ಕಾರ್ತಿಕ್ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೆಂಗೇರಿ ಉಪವಿಭಾಗ ಎಸಿಪಿಯಿಂದ ವಿಚಾರಣೆಗೆ ಹಾಜರಾಗಲು ಕಾರ್ತಿಕ್‌ಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
Advertisement