
ಬೆಂಗಳೂರು: ಬೆಂಗಳೂರಿನ ಅಭಿಮಾನ್ ಸ್ಟುಡಿಯೋನಲ್ಲಿದ್ದ ದಿವಂಗತ ನಟ ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ನಟ ಕಿಚ್ಚಾ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು.. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕವನ್ನು ನೆಲಸಮ ಮಾಡಲಾಗಿದ್ದು, ರಾತ್ರೋರಾತ್ರಿ ಸಮಾಧಿಯನ್ನು ತೆರವುಗೊಳಿಸಲಾಗಿದೆ.
ಅಭಿಮಾನ್ ಸ್ಟುಡಿಯೋದಲ್ಲಿ ಇರುವ ವಿಷ್ಣುವರ್ಧನ್ ಸಮಾಧಿ ಸ್ಥಳಕ್ಕೆ ಅಭಿಮಾನಿಗಳಿಗೆ ಪ್ರವೇಶ ಸಿಗುತ್ತಿಲ್ಲ. ಈಗಾಗಲೇ ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಆಗಿದೆ.
ಆದರೂ ಕೂಡ ಅಂತ್ಯಸಂಸ್ಕಾರ ನಡೆದ ಸ್ಥಳದ ಬಗ್ಗೆ ಅಭಿಮಾನಿಗಳಿಗೆ ಭಾವನಾತ್ಮಕ ನಂಟು ಇತ್ತು. ಆದರೆ ಈಗ ಸಮಾಧಿ ಸ್ಥಳವನ್ನು ನೆಲಸಮ ಮಾಡಲಾಗಿದೆ.
ಅಭಿಮಾನಿಗಳ ಆಕ್ರೋಶ
ಇನ್ನು ವಿಷ್ಣು ಸಮಾಧಿ ನೆಲಸಮ ವಿಚಾರ ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ವಿಷ್ಣು ಅಭಿಮಾನಿಗಳು ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ಅಲ್ಲದೆ ರಾಜ್ಯಾದ್ಯಂತ ಅಭಿಮಾನಿಗಳು ಪ್ರತಿಭಟನೆ ಕೂಡ ನಡೆಸುತ್ತಿದ್ದು, ನಿರ್ದೇಶಕ ರವಿ ಶ್ರೀವತ್ಸ, ನಿರ್ಮಾಪಕ ಕೆ. ಮಂಜು ಕೂಡ ಈ ಕುರಿತು ಧನಿ ಎತ್ತಿದ್ದರು.
'ಕೈ ಚಾಚಿದ್ದು.. ಕಣ್ಣಿರು ಹಾಕಿದ್ದು ಸಾಕು'... ಮೌನ ಮುರಿದ ನಟ Kiccha Sudeep
ಇನ್ನು ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮ ವಿಚಾರ ನಟ ಸುದೀಪ್ ಅವರನ್ನೂ ಕೆರಳಿಸಿದ್ದು, ಈ ವಿಚಾರವಾಗಿ ಇದೇ ಮೊದಲ ಬಾರಿಗೆ ನಟ ಸುದೀಪ್ ಮೌನ ಮುರಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹೇಳಿಕೆ ನೀಡಿರುವ ನಟ ಸುದೀಪ್, 'ವಿಷ್ಣು ಸರ್ ಸಮಾಧಿಯೊಟ್ಟಿಗೆ ಏನು ನಡೆಯಿತೊ ಅದು ನಡೆಯಬಾರದಿತ್ತು. ಇಲ್ಲಿ ಒಂದು ಚೆನ್ನಾಗಿ ಅರ್ಥವಾಗುತ್ತದೆ. ಒಂದೇ ಊರು, ಒಂದೇ ರಾಜ್ಯ, ನಮ್ಮದೇ ಕಲಾವಿದರು ಆದರೆ ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ನ್ಯಾಯ. ನಾವುಗಳು ಓಡಾಡಿದ್ದಾಯ್ತು, ನೀವುಗಳು ಹೋರಾಡಿದ್ದಾಯ್ತು, ಎಲ್ಲರಲ್ಲಿ ಮನವಿ ಮಾಡಿಕೊಂಡಿದ್ದಾಯ್ತು. ದಯವಿಟ್ಟು ಇದನ್ನು ಮಾಡಿಕೊಡಿ, ಸ್ವಲ್ಪ ಕರುಣೆ ತೋರಿಸಿ ಎಂದು ಕೇಳಿಕೊಂಡಿದ್ದಾಯ್ತು. ಅಧಿಕಾರದಲ್ಲಿರುವವರಿಗೆ ಇದು ದೊಡ್ಡ ವಿಷಯ ಆಗಿರಲಿಲ್ಲ. ಅವರ ಸಣ್ಣ ಪ್ರಯತ್ನ ಸಹ ಇಂದು ನಡೆದಿರುವುದನ್ನು ತಡೆಯುತ್ತಿತ್ತು ಎಂದು ಕಿಡಿಕಾರಿದ್ದಾರೆ.
ಅಲ್ಲದೆ, 'ಇನ್ನು ಮುಂದೆ ನಾವು ಭಿಕ್ಷೆ ಬೇಡಬೇಕಾದ ಅವಶ್ಯಕತೆ ಇಲ್ಲ. ಮಾಡಬೇಕು ಎಂದುಕೊಂಡಿದ್ದರೆ ಇಷ್ಟು ಹೊತ್ತಿಗೆ ಮಾಡಿರುತ್ತಿದ್ದರು. ಆದರೆ ಈ ವರೆಗೆ ಮಾಡಿಲ್ಲ ಅಂದರೆ ಅರ್ಥ ಮಾಡಿಕೊಳ್ಳಿ. ಯಾರು? ಏನು? ಹೇಗೆ ಎತ್ತಿಟ್ಟರು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.
ಈಗ ಅದು ಮುಗಿದು ಹೋದ ಕತೆ. ಅದನ್ನು ಬದಿಗಿಟ್ಟು, ನಾವು ಮುಂದೆ ಆಗಬೇಕಾದ ಕೆಲಸಗಳ ಬಗ್ಗೆ ಗಮನ ಹರಿಸೋಣ. ನಾನು ಇತ್ತೀಚೆಗಷ್ಟೆ ವೀರಕಪುತ್ರ ಶ್ರೀನಿವಾಸ್ ಅವರ ಬಳಿ ಮಾತನಾಡುತ್ತಿದ್ದೆ. ಅವರು ಕೆಲವು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಆದಷ್ಟು ಬೇಗ ದೊಡ್ಡ ಪ್ರತಿಮೆ ಕಟ್ಟೋಣ ಎಂದುಕೊಂಡಿದ್ದಾರೆ. ಅದನ್ನು ನಾವು ಮಾಡೋಣ. ಆ ಪ್ರತಿಮೆ ನಿರ್ಮಾಣಕ್ಕೆ ನಾನು ನನ್ನ ಕೈಲಾದ ಸಹಾಯವನ್ನು ಮಾಡಲಿದ್ದೇನೆ’ ಎಂದು ಸುದೀಪ್ ಹೇಳಿದ್ದಾರೆ.
ಹೇಡಿತನದ ಕೃತ್ಯ
ಸಮಾಧಿ ತೆರವು ವಿಚಾರವಾಗಿ ಕೆಂಡವಾಗಿರುವ ನಟ ಸುದೀಪ್, 'ಎಲ್ಲರಿಗೂ ನೋವಾಗಿದೆ. ಈ ಘಟನೆ ಆಗಬಾರದಿತ್ತು. ರಾತ್ರೋರಾತ್ರಿ ಹೀಗೆ ಮಾಡಿದ್ದು ಹೇಡಿತನವೂ ಹೌದು. ಹೀಗೆ ಮಾಡಿದವರು ಹೇಡಿಗಳು. ನೋವಾಗುತ್ತೆ ಆದರೆ ಅದರಿಂದ ಹೊರಗೆ ಬರಬೇಕಿದೆ. ಹತ್ತು ನಿಮಿಷ ಕಣ್ಣೀರು ಹಾಕಿ 11 ನೇ ನಿಮಿಷ ಮುಂದೆ ಏನು ಮಾಡಬೇಕು ಎಂದು ಯೋಚಿಸಿ ಮುಂದೆ ಹೋಗುವುದು ನನ್ನ ಅಭ್ಯಾಸ. ನೀವು ಅದನ್ನೇ ಮಾಡುತ್ತೀರ ಎಂದು ಆಶಿಸುತ್ತೇನೆ. ಕೈ ಚಾಚಿದ್ದು ಸಾಕು. ಮುಂದೆ ಏನು ಮಾಡಬೇಕೊ ಅದನ್ನು ಮಾಡೋಣ’ ಎಂದು ಸುದೀಪ್ ಅಭಿಮಾನಿಗಳಿಗೆ ಧೈರ್ಯ ಹೇಳಿದ್ದಾರೆ.
Advertisement