

ಬೆಂಗಳೂರು: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಚಿತ್ರ '45' ಸಿನಿಮಾ ಶೀರ್ಷಿಕೆ ಕುರಿತು ನಟ ಮಿತ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸೌಜನ್ಯಕ್ಕೂ ನನ್ನ ಹೆಸರು ಹೇಳಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಅರ್ಜುನ್ ಜನ್ಯ ನಿರ್ದೇಶನದ, ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಕೆಲವರಿಂದ ಮೆಚ್ಚುಗೆ ಪಡೆಯಿತು. ಈಗ ಚಿತ್ರ ಒಟಿಟಿಗೂ ಬಂದಿದೆ. ಈ ನಡುವೆ ಚಿತ್ರದ ಟೈಟಲ್ ವಿಚಾರ ಸುದ್ದಿಗೆ ಗ್ರಾಸವಾಗಿದ್ದು ಈ ಚಿತ್ರದ ಟೈಟವ್ ನನ್ನದು ಎಂದು ನಟರೊಬ್ಬರು ಹೇಳಿಕೊಂಡಿದ್ದಾರೆ.
‘45’ ಅನ್ನೋದು ಸಿನಿಮಾದ ಕಥೆಗೆ ಹೆಚ್ಚು ಸೂಕ್ತ. ಹೀಗಾಗಿ, ಈ ಟೈಟಲ್ ಇಡಲಾಗಿದೆ. ಸಿನಿಮಾ ವೀಕ್ಷಿಸಿದವರಿಗೆ ‘45’ ಎಂಬ ಟೈಟಲ್ ಯಾಕೆ ಇಡಲಾಗಿದೆ ಎಂಬುದು ಮನದಟ್ಟಾಗುತ್ತದೆ. ಈ ಟೈಟಲ್ ಇಡೋಣ ಎಂದು ನಿರ್ದೇಶಕರು ಹಾಗೂ ನಿರ್ಮಾಪಕರು ನಿರ್ಧರಿಸಿದ್ದರು.
ಟೈಟಲ್ ನನ್ನದು ಎಂದ ನಟ ಮಿತ್ರ
ಈಗ ಟೈಟಲ್ ವಿಷಯಕ್ಕೆ ಸಂಬಂಧಿಸಿದಂತೆ ಸಿನಿಮಾ ಹಾಗೂ ಕಿರುತೆರೆ ಕಲಾವಿದ ಮಿತ್ರ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ್ದು, ‘ಟೈಟಲ್ ನನ್ನದಾಗಿತ್ತು, ಅವರಿಗೆ ನೀಡಿದ್ದೇನೆ’ ಎಂದಿದ್ದಾರೆ.
ಚಿತ್ರ 45 ಟೈಟಲ್ ಇಡಲು ನಿರ್ಧರಿಸಿದಾಗ ನಟ ಮಿತ್ರ ಅವರು ಈ ಶೀರ್ಷಿಕೆ ನೋಂದಣಿ ಮಾಡಿಸಿದ ವಿಷಯ ಗೊತ್ತಾಗಿದೆ. ಹೀಗಾಗಿ, ಟೈಟಲ್ನ ಅವರ ಬಳಿ ಕೇಳಿ ಪಡೆದರು ನಿರ್ಮಾಪಕ ರಮೇಶ್ ರೆಡ್ಡಿ. ಸೌಜನ್ಯಕ್ಕೆ ಒಮ್ಮೆ ಹೆಸರನ್ನಾದರೂ ಹೇಳಬಹುದಿತ್ತು ಎಂಬುದು ಮಿತ್ರ ಅವರ ಅಭಿಪ್ರಾಯವಾಗಿತ್ತು.
‘45 ಟೈಟಲ್ ಕೊಟ್ಟಿದ್ದೇ ನಾನು. ನನ್ನ ಬ್ಯಾನರ್ ಅಡಿಯಲ್ಲಿ ಸಿನಿಮಾ ನೋಂದಣಿ ಮಾಡಿಸಿದ್ದೆ. ರಮೇಶ್ ರೆಡ್ಡಿ ಅವರು ಕರೆ ಮಾಡಿದರು. ನಮ್ಮ ಕಥೆಗೆ ಈ ಶೀರ್ಷಿಕೆ ಹೊಂದಾಣಿಕೆ ಆಗುತ್ತಿದೆ, ಟೈಟಲ್ ಬೇಕಿತ್ತು. ಅರ್ಜುನ್ ಜನ್ಯ ನಿರ್ದೇಶನ ಇದೆ ಎಂದು ವಿವರಿಸಿದರು. ಹಣ ನೀಡೋಕೆ ಬಂದರು.
ನಾನು ಬೇಡ ಎಂದೆ. ಥ್ಯಾಂಕ್ಸ್ ಕಾರ್ಡ್ ಹಾಕ್ತಾರೆ ಅಥವಾ ಸಂದರ್ಶನದಲ್ಲಿ ಹೇಳ್ತಾರೆ ಎಂದುಕೊಂಡಿದ್ದೆ. ಕೊನೆಪಕ್ಷ ಅರ್ಜುನ್ ಜನ್ಯ ನನೆಪಿಸಿಕೊಳ್ಳುತ್ತಾರೆ ಎಂದುಕೊಂಡಿದ್ದೆ. ಆದರೆ, ಏನೂ ಮಾಡಿಲ್ಲ. ಪ್ರೀತಿಯಿಂದ ಟೈಟಲ್ ಬಿಟ್ಟು ಕೊಟ್ಟಿದ್ದೇನೆ, ಹಣ ನಿರೀಕ್ಷಿಸಿಲ್ಲ. ಬ್ಯುಸಿ ಇಂದ ಮರೆತು ಹೋಗಿರಬಹುದು. ಸೇವೆನ ಪರಿಗಣಿಸಬೇಕಿತ್ತು ಎಂಬುದು ನನ್ನ ಅಭಿಪ್ರಾಯ' ಎಂದು ಮಿತ್ರ ಹೇಳಿದ್ದಾರೆ.
Advertisement