ಎಕ್ಸ್‌ಪೈರ್ ಆದ ಅನಾಸಿನ್ ನುಂಗಿದಂತೆ!

ಎಕ್ಸ್‌ಪೈರ್ ಆದ ಅನಾಸಿನ್ ನುಂಗಿದಂತೆ!
Updated on: 

ಡೇಟ್ ಎಕ್ಸ್‌ಪೈರಿ ಆದ ಮಾತ್ರೆ ತೆಗೆದುಕೊಂಡರೆ ಹೊಟ್ಟೆ ನೋವು ವಾಸಿ ಆಗುವ ಬದಲು ತಲೆ ನೋವು ಬರುತ್ತದೆ. ತಲೆ ನೋವಿಗೆ ಅಂತ ಮಾತ್ರೆ ತೆಗೆದುಕೊಂಡ್ರೆ ಮತ್ತೇನೋ 'ಬಾಧೆ'ಯನ್ನು ಸೃಷ್ಟಿಸುತ್ತದೆ. ಇದೇ ಮಾತನ್ನು 'ಸಿಐಡಿ ಈಶ' ಚಿತ್ರಕ್ಕೂ ಅನ್ವಯಿಸಬಹುದು. ನವರಸ ನಾಯಕ ಜಗ್ಗೇಶ್ ಸಿನಿಮಾ ಅಂದುಕೊಂಡು ಚಿತ್ರಮಂದಿರಕ್ಕೆ ಹೋದ ಪ್ರೇಕ್ಷಕನಿಗೆ ಇಡೀ ಚಿತ್ರ, ಡೇಟ್ ಮುಗಿದ ಅನಾಸfನ್ ಮಾತ್ರೆಯಂತೆ ಕಾಡುತ್ತದೆ. ಇಲ್ಲಿ ಯಾವ ರಸಗಳೂ ಇಲ್ಲ ಎಂದು ಅರಿವಾಗುವಷ್ಟರಲ್ಲಿ ಚಿತ್ರ ಮುಕ್ಕಾಲು ಪಾಲು ಮುಗಿದಿರುತ್ತದೆ.
ಆದರೆ ಪ್ರೇಕ್ಷಕ ಸುಸ್ತಾಗಿ ಮಲಗಿದಾಗ ಪದೇ ಪದೇ ಗ್ಲೂಕೋಸು ಕೊಟ್ಟು ಎಬ್ಬಿಸುವ ಪ್ರಯತ್ನ ಮಾಡುತ್ತಾರೆ ನಟ ಕೋಮಲ್. ಆದರೂ 'ಜಗ್ಗೇಶ್‌ರಿಗೆ ಇಂಥ ಚಿತ್ರ ಯಾಕೆ ಬೇಕಿತ್ತು?' ಎನ್ನುವ ಬೇಸರ ಮಾತ್ರ ದೂರವಾಗಲ್ಲ. ಹೀಗಾಗಿ ಚಿತ್ರ ನೋಡುವವರಿಗೆ 'ಎಕ್ಸ್‌ಪೈರ್ ಆದ ಅನಾಸೀನ್ ಮಾತ್ರೆ ನುಂಗಿದ' ಅನುಭವ. ಕನ್ನಡದ ಈ 'ಸಿಐಡಿ ಈಶ'ನ ಮೂಲ ಮಲೆಯಾಳಂನಲ್ಲಿ 2003ರಲ್ಲಿ ಬಂದ 'ಸಿಐಡಿ ಮೂಸಾ' ಚಿತ್ರದ್ದು. ಯಥಾವತ್ತಾಗಿ ಮೂಲ ಚಿತ್ರವನ್ನೇ ಕಾಫಿ ಮಾಡಿರುವ ನಿರ್ದೇಶಕ ಫರ್ನಾಂಡಿಸ್, ಮೇಕಿಂಗ್ ತಂತ್ರಗಳನ್ನು ಕೈ ಬಿಟ್ಟು ನಾಯಕನನ್ನು ವೈಭವೀಕರಿಸಲು ಹೋಗಿದ್ದಾರೆ. ಈ ಕಾರಣಕ್ಕೆ ಹಾಸ್ಯದ ಹೆಸರಿನಲ್ಲಿ ಪ್ರೇಕ್ಷಕನಿಗೆ ಈ ಸಿನಿಮಾ ಅಪಹಾಸ್ಯವಾಗಿ ಕಾಣುತ್ತದೆ. ನಿರ್ಮಾಣದಲ್ಲಿ ಯಾವುದೇ ಕ್ವಾಲಿಟಿ ಉಳಿಸಿಕೊಳ್ಳುವಲ್ಲಿ ವಿಪಲರಾಗಿದ್ದಾರೆ ನಿರ್ಮಾಪಕ ಉಮಾಕಾಂತ್ ರಾಜು. ಸಾಮಾನ್ಯವಾಗಿ ಬೇರೆ ಭಾಷೆಯಲ್ಲಿ ಸೂಪರ್ ಹಿಟ್ ಆದ ಚಿತ್ರಗಳನ್ನು ರಿಮೇಕ್ ಮಾಡುವುದನ್ನು ನೋಡಿದ್ದೇವೆ. ಆದರೆ ಮೂಲ ಭಾಷೆಯಲ್ಲೇ ಸೋತ ಚಿತ್ರಗಳನ್ನು ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ತಂದು ಹಾಕುವುದು ಯಾವ ನ್ಯಾಯ? ಸುದರ್ಶನ್, ರಂಗಾಯಣ ರಘು, ಕೋಮಲ್, ಬ್ಯಾಂಕ್ ಜನಾರ್ದನ್, ನಿನಾಸಂ ಅಶ್ವತ್ಥ್, ಹರೀಶ್ ರೈ, ಶ್ರೀನಿವಾಸ ಮೂರ್ತಿ, ಅವಿನಾಶ್, ಪಾಪಾ ಪಾಂಡು ಖ್ಯಾತಿಯ ಚಿದಾನಂದ್ ಮತ್ತಿತರರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಕಾನ್ಸ್‌ಟೇಬಲ್ ಮಗನೊಬ್ಬ ಎಸ್‌ಐ ಆಗಲು ಹೋಗುವುದು, ಖಾಕಿ ಬಟ್ಟೆ ತೊಡುವ ಅವನ ಕನಸಿಗೆ ಇಲಾಖೆಯಲ್ಲೇ ಅಡ್ಡಿಯಾಗುವುದು, ತಾನೇ ಒಂದು ಡಿಟೆಕ್ಟಿವ್ ಏಜೆನ್ಸಿ ತೆರೆಯುವುದು, ಭಯೋತ್ಪಾದಕರ ಕೊಲೆ ಸಂಚಿನಿಂದ ಮುಖ್ಯಮಂತ್ರಿಯನ್ನು ಕಾಪಾಡುವುದು, ಇದರ ನಡುವೆ 'ಲವ್ವು ಡವ್ವು'... ಇದಿಷ್ಟು 'ಈಶ' ಚಿತ್ರದೊಳಗಿನ 'ಬೂಸಾ'.
ಆದರೆ ರಾಜ್ಯದ ಮುಖ್ಯಮಂತ್ರಿಯನ್ನು ಗ್ರಾಮ ಪಂಚಾಯಿತಿ ಸದಸ್ಯನಂತೆ ಚಿತ್ರೀಕರಿಸಿರುವುದು, ಸಿಎಂಗೆ ಪ್ರಾಣ ಭೀತಿ ಇದ್ದಾಗ ನಾಯಿಗಾಗಿ ಪೊಲೀಸರು ಸಾಮಾನ್ಯ ಯುವಕನ ಬಳಿ ಬರುವುದು ಮುಂತಾದ ಅಂಶಗಳು ಹಾಸ್ಯದ ಹೆಸರಿನಲ್ಲಿ 'ಕಾಗೆ ಹಾರಿಸಿವೆ'. ಇದರ ಹೊರತಾಗಿ ರಂಗಾಯಣ ರಘು, ಕೋಮಲ್ ಬಂದಾಗ ನಗುವಿನ ಟಾನಿಕ್ ಸಿಗುತ್ತದೆ. ವಿನೋದ್ ಭಾರತಿ ಸಂಗೀತ ಇಲ್ಲ ಎನ್ನಲಾಗದು. ರಮೇಶ್ ಬಾಬು ಛಾಯಾಗ್ರಹಣದ ಬಗ್ಗೆ ಹೇಳುವ ಅಗತ್ಯವಿಲ್ಲ. ಅಂದ ಹಾಗೆ ಐದಾರು ವರ್ಷಗಳ ಹಿಂದೆ ಶುರುವಾದ 'ಸಿಡಿಐ ಈಶ' ಚಿತ್ರ ಈಗ ಬಂದಿದೆ.

- ಕೇಶು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com