

ಬೆಂಗಳೂರು: ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಖ್ಯಾತ ಗಾಯಕಿ ವಾರಿಜ ಶ್ರೀ ಮತ್ತು ರಘು ಧೀಕ್ಷಿತ್ ಜೊತೆಗಿನ ಮದುವೆ ಫೋಟೋಗಳು ಇದೀಗ ವೈರಲ್ ಆಗುತ್ತಿವೆ.
ಹೌದು.. ಖ್ಯಾತ ಗಾಯಕ ರಘು ದೀಕ್ಷಿತ್ ಅವರು ತಮ್ಮ ಜೀವನದ ಹೊಸ ಅಧ್ಯಾಯ ಆರಂಭಿಸಿದ್ದು, 50 ವರ್ಷ ವಯಸ್ಸಿನ ರಘು ದೀಕ್ಷಿತ್ ಅವರು ಗ್ರ್ಯಾಮಿ ನಾಮನಿರ್ದೇಶಿತ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಅವರ ಜೊತೆ ಇಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಇವರಿಬ್ಬರ ಮದುವೆ ಶಾಸ್ತ್ರೋಕ್ತವಾಗಿ ನೆರವೇರಿದೆ.
ಗಾಯಕ ರಘು ದೀಕ್ಷಿತ್ ಮತ್ತು ವಾರಿಜಶ್ರೀ ವೇಣುಗೋಪಾಲ್ ಅವರು ಈ ತಿಂಗಳಾಂತ್ಯಕ್ಕೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಸುದ್ದಿಯಾಗಿತ್ತು. ವಾರಿಜಶ್ರೀ ವೇಣುಗೋಪಾಲ್ ಅವರು ಗ್ರ್ಯಾಮಿ ನಾಮನಿರ್ದೇಶಿತ ಗಾಯಕಿ ಮತ್ತು ಕೊಳಲು ವಾದಕಿಯಾಗಿದ್ದು, ಸಂಗೀತ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದಾರೆ.
ಇನ್ನು ರಘು ದೀಕ್ಷಿತ್ ಮತ್ತು ವಾರಿಜ ಶ್ರೀ ಮದುವೆಗೆ ಸಿನಿ ಲೋಕದ ನಟರು ಹಾಜರಾಗಿದ್ದರು. ನಟಿ ಯಮುನಾ ಶ್ರೀನಿಧಿ, ಅಯ್ಯೋ ಶ್ರದ್ಧಾ ಸೇರಿದಂತೆ ಹಲವರು ಮದುವೆಗೆ ಹಾಜರಾಗಿದ್ದರು. ಈ ಕುರಿತ ಫೋಟೋಗಳನ್ನು ನಟಿ ಯಮುನಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಂದಹಾಗೆ 50 ವರ್ಷ ವಯಸ್ಸಿನ ರಘು ದೀಕ್ಷಿತ್ ಅವರಿಗೆ ಇದು 2ನೇ ಮದುವೆಯಾಗಿದ್ದು, ಈ ಮೊದಲು (2005) ಅವರು ಡ್ಯಾನ್ಸರ್ ಮಯೂರಿ ಉಪಾಧ್ಯ ಜೊತೆ ವಿವಾಹವಾಗಿದ್ದರು. 2019ರಲ್ಲಿ ಅವರಿಬ್ಬರು ವಿಚ್ಛೇದನ ಪಡೆದಿದ್ದರು. ಬಳಿಕ ಇನ್ನೊಂದು ಮದುವೆ ಬಗ್ಗೆ ರಘು ದೀಕ್ಷಿತ್ ಅವರು ಆಲೋಚನೆ ಮಾಡಿರಲಿಲ್ಲ. ಆದರೆ ವಾರಿಜಶ್ರೀ ಜೊತೆ ಒಡನಾಟ ಬೆಳೆದ ಬಳಿಕ ಮದುವೆ ಬಗ್ಗೆ ನಿರ್ಧರಿಸಿದರು. ವಾರಿಜಶ್ರೀ ಅವರಿಗೆ ಈಗ 34 ವರ್ಷ ವಯಸ್ಸು.
Advertisement