ಅದು ಹದಿನಾಲ್ಕನೆಯ ಶತಮಾನ. ಉತ್ತರಭಾರತದಲ್ಲಿ ತುಘಲಕ್ ದರ್ಬಾರ್ನಡೆಯುತ್ತಿದ್ದ ಕಾಲ. ಕಂಡ ಕಂಡ ಸಾಮ್ರಾಜ್ಯಗಳನ್ನೆಲ್ಲ ಅಡಿಯಾಳಾಗಿಸುವ ಭರದಲ್ಲಿದ್ದ ಮಹಮ್ಮದ್ ಬಿನ್ ತುಘಲಕ್ 3,70,000 ಸೈನಿಕರಿದ್ದ ಸುಸಜ್ಜಿತ ಸೇನೆ ಕಟ್ಟಿದ್ದ. ಮೊದಲೇ ಯಡವಟ್ಟು ನಿರ್ಧಾರಗಳಿಗೆ (ಕು)ಖ್ಯಾತನಾಗಿದ್ದ ತುಘಲಕ್ನ ಒಂದು ದೂರಾಲೋಚನೆ ಆತನ ಸೈನ್ಯವನ್ನೇ ದುರ್ಬಲಗೊಳಿಸಿತು. ತನ್ನ ಸೈನಿಕರಲ್ಲಿ ರಣೋತ್ಸಾಹವನ್ನು ಇಮ್ಮಡಿಗೊಳಿಸುವ ಸಲುವಾಗಿ ಸೈನಿಕರ ವೇತನವನ್ನು ನಗದು ರೂಪದಲ್ಲಿ, ಅದೂ ಯುದ್ಧಕ್ಕೂ ಮುನ್ನವೇ ನೀಡತೊಡಗಿದ. ಆದರೆ ಆತ ನಿರೀಕ್ಷಿಸಿದ್ದ ಕಾಲದಲ್ಲಿ ಯುದ್ಧ ಜರುಗಲಿಲ್ಲ, ಬೊಕ್ಕಸ ಬರಿದಾಗತೊಡಗಿತು. ಮೊದಮೊದಲು ಉತ್ಸಾಹಿತರಾಗಿಯೇ ಇದ್ದ ಸೈನಿಕರಲ್ಲಿ ತದನಂತರ ಸೋಮಾರಿತನ ಆವರಿಸತೊಡಗಿತು. ಮೊದಲೇ ವೇತನ ಸಿಕ್ಕಿದ್ದರಿಂದ ಕೆಲಸ ಮಾಡದಿದ್ದರೂ ಚಿಂತೆಯಿಲ್ಲ ಎಂಬಂತೆ ವರ್ತಿಸತೊಡಗಿದರು. ಮಹಮ್ಮದ್ ಬಿನ್ ತುಘಲಕ್ನ ಅರ್ಥವಿಲ್ಲದ ಕ್ರಮ ಅವನಿಗೇ ಮುಳುವಾಯಿತು.
ಇದೆಲ್ಲಾ ನೆನಪಾದದ್ದು ಇತ್ತೀಚೆಗೆ ಹೆಚ್ಚುತ್ತಿರುವ ನಿರುದ್ಯೋಗ ಭತ್ಯೆ ವಿಚಾರವಾಗಿ. ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನ, ಉತ್ತರಖಂಡ ಹೀಗೆ ಒಂದೊಂದೇ ರಾಜ್ಯಗಳು ನಿರುದ್ಯೋಗ ಭತ್ಯೆ ನೀಡುವಲ್ಲಿ ಹೆಜ್ಜೆ ಹಾಕುತ್ತಿವೆ. ಹರಿಯಾಣ ಸರ್ಕಾರವಂತೂ 2005ರಲ್ಲೇ ನಿರುದ್ಯೋಗ ಭತ್ಯೆ ಕಾಯಿದೆ ಜಾರಿಗೆ ತಂದಿತ್ತು. ಅದನ್ನು 2009ರಲ್ಲಿ ಪರಿಷ್ಕರಿಸಿ, 20 ವರ್ಷದಿಂದ 40 ವರ್ಷದೊಳಗಿನ ವಿದ್ಯಾವಂತ ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ನೀಡುತ್ತಿದೆ. ಪದವಿ ಪೂರ್ವ(102) ಮತ್ತು ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ ನಿರುದ್ಯೋಗಿ ಯುವಕರಿಗೆ 500 ರು.ನಿಂದ 1000 ರು.ವರೆಗೆ, ಯುವತಿಯರಿಗೆ 900 ರು.ನಿಂದ 1500 ರು.ವರೆಗೆ ಮಾಸಿಕ ಭತ್ಯೆ ನೀಡುತ್ತಿದೆ. ಉತ್ತರಪ್ರದೇಶ ಸರ್ಕಾರ ನಿರುದ್ಯೋಗ ಭತ್ಯೆಯನ್ನು 1000 ರುಪಾಯಿ ಎಂದು ನಿಗದಿಗೊಳಿಸಿದೆ. 18ರಿಂದ 20 ಲಕ್ಷ ಯುವಕ-ಯುವತಿಯರಿಗೆ ಸೌಲಭ್ಯ ಹಂಚಿಕೆ ಮಾಡುವ ನಿರೀಕ್ಷೆಯಿಟ್ಟು, 900 ಕೋಟಿ ರುಪಾಯಿ ಮೀಸಲಿರಿಸಿದ್ದಾರೆ ಅಖಿಲೇಷ್ ಯಾದವ್. ಮುಖ್ಯಮಂತ್ರಿಯಾಗಿ ಅಖಿಲೇಷ್ ಈ ಘೋಷಣೆ ಮಾಡುವ ಮುನ್ನ, ಉದ್ಯೋಗವಿಲ್ಲವೆಂದು ಉತ್ತರಪ್ರದೇಶದ ಉದ್ಯೋಗ ವಿನಿಮಯ ಕೇಂದ್ರದಲ್ಲಿ 72,192 ಮಂದಿ ನೊಂದಾಯಿಸಿದ್ದರು. ಆದರೆ ಘೋಷಣೆಯಾದ 20 ದಿನಗಳಲ್ಲೇ ಆ ನಿರುದ್ಯೋಗಿಗಳ ಸಂಖ್ಯೆ 1.23 ಲಕ್ಷಕ್ಕೇರಿತು.
ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯನ್ನು ಕಾರ್ಯರೂಪಕ್ಕಿಳಿಸಿರುವುದೇನೋ ನಿಜ. ಆದರೆ ಭವಿಷ್ಯದಲ್ಲಿ ಇದು ಮಾರಕವಾಗಬಾರದಲ್ಲವೇ? ವಿದ್ಯಾವಂತ ಯುವ ಜನಾಂಗದ ಸ್ವಾವಲಂಬಿ ಜೀವನಕ್ಕೆ ಸಹಕಾರಿಯಾದ ಕ್ರಮಕೈಗೊಳ್ಳುವುದನ್ನು ಬಿಟ್ಟು, ಹೀಗೆ ಹಣ ಹಂಚುತ್ತಾ ಹೋದರೆ, ಬೊಕ್ಕಸ ಬರಿದಾಗುವುದಿಲ್ಲವೇ? ಚೀನಾಗಿಂತಲೂ ಯುವಜನತೆಯ ಪ್ರಮಾಣದಲ್ಲಿ ಮುಂದಿರುವ ಭಾರತದಲ್ಲಿ ದುಡಿಯುವ ವರ್ಗವನ್ನು ಕೈಕಟ್ಟಿ ಕೂರುವಂತೆ ಮಾಡುವುದು ಹಾಸ್ಯಾಸ್ಪದವಲ್ಲವೇ? ಶಿಕ್ಷಣ ಪೂರ್ಣಗೊಳಿಸಿದ ತಕ್ಷಣ ನಿರುದ್ಯೋಗಿಗಳು ಎಂದು ಭತ್ಯೆ ನೀಡುವುದಾದರೆ, ಅದೆಷ್ಟೋ ಕಂಪನಿಗಳಲ್ಲಿ ದುಡಿದರೂ ಸಂಬಳ-ಸೌಲಭ್ಯಗಳನ್ನು ನಿಗದಿತ ಸಮಯದಲ್ಲಿ ನೀಡದಿರುವ ಸಾಕಷ್ಟು ಉದಾಹರಣೆಗಳಿವೆಯಲ್ಲ, ಅವರ ಸಮಸ್ಯೆಗಳೇಕೆ ಕಾಣುತ್ತಿಲ್ಲ? ವಿನಾಕಾರಣ ಉದ್ಯೋಗಿಗಳನ್ನು ಹೊರಗಟ್ಟುವ ಮಾಲೀಕರನ್ನು ಎಚ್ಚರಿಸಿ ಉದ್ಯೋಗ ಭದ್ರತೆ ನೀಡುವ ಬದಲಿಗೆ, ಹಣ ಹಂಚುತ್ತಿದ್ದರೆ ಆರ್ಥಿಕ ಅಭಿವೃದ್ಧಿ ದರ(ಜಿಡಿಪಿ)ದ ಮೇಲೆ ಬೀರುವ ಪರಿಣಾಮದ ಅರಿವಿದೆಯೇ?
ಇತಿಹಾಸ ಮರೆತವನು ಇತಿಹಾಸ ಬರೆಯಲಾರ ಎಂಬ ಮಾತೊಂದಿದೆ. ಕಾಲಗರ್ಭದಲ್ಲಿ ಹುದುಗಿಹೋದ ಮಹಮ್ಮದ್ ಬಿನ್ ತುಘಲಕ್ ಮಾಡಿದ ತಪ್ಪುಗಳಿಂದ ಇಂದಿಗೂ ಕಲಿಯಬೇಕಾದದ್ದು ಬಹಳಷ್ಟಿದೆ. ಆದರೆ ಇಂದು ಕಾನೂನಿನ ಮೂಲಕವೇ ಮತದಾರರಿಗೆ ಕೊಡೆ ಹಿಡಿಯಲು ಬಯಸುವ ರಾಜಕೀಯ ಪಕ್ಷಗಳ ಕೆಲವು ನಿರ್ಧಾರಗಳು ವ್ಯವಸ್ಥೆಗೆ ಅಡ್ಡಗಾಲು ಹಾಕುವುದು ನಿಶ್ಚಿತವೆನಿಸುತ್ತದೆ.
ಶಿಕ್ಷಣ ಪೂರ್ಣಗೊಳಿಸಿದ ತಕ್ಷಣವೇ ನಿರುದ್ಯೋಗಿಗಳು ಎಂಬ ಪಟ್ಟ ಕಟ್ಟಿ ಭತ್ಯೆ ನೀಡಲು ಮುಂದಾಗುವವರು ಫೋರ್ಬ್ಸನ ಮಾಹಿತಿಯನ್ನೊಮ್ಮೆ ಗಮನಿಸಬೇಕು. ನಿರುದ್ಯೋಗ ಭತ್ಯೆ ಮತ್ತು ವಿಮೆಯ ಬಗ್ಗೆ ಫೋರ್ಬ್ಸ ನಡೆಸಿದ ಸರ್ವೇಯ ಮಾಹಿತಿ ಆಶ್ಚರ್ಯಗೊಳಿಸುತ್ತದೆ. ಮಕ್ಕಳ ಹಕ್ಕುಗಳ ವಿಚಾರವಾಗಿ ಸುದ್ದಿಯಾಗುವ ನಾರ್ವೇ ನಿರುದ್ಯೋಗ ಭತ್ಯೆ ನೀಡುವಲ್ಲಿ ಮೊದಲ ಸ್ಥಾನದಲ್ಲಿದೆ. ಅಲ್ಲಿ ಉದ್ಯೋಗ ಕಳೆದುಕೊಂಡ ವ್ಯಕ್ತಿ, ತಾನು ಹಿಂದೆ ಪಡೆಯುತ್ತಿದ್ದ ವೇತನದ 87.6 ಪ್ರತಿಶತ ಮೊತ್ತವನ್ನು ಭತ್ಯೆಯಾಗಿ ಸರ್ಕಾರದಿಂದ ಪಡೆಯುತ್ತಾನೆ. ಅದು 500 ದಿನಗಳವರೆಗೆ. ಫಿನ್ಲ್ಯಾಂಡ್ನಲ್ಲಿ ಉದ್ಯೋಗ ಕಳೆದುಕೊಂಡ ಒಂದು ವರ್ಷದವರೆಗೆ 81.5 ಪ್ರತಿಶತ ಭತ್ಯೆ ನೀಡಲಾಗುತ್ತದೆ. ಸ್ವೀಡನ್, ಇಸ್ರೇಲ್, ಜಪಾನ್, ಜರ್ಮನಿಗಳಲ್ಲಿ ಶೇ.66ರಿಂದ 90 ಪ್ರತಿಶತದವರೆಗೆ ಭತ್ಯೆ ಪಡೆಯುತ್ತಾರೆ. ಇನ್ನು ಜಗತ್ತಿನ ದೊಡ್ಡಣ್ಣ ಅಮೆರಿಕದಲ್ಲಿ ಹಿಂದೆ ಪಡೆಯುತ್ತಿದ್ದ ವೇತನದ ಶೇ.27ರಷ್ಟನ್ನು ನಿಗದಿಗೊಳಿಸಲಾಗಿದೆ. ಸಾಮಾಜಿಕ ಭದ್ರತಾ ಕಾಯಿದೆಯಡಿ ಅಮೆರಿಕ ತನ್ನ ನಾಗರೀಕರಿಗೆ ನಿರುದ್ಯೋಗ ಭತ್ಯೆ ನೀಡಲು ಕೆಲವು ನಿಯಮಗಳನ್ನು ಹೇರಿದೆ. ನಿರುದ್ಯೋಗ ಭತ್ಯೆ ಪಡೆಯಲು ಇಚ್ಛಿಸುವವರು ಉದ್ಯೋಗದಲ್ಲಿದ್ದ ಸಮಯದಲ್ಲಿ, ತಮ್ಮ ವೇತನದ ಶೇ.5.4ರಷ್ಟನ್ನು ನಿರುದ್ಯೋಗ ವಿಮೆ ಎಂದು ಪಾವತಿಸಬೇಕಾಗುತ್ತದೆ. ಅಂತಹವರು ಉದ್ಯೋಗ ಕಳೆದುಕೊಂಡಲ್ಲಿ, ನಿರುದ್ಯೋಗಿಯೆಂದು ಪರಿಗಣಿಸಿ ಅವರು ಪಡೆಯುತ್ತಿದ್ದ ವೇತನದ ಶೇ.27ರಷ್ಟು ಮೊತ್ತವನ್ನು ಭತ್ಯೆಯೆಂದು ನೀಡಲಾಗುತ್ತದೆ. ಅದು 26 ವಾರಗಳವರೆಗೆ ಮಾತ್ರ. ಹೆಚ್ಚೆಂದರೆ 46 ವಾರಗಳಿಗೆ ವಿಸ್ತರಿಸಬಹುದಷ್ಟೇ.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿಯೇ ಶಿಕ್ಷಣ ಮುಗಿಸಿದ ತಕ್ಷಣ ಭತ್ಯೆ ನೀಡದೆ, ಕೆಲಸದಲ್ಲಿದ್ದು, ಅಕಸ್ಮಾತ್ ಆ ಕೆಲಸ ಕಳೆದುಕೊಂಡರೆ, ಅದು ವಿಮೆ ರೂಪದಲ್ಲಿ ಹಣ ಕಟ್ಟಿದ್ದವರಿಗೆ ಮಾತ್ರ ಭತ್ಯೆ ನೀಡಲಾಗುತ್ತದೆ. ಅಖಿಲೇಷ್ ಯಾದವ್ ನೀಡುತ್ತಿರುವ 1000 ರುಪಾಯಿ, ಹರಿಯಾಣ ಸರ್ಕಾರ ನೀಡುತ್ತಿರುವ ಭತ್ಯೆಗಳು ಶಿಕ್ಷಣ ಮುಗಿಸಿದವರನ್ನೆಲ್ಲಾ ನಿರುದ್ಯೋಗಿಗಳು ಎಂದು ಪರಿಗಣಿಸಿ ನೀಡಲಾಗುತ್ತಿದೆ. ಇದಕ್ಕಾಗಿ ಸಾವಿರಾರು ಕೋಟಿ ರುಪಾಯಿಗಳನ್ನು ಮೀಸಲಿಡಲಾಗುತ್ತಿದೆ. ಚುನಾವಣಾ ರಾಜಕೀಯದಲ್ಲಿ ಅಸ್ತಿತ್ವ ಕಂಡುಕೊಳ್ಳಲು ಇಂತಹ ನಿರ್ಧಾರ ಕೈಗೊಳ್ಳಬೇಕೇ?
ನಮ್ಮ ರಾಜ್ಯದಲ್ಲಿಯೂ ಮುಂದಿನ ವಾರದಲ್ಲಿ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ಹೊರಬರಲಿವೆ. ಕೆಲವರು ನಿರುದ್ಯೋಗ ಭತ್ಯೆ ನೀಡುವ ಬಗ್ಗೆಯೂ ಮಾತನಾಡಿದ್ದಾರೆ. ಅಖಿಲೇಷ್ ಯಾದವ್ ಮಾದರಿಯಲ್ಲಿ ಹೆಜ್ಜೆ ಇಟ್ಟರೆ, ಮುಂದಿನ ದಿನಗಳಲ್ಲಿ ರಾಜ್ಯದ ಯುವ ಜನಾಂಗಕ್ಕೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಯುವ ಮತದಾರರನ್ನು ಸೆಳೆಯುವ ಭರವಸೆಗಳಲ್ಲಿ ನಿರುದ್ಯೋಗ ವಿಮೆ ಜಾರಿ ಮಾಡಿ ಆರ್ಥಿಕ ಏರುಪೇರಿನಿಂದಾಗುವ ಅಭದ್ರತೆಯನ್ನು ಹೋಗಲಾಡಿಸುವುದು, ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದು, ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ನಿರೀಕ್ಷಿಸಿದ್ದ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುವುದು. ಇಷ್ಟಿದ್ದರೆ ಸಾಕಷ್ಟೇ. ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಹೇಳಿರುವಂತೆ ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ 12000 ಹುದ್ದೆಗಳು ಖಾಲಿ ಇವೆ. ಹಾಗೂ ರಾಜ್ಯ ಆರ್ಥಿಕ ಇಲಾಖೆಯ 2011-12ರ ವರದಿಯ ಪ್ರಕಾರ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ 1200ಕ್ಕೂ ಹೆಚ್ಚು ಹುದ್ದೆಗಳು, ಅಬಕಾರಿ ಇಲಾಖೆಯಲ್ಲಿ 2250ಕ್ಕೂ ಹುದ್ದೆಗಳು ಖಾಲಿ ಇವೆ. ಇವು ಕೆಲವು ಇಲಾಖೆಯ ಉದಾಹರಣೆಗಳಷ್ಟೇ. ಎಲ್ಲಾ ಇಲಾಖೆಗಳು, ನಿಗಮ-ಮಂಡಳಿಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಗೆ, 10 ಲಕ್ಕಕ್ಕೂ ಹೆಚ್ಚಿನ ಜನರಿಗೆ ಉದ್ಯೋಗ ಸೃಷ್ಟಿಸುವ ನಿರೀಕ್ಷೆಯಲ್ಲಿರುವ 2010 ಮತ್ತು 2012ರ ಜಾಗತಿಕ ಬಂಡವಾಳ ಹೂಡಿಕೆದಾರರ ಯೋಜನೆಗಳನ್ನು ಕಾರ್ಯಗತಗೊಳಿಸುತ್ತೇವೆಂದು ಭರವಸೆ ನೀಡಬೇಕಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ ನಿರುದ್ಯೋಗ ಪ್ರಮಾಣವನ್ನು ಆದಷ್ಟು ಕಡಿತಗೊಳಿಸಬೇಕಾಗಿದೆ.
ಜನಪ್ರಿಯ ಕಾರ್ಯಕ್ರಮಗಳಿಗಿಂತಲೂ ಜನಪರ ಕಾರ್ಯಕ್ರಮಗಳು ಒಂದು ವ್ಯವಸ್ಥೆಯನ್ನು ಸುಭದ್ರವಾಗಿಡಲು ಸಹಕರಿಸುತ್ತವೆ. ಮೆಡಿಕಲ್ ಕಾಲೇಜುಗಳ ನಿರ್ಮಾಣಕ್ಕೆ ಅನುಮತಿ ನೀಡುವುದಕ್ಕಿಂತಲೂ ಮುಖ್ಯವಾಗಿ ಆಯಕಟ್ಟಿನ ಸ್ಥಳಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳನ್ನು ನಿರ್ಮಿಸುವುದು. ಮಕ್ಕಳಿಗೆ ಸೈಕಲ್ ನೀಡುವುದಕ್ಕಿಂತಲೂ, ಉತ್ತಮ ಶಾಲಾ ಕಟ್ಟಡ ಮತ್ತು ಕೌಶಲ್ಯಭರಿತ ಶಿಕ್ಷಕರನ್ನು ಒದಗಿಸುವುದು. ರೈತರ ಸಾಲ ಮನ್ನಾ ಮಾಡಿ, ಸಾಧನೆ ಎನ್ನುವುದಕ್ಕಿಂತಲೂ ರಸಗೊಬ್ಬರ, ನೀರು, ವಿದ್ಯುತ್, ಮಾರುಕಟ್ಟೆಗಳ ಸೌಲಭ್ಯ ಹೆಚ್ಚಿಸಲು ಬಂಡವಾಳ ಹೂಡುವುದು. 24/7 ವಿದ್ಯುತ್ ಒದಗಿಸುತ್ತೇವೆಂದು ಹೊರರಾಜ್ಯಗಳು ಅಥವಾ ಕಂಪನಿಗಳಿಂದ ಖರೀದಿಸುವ ಬದಲಿಗೆ, ಬೇರೆ ಬೇರೆ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಅಡಿಗಲ್ಲು ಹಾಕುವುದು. ಜಾಗತಿಕ ಮಟ್ಟದ ಬಂಡವಾಳ ಹೂಡಿಕೆ ಕಾರ್ಯಕ್ರಮಗಳನ್ನು ಮಾಡಿಯೂ, ನಿರುದ್ಯೋಗ ಭತ್ಯೆ ಬಗ್ಗೆ ಯೋಚಿಸುವ ಬದಲಿಗೆ ಹೊಸ ಕೈಗಾರಿಕೆಗಳ ನಿರ್ಮಾಣಕ್ಕೆ ರಾಜ್ಯದ ಯುವಕ/ಯುವತಿಯರಿಗೆ ಸಬ್ಸಿಡಿ ಮೂಲಕ ಸಾಲ ಒದಗಿಸುವುದು ಮತ್ತು ನಷ್ಟದಿಂದ ಸೊರಗುತ್ತಿರುವ ಹಳೆಯ ಕೈಗಾರಿಗಳಿಗೆ ಪುನಶ್ಚೇತನ ನೀಡುವುದು. ಒಂದು ಕಲ್ಯಾಣ ರಾಜ್ಯದ ಗುರಿ ಸಾಧನೆಗೆ ಇಂತಹ ಕ್ರಮಗಳು ಸಹಕಾರಿಯಾಗುತ್ತವೆ.
ಕೆಲವರನ್ನು ಹೊರಗಿಟ್ಟರೆ, ಪ್ರಬುದ್ಧ ರಾಜಕಾರಣಿಗಳಿಂದ ಕೂಡಿರುವ ಕರ್ನಾಟಕದ ರಾಜಕೀಯ ಪಕ್ಷಗಳ ಮುಖಂಡರಿಂದ ನಿರುದ್ಯೋಗ ಭತ್ಯೆಯಂತಹ ಅಸಂಬದ್ಧ ಭರವಸೆಗಳು ಬರುವುದಿಲ್ಲ ಎಂಬ ನಿರೀಕ್ಷೆಯಿದೆ.
- ಗೋಪಾಲಕೃಷ್ಣ ಕೆ.ಸಿ.