

ಪೇರೆಂಟಿಂಗ್ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಕುರಿತು ಮಾತನಾಡುತ್ತಾ, ರಾಮ್ ಚರಣ್ ಪತ್ನಿ ಹಾಗೂ ಉದ್ಯಮಿ ಉಪಾಸನಾ ಕೊನಿಡೆಲಾ ಅವರು, ಪೋಷಕತ್ವದ ಸಾಮಾನ್ಯ ಕರ್ತವ್ಯಗಳನ್ನು ನಿರ್ವಹಿಸುವ ತಂದೆಯಂದಿರನ್ನು ಸಮಾಜವು ಆಗಾಗ್ಗೆ ಭಿನ್ನವಾಗಿ ಕಾಣುತ್ತದೆ. ಮಕ್ಕಳ ಪಾಲನೆ-ಪೋಷಣೆಯ ವಿಷಯದಲ್ಲಿ ಹೆಚ್ಚು ಸಮತೋಲಿತ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವುದು, ಸಮಾಜದಲ್ಲಿ ವ್ಯಾಪಕ ಬದಲಾವಣೆಯನ್ನು ತರಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ವಿಶಾಖಪಟ್ಟಣದಲ್ಲಿ ನಡೆದ 'ಸಿಐಐ ಪಾರ್ಟ್‌ನರ್‌ಶಿಪ್ ಸಮ್ಮಿಟ್ 2026' (CII Partnership Summit 2026) ನಲ್ಲಿ ಮಾತನಾಡಿದ ಅವರು, ಮಕ್ಕಳ ಪಾಲನೆ-ಪೋಷಣೆಯ ಜವಾಬ್ದಾರಿಯನ್ನು ತಾಯಿ ಮತ್ತು ತಂದೆ ಇಬ್ಬರೂ ಹಂಚಿಕೊಂಡಾಗ, ಸಮಾಜವು ತಂದೆಯನ್ನು ಮಾತ್ರ ವಿಭಿನ್ನ ದೃಷ್ಟಿಕೋನದಿಂದ ನೋಡುವ ಅಸಮಾನತೆಯ ಬಗ್ಗೆ ಪ್ರಸ್ತಾಪಿಸಿದರು.
ಉಪಾಸನಾ ಅವರು ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾದ ನಾರಾ ಲೋಕೇಶ್ ಅವರನ್ನು ಭೇಟಿಯಾದರು.
'ಒಬ್ಬ ತಂದೆ ಮಗುವಿಗೆ ಊಟ ತಿನ್ನಿಸಿದಾಗ ಅಥವಾ ಡೈಪರ್ ಬದಲಿಸಿದಾಗ, ತಾಯಿ ಮತ್ತು ಇತರರೆಲ್ಲರೂ ಚಪ್ಪಾಳೆ ತಟ್ಟಿ, 'ಓಹ್, ಎಷ್ಟು ಚೆನ್ನಾಗಿದೆ! ನೀವೊಬ್ಬ ಒಳ್ಳೆಯ ತಂದೆ' ಎಂದು ಹೇಳುತ್ತಾರೆ. ಆದರೆ ತಾಯಿ ಇದೇ ಕೆಲಸವನ್ನು ಮಾಡಿದಾಗ, ಅವಳಿಗಾಗಿ ಏಕೆ ಚಪ್ಪಾಳೆ ತಟ್ಟುವುದಿಲ್ಲ? ಮನೆಯಲ್ಲಿ ಈ ಮನಸ್ಥಿತಿ ಬದಲಾಗದ ಹೊರತು, ಕಚೇರಿಯ ಆಡಳಿತ ಮಂಡಳಿಯಲ್ಲೂ (boardroom) ಅದು ಎಂದಿಗೂ ಬದಲಾಗುವುದಿಲ್ಲ. ನಾವು ನಿಜವಾಗಿಯೂ ಈ ವಿಷಯದ ಬಗ್ಗೆ ಕೆಲಸ ಮಾಡಬೇಕಿದೆ. ಇದು ಶೈಕ್ಷಣಿಕ ಪಠ್ಯಕ್ರಮದ ಭಾಗವಾಗಬೇಕು, ಜನರ ಮನಸ್ಥಿತಿಯಲ್ಲಿ ಬದಲಾವಣೆ ಬರಬೇಕು. ತಂದೆ ಇಲ್ಲಿ ಯಾರಿಗೂ ಯಾವುದೇ ಉಪಕಾರ ಮಾಡುತ್ತಿಲ್ಲ; ಅವರು ಪೋಷಕರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಅಷ್ಟೇ. ನನ್ನ ಪ್ರಕಾರ, ಇದೇ ಅತ್ಯಂತ ಮುಖ್ಯವಾದ ವಿಷಯ' ಎಂದು ತಿಳಿಸಿದರು.
'ನಮ್ಮ ಮನಸ್ಥಿತಿಯಲ್ಲಿ ಇದು ಇದ್ದರೆ, ನಮ್ಮ ಶಿಕ್ಷಣದಲ್ಲಿ ಇದು ಅಡಕವಾಗಿದ್ದರೆ, ಮಕ್ಕಳನ್ನು ಆ ರೀತಿಯಲ್ಲಿ ಬೆಳೆಸಿದರೆ ಮತ್ತು ತಾಯಂದಿರು ಕೂಡ ತಮ್ಮ ಗಂಡಂದಿರು (ಅಥವಾ ಪುತ್ರರು) ಕೆಲಸ ಮಾಡಿದಾಗ ಅದನ್ನು ಮಾತ್ರ ದೊಡ್ಡ ವಿಷಯವನ್ನಾಗಿ ಮಾಡದಿದ್ದರೆ, ಆಗ ಇಡೀ ವ್ಯವಸ್ಥೆಯೇ ಪ್ರಗತಿ ಹೊಂದುತ್ತದೆ ಎಂದು ನಾನು ಭಾವಿಸುತ್ತೇನೆ. ಒಬ್ಬ ಪತ್ನಿಯಾಗಿ, ನಾನೂ ಕೂಡ ಕೆಲವೊಮ್ಮೆ ಹೀಗೆ ಮಾಡುತ್ತೇನೆ. ಅವರು ನಮ್ಮ ಮಕ್ಕಳಿಗೆ ಊಟ ತಿನ್ನಿಸುವಾಗ ನನಗೆ ಅದು ಬಹಳ ಮುದ್ದಾಗಿ ಕಾಣಿಸುತ್ತದೆ. ಆದರೆ ಈಗ ನನಗೆ ಅರ್ಥವಾಗಿದೆ, ಇದೊಂದು ಸಹಜವಾದ ವಿಷಯ. ಪೋಷಕರು ಮಾಡಬೇಕಾದ ಸಾಮಾನ್ಯ ಕೆಲಸವಿದು' ಎಂದು ಅವರು ಹೇಳಿದರು.
2012ರಲ್ಲಿ ಹೈದರಾಬಾದ್‌ನಲ್ಲಿ ವಿವಾಹವಾದ ರಾಮ್ ಚರಣ್ ಮತ್ತು ಉಪಾಸನಾ ದಂಪತಿಗೆ 2023ರಲ್ಲಿ ಮೊದಲ ಮಗಳು 'ಕ್ಲಿಂಕಾರಾ ಕೊನಿಡೆಲಾ'ಳ ಜನಿಸಿದರು. ಈ ವರ್ಷ ಈ ದಂಪತಿಗೆ ಅವಳಿ ಮಕ್ಕಳು ಜನಿಸಿದರು. ಅವಳಿ ಮಕ್ಕಳ ಆಗಮನದ ನಂತರ, ರಾಮ್ ಚರಣ್ ಮತ್ತು ಉಪಾಸನಾ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ಘೋಷಣೆ ಮಾಡಿದರು.
ಅವಳಿ ಮಕ್ಕಳಿಗೆ, ಅಂದರೆ ಮಗ ಮತ್ತು ಮಗಳಿಗೆ, ಕ್ರಮವಾಗಿ 'ಶಿವ್ರಾಮ್' ಮತ್ತು 'ಅನ್ವೀರಾ ದೇವಿ' ಎಂದು ಹೆಸರಿಡಲಾಗಿದೆ.