ಸಂಕ್ರಾಂತಿಗೆ ಪ್ರೇಕ್ಷಕರ ಮುಂದೆ ಬರಲಿದೆ ‘ದೈಜಿ’; ರಮೇಶ್ ಅರವಿಂದ್ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ..!

ರಮೇಶ್ ಅರವಿಂದ್ ಅಭಿನಯದ ‘ದೈಜಿ’ ಸಿನಿಮಾ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.
ಬಿಡುಗಡೆ ದಿನಾಂಕ ಪ್ರಕಟಿಸುವುದರ ಜೊತೆಗೆ ಚಿತ್ರದ ಕಥಾವಸ್ತುವಿನ ಸುಳಿವು ನೀಡುವ ಹೊಸ ಪೋಸ್ಟರ್‌ನ್ನೂ ಚಿತ್ರತಂಡ ಅನಾವರಣಗೊಳಿಸಿದೆ.
ಪೋಸ್ಟರ್‌ನಲ್ಲಿ ರಮೇಶ್ ಅರವಿಂದ್ ಮತ್ತು ರಾಧಿಕಾ ನಾರಾಯಣ್ ದಂಪತಿಯಾಗಿ ಕಾಣಿಸಿಕೊಂಡಿದ್ದು, ದಂಪತಿಯ ಜೀವನದ ಅತ್ಯಂತ ಸಂತೋಷದ ಘಟ್ಟವೊಂದು ಹೇಗೆ ಕರಾಳ ತಿರುವು ಪಡೆದುಕೊಳ್ಳುತ್ತದೆ ಎಂಬುದರ ಸುಳಿವು ನೀಡಿದೆ.
ನಿರ್ಮಾಪಕ ರವಿ ಕಶ್ಯಪ್ ಅವರ ಜೀವನದಲ್ಲಿ ನಡೆದ ನೈಜ ಘಟನೆಗಳಿಂದ ಈ ಚಿತ್ರ ಪ್ರೇರಣೆ ಪಡೆದಿದೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ಅವರು ಹೇಳಿದ್ದಾರೆ.
2010ರ ಚಳಿಗಾಲದಲ್ಲಿ ಅಮೆರಿಕದ ನ್ಯಾಶ್‌ವಿಲ್‌ನಲ್ಲಿ ರವಿ ಕಶ್ಯಪ್ ಅವರ ಪುತ್ರಿ ವಿಭಾ ಡಿಸೆಂಬರ್ 25ರಂದು ಜನಿಸಿದ ಸಮಯದಲ್ಲಿ ಕುಟುಂಬವು ಸರಣಿ ಅಹಿತಕರ ಘಟನೆಗಳನ್ನು ಎದುರಿಸಿತ್ತು.
ಗರ್ಭಧಾರಣೆ ಎನ್ನುವುದು ಸಾಮಾನ್ಯವಾಗಿ ದಂಪತಿಯ ಜೀವನದ ಅತ್ಯಂತ ಸಂತೋಷದ ಸಮಯ. ಹೊಸ ಜೀವದ ಆಗಮನಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವ ಘಟ್ಟವದು. ಆದರೆ, ಈ ಕಥೆಯಲ್ಲಿ ಅದೇ ಪರಿಸ್ಥಿತಿ ದುರಂತವಾಗಿ ಬದಲಾಗುತ್ತದೆ. ಎಲ್ಲವೂ ಕೈಮೀರಿ ಹೋಗುತ್ತಿರುವಂತೆ ಭಾಸವಾಗುವ ಸಂದರ್ಭದಲ್ಲಿ ಪತಿ ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ ಎಂದು ಆಕಾಶ್ ಹೇಳಿದ್ದಾರೆ.
ಕೆಲವು ವರ್ಷಗಳ ಹಿಂದೆಯೇ ರವಿ ಕಶ್ಯಪ್ ಅವರು ಈ ಘಟನೆಗಳನ್ನು ವಿವರಿಸಿದ್ದನ್ನು ಆಕಾಶ್ ದಾಖಲಿಸಿಕೊಂಡಿದ್ದರು. ಆ ನೈಜ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಸಹಲೇಖಕ ಅಭಿಜಿತ್ ಅವರೊಂದಿಗೆ ಕಥೆ ಮತ್ತು ಚಿತ್ರಕಥೆಯನ್ನು ರೂಪಿಸಿದ್ದಾರೆ.
ರಮೇಶ್ ಅರವಿಂದ್ ಮತ್ತು ರಾಧಿಕಾ ನಾರಾಯಣ್ ಜೊತೆಗೆ ದಿಗಂತ್, ಅವಿನಾಶ್, ಕೆ.ಎಸ್. ಶ್ರೀಧರ್, ಅಲೆಕ್ಸಾಂಡ್ರಾ ಟೇಲರ್, ರಮೇಶ್ ಪಂಡಿತ್, ನಿಧಿ ಹೆಗಡೆ ಮತ್ತು ಬಿ.ಎಂ. ಗಿರಿರಾಜ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಶ್ರೀಶಾ ಕುದುವಳ್ಳಿ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಜವಾಬ್ದಾರಿ ನಿರ್ವಹಿಸಿದ್ದು, ಆಕಾಶ್ ಶ್ರೀವತ್ಸ ಸಂಕಲನವನ್ನೂ ಮಾಡಿದ್ದಾರೆ.
‘ದೈಜಿ’ಯನ್ನು ಕುಟುಂಬ ಸಮೇತ ವೀಕ್ಷಿಸಬಹುದಾದ ಮನೋವೈಜ್ಞಾನಿಕ ಭಯಾನಕ ಚಿತ್ರ ಎಂದು ಆಕಾಶ್ ಬಣ್ಣಿಸಿದ್ದಾರೆ.
‘ಆಪ್ತಮಿತ್ರ’ ಚಿತ್ರದ ಮಾದರಿಯಲ್ಲಿ ಪ್ರೇಕ್ಷಕರ ಮನಸ್ಸಿನಲ್ಲಿ ಭಯ ಮೂಡಿಸುವ ಕಥಾಹಂದರ ಇದಾಗಿದೆ. “ಇದು ಸರಳ ಕಥೆಯಾಗಿದ್ದರೂ ಸಂಕೀರ್ಣ ಭಾವನೆಗಳು ಮತ್ತು ಕಲಾವಿದರ ಅಭಿನಯಕ್ಕೆ ಸಾಕಷ್ಟು ಅವಕಾಶವಿದೆ. ಚಿತ್ರದ ಭಯಾನಕ ಸನ್ನಿವೇಶಗಳು ಬಹುತೇಕ ಮನಸ್ಸಿನಲ್ಲೇ ನಡೆಯುತ್ತವೆ ಎಂದು ವಿವರಿಸಿದ್ದಾರೆ.
ಭಯಾನಕ ಚಿತ್ರಗಳು ಚಿತ್ರಮಂದಿರಗಳಲ್ಲಿ ಒಟ್ಟಾಗಿ ಕುಳಿತು ನೋಡುವ ಅನುಭವದಲ್ಲಿ ಹೆಚ್ಚು ಪರಿಣಾಮಕಾರಿಯಾಗುತ್ತವೆ ಎಂಬ ಕಾರಣಕ್ಕೆ ಚಿತ್ರತಂಡ ನೈಜ ಧ್ವನಿಮುದ್ರಣ ಮತ್ತು ಧ್ವನಿ ಸಂಯೋಜನೆಗೆ ಹೆಚ್ಚಿನ ಸಮಯ ಮೀಸಲಿಟ್ಟಿದೆ.
ಮೊದಲಿಗೆ ನಿರ್ಮಾಪಕ ರವಿ ಕಶ್ಯಪ್ ಅವರ ಪುತ್ರಿ ವಿಭಾ ಅವರ ಜನ್ಮದಿನವಾದ ಡಿಸೆಂಬರ್ 25ರಂದು ಚಿತ್ರ ಬಿಡುಗಡೆ ಮಾಡಲು ತಂಡ ಯೋಜಿಸಿತ್ತು. ಆದರೆ, ವರ್ಷಾಂತ್ಯದಲ್ಲಿ ಸಾಲುಸಾಲು ಸಿನಿಮಾಗಳು ಬಿಡುಗಡೆಯಾಗಲಿದ್ದ ಕಾರಣ ಸಂಕ್ರಾಂತಿ ರಜೆಯ ಅವಧಿಯನ್ನು ಆಯ್ಕೆ ಮಾಡಲಾಗಿದೆ.
ಮತ್ತೊಂದು ವಿಶೇಷವೆಂದರೆ, ಸಂಕ್ರಾಂತಿ ಹಬ್ಬದೊಂದಿಗೆ ಸಾಂಪ್ರದಾಯಿಕವಾಗಿ ನಂಟು ಹೊಂದಿರುವ ಸೂರ್ಯಕಾಂತಿ ಹೂವು ಚಿತ್ರದಲ್ಲಿ ಪದೇಪದೇ ಕಾಣಿಸಿಕೊಳ್ಳುವ ಪ್ರಮುಖ ಸಂಕೇತವಾಗಿದೆ. ಹೀಗಾಗಿ ಸಂಕ್ರಾಂತಿ ಬಿಡುಗಡೆ ಚಿತ್ರಕ್ಕೆ ಸೂಕ್ತವಾಗಿದೆ ಎಂದು ಆಕಾಶ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



