ಅಂಕಣಗಳು

ಆ ಅದಮ್ಯ ಚೇತನಕ್ಕೆ ನಾವು ಕೊಡುವ ಬೆಲೆ ಇಷ್ಟೇನಾ?

Published On :

ನಂಬಲಸಾಧ್ಯವಾದಂತಹ ಘಟನೆಯೊಂದು ಈ ತಿಂಗಳು ಕೇರಳದಲ್ಲಿ ನಡೆಯಿತು. ಕಾಂಗ್ರೆಸ್, ಸಿಪಿಎಮ್ ಮತ್ತು ಬಿಜೆಪಿಯ ನಾಯಕರು ತಿರುವನಂತಪುರದಲ್ಲಿ ನಡೆದ, ಖ್ಯಾತ ಆರ್‌ಎಸ್‌ಎಸ್ ಚಿಂತಕ ಪಿ. ಪರಮೇಶ್ವರನ್ ಸಂಪಾದಿತ 'ಸ್ವಾಮಿ ವಿವೇಕಾನಂದ ಮತ್ತು ಪ್ರಭುದ್ಧ ಕೇರಳಂ' ಎನ್ನುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವೇದಿಕೆ ಹಂಚಿಕೊಂಡಿದ್ದರು. ವೇದಿಕೆಯ ಮೇಲೆ ಉಪಸ್ಥಿತರಿದ್ದವರು, ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಸಂಸ್ಕೃತಿ ಸಚಿವ ಕೆ.ಸಿ. ಜೊಸೆಫ್(ಕೇರಳ ದಿನದಿಂದ ದಿನಕ್ಕೆ ಕಮ್ಯೂನಲ್ ಆಗುತ್ತಿದೆ ಹಾಗಾಗೇ ಸ್ವಾಮೀಜಿಯ ಸಂದೇಶ ಈ ಸನ್ನಿವೇಶದಲ್ಲಿ ಸೂಕ್ತವೆನಿಸುತ್ತಿದೆ), ಮಾಜಿ ಮುಖ್ಯಮಂತ್ರಿ ಮತ್ತು ಕೇರಳದ ಅತಿ ಎತ್ತರದ ಸಿಪಿಎಮ್ ನಾಯಕ ವಿ.ಎಸ್. ಅಚ್ಯುತಾನಂದನ್ (ವಿವೇಕಾನಂದರು ಭಾರತದ ಮೊದಲ ಸಮಾಜವಾದಿ), ಮತ್ತು ಬಿಜೆಪಿಯ ಹಿರಿಯ ನಾಯಕ ಒ. ರಾಜಗೋಪಾಲ್.
ಇಂದಿನ ದಿನಗಳಲ್ಲಿ ರಾಜಕಾರಣಿಗಳು ಯಾವುದೇ ಒಂದು ವಿಷಯವನ್ನು ಚರ್ಚೆ ಮಾಡುವುದಕ್ಕಿಂತ, ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗಿ ಅದನ್ನು ಕೂಡಲೇ ಪರ್ಯಾವಸನ ಮಾಡುತ್ತಾರೆ. ಅಂಥದ್ದರಲ್ಲಿ ಕೇರಳದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಇಷ್ಟೊಂದು ವಿಭಿನ್ನ ಸಿದ್ಧಾಂತಗಳಿಗೆ ಅಂಟಿಕೊಂಡ ನಾಯಕರು ಮಾತನಾಡಿದ, ನಡೆದುಕೊಂಡ ರೀತಿಯನ್ನು ನೋಡಿದರೆ ಅಭಿಪ್ರಾಯ ವಿರೋಧವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಗುಣವುಳ್ಳ ನಮ್ಮ ಈ ಪುರಾತನ ನಾಡಿನಿಂದ 'ವಿವೇಕ'ವೆಂಬುದು ಇನ್ನೂ ಮಾಯವಾಗಿಲ್ಲ ಎನ್ನುವ ಭರವಸೆ ಮೂಡುತ್ತದೆ. ಅದಾಗ್ಯೂ, ಸ್ವಾಮಿ ವಿವೇಕಾನಂದರಂತಹ ಸಂತರನ್ನು ಒಂದು ಕೋಮಿಗಷ್ಟೇ ಸೀಮಿತ ಮಾಡಿ ನೋಡುವುದು ಬೌದ್ಧಿಕವಾಗಿ ಅಡ್ಡದಾರಿ ಹಿಡಿದಿರುವವರು ಮತ್ತು ಪೂರ್ವಾಗ್ರಹ ಪೀಡಿತರಿಂದ ಮಾತ್ರ ಸಾಧ್ಯ.  ವಿವೇಕಾನಂದರ 150ನೇ ಜನ್ಮ ವಾರ್ಷಿಕೋತ್ಸವವನ್ನು ನಾವು ಈ ವರ್ಷ ಆಚರಿಸುತ್ತಿದ್ದೇವೆ. ಆಧುನಿಕ ಭಾರತದ ಇತಿಹಾಸದಲ್ಲಿ ನುಡಿದಂತೆ ನಡೆದ, ಜಾತಿ, ಮತ ಅಥವಾ ಒಂದು ಸಿದ್ಧಾಂತವನ್ನೂ ಮೀರಿ ಜನರ ಪ್ರೀತಿ ಗಳಿಸಿದ ತೇಜಸ್ವೀ ವ್ಯಕ್ತಿತ್ವ ಅವರದ್ದು. ಅವರ ತತ್ವಜ್ಞಾನದ ಆಳ, ವ್ಯಾಪ್ತಿ ಎಷ್ಟಿದೆಯೆಂದರೆ ಅದು ಕೇವಲ ಭಾರತೀಯರನ್ನಷ್ಟೇ ಅಲ್ಲದೆ, ಇಡೀ ಮಾನವ ಕುಲವನ್ನು ಒಂದಾಗಿಸುವ ಶಕ್ತಿ ಹೊಂದಿದೆ.
ತಮ್ಮ ಮೂಗಿನ ನೇರಕ್ಕೆ ಮತ್ತು ಅಜೆಂಡಾಕ್ಕೆ ಸರಿಹೊಂದುವಂತೆ ಕೆಲವರು ವಿವೇಕಾನಂದರನ್ನು ಬಣ್ಣಿಸುತ್ತಾರಾದರೂ, ಅಂಥವರ ವಿಚಾರಕ್ಕೆ ಸವಾಲು ಒಡ್ಡುವಂತಹ ವ್ಯಕ್ತಿತ್ವ ವಿವೇಕಾನಂದರದ್ದಾಗಿತ್ತು. ಅವರು ಹಿಂದುಗಳ ಪುನರುಜ್ಜೀವಕ ಎಂಬುದು ಸುಳ್ಳಲ್ಲ. ಆದರೆ ಒಬ್ಬ ವ್ಯಕ್ತಿ ಹಿಂದು, ಮುಸ್ಲಿಂ ಅಥವಾ ಕ್ರಿಶ್ಚಿಯನ್‌ರ ಪುನರುಜ್ಜೀವಕನಾದರೆ ಅದರಲ್ಲಿ ತಪ್ಪೇನಿದೆ? ಹಿಂದುತ್ವ, ಇಸ್ಲಾಂ ಅಥವಾ ಕ್ರಿಶ್ಚಿಯಾನಿಟಿಯಲ್ಲಿನ ಅತ್ಯುತ್ತಮ ಅಂಶಗಳನ್ನು ಪುನಶ್ಚೇತನಗೊಳಿಸುವುದಕ್ಕೆ ಯಾರಾದರೂ ಪ್ರಾಮಾಣಿಕ ಪ್ರಯತ್ನಪಟ್ಟರೆ ಅವರನ್ನು ಕೆಟ್ಟಗಣ್ಣಿನಿಂದ ನೋಡಬೇಕೇ? ವಿವೇಕಾನಂದರೇನು ಹಿಂದು ಧರ್ಮಕ್ಕಷ್ಟೇ ಪ್ರಾಧಾನ್ಯ ಕೊಟ್ಟಿದ್ದರೆ? ಅವರ ಕನಸಿನ ಭಾರತ ಕೇವಲ ಹಿಂದುತ್ವದ ಮೇಲೆ ನಿರ್ಮಾಣವಾಗಿತ್ತೇ? ಖಂಡಿತ ಇಲ್ಲ. ಅವರು ಕಟ್ಟಾ ಜಾತ್ಯತೀತರಾಗಿದ್ದರು(ಎಲ್ಲಾ ನಂಬಿಕೆಗಳನ್ನೂ ಅವರು ಗೌರವಿಸುತ್ತಿದ್ದರು). ಬುದ್ಧನ ಜೊತೆಗೆ ಏಸು ಕ್ರಿಸ್ತ ಮತ್ತು ಪ್ರವಾದಿ ಮೊಹಮ್ಮದ್‌ರ ಶ್ರೇಷ್ಠತೆಯನ್ನು ಕೊಂಡಾಡಿದ್ದಾರೆ. ಆ ಹೊಗಳಿಕೆ ಅವರ ಹೃದಯಾಂತರಾಳದಿಂದಲೇ ಬಂದಿದೆ. ಹಿಂದು-ಮುಸ್ಲಿಂ ಐಕ್ಯತೆಯ ಬಗ್ಗೆ ಮಾತನಾಡುತ್ತಾ, ಒಮ್ಮೆ ಅವರು ಹೇಳಿದ್ದರು: 'ನಮ್ಮ ಮಾತೃಭೂಮಿಗೆ ಇಸ್ಲಾಂ ಮತ್ತು ಹಿಂದುತ್ವ ಎಂಬ ಎರಡು ಶ್ರೇಷ್ಠ ನಂಬಿಕೆಗಳೇ ಆಶಾಕಿರಣವಾಗಿವೆ. ಭವಿಷ್ಯದಲ್ಲಿ ವೇದಾಂತವೆಂಬ ಬುದ್ಧಿ ಮತ್ತು ಇಸ್ಲಾಂ ಎಂಬ ದೇಹ ಒಗ್ಗೂಡಿ ಸಮಾಜದಲ್ಲಿ ತುಂಬಿರುವ ಅರಾಜಕತೆ ಮತ್ತು ಅನ್ಯಾಯವನ್ನು ಸೀಳುತ್ತಾ ಭಾರತವನ್ನು ವೈಭವಯುತ ಮತ್ತು ಅಜೇಯ ರಾಷ್ಟ್ರವನ್ನಾಗಿ ಮಾಡಲಿವೆ ಎನ್ನುವುದನ್ನು ಸ್ಪಷ್ಟವಾಗಿ ನನ್ನ ಒಳಗಣ್ಣು ಹೇಳುತ್ತಿವೆ'.
 ಜಾತಿಯ ಹೆಸರಿನಲ್ಲಿ ದಬ್ಬಾಳಿಕೆ ನಡೆಸುತ್ತಿದ್ದ ಮೇಲ್ಜಾತಿಯ ಹಿಂದುಗಳಿಗೆ ಮತ್ತು ಹಿಂದು ಧರ್ಮ ಕೇವಲ ಜಾತೀಯತೆಯನ್ನು ಪ್ರತಿಪಾದಿಸುವ ಧರ್ಮವೆಂದು ಅದಕ್ಕೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದ ವಿದೇಶಿ ಪೋಷಿತ ಹಿಂದೂವಿರೋಧಿಗಳಿಗೆ  ವಿವೇಕಾನಂದರು ಮುಳ್ಳಾಗಿ ಪರಿಣಮಿಸಿದ್ದರು. ಏಕೆಂದರೆ ಅವರು ಅಸ್ಪೃಶ್ಯತೆ ಮತ್ತು ಜಾತಿ ಅಸಮತೆಯನ್ನೇ ಜೀವಾಳವಾಗಿಸಿಕೊಂಡಿದ್ದ ಸಾಂಪ್ರಾದಾಯಿಕ ಹಿಂದುಗಳ ಎದೆಯನ್ನು ಥರಗುಟ್ಟಿಸಿದ ಸಾಮಾಜಿಕ ಕ್ರಾಂತಿಕಾರಿಯಾಗಿದ್ದರು. ಇದೇ ಸಮಯದಲ್ಲೇ ಅವರು ವೇದ, ಉಪನಿಷತ್ತುಗಳಲ್ಲಿನ ಅತ್ಯುತ್ತಮ ಅಂಶಗಳಾದ ಮಾನವ ಪ್ರೀತಿ ಮತ್ತು ಸೋದರತೆಯನ್ನು ಎದೆಯುಬ್ಬಿಸಿಕೊಂಡು ಎತ್ತಿಹಿಡಿದರು.
ಇನ್ನು ಅವರು ಹಿಂದು ಸಮಾಜದಲ್ಲಿನ ಇನ್ನೆರಡು ಜಾಡ್ಯಗಳ ವಿರುದ್ಧವೂ ಕತ್ತಿ ಬೀಸಿದರು. ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಮತ್ತು ಶ್ರೀಮಂತರು ಬಡವರೆಡೆಗೆ ತೋರಿಸುತ್ತಿದ್ದ ನಿಷ್ಕರುಣೆಯನ್ನು ಅವರು ಉಗ್ರವಾಗಿ ಟೀಕಿಸಿದ್ದಾರೆ. 'ಭಾರತಕ್ಕೆ ಎರಡು ಪೀಡೆಗಳು ಗಟ್ಟಿಯಾಗಿ ಅಂಟಿಕೊಂಡಿವೆ- ಮಹಿಳೆಯ ಮೇಲಾಗುತ್ತಿರುವ ದೌರ್ಜನ್ಯ ಮತ್ತು ಬಡವರ ತುಳಿತ. ಮಹಿಳೆಗೆ ಅನ್ಯಾಯ ಮಾಡುವಂತಹ ಮತ್ತು ಬಡವರನ್ನು ಹಿಂಸಿಸುವಂತಹ ಮನೆ ಅಥವಾ ದೇಶ ಎಂದಿಗೂ ಉನ್ನತಮಟ್ಟಕ್ಕೇರಲಾರದು' ಎಂದವರು ಹೇಳುತ್ತಿದ್ದರು.
ಇನ್ನು ಒಬ್ಬ ಸನ್ಯಾಸಿಯಾಗಿ ವಿವೇಕಾನಂದರ ಆಧ್ಯಾತ್ಮಿಕತೆ, ತ್ಯಾಗ ಮತ್ತು ಬಲಿದಾನದ ಸಂಕೇತವಾದ ಕೇಸರಿ ಬಣ್ಣದ ಮಹತ್ವವನ್ನು ಅತ್ಯುನ್ನತ ಮಟ್ಟಕ್ಕೆ ತಲುಪಿಸಿದೆ. ಏನೇ ಆದರೂ ಅವರಂತೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಮೆಚ್ಚಿಕೊಂಡಿದ್ದ ಆಧುನಿಕ ಸಂತ ಇನ್ನೊಬ್ಬರಿರಲಿಕ್ಕಿಲ್ಲ. ಸ್ಟೀಲ್ ಕಾರ್ಖಾನೆಯನ್ನು ಸ್ಥಾಪಿಸಬೇಕೆಂಬ ಜೆಮ್‌ಶೆಡ್‌ಜೀ ಟಾಟಾ ಅವರ ಯೋಜನೆಯನ್ನು ಅವರು ಬಹುವಾಗಿ ಇಷ್ಟಪಟ್ಟಿದ್ದರು. ಬೆಂಗಳೂರಿನಲ್ಲಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್‌ಸಿ) ಅನ್ನು ಸ್ಥಾಪಿಸಲು ಟಾಟಾಗೆ ಅವರು ತುಂಬಾ ಪ್ರೋತ್ಸಾಹ ನೀಡಿದ್ದರು. ಬಹಳಷ್ಟು ವಿಜ್ಞಾನಿಗಳಿಗೂ ಅವರು ಪ್ರೇರಕ ಶಕ್ತಿಯಾಗಿದ್ದಾರೆ. ನಿಕೋಲಾ ಟೆಸ್ಲಾರಂತಹ ಶ್ರೇಷ್ಠವಿಜ್ಞಾನಿಯೂ ವಿವೇಕಾನಂದರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದವರೇ. ಒಮ್ಮೆ ವಿವೇಕಾನಂದರು ಯುವಕರು ದಂಡಿಯಾಗಿ ನೆರೆದಿದ್ದ ಸಮಾರಂಭವೊಂದರಲ್ಲಿ ಹೀಗೆ ಹೇಳಿದ್ದರು-'ಫುಟ್‌ಬಾಲ್ ಆಡುವುದರಿಂದ ನೀವು ದೇವರಿಗೆ ಹತ್ತಿರವಾಗಬಹುದೇ ಹೊರತು, ಭಗವದ್ಗೀತೆ ಓದುವುದರಿಂದಲ್ಲ!'
ಕೇವಲ 39 ವರ್ಷಗಳು(1863-1902) ಬದುಕಿದ್ದ ಈ ಅದಮ್ಯ ಚೇತನ ಹಚ್ಚಿಹೋದ ದೀಪ ಇಂದಿಗೂ ಜನರಿಗೆ ದಾರಿದೀಪವಾಗುತ್ತಲೇ ಇದೆ. ಆದರೆ ಅವರು ಹೇಗೆ ಒಬ್ಬ ಅಂತಾರಾಷ್ಟ್ರೀಯವಾದಿಯಾಗಿದ್ದರೋ ಅದೇ ರೀತಿ ರಾಷ್ಟ್ರೀಯವಾದಿಯೂ ಆಗಿದ್ದರು ಎಂಬುದು ಸತ್ಯ. ಇಂತಹ ಗುಣ ಎಲ್ಲಾ ಪವಿತ್ರ ಸಂತರಲ್ಲೂ ಇರುವಂಥದ್ದೆ.
ದುರದೃಷ್ಟವಶಾತ್, ಕಾಂಗ್ರೆಸ್ ಮತ್ತು ಯುಪಿಎದ ನಾಯಕರು ಸ್ವಾಮೀಜಿಯ 150ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ. ಈ ಕಾರಣಕ್ಕಾಗಿಯೇ ಅಧಿಕೃತ ಭಾರತ, ಆ ವರ್ಚಸ್ವಿ ಆಧ್ಯಾತ್ಮಿಕ ಕ್ರಾಂತಿಕಾರಿಗೆ ಗೌರವ ಸಲ್ಲಿಸುವ ಜವಾಬ್ದಾರಿಯನ್ನು ಖುದ್ದಾಗಿ ವಹಿಸಿಕೊಂಡಿದೆ. ವಿವೇಕಾನಂದರ ಬದುಕು ಮತ್ತು ಬೋಧನೆ ವಿಶ್ವದ ಆದರ್ಶಾತ್ಮಕ ಯುವಜನತೆಯನ್ನು ಹುರಿದುಂಬಿಸಬಲ್ಲದು. ಸಮಾಜದಲ್ಲಿ ಮಡುಗಟ್ಟಿರುವ ವರ್ಣ, ಧರ್ಮ ಮತ್ತು ಬೌದ್ಧಿಕ ದೂರವನ್ನು ಕಡಿಮೆ ಮಾಡಬಲ್ಲದು. 'ವಿವೇಕಾನಂದ ವೇದಿಕೆ' ವಿವಿಧ ಸಿದ್ಧಾಂತಗಳ ಹಿನ್ನೆಲೆಯುಳ್ಳವರನ್ನು ಒಟ್ಟುಗೂಡಿಸಬಲ್ಲದು ಎಂಬುದಕ್ಕೆ ಕೇರಳ ಸಾಕ್ಷಿಯಾಗಿದೆ. ಭಾರತ ಈಗ ಒಂದಾಗಲೇಬೇಕಿದೆ. ಹಾಗಾಗೇ ಇಂತಹ ಸಮಯದಲ್ಲಿ ವಿವೇಕಾನಂದರನ್ನು ಸ್ಮರಿಸಿಕೊಳ್ಳುವುದಕ್ಕೆ ದೇಶದಾದ್ಯಂತ ಚಿಕ್ಕ ಅಥವಾ ದೊಡ್ಡ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಹಮ್ಮಿಕೊಳ್ಳಬಹುದಲ್ಲವೇ?
ಅಲ್ಲದೆ ವಿವೇಕಾನಂದರ ಸಾರ್ವಕಾಲಿಕ ಸಂದೇಶದಿಂದಾಗಿ ಭಾರತದ 'ಮೃದು ಧೋರಣೆ'ಯ ಗುಣ ಬದಲಾಗಬಹುದಲ್ಲವೇ? ಭಾರತದ ರಾಯಭಾರಿ ಕಚೇರಿಗಳು ಮತ್ತು ಕಾನ್ಸುಲೇಟ್‌ಗಳು ಈ ನಿಟ್ಟಿನಲ್ಲಿ ಏನು ಮಾಡುತ್ತಿದ್ದಾರೆ? ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಥವಾ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಮೆರಿಕಕ್ಕೆ ತೆರಳಿ 1893ರಂದು ಚಿಕಾಗೋದಲ್ಲಿ ವಿವೇಕಾನಂದರು ನೀಡಿದ ವಿಶ್ವಪ್ರೇಮದ ಸಂದೇಶವನ್ನು ನೆನಪು ಮಾಡಿಕೊಳ್ಳುವುದಕ್ಕಾಗಿ ದೊಡ್ಡ ಸಮಾರಂಭವೊಂದನ್ನು ಆಯೋಜಿಸಿ ಒಬಾಮಾ ಅವರೊಂದಿಗೆ ವೇದಿಕೆ ಹಂಚಿಕೊಳ್ಳಬಹುದಲ್ಲವೇ?

- ಸುಧೀಂದ್ರ ಕುಲಕರ್ಣಿ
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.