
"ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು" ಎಂಬ ಗಾದೆ ಮಾತೊಂದಿದೆ. ಅಂದರೆ, ಒಮ್ಮೆ ಆಡಿದ ಮಾತು ಮತ್ತೆ ಹಿಂತಿರುಗುವುದಿಲ್ಲ, ಹಾಗೆಯೇ ಒಡೆದ ಮುತ್ತನ್ನು ಮತ್ತೆ ಜೋಡಿಸಲಾಗುವುದಿಲ್ಲ. ಮಾತುಗಳನ್ನು ಆಡುವಾಗ ಅಥವಾ ಯಾವುದೇ ಕೆಲಸ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು, ಏಕೆಂದರೆ ಒಂದು ಬಾರಿ ಮಾಡಿದ ತಪ್ಪನ್ನು ಸರಿಪಡಿಸುವುದು ಕಷ್ಟ ಎಂದು ಹೇಳುತ್ತದೆ.
ಇದು ಇತ್ತೀಚಿಗೆ ಸಹ ನಟಿಯ ಮೇಲೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜೈಲು ಸೇರಿ ಬಿಡುಗಡೆಯಾಗಿರುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನುಗೆ ಅನ್ವಯವಾಗುತ್ತದೆ.
ಶಿವಣ್ಣ, ದರ್ಶನ್, ಧ್ರುವ ಸರ್ಜಾ ಕುರಿತ ಆಡಿಯೋ: ಹಿರಿಯ ನಟ ಶಿವರಾಜ್ ಕುಮಾರ್ , ದರ್ಶನ್ ಹಾಗೂ ಧ್ರುವ ಸರ್ಜಾ ಕುರಿತು ಮನು ಆಡಿದ ಮಾತುಗಳ ಆಡಿಯೋವೊಂದು ಸಖತ್ ವೈರಲ್ ಆಗುವ ಮೂಲಕ ಅವರ ಅಭಿಮಾನಿಗಳನ್ನು ಕೆರಳಿಸಿತ್ತು. ನಟ ಜಗ್ಗೇಶ್ ಕೂಡಾ ಗರಂ ಆಗಿದ್ದರು. ತದನಂತರ ಕಿರುತೆರೆ ಹಾಗೂ ಹಿರಿತೆರೆಯಿಂದ ಅವರನ್ನು ಬ್ಯಾನ್ ಮಾಡಲಾಗಿತ್ತು. ಜೈಲಿನಿಂದ ಹೊರಬಂದ ಬಳಿಕ ಆ ಆಡಿಯೋ ಕೂಡ ನನ್ನದೇ ಎಂದು ಮಡೆನೂರು ಮನು ಒಪ್ಪಿಕೊಂಡಿದ್ದರು.
ಜೊತೆಗೆ ಆ ರೀತಿ ಮಾತನಾಡುವಂತೆ ಪ್ರಚೋದನೆ ಮಾಡಿದ್ದರು. ನಾನಾಗಿಯೇ ಆ ರೀತಿ ಮಾತನಾಡಿದ್ದಲ್ಲ ಎಂದು ಹೇಳಿಕೊಂಡಿದ್ದರು. ಫಿಲ್ಮ್ ಚೇಂಬರ್‌ಗೂ ಭೇಟಿ ನೀಡಿ ತಮ್ಮ ಮೇಲೆ ಹೇರಿದ್ದ ಬ್ಯಾನ್ ತೆರುವುಗೊಳಿಸಿ ಸಿನಿಮಾ ಹಾಗೂ ಕಿರುತೆರೆಯಲ್ಲಿ ನಟಿಸಲು ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದರು.
ಧ್ರುವ ಸರ್ಜಾ ಹೇಳಿದ್ದು ಏನು?
ನಟ ಶಿವರಾಜ್‌ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ಅವರನ್ನ ನೇರವಾಗಿ ಭೇಟಿ ಮಾಡಿ ಕ್ಷಮೆ ಕೇಳಲು ಪ್ರಯತ್ನ ಪಟ್ಟಿದ್ದರು. ಅದು ಸಾಧ್ಯವಾಗಿರಲಿಲ್ಲ. ಅವರ ಮನವಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದ ಧ್ರುವ ಸರ್ಜಾ, ನನ್ನ ಕುರಿತು ಚಿಂತೆ ಮಾಡಬೇಡ. ನಿನ್ನ ಮನೆ, ಮಕ್ಕಳು ಕುಟುಂಬದ ಕುರಿತು ಕಾಳಜಿ ವಹಿಸು. ಶಿವಣ್ಣ ಮತ್ತು ದರ್ಶನ್ ಸರ್ ಗೆ ಕರೆ ಮಾಡಿ ಮಾತುನಾಡು, ಅವರು ನಮ್ಮ ಹಿರಿಯರು ಎಂದು ಹೇಳಿದ್ದರು.
ಶ್ರೀಮುತ್ತು ನಿವಾಸದ ಹೊರಗೆ ಹಗಲು ರಾತ್ರಿ ಕಾಯುತ್ತಾ ನಿಂತಿದ್ದ ಮನು!
ಅದರಂತೆ ಮಡೆನೂರು ಮನು ಕಳೆದ ಜೂನ್ ನಲ್ಲಿ ಶಿವರಾಜ್ ಕುಮಾರ್ ಅವರ ಮುತ್ತು ನಿವಾಸದೆದುರು ತಮ್ಮ ಪತ್ನಿ ಮತ್ತು ಮಗು ಜೊತೆಗೆ ಹಗಲು ರಾತ್ರಿ ಎನ್ನದೇ ಕಾಯ್ದರೂ ಶಿವಣ್ಣನ ದರ್ಶನ ಸಿಕ್ಕಿರಲಿಲ್ಲ. ಅವರು ಅಮೆರಿಕಕ್ಕೆ ಹೋಗಿದ್ದರು ಎಂಬ ವಿಚಾರವನ್ನು ತದನಂತರ ಮಡೆನೂರು ಮನು ಅವರೇ ವಿಡಿಯೋ ಮೂಲಕ ಹೇಳಿದ್ದರು. ಇದೀಗ ತಾವು ಹಿಂದೆ ಹೇಳಿದ್ದಂತೆ ಶಿವಣ್ಣ ಅವರನ್ನು ಭೇಟಿಯಾಗಿದ್ದು, ಅವರ ಕಾಲಿಗೆ ಎರಗಿ ಕ್ಷಮೆ ಕೇಳಿದ್ದಾರೆ. ಇಂದು ಕಂಠೀರವ ಸ್ಟುಡಿಯೋ ಬಳಿ ಶಿವಣ್ಣ ಬಂದಿದ್ದು, ಅವರು ಕಾರಿನಿಂದ ಇಳಿಯುತ್ತಿದ್ದಂತೆಯೇ ಮಡೆನೂರು ಮನು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ.
ಇದೀಗ ನಟ ಶಿವರಾಜ್ ಕುಮಾರ್ ಅವರನ್ನ ನೇರವಾಗಿ ಭೇಟಿ ಮಾಡಿ, ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ. ತಮ್ಮ 'ಕುಲದಲ್ಲಿ ಕೀಳ್ಯಾವುದೋ ' ಚಿತ್ರವನ್ನು ಮರು ಬಿಡುಗಡೆ ಮಾಡಲು ಬಯಸಿದ್ದು, ನಿಮ್ಮ ಒಪ್ಪಿಗೆ ಬೇಕು ಅಣ್ಣ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಟ ಶಿವರಾಜ್‌ಕುಮಾರ್, ನಟ ಮಡೆನೂರು ಮನುಗೆ ಒಳ್ಳೆಯದಾಗಲಿ, `ಒಳ್ಳೆಯ ಟೈಟಲ್‌ನ ಸಿನಿಮಾ ರಿಲೀಸ್ ಮಾಡಿ. ಕುಲದಲ್ಲಿ ಯಾರೂ ಕೀಳಲ್ಲ, ಮೇಲಲ್ಲ. ಯಾರೇ ಬೈದ್ರೂ, ಹೊಗಳಿದ್ರು ಅದಕ್ಕೆ ನಾನು ತಲೆ ಕೆಡಿಸಿಕೊಳ್ಳಲ್ಲ’ ಎಂದು ತಮ್ಮ ದೊಡ್ಡತನ ಮೆರೆದಿದ್ದಾರೆ.
Advertisement