

ಬೆಂಗಳೂರು: ಕಾಂತಾರ ಚಿತ್ರದ ಬಳಿಕ ನಟ-ನಿರ್ದೇಶಕ ರಿಷಬ್ ಶೆಟ್ಟಿ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಪಟ್ಟಿಯನ್ನು ನಾಟಕೀಯವಾಗಿ ಕಡಿಮೆ ಮಾಡಿಕೊಂಡು, ಅವರ ದೀರ್ಘಕಾಲದ ಸ್ನೇಹಿತರಾದ ರಕ್ಷಿತ್ ಶೆಟ್ಟಿ ಸೇರಿದಂತೆ ಹಲವಾರು ಆಪ್ತರನ್ನು ಅನ್‌ಫಾಲೋ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದಾರೆ.
ಯುಗಾದಿ ಹಬ್ಬದ ಸ್ವಲ್ಪ ಸಮಯದ ನಂತರ, ರಿಷಬ್ ತಮ್ಮ ಮುಂಬರುವ ಚಿತ್ರದ ಬಗ್ಗೆ ಸುಳಿವು ನೀಡಿ ಹೊಂಬಾಳೆ ಫಿಲ್ಮ್ಸ್ ಅನ್ನು ಸದ್ದಿಲ್ಲದೆ ಅನ್‌ಫಾಲೋ ಮಾಡಿದ್ದರು. ಇದು ಅಭಿಮಾನಿಗಳಲ್ಲಿ ಹಲವು ರೀತಿಯ ಊಹಾಪೋಹಗಳಿಗೆ ಕಾರಣವಾಯಿತು.
ವದಂತಿಗಳು ಹರಡಲು ಪ್ರಾರಂಭಿಸುತ್ತಿದ್ದಂತೆ, ನಟ ರಿಷಬ್ ರುಕ್ಮಿಣಿ ವಸಂತ್ ಮತ್ತು ರಾಜ್ ಬಿ ಶೆಟ್ಟಿ ಅವರನ್ನೂ ಅನ್‌ಫಾಲೋ ಮಾಡಿದ್ದು ಉಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಯಿತು. ಇದು ಆನ್‌ಲೈನ್‌ನಲ್ಲಿ ಚರ್ಚೆಗಳನ್ನು ತೀವ್ರಗೊಳಿಸಿತು.
ಆದಾಗ್ಯೂ, ಅನೇಕರನ್ನು ಆಶ್ಚರ್ಯಚಕಿತಗೊಳಿಸಿದ್ದು, ರಕ್ಷಿತ್ ಶೆಟ್ಟಿಯನ್ನೂ ಅನ್‌ಫಾಲೋ ಮಾಡುವ ಅವರ ನಿರ್ಧಾರ. ಇದು ವ್ಯಾಪಕ ಕುತೂಹಲಕ್ಕೆ ಕಾರಣವಾಯಿತು.
ಇನ್‌ಸ್ಟಾಗ್ರಾಮ್‌ನಲ್ಲಿ 1.7 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ರಿಷಬ್, ಇಲ್ಲಿಯವರೆಗೆ 450 ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಸುಮಾರು ಎರಡು ವಾರಗಳ ಹಿಂದಿನವರೆಗೆ, ಅವರು 140 ಕ್ಕೂ ಹೆಚ್ಚು ಖಾತೆಗಳನ್ನು ಫಾಲೋ ಮಾಡುತ್ತಿದ್ದ ರಿಷಬ್ ಇದೀಗ ಈ ಸಂಖ್ಯೆಯನ್ನು ಬೆರಳೆಣಿಕೆಯಷ್ಟು ಸಂಖ್ಯೆಗೆ ಇಳಿಸಿಕೊಂಡಿದ್ದಾರೆ.
ಪ್ರಸ್ತುತ, ಅವರು ತಮ್ಮ ಪತ್ನಿ ಪ್ರಗತಿ ಶೆಟ್ಟಿ, ಅವರ ನಿರ್ಮಾಣ ಬ್ಯಾನರ್ ರಿಷಬ್ ಶೆಟ್ಟಿ ಫಿಲ್ಮ್ಸ್ ಮತ್ತು ರಿಷಬ್ ಶೆಟ್ಟಿ ಫೌಂಡೇಶನ್ ಅನ್ನು ಮಾತ್ರ ಫಾಲೋಮಾಡುತ್ತಿದ್ದಾರೆ. ಆದಾಗ್ಯೂ, ಈ ಸಾಮಾಜಿಕ ಮಾಧ್ಯಮ ಬದಲಾವಣೆಯಲ್ಲಿ ಒಂದು ಕುತೂಹಲಕಾರಿ ವ್ಯತ್ಯಾಸ ಕಂಡುಬಂದಿದೆ.
ರಿಷಬ್ ಶೆಟ್ಟಿ ಹಲವಾರು ನಟರು ಮತ್ತು ಸಹಯೋಗಿಗಳನ್ನು ವೈಯಕ್ತಿಕವಾಗಿ ಅನ್‌ಫಾಲೋ ಮಾಡಿದ್ದರೂ, ಅವರ ನಿರ್ಮಾಣ ಬ್ಯಾನರ್ ರಿಷಬ್ ಶೆಟ್ಟಿ ಫಿಲ್ಮ್ಸ್ ಯಶ್, ರಾಧಿಕಾ ಪಂಡಿತ್, ರಾಜ್ ಬಿ ಶೆಟ್ಟಿ ಸೇರಿದಂತೆ ಹಲವಾರು ಉದ್ಯಮದ ಪ್ರಮುಖರ ಖಾತೆಗಳನ್ನು ಫಾಲೋ ಮಾಡುತ್ತಲೇ ಇದೆ.
ಕೆಲವು ಸಮಯದಿಂದ, ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಜೊತೆಗೆ ಹೊಂಬಾಳೆ ಫಿಲ್ಮ್ಸ್‌ನೊಂದಿಗಿನ ಭಿನ್ನಾಭಿಪ್ರಾಯಗಳ ಬಗ್ಗೆ ವರದಿಯಾಗಿದೆ.
ಅವರ ಇತ್ತೀಚಿನ ಸಾಮಾಜಿಕ ಮಾಧ್ಯಮ ಚಟುವಟಿಕೆಯು ಈ ವದಂತಿಗಳಿಗೆ ಮತ್ತಷ್ಟು ಇಂಬು ನೀಡಿದೆ. ಆದರೂ ಇಲ್ಲಿಯವರೆಗೆ ಯಾವುದೇ ಅಧಿಕೃತ ಸ್ಪಷ್ಟೀಕರಣವನ್ನು ನೀಡಲಾಗಿಲ್ಲ.
ಪ್ರಸ್ತುತ ರಿಷಬ್ ಶೆಟ್ಟಿ ಪ್ರಶಾಂತ್ ವರ್ಮಾ ನಿರ್ದೇಶನದ ಜೈ ಹನುಮಾನ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಹಂಪಿಯಲ್ಲಿ ಚಿತ್ರೀಕರಣಗೊಂಡ ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಕಥಾವಸ್ತುವಿನ ವಿವರಗಳು ಲಭ್ಯವಾಗಿಲ್ಲವಾದರೂ, ಕಥೆ ಹನುಮನ ಶೌರ್ಯ, ಭಕ್ತಿ ಮತ್ತು ಆದರ್ಶಗಳ ಸುತ್ತ ಸುತ್ತುತ್ತದೆ ಎಂದು ನಿರೀಕ್ಷಿಸಲಾಗಿದೆ.
Advertisement