ಇವರು ನೋವು ನಿವಾರಕರೋ, ಜೀವಕ್ಕೆ ಮಾರಕರೋ?
ಬಡವರು ನಿಟ್ಟುಸಿರು ಬಿಡುವ ತೀರ್ಪೊಂದನ್ನು ಸುಪ್ರೀಂಕೋರ್ಟ್ ನೀಡಿದೆ. ಕ್ಯಾನ್ಸರ್ ಮದ್ದಿನ ಪೇಟೆಂಟ್ ತನಗೇ ಕೊಡಬೇಕು ಎಂಬ ಬಹುರಾಷ್ಟ್ರೀಯ ಕಂಪನಿ ನೊವಾರ್ಟಿಸ್ನ ಅಹವಾಲನ್ನು ಅದು ತಳ್ಳಿ ಹಾಕಿದೆ. ಅದರ ಪೇಟೆಂಟ್ ಕೋರಿಕೆಯನ್ನು ಮಾನ್ಯ ಮಾಡಿದ್ದೇ ಆದರೆ ಜನರಿಕ್ ವಿಭಾಗದಲ್ಲಿ 8750 ರುಪಾಯಿಗಳಿಗೆ ಸಿಗುವ ಕ್ಯಾನ್ಸರ್ ಮದ್ದು 1,30,000 ರುಪಾಯಿಗಳಿಗೆ ಏರುತ್ತಿತ್ತು! ಜೀವ ಕೊಡಬೇಕಾದ ಔಷಧ ಕಂಪನಿಗಳು ಪ್ರಾಣ ದುಬಾರಿಯಾಗುವಂಥ ಕೆಲಸದಲ್ಲಿ ತೊಡಗಿಸಿಕೊಂಡಿವೆಯೇ? ಇದರ ಹಿನ್ನೆಲೆ-ಮುನ್ನೆಲೆಗಳನ್ನು ತಿಳಿಸುವ ಲೇಖನವನ್ನು ಫಸ್ಟ್ಪೋಸ್ಟ್ ಜಾಲತಾಣ ಪ್ರಕಟಿಸಿದೆ. ಓದಿ..
ತನ್ನ ಹಳೆಯ ಕ್ಯಾನ್ಸರ್ ಔಷಧ ಗ್ಲಿವೆಕ್ಗೆ ಹೊಸ ಉಡುಗೆ ತೊಡಿಸಿ ಅದಕ್ಕೆ ಪೇಟೆಂಟ್ ಪಡೆಯುವುದಕ್ಕೆ ಪ್ರಯತ್ನಿಸಿದ ನೊವಾರ್ಟಿಸ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್ನ ಕ್ರಮ ಭಾರತದ ಜನತೆಗೆ ಸಿಕ್ಕ ವಿಜಯವಾಗಿದೆ. ಅಲ್ಲದೇ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಾಲಿನ ಜಯವೂ ಹೌದು.
ಪೇಟೆಂಟ್ನ ಹೆಸರಲ್ಲಿ ತಮ್ಮ ವ್ಯಾಪಾರವನ್ನು ಹುಲುಸಾಗಿಸಿಕೊಳ್ಳುವ ಯತ್ನ ಭಾರತದಲ್ಲಿ ಬೇಡ ಎಂದು ಕಂಪನಿಗಳಿಗೆ ಸಂದೇಶ ಕೊಟ್ಟಂತೆ ಆಗಿದೆ. ಬಹಳ ಸರಳವಾಗಿ ಹೇಳುವುದಾದರೆ ತಮ್ಮಲ್ಲಿನ ಹಳೆ ಔಷಧ ಸರಕಿನ ವಿನ್ಯಾಸವನ್ನೇ ತುಸು ಬದಲಿಸಿ, ಅದರೊಳಗಿನ ಪದಾರ್ಥಗಳನ್ನು ತುಸುವೇ ಹಿಂದೆ ಮುಂದೆ ಮಾಡಿ ಹೊಸ ಪೇಟೆಂಟ್ಗಳನ್ನು ಪಡೆದುಕೊಳ್ಳುವ ಇವರ ಚಾಳಿಗೆ ತಡೆ ಹಾಕಿದಂತೆ ಆಗಿದೆ. ಇವುಗಳನ್ನು ಅವರಿಚ್ಛೆಯಂತೆ ವ್ಯಾಪಾರಕ್ಕೆ ಬಿಟ್ಟರೆ ಬಡರಾಷ್ಟ್ರಗಳು ಅತಿ ಹೆಚ್ಚಿನ ಆಘಾತ ಅನುಭವಿಸುತ್ತವೆ. ಏಕೆಂದರೆ ಜೀವರಕ್ಷಕ ಔಷಧಗಳ ಜನರಿಕ್ ಕಾಪಿಯನ್ನು ತಯಾರಿಸುವಂತಿಲ್ಲ. ತಮ್ಮ ಮೂಲ ಪೇಟೆಂಟ್ನ ಅವಧಿ ಮುಗಿದ ಮೇಲೂ ಈ ಔಷಧಗಳು ಕಾಪಿ ಆಗದೇ ಇರುವಂತೆ ನೋಡಿಕೊಳ್ಳುವುದಕ್ಕೆ ಬಹುರಾಷ್ಟ್ರೀಯ ಕಂಪನಿಗಳು ಪೇಟೆಂಟ್ ಆಟದ ಮೊರೆ ಹೋಗುತ್ತವೆ.
ಇದೀಗ ಸುಪ್ರೀಂಕೋಟ್ ತೀರ್ಪು ಬಂದಿರುವುದರಿಂದ ಭಾರತದಲ್ಲಿ ಹೆಚ್ಚಿನ ಔಷಧಗಳು ಕೈಗೆಟುಕಬಹುದಾದ ಬೆಲೆಯಲ್ಲಿ ಸಿಗುವುದಕ್ಕೆ ಸಾಧ್ಯವಾಗಲಿದೆ. ಭಾರತದಲ್ಲಿ ಜನರಿಕ್ ಔಷಧ ಘಟಕಗಳು ಉತ್ಪಾದನಾ ವೆಚ್ಚದ ಹತ್ತಿರದ ಬೆಲೆಗೇ ಸಿಗುವಂತೆ ಈ ಔಷಧಗಳನ್ನು ಒದಗಿಸಬಹುದು. ಉದಾಹರಣೆಗೆ, ನೊವಾರ್ಟಿಸ್ ಕಂಪನಿಯ ಗ್ಲಿವೆಕ್ ಔಷಧವು 9 ವರ್ಷಗಳ ಹಿಂದೆ ಅಂತಾರಾಷ್ಟ್ರೀಯವಾಗಿ 2600 ಅಮೆರಿಕನ್ ಡಾಲರ್ ಬೆಲೆ ಹೊಂದಿತ್ತು. ಅದರ ಜನರಿಕ್ ಅವತರಣಿಕೆಯು (ಮೂಲ ಬ್ರಾಂಡ್ ಅನ್ನೇ ಹೋಲುವ, ಅದೇ ಪದಾರ್ಥಗಳನ್ನುಪಯೋಗಿಸಿ ತಯಾರಿಸಿದ) 200 ಅಮೆರಿಕನ್ ಡಾಲರ್ಗಳಿಗೆ ಸಿಗುತ್ತಿತ್ತು. ಅಂದರೆ ಬೆಲೆ ವ್ಯತ್ಯಾಸ ಶೇಕಡ 300ಕ್ಕಿಂತ ಹೆಚ್ಚು!
ನೆಕ್ಸಾವರ್ ಎಂಬುದು ಲಿವರ್ ಮತ್ತು ಕಿಡ್ನಿ ಕ್ಯಾನ್ಸರ್ ಉಪಶಮನಕ್ಕೆ ಬಳಸುವ ಮದ್ದು. ಮಾರ್ಚ್ನಲ್ಲಿ ಭಾರತ ಸರ್ಕಾರವು ಈ ಮದ್ದನ್ನು ಸ್ಥಳೀಯವಾಗಿ ತಯಾರಿಸುವ ಪರವಾನಗಿಯನ್ನು ನ್ಯಾಕ್ಟೊ ಫಾರ್ಮಾ ಎಂಬ ಭಾರತೀಯ ಕಂಪನಿಗೆ ಕೊಟ್ಟಿತು. ಆರೋಗ್ಯ ವಲಯದಲ್ಲಿ ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಆಶಾದಾಯಕ ಬೆಳವಣಿಗೆ ಇದಾಗಿತ್ತು. ಪರಿಣಾಮ? ತಿಂಗಳಿಗೆ 2.28 ಲಕ್ಷ ರುಪಾಯಿಗಳನ್ನು ತೆತ್ತು ಖರೀದಿಸಬೇಕಾಗಿದ್ದ ನೆಕ್ಸಾವರ್ ಔಷಧ, 6600 ರುಪಾಯಿಗಳಿಗೆಲ್ಲ ಸಿಗುವಂತಾಯಿತು! ಭಾರತದ ಲಕ್ಷಾಂತರ ರೋಗಿಗಳಿಗೆ, ಜಗತ್ತಿನಾದ್ಯಂತ ಬಡರಾಷ್ಟ್ರಗಳ ಜನತೆಗೆ, ಅಷ್ಟೇ ಅಲ್ಲದೇ ಅಮೆರಿಕದಂಥ ಶ್ರೀಮಂತ ರಾಷ್ಟ್ರಗಳ ಪಾಲಿಗೂ ಔಷಧಗಳ ಬೆಲೆ ನಿಗದಿಗೆ ಇರುವ ಅಡ್ಡಿಯೇ ಜೀವರಕ್ಷಕ ಆರೋಗ್ಯ ವ್ಯವಸ್ಥೆ ಒದಗಿಸುವಲ್ಲಿ ತೊಡರಾಗಿರುವ ಮುಖ್ಯ ಅಂಶವಾಗಿದೆ.
ಬಹುರಾಷ್ಟ್ರೀಯ ಔಷಧ ಕಂಪನಿಗಳು ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಲು ಥರಹೇವಾರಿ ಪೇಟೆಂಟ್ ಆಟಗಳನ್ನು ಕಟ್ಟುತ್ತವೆ. ಉದಾಹರಣೆಗೆ ಕಂಪನಿಯೊಂದು ತನ್ನ ಔಷಧದ ವಿನ್ಯಾಸವನ್ನಷ್ಟೇ ಬದಲಿಸುತ್ತದೆ. ಅದನ್ನೇ ಒಂದು ಅನ್ವೇಷಣೆ ಎಂದು ಸಾರಿಕೊಳ್ಳುತ್ತ, ಇದರಿಂದ ಸಾಮರ್ಥ್ಯ ಹೆಚ್ಚಾಗಿದೆಯೆಂದೂ ಹೊಸ ಪೇಟೆಂಟ್ ಕೊಡಬೇಕೆಂದೂ ವರಾತ ಹೂಡುತ್ತದೆ. ಅದೇ ರೀತಿ, ಕೆಲ ಹೆಚ್ಚುವರಿ ಪದಾರ್ಥಗಳನ್ನು ಸಣ್ಣ ಪ್ರಮಾಣದಲ್ಲಿ ಸೇರಿಸಿ ಔಷಧವೇ ಹೊಸದೆನ್ನುತ್ತ ಪೇಟೆಂಟ್ ಕೇಳುತ್ತವೆ. ಒಟ್ಟಿನಲ್ಲಿ ಪೇಟೆಂಟ್ಗಳನ್ನು ನವೀಕರಿಸಿಕೊಳ್ಳುತ್ತ, ಜನರಿಕ್ ಉತ್ಪಾದಕರನ್ನು ದೂರವಿರಿಸಿ ತಮ್ಮ ಲಾಭ ಹೆಚ್ಚಿಸಿಕೊಳ್ಳುವುದೇ ಅವರ ಗುರಿ. ಇವರ ವಾದವೇನೆಂದರೆ- ಒಟ್ಟಾರೆ ಪೇಟೆಂಟ್ಗೆ ಇರುವುದು 20 ವರ್ಷಗಳ ಅವಧಿ. ಆದರೆ ಇದರಲ್ಲಿ 8-12 ವರ್ಷಗಳು ಔಷಧ ಅಭಿವೃದ್ಧಿಗೆ ತಗುಲಿಬಿಡುವುದರಿಂದ ತಾವು ಹೂಡಿದ ಬಂಡವಾಳವನ್ನು ಮರಳಿ ಪಡೆದುಕೊಳ್ಳುವುದಕ್ಕೆ ಎಂಟು ವರ್ಷಗಳ ಅವಧಿ ಚಿಕ್ಕದಾಯಿತು ಎಂಬುದು.
ಆದರೆ ಐರೋಪ್ಯ ಒಕ್ಕೂಟದ ಫಾರ್ಮಾಸ್ಯೂಟಿಕಲ್ ವಲಯದ ತನಿಖಾ ವರದಿ, ದೈತ್ಯ ಕಂಪನಿಗಳ ಅಕ್ರಮ ರಿವಾಜುಗಳ ಮೇಲೆ ಬೆಳಕು ಚೆಲ್ಲಿದೆ. 'ಒಂದೇ ಔಷಧಕ್ಕೆ ಬಹಳಷ್ಟು ಪೇಟೆಂಟ್ ಅರ್ಜಿಗಳನ್ನು ಸಲ್ಲಿಸುವುದು ಎಲ್ಲರೂ ಅನುಸರಿಸುವ ತಂತ್ರವಾಗಿದೆ. ತನಿಖೆಯ ಸಂದರ್ಭದಲ್ಲಿ ಹೊರಬಂದ ಅಂಶ ಎಂದರೆ ಇವರ ಇಂಥ ಪ್ರಯತ್ನಗಳೆಲ್ಲ ಆ ಔಷಧವು ನಿರ್ದಿಷ್ಟ ಅವಧಿ ನಂತರ ಜೆನರಿಕ್ ಉತ್ಪಾದಕರಿಂದ ಮಾರುಕಟ್ಟೆಗೆ ಪ್ರವೇಶಿಸದಂತೆ ತಡೆಯುವುದೇ ಆಗಿದೆ. ಈ ನಿಟ್ಟಿನಲ್ಲಿ ತನಿಖೆ ಮಾಡಿದಾಗ ವೈಯಕ್ತಿಕ ನಿಗಾಕ್ಕೆ ಬೇಕಾಗುವ ಔಷಧಗಳ ಮೇಲೆ ಸುಮಾರು 100 ಕುಟುಂಬಗಳು ಹಿಡಿತ ಹೊಂದಿವೆ ಹಾಗೂ ಈ ಸಂಬಂಧ ಸುಮಾರು 1300ಕ್ಕೂ ಹೆಚ್ಚು ಪೇಟೆಂಟ್ ಅರ್ಜಿಗಳು ಬೇರೆ ಬೇರೆ ದೇಶಗಳಲ್ಲಿ ಸಲ್ಲಕೆಯಾಗಿವೆ.'
ನೊವಾರ್ಟಿಸ್ ಭಾರತದಲ್ಲಿ ಕಾನೂನು ಸಮರ ಪ್ರಾರಂಭಿಸಿದ್ದು 2007ರಲ್ಲಿ. ಸೆಕ್ಶನ್ 3 (ಡಿ) ಪ್ರಕಾರ ಕೇವಲ ಹೊಸ ಔಷಧಗಳಿಗೆ ಮಾತ್ರ ಪೇಟೆಂಟ್ ಎಂದು ಇಂಡಿಯನ್ ಪೇಟೆಂಟ್ ಆಫೀಸ್, ನೊವಾರ್ಟಿಸ್ ಕಂಪನಿಯ ಅರ್ಜಿಯನ್ನು ತಿರಸ್ಕರಿಸಿತು. ಚೆನ್ನೈ ಹೈಕೋರ್ಟ್ಗೆ ನೊವಾರ್ಟಿಸ್ ಕಂಪನಿ ಎರಡು ನೆಲೆಗಟ್ಟುಗಳ ಮೇಲೆ ಆಕ್ಷೇಪಣೆ ಅರ್ಜಿ ಸಲ್ಲಿಸಿತು. ಮೊದಲನೆಯದು ಪೇಟೆಂಟ್ ತಿರಸ್ಕರಿಸುವಂತಿಲ್ಲ ಎಂದು. ಎರಡನೆಯದು ಸೆಕ್ಶನ್ 3 (ಡಿ) ಯೇ ಅಸಂವಿಧಾನಿಕವಾಗಿದೆ ಎಂದು. ಇವೆರಡೂ ಆಕ್ಷೇಪಣೆಗಳನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತು. ಆಗ 'ಇಂಟಲೆಕ್ಚುವಲ್ ಪ್ರಾಪರ್ಟಿ ಅಪಿಲೆಟ್ ಬೋರ್ಡ್' ಮೆಟ್ಟಿಲೇರಿದ ನೊವಾರ್ಟಿಸ್ ಅಲ್ಲಿಯೂ ಮುಖಭಂಗ ಎದುರಿಸಿತು. 2009ರಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕಂಪನಿ, 2005ರಲ್ಲಿ ಸಂಸತ್ತು ಅಂಗೀಕರಿಸಿದ ಇಂಡಿಯನ್ ಪೇಟೆಂಟ್ ಆ್ಯಕ್ಟ್ನ ಸೆಕ್ಶನ್ 3 (ಡಿ) ವಿರುದ್ಧವೇ ಅರ್ಜಿ ಸಲ್ಲಿಸಿತು. ನವೀಕೃತ ಮಾಲೆಕ್ಯೂಲ್ಗೆ ಪೇಟೆಂಟ್ ಸಿಗಬೇಕು ಎಂದಾದರೆ ಅದು ಚಿಕಿತ್ಸೆಯ ಕ್ಷಮತೆ ಆಧಾರದಲ್ಲಿ ಮಾತ್ರ ಎನ್ನುತ್ತದೆ ಈ ಕಾಯ್ದೆ. ತಮ್ಮ ಸುಧಾರಿತ ಔಷಧ ದೇಹಕ್ಕೆ ಹೆಚ್ಚು ಜೀವಾಂಶಗಳನ್ನು ಒದಗಿಸುತ್ತದೆ ಎಂಬುದನ್ನು ಪರಿಗಣಿಸಬೇಕು ಎಂಬ ಕಂಪನಿ ವಾದವನ್ನು ತಳ್ಳಿ ಹಾಕಿದ ಸುಪ್ರೀಂಕೋರ್ಟ್, ಚಿಕಿತ್ಸೆಯಲ್ಲಿ ರೋಗ ಗುಣಪಡಿಸುವ ಕ್ಷಮತೆ ಹೆಚ್ಚಾಗಿರುವುದು ಸಾಬೀತಾದರೆ ಮಾತ್ರ ನೊವಾರ್ಟಿಸ್ ಅರ್ಜಿಯನ್ನು ಪುರಸ್ಕರಿಸುವುದು ಸಾಧ್ಯ ಎಂದು ಖಡಾಖಡಿಯಾಗಿ ಹೇಳಿಬಿಟ್ಟಿತು.
ನೊವಾರ್ಟಿಸ್ ಏನಾದರೂ ಈ ಪ್ರಕರಣವನ್ನು ಗೆದ್ದುಬಿಟ್ಟಿದ್ದರೆ ಸೆಕ್ಶನ್ 3 (ಡಿ) ದುರ್ಬಲವಾಗಿ ನವೀಕರಣದ ನೆಪದಲ್ಲಿ ಕಂಪನಿಗಳು ಹಣದ ಥೈಲಿ ತುಂಬಿಸಿಕೊಳ್ಳುತ್ತಿದ್ದವು, ಜೀವ ರಕ್ಷಕ ಔಷಧಗಳು ಜನರಿಗೆ ಕೈಗೆಟುಕದಂತೆ ಗಹಗಹಿಸುತ್ತಿದ್ದವು. ಇದೀಗ ಜನರಿಕ್ ಉತ್ಪಾದಕರು ಯಾವುದೇ ಕಾನೂನು ಅಡೆತಡೆಯ ಭಯವಿಲ್ಲದೇ ಈ ಔಷಧಗಳನ್ನು ಉತ್ಪಾದಿಸಬಹುದಾಗಿದೆ. ನೊವಾರ್ಟಿಸ್ ಪ್ರಕರಣದಲ್ಲಿ ಇಡೀ ಭಾರತ ಏಕಧ್ವನಿಯನ್ನು ಮೊಳಗಿಸಿತು. ಪೇಟೆಂಟ್ ಕಚೇರಿಯಿಂದ ಹಿಡಿದು ಎಲ್ಲ ಸಂಸ್ಥೆಗಳೂ ದೈತ್ಯ ಕಂಪನಿಗೆ ಶರಣಾಗದೇ ಜನರ ಹಿತ ಕಾಯ್ದಿರುವುದು ಭರವಸೆಯ ಕಾಮನಬಿಲ್ಲೊಂದನ್ನು ಮೂಡಿಸಿದೆ.
ಕಂಪನಿ ಕೂಗಿಗೆ ಹೆದರಬೇಕೇ?
- ಸುಪ್ರೀಂಕೋರ್ಟ್ನ ತೀರ್ಪು ಹೊರಬೀಳುತ್ತಲೇ ನೊವಾರ್ಟಿಸ್ನ ಪ್ರತಿಕ್ರಿಯೆ ಎಂದರೆ- ತಾನು ಭಾರತದಲ್ಲಿ ಔಷಧ ಅಭಿವೃದ್ಧಿಗಾಗಿ ಹಣ ಹೂಡುವ ಯೋಚನೆ ಮಾಡುವುದಿಲ್ಲ ಎಂಬುದು. ಬಹುರಾಷ್ಟ್ರೀಯ ಕಂಪನಿಯ ಇಂಥ ಹೇಳಿಕೆಗಳು ನಮ್ಮನ್ನು ಕಳವಳಕ್ಕೆ ದೂಡಬೇಕೇ? ವಾಸ್ತವ ಗಮನಿಸುವುದು ಒಳಿತು. ಆರು ವರ್ಷಗಳ ಹಿಂದಷ್ಟೇ ನೊವಾರ್ಟಿಸ್ ಕಂಪನಿ ಸಿಂಗಾಪುರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧ ಘಟಕ ಸ್ಥಾಪಿಸಿದೆ. ಹೀಗಿರುವಾಗ ತೀರ್ಪು ಏನೇ ಬಂದಿದ್ದರೂ ಇದೇ ವಲಯದಲ್ಲಿ ಇನ್ನೊಂದು ಸಂಶೋಧನೆ ಘಟಕವನ್ನಂತೂ ಅದು ಸ್ಥಾಪಿಸುತ್ತಿರಲಿಲ್ಲ.
- ಅಸ್ಟ್ರಾಝೆನೆಕಾ ಎಂಬ ಒಂದು ಕಂಪನಿ ಬಿಟ್ಟರೆ ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಇನ್ಯಾವ ಕಂಪನಿಗಳೂ ಬಂಡವಾಳ ಹೂಡಿಲ್ಲ. ಅವರೆಲ್ಲ ಭಾರತವನ್ನು ಪೇಟೆಂಟ್ ಔಷಧಗಳ ಮಾರುಕಟ್ಟೆಯನ್ನಾಗಿ ಮಾತ್ರವೇ ನೋಡುತ್ತಿದ್ದಾರೆ. ಅಸ್ಟ್ರಾಝೆನೆಕಾ ಹೂಡಿರುವ ಬಂಡವಾಳ ಸಹ ಭಾರಿ ದೊಡ್ಡದೇನಲ್ಲ. ಅಲ್ಲದೇ ಅದು ಇಲ್ಲಿ ಕ್ಷಯದಂಥ ರೋಗಗಳಿಗೆ ಔಷಧ ತಯಾರಿಸುತ್ತಿದೆ. ಆ ರೋಗಕ್ಕೆ ಅತಿಹೆಚ್ಚಿನ ಮಾರುಕಟ್ಟೆ ಇಲ್ಲೇ ಇರುವುದರಿಂದ ಇಲ್ಲೇ ಔಷಧ ಉತ್ಪಾದನೆ ವಿವೇಕವೆನಿಸುತ್ತದೆ. ಇದರಲ್ಲಿ ಔದಾರ್ಯದ ಮಾತೆಲ್ಲಿಯದು?
- ವಾಸ್ತವದಲ್ಲಿ ಭಾರತದ ಔಷಧ ಉತ್ಪಾದನೆಯ ವಲಯದಲ್ಲಿ ಬಂಡವಾಳ ಹೂಡುತ್ತಿರುವವರೆಂದರೆ ನಮ್ಮ ಜನರಿಕ್ ಔಷಧ ಉತ್ಪಾದಕರೇ ಆಗಿದ್ದಾರೆ. ಇವರು ಕೇವಲ ಮೂಲವನ್ನು ಕಾಪಿ ಮಾಡುವವರು ಎಂಬ ನಂಬಿಕೆಯೂ ಸುಳ್ಳು. ರೆಡ್ಡಿ ಮತ್ತು ಗ್ಲೆನ್ಮಾರ್ಕ್ನಂಥ ಜನರಿಕ್ ಔಷಧ ಉತ್ಪಾದಕರು ಹೊಸ ಮಾಲೆಕ್ಯೂಲ್ಗಳ ಸಂಶೋಧನೆಯಲ್ಲಿದ್ದಾರೆ. ಆದರೆ ಬಹುರಾಷ್ಟ್ರೀಯ ಕಂಪನಿಗಳಿಗೆ ಒದಗಿಬರುವ ಹಣಕಾಸಿನ ಶಕ್ತಿ ಮತ್ತು ಲಾಬಿ ಪ್ರಾಬಲ್ಯ ಇವರ ಬಳಿ ಇಲ್ಲವಾದ್ದರಿಂದ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ.
- ಬಹುರಾಷ್ಟ್ರೀಯ ಕಂಪನಿಗಳು ಹೊಸೆಯುವ ಇನ್ನೊಂದು ಸುಳ್ಳೆಂದರೆ ಔಷಧ ಅಭಿವೃದ್ಧಿಗೆ ತಮಗೆ ಭಾರಿ ವ್ಯಯವಾಗಿರುವುದರಿಂದ ದುಬಾರಿ ಬೆಲೆ ವಿಧಿಸಿದ್ದೇವೆ ಎಂಬುದು. ಆದರೆ ಔಷಧ ಅಭಿವೃದ್ಧಿಗೆ ಹೆಚ್ಚಿನ ಹಣ ಸರ್ಕಾರಿ ಸಂಸ್ಥೆಗಳಿಂದಲೇ ದೊರೆಯುತ್ತವೆ ಎಂಬ ಅಂಶವನ್ನು ಅವು ಮುಚ್ಚಿಡುತ್ತವೆ. ಉದಾಹರಣೆಗೆ ಗ್ಲೆವಿಕ್ ಅಧ್ಯಯನಕ್ಕೆ ಶೇ. 60ರಷ್ಟು ಹಣವನ್ನು ಒದಗಿಸಿರುವುದು ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸಂಸ್ಥೆ.
- ಈ ಬಹುರಾಷ್ಟ್ರೀಯ ಕಂಪನಿಗಳ ಬೆದರಿಕೆಗಳಿಗೆ ಬಗ್ಗದೇ ಆರೋಗ್ಯ ವಲಯದ ಸಾರ್ವಜನಿಕ ಸಂಸ್ಥೆಗಳನ್ನು ಸಂಶೋಧನೆಗಳಿಗೆ ಅಣಿಗೊಳಿಸುವುದು ಭಾರತದ ಎದುರಿಗಿರುವ ಮಾರ್ಗ. ಹೆಪಟೈಟಿಸ್ ಬಿ. ನಂಥ ರೋಗಕ್ಕೆ ವ್ಯಾಸಿನ್ ದೊರೆತಿರುವುದು ನಮ್ಮದೇ ಸಂಶೋಧನೆ ಫಲದಿಂದ ಎಂಬುದು ನೆನಪಲ್ಲಿರಬೇಕು. ಈಗಲೂ ದೇಶದಲ್ಲಿ ಹರಿದುಹಂಚಿರುವ ಸಂಸ್ಥೆಗಳು ತಮ್ಮದೇ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿವೆ. ಇಂಥ ಜ್ಞಾನಕೇಂದ್ರಗಳನ್ನೆಲ್ಲ ಒಂದು ಜಾಲದಲ್ಲಿ ಬೆಸೆಯುವ, ಆ ಮೂಲಕ ಅಭಿವೃದ್ಧಿ ಸಮಾಲೋಚನೆ ಗಟ್ಟಿಗೊಳಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಅಗತ್ಯ ಹಣಕಾಸು ಒದಗಿಸುವ ಕಾರ್ಯವೂ ಆಗಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

