

ಕಲರ್ಸ್ ಸ್ವಾತಿ ಎಂದೇ ಜನಪ್ರಿಯರಾಗಿರುವ ಖ್ಯಾತ ತೆಲುಗು ನಟಿ ಸ್ವಾತಿ ರೆಡ್ಡಿ ಅವರು ಕೇರಳದ ಪೈಲಟ್ ಗಂಡನಿಗೆ ಡಿವೋರ್ಸ್ ನೀಡಿದ ಬಳಿಕ ಈಗ ಸದ್ದಿಲ್ಲದೇ ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಟಿ ಸ್ವಾತಿ ರೆಡ್ಡಿ ಅವರು 'ಮಂತ್ ಆಫ್ ಮಧು' ನಿರ್ದೇಶಕ ಶ್ರೀಕಾಂತ್ ನಾಗೋಟಿ ಅವರ ಜೊತೆ ಹೊಸ ಜೀವನ ಆರಂಭಿಸಿದ್ದಾರೆ. ಬುಧವಾರ ನಡೆದ ಖಾಸಗಿ ಸಮಾರಂಭದಲ್ಲಿ ಶ್ರೀಕಾಂತ್ ನಾಗೋಟಿ ಅವರೊಂದಿಗೆ ಸ್ವಾತಿ ಹೊಸ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
'ಕಲರ್ಸ್' ಎನ್ನುವ ಟಿವಿ ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಸ್ವಾತಿ ಅವರು ಶ್ರೀಕಾಂತ್ ಅವರೊಂದಿಗೆ ಜುಲೈ 8, 2026 ರಂದು ಎರಡನೇ ಮದುವೆಯಾಗಿದ್ದು, ಮದುವೆಯ ಫೋಟೋಗಳನ್ನು ಪೋಸ್ಟ್ ಮಾಡಿ, ''ಮದುವೆಯಾಗಿದೆ'' ಎಂಬ ಒಂದೇ ಪದದ ಕ್ಯಾಪ್ಷನ್ ಕೊಟ್ಟಿದ್ದಾರೆ.
ಸರಳವಾಗಿ ನಡೆದ ಈ ಮದವೆ ಸಮಾರಂಭದಲ್ಲಿ ಆತ್ಮೀಯರು, ಕುಟುಂಬ ಸದಸ್ಯರು ಮತ್ತು ಪ್ರೀತಿಪಾತ್ರರು ಮಾತ್ರ ಭಾಗವಹಿಸಿದ್ದರು.
ಶ್ರೀಕಾಂತ್ ನಾಗೋಟಿ ಅವರು 2023ರಲ್ಲಿ ಬಿಡುಗಡೆಯಾದ ಭಾವನಾತ್ಮಕ ಚಿತ್ರ 'ಮಂತ್ ಆಫ್ ಮಧು'ಗೆ ನಿರ್ದೇಶನ ಮಾಡಿದ್ದು, ಇದೇ ಚಿತ್ರದ ಮೂಲಕ ಸ್ವಾತಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದರು. ಹಲವು ವರ್ಷಗಳ ವಿರಾಮದ ಬಳಿಕ ಸ್ವಾತಿ ಮತ್ತೆ ಬೆಳ್ಳಿತೆರೆಗೆ ಮರಳಿದ್ದರು. ಈ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ ವೇಳೆ ಇಬ್ಬರ ನಡುವೆ ಆತ್ಮೀಯತೆ ಬೆಳೆದು, ಅದು ಪ್ರೀತಿಗೆ ತಿರುಗಿ ಈಗ ಮದುವೆ ಆಗಿದೆ.
ಸ್ವಾತಿ ರೆಡ್ಡಿ ಅವರು 2018ರಲ್ಲಿ ಕೇರಳ ಮೂಲದ ಅಂತರರಾಷ್ಟ್ರೀಯ ಪೈಲಟ್ ವಿಕಾಸ್ ವಾಸು ಅವರನ್ನು ವಿವಾಹವಾಗಿದ್ದರು. ಮದುವೆಯ ನಂತರ ಅವರು ವೈಯಕ್ತಿಕ ಜೀವನವನ್ನು ಬಹಳ ಖಾಸಗಿಯಾಗಿ ಇಟ್ಟುಕೊಂಡಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಸ್ವಾತಿ ಮತ್ತು ವಿಕಾಸ್ ವಿಚ್ಛೇದನ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಎರಡನೇ ಮದುವೆ ಮೂಲಕ ಆ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ.