
ಬೆಂಗಳೂರು: ಕನ್ನಡದ ಮೊಟ್ಟ ಮೊದಲ ಆ್ಯನಿಮೇಷನ್ ಚಿತ್ರ ಮಹಾವತಾರ ನರಸಿಂಹ ಚಿತ್ರದ ಬಾಕ್ಸಾಫಿಸ್ ಅಬ್ಬರ ಮುಂದುವರೆದಿದ್ದು, ಚಿತ್ರದ ಗಳಿಕೆ 300 ಕೋಟಿ ರೂ ದಾಟಿದೆ.
ಅಶ್ವಿನ್ ಕುಮಾರ್ ನಿರ್ದೇಶನದ ಮತ್ತು ಹೊಂಬಾಳೆ ಸಂಸ್ಥೆಯ ನಿರ್ಮಾಣದ ಮಹಾವತಾರ ನರಸಿಂಹ ಚಿತ್ರ ಸತತ 5ನೇ ವಾರವೂ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಕೂಲಿ, ವಾರ್ 2, ಸು ಫ್ರಂ ಸೋ ಚಿತ್ರದ ಬಲಿಷ್ಠ ಪೈಪೋಟಿಯ ಹೊರತಾಗಿಯೂ ಚಿತ್ರವು ತನ್ನ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಆ ಮೂಲಕ ಇದೀಗ ಚಿತ್ರದ ಗಳಿಕೆ ಬರೊಬ್ಬರಿ 300 ಕೋಟಿ ರೂ ದಾಟಿದೆ.
‘ಮಹಾವತಾರ್ ನರಸಿಂಹ’ ಸಿನಿಮಾ ಜುಲೈ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಹೊಂಬಾಳೆ ಫಿಲಮ್ಸ್ನವರ ಬೆಂಬಲದಿಂದಾಗಿ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ದೇಶದೆಲ್ಲೆಡೆ ಪ್ರಮುಖ ನಗರಗಳಲ್ಲಿ ಬಿಡುಗಡೆ ಆಗಿತ್ತು.
ಬಿಡುಗಡೆ ಆಗಿ 31 ದಿನಗಳಲ್ಲೇ ‘ಮಹಾವತಾರ್ ನರಸಿಂಹ’ ಸಿನಿಮಾ 300 ಕೋಟಿ ರೂಪಾಯಿಗೂ ಹೆಚ್ಚಿನ ಗಳಿಕೆ ಮಾಡಿದೆ.
ಇತಿಹಾಸ ಬರೆದ ನರಸಿಂಹ
ಇನ್ನು ತೆರೆಕಂಡು ಬ್ಲಾಕ್ ಬಸ್ಟರ್ ಆದ ಕನ್ನಡದ ಮೊಟ್ಟ ಮೊದಲ ಆ್ಯನಿಮೇಷನ್ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದ್ದ ನರಸಿಂಹ ಚಿತ್ರ ಇದೀಗ ಭಾರತೀಯ ಚಿತ್ರರಂಗದಲ್ಲೇ 300 ಕೋಟಿ ರೂ ಗಳಿಸಿದ ಭಾರತದ ಮೊಟ್ಟ ಮೊದಲ ಆ್ಯನಿಮೇಷನ್ ಚಿತ್ರ ಎಂಬ ಕೀರ್ತಿಗೂ ಭಾಜನವಾಗಿದೆ.
ಹಾಲಿವುಡ್ ಚಿತ್ರಗಳಿಗೂ ಪೈಪೋಟಿ
ಭಾರತದ ಇನ್ಯಾವುದೇ ಅನಿಮೇಷನ್ ಸಿನಿಮಾ ಸಹ ಇಷ್ಟು ದೊಡ್ಡ ಮೊತ್ತದ ಹಣವನ್ನು ಈ ವರೆಗೆ ಗಳಿಕೆ ಮಾಡಿಲ್ಲ. ಭಾರತದ ಅನಿಮೇಷನ್ ಸಿನಿಮಾಗಳು ಮಾತ್ರವೇ ಅಲ್ಲದೆ, ವಿದೇಶದ ಅನಿಮೇಷನ್ ಸಿನಿಮಾಗಳು ಸಹ ಭಾರತದಲ್ಲಿ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿಲ್ಲ.
ಕಳೆದೆರಡು ವರ್ಷಗಳಲ್ಲಿ ಬಿಡುಗಡೆ ಆದ ‘ಸ್ಪೈಡರ್ಮ್ಯಾನ್’, ‘ಡಾಕ್ಟರ್ ಸ್ಟ್ರೇಂಜ್’, ‘ಥಾರ್’, ‘ಅವತಾರ್’ ಸಿನಿಮಾಗಳೂ ಸಹ ಇಷ್ಟು ದೊಡ್ಡ ಮೊತ್ತದ ಹಣವನ್ನು ಭಾರತದ ಬಾಕ್ಸ್ ಆಫೀಸ್ನಲ್ಲಿ ಗಳಿಕೆ ಮಾಡಿಲ್ಲ ಎಂಬುದು ಗಮನಾರ್ಹ.
ಹಿಂದೆಯಲ್ಲಿ ನರಸಿಂಹ ಚಿತ್ರವು ಈ ವರೆಗೂ 173 ಕೋಟಿ ರೂ ಗಳಿಕೆ ಕಂಡಿದ್ದು, 4ನೇ ವಾರಾಂತ್ಯದಲ್ಲಿ 8.68 ಕೋಟಿ ರೂ ಗಳಿಕೆ ಕಂಡಿದ್ದು ಆ ಮೂಲಕ ಚಿತ್ರವು ತನ್ನ ಗಳಿಕೆಯನ್ನು ಹಿಂದಿಯಲ್ಲಿ 173 ಕೋಟಿ ರೂಗೆ ಏರಿಕೆ ಮಾಡಿಕೊಂಡಿದೆ.
Advertisement