

ಬೆಂಗಳೂರು: ಮೆಜೆಸ್ಟಿಕ್ ಸೇರಿದಂತೆ ಹಲವಾರು ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕ ಭಾಮಾ ಹರೀಶ್ ಪುತ್ರ 28 ವರ್ಷದ ಉಲ್ಲಾಸ್ ಗೌಡ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿಗೆ ಟ್ರೆಕ್ಕಿಂಗ್ ಗೆ ತೆರಳಿದ್ದಾಗ ಉಲ್ಲಾಸ್ ಗೌಡಗೆ ಹೃದಯಾಘಾತವಾಗಿತ್ತು.
ಉಲ್ಲಾಸ್ ಗೌಡ ಇತ್ತೀಚೆಗೆ ಚಂದನ ಗೌಡ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವರ್ಷದ ಕೊನೆಯಲ್ಲಿ ಅವರ ವಿವಾಹ ನಡೆಯಬೇಕಿತ್ತು. ಮದುವೆಗೆ ಮುನ್ನ ಅವರ ಹಠಾತ್ ಸಾವು ಕುಟುಂಬಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ.
ಉಲ್ಲಾಸ್ ಗೌಡ ಒಬ್ಬ ಉದ್ಯಮಿಯಾಗಿದ್ದು ಅವರ ಸ್ನೇಹಪರ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದರು. ಅವರು ಇತ್ತೀಚೆಗೆ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಭಾಮಾ ಹರೀಶ್ ಕನ್ನಡ ಚಲನಚಿತ್ರೋದ್ಯಮದ ಹಿರಿಯ ನಿರ್ಮಾಪಕ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದರು.