Mother Promise Movie Review: 'ಮದರ್ ಪ್ರಾಮಿಸ್'- ಇದು ಗ್ಯಾಂಗ್‌ಸ್ಟರ್‌ ಕಾಮಿಡಿ; ಹರಿದಿದೆ ನಗುವಿನ ಕೋಡಿ; ಲಾಜಿಕ್ ಪಕ್ಕಕ್ಕಿಟ್ಟು ಮನಸಾರೆ ನಕ್ಕುಬಿಡಿ!

A still from mother promise movie
ಮದರ ಪ್ರಾಮಿಸ್ ಸಿನಿಮಾ ಸ್ಟಿಲ್
Published on
Mother Promise Movie Rating(3.5 / 5)
Summary

ಹಿಂದಿ ಗ್ಯಾಂಗ್‌ಸ್ಟರ್ ಕಾಮಿಡಿಗಳ ಶೈಲಿಯನ್ನು ಕನ್ನಡಕ್ಕೆ ತಂದು ‘ಮದರ್ ಪ್ರಾಮಿಸ್’ ನೂರುಕ್ಕೂ ಹೆಚ್ಚು ಪಾತ್ರಗಳ ಜತೆ ನಗುವಿನ ಮೇಳ ಹಮ್ಮಿಕೊಂಡಿದೆ. ರಾಸಿ, ದೊನ್ನೆ ಬಿರಿಯಾನಿ, ಎಸ್‌ಎಂಎಸ್, ಜಿಲೇಬಿ ಮುಂತಾದ ಪಾತ್ರಗಳು ಹೀರೋಗಳಾಗಿವೆ. ಮೊದಲಾರ್ಧ ನಿಧಾನ, ದ್ವಿತೀಯಾರ್ಧದಲ್ಲಿ ಕಥೆ ತಿರುವು ಪಡೆದುಕೊಳ್ಳುತ್ತದೆ. ತಾಯಿ-ಗುರುಗಳ ಸಂದೇಶ ಚಿತ್ರಕ್ಕೆ ಭಾವನಾತ್ಮಕ ತೂಕ ನೀಡುತ್ತವೆ.

ಪೂರ್ಣಚಂದ್ರ ಮೈಸೂರು ನಿರ್ಮಿಸಿ ಡಾಲಿ ಧನಂಜಯ ನಟಿಸಿರುವ ಮದರ್ ಪ್ರಾಮಿಸ್ ಸಿನಿಮಾ ರಿಲೀಸ್ ಆಗಿದೆ. ಹಿಂದಿಯಲ್ಲಿ ಬಂದಿರುವ ಹಲವು ಕಾಮಿಡಿ ಗ್ಯಾಂಗ್ ಸ್ಟರ್ ಸಿನಿಮಾಗಳ ರೀತಿಯಲ್ಲಿ ಈ ಸಿನಿಮಾ ಬಂದಿದೆ. ಈ ಸಿನಿಮಾ ಮಾದರಿ ಕನ್ನಡಕ್ಕೆ ಹೊಸದು ಎಂದು ಹೇಳಿದರೆ ತಪ್ಪಾಗಲಾರದು. ಜನರನ್ನು ನಗಿಸಬೇಕು ಎಂಬ ಏಕಮಾತ್ರ ಉದ್ದೇಶದಿಂದ ನಿರ್ದೇಶಕ ಪೂರ್ಣಚಂದ್ರ ಈ ಸಿನಿಮಾ ನಿರ್ಮಿಸಿದ್ದಾರೆ.

'ಮದರ್ ಪ್ರಾಮಿಸ್' ಚಿತ್ರದ ಬಹುಪಾಲು ಭಾಗ ಬೆಂಗಳೂರಿನ ಇಬ್ಬರು ಡಾನ್‌ಗಳ ಸುತ್ತ ಸುತ್ತುತ್ತದೆ. ರಾಸಿ(ಧನಂಜಯ) ಬೆಂಗಳೂರಿನಲ್ಲಿ ಬೈಕ್‌ ರೇಸರ್‌ ಹಾಗೆಯೇ ಬೆಟ್ಟಿಂಗ್‌ ಅಡ್ಡ ಕಟ್ಟಿಕೊಂಡಾತ. ಆತನ ಅಮ್ಮ ಶಾರದಮ್ಮ(ವಿನಯ್‌ ಪ್ರಸಾದ್‌) ಪ್ರೀತಿಯಿಂದ ಕೊಡಿಸಿದ ಸ್ಪ್ಲೆಂಡರ್‌ ಬೈಕೇ ಈತನ ರೇಸ್‌ ಬೈಕ್‌. ಅವನು ಸ್ಪ್ಲೆಂಡರ್ ಬೈಕ್​​ನಲ್ಲೇ ಎಲ್ಲಾ ಕಾಂಪಿಟೇಷನ್​​ಗಳನ್ನು ಗೆದ್ದಿರುತ್ತಾನೆ. ಆ ಬೈಕ್ ಒಂದು ದಿನ ಕಳೆದೋಗುತ್ತೆ. ದೊನ್ನೆ ಬಿರಿಯಾನಿ(ಮಹಾದೇವ್‌ ಪ್ರಸಾದ್‌) ಬೆಂಗಳೂರಿನಲ್ಲಿ ಕಳ್ಳಸಾಗಣೆಯ ಕಿಂಗ್‌ಪಿನ್‌. ಬಾಲ್ಯದಲ್ಲಿ ಸ್ನೇಹಿತರಾಗಿದ್ದರೂ ಕಾರಣಾಂತರಗಳಿಂದ ಇಬ್ಬರು ದೂರವಾಗಿರುತ್ತಾರೆ. ಎಲ್ಲಾ ಮಾದರಿಯ ಬೆಟ್ಟಿಂಗ್‌ನಲ್ಲಿ ಸೈ ಎನಿಸಿಕೊಂಡಿರುವ ರ್‍ಯಾಂಡಿ (ಪೂರ್ಣಚಂದ್ರ ಮೈಸೂರು) ಇವರಿಬ್ಬರ ನಡುವೆ ಸಿಲುಕಿಕೊಂಡಾಗ ಕಥೆ ತೆರೆದುಕೊಳ್ಳುತ್ತದೆ.

ಮದರ್ ಪ್ರಾಮಿಸ್ ಪೂರ್ಣಚಂದ್ರ ಮೈಸೂರು ಅವರ ಚೊಚ್ಚಲ ನಿರ್ದೇಶನ. ಮೊದಲ ಪ್ರಯತ್ನದಲ್ಲೇ ಅವರು ಯಶಸ್ಸು ಕಂಡಿದ್ದಾರೆ. ಒನ್​​ಲೈನ್ ಪಂಚಿಂಗ್​​ಗಳು ಸಾಕಷ್ಟು ಕೆಲಸಮಾಡಿವೆ. ತೆರೆಯ ಹಿಂದೆ ಅವರು ಹಾಕಿದ ಶ್ರಮ ಎದ್ದು ಕಾಣುತ್ತದೆ. ಸಿನಿಮಾದ ಬರವಣಿಗೆಯನ್ನೇ ಹೀರೊ ಮಾಡಲಾಗಿದೆ. ಪ್ರತಿ ಪಾತ್ರಕ್ಕೂ ಒಂದು ವಿಶೇಷತೆ ಹಾಗೂ ಮಹತ್ವವಿದೆ. ಎಲ್ಲರ ಪಾತ್ರಕ್ಕೂ ಇಂಪಾರ್ಟೆನ್ಸ್ ಕೊಟ್ಟಿದ್ದಾರೆ ನಿರ್ದೇಶಕರು. ಈ ಚಿತ್ರದಲ್ಲಿ ತುಂಬಾ ಜನ ಕಲಾವಿದರಿದ್ದಾರೆ. ಹಾಗೆಂದ ಮಾತ್ರಕ್ಕೆ ಯಾರು ಪ್ರಮುಖರು, ಯಾರ ಪಾತ್ರ ಹೈಲೈಟ್‌ ಎಂದರೆ ಉತ್ತರಿಸೋದು ಕಷ್ಟ. ಏಕೆಂದರೆ ಇಲ್ಲಿ ಬಂದವರೆಲ್ಲಾ ಸಿಕ್ಸರ್‌ ಬಾರಿಸುತ್ತಾರೆ.

ಇಲ್ಲಿ ಧನಂಜಯ್ ಇದ್ದಾರೆ. ಆದರೆ ಅವರು ಹೀರೋ ಅಲ್ಲ. ದೊನ್ನೆ ಬಿರಿಯಾನಿ ಪಾತ್ರದಲ್ಲಿ ಮಾಡಿರೋ ಮಹದೇವ ಪ್ರಸಾದ್, ಪೂರ್ಣಚಂದ್ರ, ಶ್ರೀವತ್ಸ, ಗುರುದತ್, ಯಶವಂತ ಹೀಗೆ ಪ್ರತಿ ಪಾತ್ರಗಳು ಸಹ ಇಲ್ಲಿ ಹೀರೋಗಳೇ. ಸಿನಿಮಾದ ಮೊದಲಾರ್ಧ ಪಾತ್ರಗಳ ಪರಿಚಯದಲ್ಲೇ ಮುಗಿದು ಹೋಗುತ್ತದೆ. ಸ್ವಲ್ಪ ನಿಧಾನಗತಿಯಲ್ಲಿ ಸಾಗುತ್ತದೆ. ದ್ವಿತೀಯಾರ್ಧ ಹೆಚ್ಚು ಸ್ವಾರಸ್ಯ ಉಳಿಸಿಕೊಳ್ಳುತ್ತದೆ.

ನಗೆ ಹಬ್ಬ ಎಂದ ಮೇಲೆ ಲಾಜಿಕ್‌ ಬದಿಗಿಡಬೇಕು. ನಿರ್ದೇಶಕ ಪೂರ್ಣ ಮೊದಲು ಆ ಕೆಲಸ ಮಾಡಿಯೇ ಆ್ಯಕ್ಷನ್‌ ಕಟ್‌ ಹೇಳಿರುವುದು ಎದ್ದು ಕಾಣುತ್ತದೆ. ಪಾತ್ರಗಳಿಗೆ ಇನ್ನಷ್ಟು ಗಟ್ಟಿಯಾದ ಸಂಭಾಷಣೆ ಬರೆಯಬಹುದಿತ್ತು. ಮದರ್ ಪ್ರಾಮಿಸ್' ಇಂತಹದ್ದೇ ಒಂದು ವರ್ಗಕ್ಕೆ ಎಂದು ಮಾಡಿದ ಸಿನಿಮಾ ಅಲ್ಲ. ಹಾಸ್ಯವೇ ಪ್ರಧಾನವಾಗಿದೆ ಆಗಿದ್ದರಿಂದ ಎಲ್ಲಾ ವರ್ಗಕ್ಕೂ ಕನೆಕ್ಟ್ ಆಗುತ್ತಾ ಎಂಬುದು ಪ್ರಶ್ನೆಯಾಗಿದೆ.

ಹಾಸ್ಯವನ್ನೇ ಪ್ರಧಾನವಾಗಿಟ್ಟುಕೊಂಡು ಸಿನಿಮಾ ಕಥೆಯನ್ನು ಹೆಣೆದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾದಲ್ಲಿರುವ ನೂರೆಂಟು ಪಾತ್ರಗಳನ್ನು ಮೊದಲ ಪ್ರಯತ್ನದಲ್ಲಿಯೇ ಸಮರ್ಥವಾಗಿ ನಿಭಾಯಿಸಿದ್ದಾರೆ. ನಟನೆಯಲ್ಲಿ ಎಂದಿನಂತೆ ಡಾಲಿ ಧನಂಜಯ್ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರು ರಾಸಿ ಆಗಿ ಗಮನ ಸೆಳೆಯುತ್ತಾರೆ. ಅವರಿಗೆ ಇಲ್ಲಿ ಡೈಲಾಗ್ ಕಡಿಮೆ, ಮುಖದ ಭಾವನೆಗಳ ಮೂಲಕವೇ ಅವರು ರಾಸಿ ಪಾತ್ರ ನಿರ್ವಹಿಸಿದ್ದಾರೆ.

ಎಸ್‌ಎಂಎಸ್‌ ಆಗಿ ಶ್ರೀವತ್ಸ, ಜಿಲೇಬಿಯಾಗಿ ಯಶವಂತ್‌ ಶೆಟ್ಟಿ, ಲೈಟರ್‌ ಆಗಿ ಶಮಂತ್‌, ಗುಲ್ಕನ್‌ ಪಾತ್ರದಲ್ಲಿ ಸಂಪತ್‌ ನಟನೆ ಚೆನ್ನಾಗಿದೆ. ಕಾಲ್ಪನಿಕ ಬೆಂಗಳೂರು ಮಾದರಿ ಚೆನ್ನಾಗಿದೆ. ಕ್ಲೈಮ್ಯಾಕ್ಸ್‌ ಹಂತ ತಲುಪುತ್ತಾ ನಿರ್ದೇಶಕರು ಬೋಧನೆಯತ್ತ ಇಳಿಯುತ್ತಾರೆ. ಜೀವನವು ಎಷ್ಟೇ ವೈರುಧ್ಯಗಳಿಂದ ತುಂಬಿದ್ದರೂ, ನಾವು ಅಂತಿಮವಾಗಿ ನಮ್ಮ ತಾಯಿಗೆ ನೀಡಿದ ಭರವಸೆಗಳಿಗೆ ಮತ್ತು ನಮ್ಮ ಶಿಕ್ಷಕರು ಹೇಳಿಕೊಟ್ಟ ಪಾಠಗಳಿಗೆ ಮರಳುತ್ತೇವೆ ಎಂಬುದನ್ನು ಅದು ನಮಗೆ ನೆನಪಿಸುತ್ತದೆ. ಶಕ್ತಿ ಅಥವಾ ಯಶಸ್ಸಿಗಿಂತ ಹೆಚ್ಚಾಗಿ ಆ ನೆನಪುಗಳು ನಮ್ಮ ದಾರಿಗೆ ಮಾರ್ಗದರ್ಶನ ತೋರಿಸುವ ದಿಕ್ಸೂಚಿಯಾಗುತ್ತವೆ.

ಸಿನಿಮಾದ ದ್ವಿತೀಯಾರ್ಧದಲ್ಲಿ ಒಂದರ ಹಿಂದೊಂದರಂತೆ ಅಚ್ಚರಿಗಳನ್ನು ನೀಡುತ್ತಾ, ಎಲ್ಲೂ ಮನಸ್ಸು ಕದಡಲು ಬಿಡದೇ ನಗಿಸುತ್ತಾರೆ. ಚಿತ್ರದಲ್ಲಿ ಸಂಭಾಷಣೆ, ಲೊಕೇಶನ್‌ ಗಳಿಗೂ ಮಹತ್ವ ನೀಡಲಾಗಿದೆ. ರಾಹುಲ್ ರಾಯ್ ಜಾನ್ ಅವರ ಕ್ಯಾಮೆರಾ ವರ್ಕ್ ಅದ್ಭುತವಾಗಿದೆ. ಹಾಗೆಯೇ ನವನೀತ್ ಅವರ ಬಿಜಿಎಂ ಮ್ಯೂಸಿಕ್ ಕಾಮಿಡಿ ಜಾನರ್​ಗೆ ಹೊಂದಿಕೊಳ್ಳುವಂತಿದೆ. ಹಾಗೆಂದ ಮಾತ್ರಕ್ಕೆ ಸಿನಿಮಾದಲ್ಲಿ ನೆಗೆಟಿವ್ ಅಂಶಗಳು ಇಲ್ಲವೆಂದಲ್ಲ.. ಸಿನಿಮಾ ಟೇಕಾಫ್ ಸ್ವಲ್ಪ ನಿಧಾನ ಎನಿಸಿದರೂ ನಂತರ ವೇಗ ಪಡೆದುಕೊಳ್ಳುತ್ತದೆ. ಮೊದಲಾರ್ಧದಲ್ಲಿ ಸ್ವಲ್ಪ ಕತ್ತರಿ ಪ್ರಯೋಗ ಮಾಡಿದ್ದರೆ ಸಿನಿಮಾ ಮತ್ತಷ್ಟು ಸುಂದರವಾಗುತ್ತಿತ್ತು. 'ಮದರ್ ಪ್ರಾಮಿಸ್' ಹಾಸ್ಯ ಇಷ್ಟ ಪಡುವವರಿಗೆ ಖಂಡಿತಾ ಇಷ್ಟ ಆಗುತ್ತೆ.

A still from mother promise movie
ಮದರ್ ಪ್ರಾಮಿಸ್ ಚಿತ್ರದ ಟ್ರೈಲರ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com