

ಸ್ಯಾಂಡಲ್ವುಡ್ ಖ್ಯಾತ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪ್ರಿಯಾ ಅವರ ದಾಂಪತ್ಯಕ್ಕೆ 25 ವರ್ಷ ತುಂಬಿದ್ದು, ದಂಪತಿ ಭಾನುವಾರ ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.
ನಟ ಸುದೀಪ್ ಹಾಗೂ ಮಲೆಯಾಳಿ ಹುಡುಗಿ ಪ್ರಿಯಾ ಅವರು 2001, ಅಕ್ಟೋಬರ್ 18ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಂದು ದಾಂಪತ್ಯ ಜೀವನದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದಾರೆ.
25 ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸುದೀಪ್ ಅವರ ಮನೆಯಲ್ಲಿ ಇಂದು ವಿಶೇಷ ಪೂಜೆ ಆಯೋಜಿಸಲಾಗಿತ್ತು. ಈ ಪೂಜೆಯಲ್ಲಿ ಸ್ಯಾಂಡಲ್ವುಡ್ನ ಗಣ್ಯರು ಹಾಗೂ ಸುದೀಪ್ ಅವರ ಆಪ್ತರು ಭಾಗಿಯಾಗಿದ್ದರು.
25 ವರ್ಷಗಳ ದಾಂಪತ್ಯದ ಸಂಭ್ರಮದಲ್ಲಿರುವ ಸುದೀಪ್ ಮತ್ತು ಪ್ರಿಯಾ ಅವರು ಒಬ್ಬರಿಗೊಬ್ಬರು ಹಾರ ಬದಲಾಯಿಸಿಕೊಂಡು ಸಂತಸ ಹಂಚಿಕೊಂಡಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ, ವಿಶೇಷ ಪೂಜೆಯ ಮೂಲಕ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ.