16 ವರ್ಷಗಳ ಹಿಂದೆ ವಿಚ್ಚೇದನ, ಮುರಿದು ಬಿದ್ದ 2ನೇ ಮದುವೆ, ಕೊನೆಗೂ ಒಂದಾದ ತಾರಾ ದಂಪತಿ ರಂಜಿತ್-ಪ್ರಿಯಾ ರಮಣ್!

ದಕ್ಷಿಣ ಭಾರತದ ಖ್ಯಾತ ನಟರಾದ ರಂಜಿತ್ ಮತ್ತು ಪ್ರಿಯಾ ರಮಣ್ ಇಂತಹ ಅಪರೂಪದ ಪ್ರೇಮಕಥೆಗೆ ಸಾಕ್ಷಿಯಾಗಿದ್ದಾರೆ. 16 ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದ ಈ ಜೋಡಿ, ರಂಜಿತ್ ಅವರ ಎರಡನೇ ಮದುವೆಯೂ ಮುರಿದುಬಿದ್ದ ಬಳಿಕ..
Ranjith and Priya Raman reunited despite his second marriage
ಪ್ರಿಯಾ ರಮಣ್ ಮತ್ತು ರಂಜಿತ್ ಜೋಡಿ
Updated on: 

ಚೆನ್ನೈ: ನಟ ಶಿವರಾಜ್ ಕುಮಾರ್ ಜೊತೆ 1995ರಲ್ಲಿ ಮನ ಮಿಡಿಯಿತು ಚಿತ್ರದಲ್ಲಿ ನಟಿಸಿದ್ದ ನಟಿ ಪ್ರಿಯಾ ರಮಣ್ ವಿಚ್ಚೇದನ ಪಡೆದ 16 ವರ್ಷಗಳ ಬಳಿಕ ಮತ್ತೆ ತಮ್ಮ ಮೊದಲ ಗಂಡನ ಸೇರಿದ್ದಾರೆ.

ಚಿತ್ರರಂಗದಲ್ಲಿ ಪ್ರೀತಿ, ಮದುವೆ ಮತ್ತು ವಿಚ್ಛೇದನದ ಸುದ್ದಿಗಳು ಹೊಸದೇನಲ್ಲ. ಆದರೆ ವಿಚ್ಛೇದನ ಪಡೆದು ಹಲವು ವರ್ಷಗಳ ಕಾಲ ದೂರವಾಗಿದ್ದ ದಂಪತಿ ಮತ್ತೆ ಒಂದಾಗುವುದು ಅಪರೂಪ.

ದಕ್ಷಿಣ ಭಾರತದ ಖ್ಯಾತ ನಟರಾದ ರಂಜಿತ್ ಮತ್ತು ಪ್ರಿಯಾ ರಮಣ್ ಇಂತಹ ಅಪರೂಪದ ಪ್ರೇಮಕಥೆಗೆ ಸಾಕ್ಷಿಯಾಗಿದ್ದಾರೆ. 16 ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದ ಈ ಜೋಡಿ, ರಂಜಿತ್ ಅವರ ಎರಡನೇ ಮದುವೆಯೂ ಮುರಿದುಬಿದ್ದ ಬಳಿಕ ಮತ್ತೆ ಒಂದಾಗಿದೆ.

Ranjith and Priya Raman reunited despite his second marriage
ಹಂದಿ ಹೋಲುವ ವ್ಯಕ್ತಿ: ನಮ್ಮ ಯೋಗಿ ಬಾಬುಗಿಂತಲೂ ಕಡೆ; ತಮಿಳು ನಟನಿಂದ ದುನಿಯಾ ವಿಜಯ್ ಅವಹೇಳನ!

1993ರಲ್ಲಿ ಚಿತ್ರರಂಗಕ್ಕೆ ಎಂಟ್ರಿ

ರಂಜಿತ್ ಮತ್ತು ಪ್ರಿಯಾ ರಮಣ್ ಇಬ್ಬರೂ 1993ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ರಂಜಿತ್ ಅವರು ರಹಮಾನ್ ಮತ್ತು ರಮ್ಯಾ ಕೃಷ್ಣನ್ ಅಭಿನಯದ 'ಪೊನ್ ವಿಲಂಗು' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಪ್ರಿಯಾ ರಮಣ್ ಅವರು ರಜನಿಕಾಂತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ 'ವಲ್ಲಿ' ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.

ರಂಜಿತ್ ತಮಿಳು ಚಿತ್ರರಂಗದಲ್ಲಿ ಖಳನಟ ಹಾಗೂ ಪೋಷಕ ನಟನಾಗಿ ಗುರುತಿಸಿಕೊಂಡಿದ್ದಾರೆ. 'ಸಿಂಧು ನದಿ ಪೂ', 'ಮೈನರ್ ಮಾಪಿಳ್ಳೈ', 'ನಟ್ಪುಕಾಗ', 'ಧರ್ಮ', 'ಪುದುಮೈ ಪಿತ್ತನ್' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 1998ರಲ್ಲಿ ಬಿಡುಗಡೆಯಾದ ಮಮ್ಮುಟ್ಟಿ ಅಭಿನಯದ 'ಮರು ಮಲರ್ಚಿ' ಚಿತ್ರದಲ್ಲಿನ ಖಳನಟನ ಪಾತ್ರಕ್ಕಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಇನ್ನು ಪ್ರಿಯಾ ರಮಣ್ ದಕ್ಷಿಣ ಭಾರತದ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ಮೋಹನ್‌ಲಾಲ್ ಅಭಿನಯದ 'ಮಂತಿರಿಕಂ', 'ಆರಂ ತಂಪುರಾನ್', ಮಮ್ಮುಟ್ಟಿ ಅವರ 'ಸೈನ್ಯಂ', ಕಮಲ್ ಹಾಸನ್ ಅವರ 'ಸುಭ ಸಂಕಲ್ಪಂ', ಸುರೇಶ್ ಗೋಪಿ ಅವರ 'ಕಾಶ್ಮೀರಂ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಪ್ರೀತಿ, ಮದುವೆ ಮತ್ತು ವಿಚ್ಛೇದನ

1999ರಲ್ಲಿ ಬಿಡುಗಡೆಯಾದ 'ನೇಸಂ ಪುದುಸು' ಚಿತ್ರದಲ್ಲಿ ರಂಜಿತ್ ಮತ್ತು ಪ್ರಿಯಾ ರಮಣ್ ನಾಯಕ-ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದ ಚಿತ್ರೀಕರಣದ ವೇಳೆ ಇಬ್ಬರ ನಡುವೆ ಪ್ರೀತಿ ಮೂಡಿತ್ತು. ಬಳಿಕ ಇಬ್ಬರೂ ವಿವಾಹವಾದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಮದುವೆಯ ಬಳಿಕ ಪ್ರಿಯಾ ರಮಣ್ ಚಿತ್ರರಂಗದಿಂದ ಕೊಂಚ ದೂರ ಉಳಿದು ಕಿರುತೆರೆಯಲ್ಲಿ ತೊಡಗಿಸಿಕೊಂಡರು. ಮಲಯಾಳಂ ಮತ್ತು ತಮಿಳು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು. ಮತ್ತೊಂದೆಡೆ ರಂಜಿತ್ ಸಿನಿಮಾಗಳಲ್ಲಿ ತಮ್ಮ ವೃತ್ತಿಜೀವನ ಮುಂದುವರಿಸಿದರು. ಮೋಹನ್‌ಲಾಲ್ ಮತ್ತು ಮಮ್ಮುಟ್ಟಿ ಅವರ ಹಲವು ಚಿತ್ರಗಳಲ್ಲಿಯೂ ನಟಿಸಿ ಮಲಯಾಳಂ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

2014ರಲ್ಲಿ ವಿಚ್ಚೇದನ

ಆದರೆ ಹಲವು ವರ್ಷಗಳ ಸುಖ ಸಂಸಾರದ ಬಳಿಕ 2014ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಈ ಸುದ್ದಿ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಹಿರಿಯ ನಟ ಹಾಗೂ ನಿರ್ದೇಶಕ ಆಲೆಪ್ಪಿ ಅಶ್ರಫ್ ಅವರ ಹೇಳಿಕೆಯ ಪ್ರಕಾರ, ರಂಜಿತ್ ಅವರ ವಿವಾಹೇತರ ಸಂಬಂಧದ ಕುರಿತ ವದಂತಿಗಳು ದಂಪತಿ ದೂರವಾಗಲು ಕಾರಣವಾಗಿದ್ದವು ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿದ್ದ ಅವರು, "ಪ್ರಿಯಾ ರಮಣ್ ಮತ್ತು ರಂಜಿತ್ ಪ್ರೀತಿಸಿ ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದರು. ಮದುವೆಯ ಬಳಿಕ ಪ್ರಿಯಾ ನಟನೆಯಿಂದ ದೂರ ಉಳಿದಿದ್ದರು. ಆದರೆ ರಂಜಿತ್ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿ ಕೇಳಿ ಅವರಿಗೆ ಆಘಾತವಾಗಿತ್ತು. ಈ ಸಂಬಂಧವನ್ನು ನಿಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಇಬ್ಬರೂ ಬೇರೆಯಾದರು. ಮಕ್ಕಳ ಭವಿಷ್ಯಕ್ಕಾಗಿ ಪ್ರಿಯಾ ಮತ್ತೆ ನಟನೆಯತ್ತ ಮರಳಿದರು" ಎಂದು ಹೇಳಿದ್ದರು.

Ranjith and Priya Raman reunited despite his second marriage
ರಾಮಾಯಣದಲ್ಲಿ ಯಶ್ ಅತ್ಯದ್ಭುತವಾಗಿ ನಟಿಸಿದ್ದರು: ರಾವಣ ಪಾತ್ರಕ್ಕೆ ಡಬ್ಬಿಂಗ್ ಮಾಡುವುದು ಕಷ್ಟಕರವಾಗಿತ್ತು; ಶರದ್ ಕೇಳ್ಕರ್

ಎರಡನೇ ಮದುವೆಯೂ ಹೆಚ್ಚು ದಿನ ಉಳಿಯಲಿಲ್ಲ

ಪ್ರಿಯಾ ರಮಣ್ ಅವರಿಂದ ವಿಚ್ಛೇದನ ಪಡೆದ ಅದೇ 2014ರಲ್ಲಿ ರಂಜಿತ್ ನಟಿ ರಾಗಸುಧಾ ಅವರನ್ನು ವಿವಾಹವಾದರು. ಆದರೆ ಈ ಮದುವೆ ಹೆಚ್ಚು ದಿನ ಉಳಿಯಲಿಲ್ಲ. 2015ರಲ್ಲಿ ಇಬ್ಬರೂ ಬೇರೆಯಾದರು. ಇದಾದ ಬಳಿಕ ಸುಮಾರು ಏಳು ವರ್ಷಗಳ ಕಾಲ ಪ್ರಿಯಾ ರಮಣ್ ಮತ್ತು ರಂಜಿತ್ ದೂರವಾಗಿದ್ದರು.

ಆದರೆ ವಿಧಿಯಾಟವೇ ಬೇರೆಯಾಗಿತ್ತು. ರಂಜಿತ್ ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ ಪ್ರಿಯಾ ಮತ್ತೆ ಅವರ ಜೀವನಕ್ಕೆ ಮರಳಿದರು. ಹಳೆಯ ಪ್ರೀತಿ ಮತ್ತೆ ಚಿಗುರೊಡೆದಿದ್ದು, ಇಬ್ಬರೂ ತಮ್ಮ ಸಂಬಂಧಕ್ಕೆ ಮತ್ತೊಂದು ಅವಕಾಶ ನೀಡಲು ನಿರ್ಧರಿಸಿದರು. ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಇಬ್ಬರೂ ಮತ್ತೆ ಮದುವೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ನಿರ್ದೇಶನದಲ್ಲೂ ಕೈಯಾಡಿಸಿದ ರಂಜಿತ್

ನಟನೆಯ ಜೊತೆಗೆ ರಂಜಿತ್ ನಿರ್ದೇಶನದಲ್ಲೂ ತಮ್ಮ ಅದೃಷ್ಟ ಪರೀಕ್ಷಿಸಿದ್ದಾರೆ. 'ಭೀಷ್ಮರ್' ಮತ್ತು 'ಕೌಂಡಂಪಾಳಯಂ' ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೆ, ತಮಿಳಿನ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ತಮಿಳು ಸೀಸನ್ 8'ರಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು. ವಿಚ್ಛೇದನ, ಎರಡನೇ ಮದುವೆಯ ವೈಫಲ್ಯ, ಅನಾರೋಗ್ಯ ಮತ್ತು ಮತ್ತೆ ಒಂದಾದ ಪ್ರೀತಿ... ರಂಜಿತ್ ಹಾಗೂ ಪ್ರಿಯಾ ರಮಣ್ ಅವರ ಜೀವನದ ಈ ಪಯಣ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X