
ಬೆಂಗಳೂರು: ಕನ್ನಡದ ಖ್ಯಾತ ಬರಹಗಾರ-ನಿರ್ದೇಶಕ ಎಸ್ಎಸ್ ಡೇವಿಡ್ ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು.
ಜೈ ಹಿಂದ್ (1998) ಮತ್ತು ಸುಪಾರಿ (2001) ಚಿತ್ರಗಳನ್ನು ನಿರ್ದೇಶಿಸಿದ್ದ ಡೇವಿಡ್, ಭಾನುವಾರ ಮೆಡಿಕಲ್ ಶಾಪ್‌ನಿಂದ ಮನೆಗೆ ಹಿಂತಿರುಗುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ರಾಜರಾಜೇಶ್ವರಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸಂಜೆ 7.30ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ನಿರ್ದೇಶನದ ಹೊರತಾಗಿ, ಡೇವಿಡ್ ಅವರು ಪೊಲೀಸ್ ಸ್ಟೋರಿ (1996), ಅಗ್ನಿ ಐಪಿಎಸ್ (1997), ಧೈರ್ಯ (1997), ಸಿಂಹದ ಮರಿ (1997), ಹಾಯ್ ಬೆಂಗಳೂರು (1997), ಇಂಡಿಪೆಂಡೆನ್ಸ್‌ಡೆ (2000), ಮಂಡ್ಯ (2006), ತಿರುಪತಿ (2006) ಮತ್ತು ಪೊಲೀಸ್ ಸ್ಟೋರಿ 2 (2007) ಸೇರಿದಂತೆ ಹಲವಾರು ಕನ್ನಡ ಚಿತ್ರಗಳಿಗೆ ಚಿತ್ರಕಥೆಗಳನ್ನು ಬರೆದಿದ್ದಾರೆ.
ನಿರ್ದೇಶನ, ಚಿತ್ರಕಥೆ, ಸಂಭಾಷಣೆ ಮತ್ತು ವಿಶಿಷ್ಟ ಮ್ಯಾನರಿಸಂಗಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಡೇವಿಡ್, ಸಾಯಿಕುಮಾರ್ ನಟಿಸಿದ ಪ್ರಸಿದ್ಧ ಪೊಲೀಸ್ ಸ್ಟೋರಿ ಮತ್ತು ಅಗ್ನಿ ಐಪಿಎಸ್ ನಂತಹ ಚಿತ್ರಗಳಿಗೆ ಸಂಭಾಷಣೆಗಳನ್ನು ಬರೆದಿದ್ದಾರೆ.
ನಟ ಸಾಯಿ ಕುಮಾರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಸಂತಾಪ ಸೂಚಿಸಿದ್ದಾರೆ. 'ತೀವ್ರವಾಗಿ ದುಃಖಿತನಾಗಿದ್ದೇನೆ. ನಿಮ್ಮ ಸಂಭಾಷಣೆಗಳ ಮೂಲಕ ನೀವು ಯಾವಾಗಲೂ ಜೀವಂತವಾಗಿರುತ್ತೀರಿ, ಡೇವಿಡ್. ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು... #RIP #SSDavid' ಎಂದು ಬರೆದಿದ್ದಾರೆ.
ಎಸ್‌ಎಸ್ ಡೇವಿಡ್ ಅವರ ನಿಧನಕ್ಕೆ ಹಲವಾರು ಕಲಾವಿದರು, ಸಾಹಸ ಕಲಾವಿದರು ಮತ್ತು ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.
Advertisement