
ನಟ ಶಿವರಾಜ್‌ಕುಮಾರ್ ಸದ್ಯ ತಮ್ಮ ಮುಂಬರುವ ಅರ್ಜುನ್ ಜನ್ಯ ನಿರ್ದೇಶನದ '45' ಪ್ರಚಾರದಲ್ಲಿ ನಿರತರಾಗಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ನೆಲ್ಸನ್ ನಿರ್ದೇಶನದ ರಜಿನಿಕಾಂತ್ ನಟನೆಯ 'ಜೈಲರ್ 2' ಚಿತ್ರದ ಭಾಗವಾಗಿರುವುದಾಗಿ ತಿಳಿಸಿದ್ದಾರೆ.
'ಜೈಲರ್ 2' ಚಿತ್ರದಲ್ಲಿ ನೀವು ಕಾಣಿಸಿಕೊಳ್ಳುತ್ತೀರಾ ಎಂದು ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ, 'ಹೌದು. ನಾನು ಜೈಲರ್ 2 ಚಿತ್ರದ ಭಾಗವಾಗಿದ್ದೇನೆ ಎಂದು ನೆಲ್ಸನ್ ನನಗೆ ಹೇಳಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಪ್ರಾರಂಭಿಸಲಾಗಿದ್ದು, ನಾನು ಇನ್ನೂ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ಜೈಲರ್ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಇಷ್ಟೊಂದು ಮಹತ್ವ ಸಿಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ ಎಂದರು.
'ನಾನು ಜೈಲರ್ ಸಿನಿಮಾ ಮಾಡೋಕೆ ಕಾರಣ ರಜನಿಕಾಂತ್ ಸರ್. ಅವರು ನನಗೆ ತಂದೆಯಂತೆ ಮತ್ತು ನಾನು ನೆಲ್ಸನ್‌ಗೆ ಹೇಳಿದ್ದೆ, ಈ ಸಿನಿಮಾದಲ್ಲಿ ನಟಿಸಲು ನನಗೆ ಕಥೆಯ ಅವಶ್ಯಕತೆಯೂ ಇಲ್ಲ ಅಂತ. ರಜನಿ ಸರ್ ಅವರ ಸಿನಿಮಾದಲ್ಲಿ ಒಂದು ಕ್ಷಣ ಕಾಣಿಸಿಕೊಳ್ಳುವ ಪಾತ್ರವಾದರೂ ನಾನು ನಟಿಸಲು ಸಿದ್ಧನಿದ್ದೆ. ಈಗಲೂ ಸಹ, ಜೈಲರ್ ಸಿನಿಮಾದ ನನ್ನ ಪಾತ್ರಕ್ಕೆ ಅಷ್ಟೊಂದು ಮೆಚ್ಚುಗೆ ಏಕೆ ಸಿಕ್ಕಿತು ಎಂದು ನನಗೆ ಅರ್ಥವಾಗುತ್ತಿಲ್ಲ. 'ಜೈಲರ್ ಸಿನಿಮಾದಲ್ಲಿ ನೀನು ಏನು ಮಾಡಿದ್ದೀಯ? ಸಿಗಾರ್ ಹಚ್ಚಿ ಟಿಶ್ಯೂ ಬಾಕ್ಸ್ ತಳ್ಳಿದ್ದೀಯ ಅಷ್ಟೆ ಎಂದು ನನ್ನ ಹೆಂಡತಿ ಕೇಳುತ್ತಾಳೆ. ನನ್ನನ್ನು ಅತ್ಯುತ್ತಮವಾಗಿ ತೋರಿಸಿದ್ದಕ್ಕಾಗಿ ಛಾಯಾಗ್ರಾಹಕರಿಗೆ ಮತ್ತು ಹಿನ್ನೆಲೆ ಸಂಗೀತಕ್ಕಾಗಿ ಅನಿರುದ್ಧ್‌ಗೆ ನಾನು ಕೃತಜ್ಞನಾಗಿರುತ್ತೇನೆ' ಎಂದರು.
ಜೈಲರ್ 2 ನಲ್ಲಿ ನಂದಮೂರಿ ಬಾಲಕೃಷ್ಣ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತೀರಾ ಎಂದು ಮತ್ತೊಬ್ಬ ವರದಿಗಾರ ಕೇಳಿದ್ದಕ್ಕೆ, 'ಚಿತ್ರದಲ್ಲಿ ಬಾಲಕೃಷ್ಣ ಸರ್ ಇದ್ದಾರೆಯೇ ಎಂದು ನನಗೆ ಖಚಿತವಿಲ್ಲ. ನಾನು ನನ್ನ ಪಾತ್ರವನ್ನು ಪುನರಾವರ್ತಿಸುತ್ತೇನೆ ಎಂದು ನೆಲ್ಸನ್ ನನಗೆ ತಿಳಿಸಿದರು. ಆದರೆ, ನಾನು ಬಾಲಕೃಷ್ಣ ಸರ್ ಜೊತೆಗೆ ನಟಿಸಲು ಇಷ್ಟಪಡುತ್ತೇನೆ. ಸರ್ ಮತ್ತು ನಾನು ಎಂದಿಗೂ ತೆರೆಯ ಮೇಲೆ ಒಟ್ಟಿಗೆ ಬಂದಿಲ್ಲ. ಆದರೆ, ನಾವು ತೆರೆಯ ಹಿಂದೆ ತುಂಬಾ ಹತ್ತಿರವಾಗಿದ್ದೇವೆ. ವಾಸ್ತವವಾಗಿ, ಅವರು ನನ್ನ ತಂದೆಯನ್ನು 'ಚಿಕ್ಕಪ್ಪ' ಎಂದು ಕರೆಯುತ್ತಿದ್ದರು. ಅವರು ನಮ್ಮ ಕುಟುಂಬಕ್ಕೆ ತುಂಬಾ ಆಪ್ತರು ಮತ್ತು ಅವರೊಂದಿಗೆ ಕೆಲಸ ಮಾಡುವುದು ಸಂತೋಷವಾಗುತ್ತದೆ' ಎಂದರು.
ಜೈಲರ್ 2 ಚಿತ್ರದ ಚಿತ್ರೀಕರಣ ಸುಮಾರು ಒಂದು ತಿಂಗಳ ಹಿಂದೆ ಚೆನ್ನೈನಲ್ಲಿ ಪ್ರಾರಂಭಗೊಂಡಿತು. ಜೈಲರ್ ಚಿತ್ರದಲ್ಲಿ ಶಿವರಾಜ್‌ಕುಮಾರ್ ಜೊತೆಗೆ ಮೋಹನ್ ಲಾಲ್, ಜಾಕಿ ಶ್ರಾಫ್ ಮತ್ತು ಸುನಿಲ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ವಿನಾಯಕನ್, ರಮ್ಯಾ ಕೃಷ್ಣನ್, ತಮನ್ನಾ ಭಾಟಿಯಾ, ವಸಂತ್ ರವಿ, ಮಿರ್ನಾ ಮೆನನ್ ಮತ್ತು ಯೋಗಿ ಬಾಬು ಮೊದಲ ಚಿತ್ರದಲ್ಲಿ ನಟಿಸಿದ್ದರು.
Advertisement