ರೈತರ ಬದುಕು ಹಸನಾಗಿಸುವ 'ದ್ವಿತೀಯಕ' ಕೃಷಿ

Updated on: 

ಮಾತು ಮಾತಿಗೆ ಬಡರೈತರ ಬಗ್ಗೆ ಕಣ್ಣೀರಿಡುವುದು ಬಿಟ್ಟರೆ ನಮ್ಮಲ್ಲಿ ಯಾವುದೇ ರಚನಾತ್ಮಕ ಕೆಲಸ ಆಗಿಯೇ ಇಲ್ಲ. ಇನ್ನು ಕೆಲಸಕ್ಕೆ ಬಾರದ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ಯಾವ ಪುರುಷಾರ್ಥ ಸಾಧಿಸಿದಂತಾಯಿತು?
ದ್ವಿತೀಯಕ ಕೃಷಿ ಅಂದರೆ Secondary agriculture ಎಂದರ್ಥ. ಭಾರತ ದೇಶದಲ್ಲಿ ಶೇಕಡಾ ತೊಂಬತ್ತು ಪ್ರತಿಶತ ರೈತರೆಲ್ಲಾ ಸಣ್ಣ ಸಾಗುವಳಿದಾರರು. (ಅಂದರೆ ಒಂದು ಹೆಕ್ಟೇರ್‌ಗಿಂತ, ಕಡಿಮೆ ಭೂಮಿಯಲ್ಲಿ ಕೃಷಿ ಮಾಡುವವರು). ಹೀಗಾಗಿ, ರೈತರ ಬಡತನ ಮತ್ತು ಬವಣೆ ಯಾರ ಕೈಲಿಂದಲೂ ತೀರಿಸಲು ಸಾಧ್ಯವಾಗಿಲ್ಲ. ಭಾರತದಂತಹ ಬೃಹತ್ ಜನಸಂಖ್ಯೆಯುಳ್ಳ ದೇಶದಲ್ಲಿ, ಶೇಕಡ ಎಪ್ಪತ್ತು ಭಾಗ ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಭಾರತದ ಕೃಷಿ ಕ್ಷೇತ್ರ ಅಷ್ಟೊಂದು ಲಾಭದಾಯಕವಾಗಿಯೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ದೇಶದ ಬಡತನ ತೀರಿಸಲು ನಿಜವಾಗಿಯೂ ಸಾಧ್ಯವೇ? ಬಡರೈತನ ಬಡತನ ನೀಗಿಸಬೇಕಾದರೆ, ಸಣ್ಣ ಹಿಡುವಳಿದಾರನಾದ ರೈತ ಬರೀ ಆಹಾರ ಬೆಳೆಗಳನ್ನು ಬೆಳೆಸುವುದಷ್ಟೇ ಅಲ್ಲದೆ ಅದರ ಜೊತೆಗೆ ಬೇರೆ, ಬೇರೆ ಕಾಯಕಗಳಲ್ಲಿ ತೊಡಗಿಸಿಕೊಂಡು ತನ್ನ ಹಣ ಸಂಪಾದೆಯನ್ನು ವೃದ್ಧಿಪಡಿಸಿಕೊಳ್ಳಬೇಕಾಗಿದೆ. ಹಾಗಾಗಿ, ದ್ವಿತೀಯಕ ಕೃಷಿ ಚಟುವಟಿಕೆಗಳು ಪ್ರಾಮುಖ್ಯ ಪಡೆದುಕೊಳ್ಳುತ್ತವೆ.
ದ್ವಿತೀಯಕ ಕೃಷಿಯ ಬಗ್ಗೆ ವರದಿಯನ್ನು ತಯಾರಿಸಲು ಓಹೈವೋ ರಾಜ್ಯ ಕೃಷಿ ವಿ.ವಿ.ಯ ಪ್ರಾಧ್ಯಾಪಕ ದೇಶ್‌ಪಾಲ್ ವರ್ಮ ಎಂಬ ಹೆಸರುವಾಸಿ ವಿಜ್ಞಾನಿಯನ್ನು ಕೇಂದ್ರ ಯೋಜನಾ ಆಯೋಗದ ಒಂದು ಅಧ್ಯಯನ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿಲಾಗಿದೆ. ಪ್ರೊ. ವರ್ಮ ಸುಮಾರು 250 ಪುಟಗಳ ವರದಿಯನ್ನು 2008ರಲ್ಲಿ ಸಲ್ಲಿಸಿದರು. ಆ ಕಾರಣದಿಂದ ಸುಮಾರು 200 ಮಿಲಿಯನ್ ಡಾಲರ್‌ಗಳಷ್ಟು ಹಣವನ್ನೂ ಸಹ ಯೋಜನಾ ಆಯೋಗ ದ್ವಿತೀಯಕ ಕೃಷಿಗೆ ಮೀಸಲಾಗಿಟ್ಟಿದೆ. 2008ರಿಂದ ಇದುವರೆಗೂ, ಒಂದು ಡಾಲರ್ ಹಣವನ್ನೂ ಕೇಂದ್ರ ಸರ್ಕಾರವಾಗಲೀ ಅಥವಾ ರಾಜ್ಯ ಸರ್ಕಾರಗಳಾಗಲೀ ಉಪಯೋಗಿಸಿಲ್ಲದಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಆಶ್ಚರ್ಯದ ವಿಷಯವೇನೆಂದರೆ, ಬಡ ರೈತನನ್ನು ಉದ್ಧಾರ ಮಾಡುವುದಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಮೊಸಳೆ ಕಣ್ಣೀರು ಸುರಿಸಿದ್ದೇ ಸುರಿಸಿದ್ದು. ಆದರೆ, ಅದೇ ಬಡ ರೈತನ ಏಳ್ಗೆಗೆ ಮೀಸಲಾಗಿಟ್ಟಿರುವ ಯೋಜನೆಯನ್ನಾಗಲಿ ಅಥವಾ ಹಣವನ್ನಾಗಲಿ ಮುಟ್ಟದಿರುವುದಿರಲಿ ಮೂಸಿಯೂ ನೋಡಿಲ್ಲ. ಇದೊಂದೇ ವರದಿ ಅಲ್ಲ, ಇನ್ನೂ ಬೇರೆ ಬೇರೆ ಯೋಜನೆಗಳು ಮತ್ತು ವರದಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಧೂಳು ಬಡಿಸಿಕೊಂಡು ಬಿದ್ದಿರಬೇಕಾದರೆ, ಬಡರೈತನ ಬಡತನ ನೀಗುವುದೆಂತು?
ಪ್ರೊ. ದೇಶಪಾಲ್ ವರ್ಮ ಸಮಿತಿಯ ವರದಿ-'ದ್ವಿತೀಯಕ ಕೃಷಿ ಚಟುವಟಿಕೆಗಳಿಂದ ಆಗಬಹುದಾದಂತಹ ಲಾಭಗಳೇನೆಂದರೆ ಅವು ಪ್ರಾಥಮಿಕ ಕೃಷಿಗೆ ಮೌಲ್ಯಾಧಾರಿತ ಬೆಲೆ ಏರಿಸಬಹುದು, ಉದ್ಯೋಗಾವಕಾಶಗಳನ್ನು ವೃದ್ಧಿಸಬಹುದು; ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು. ಪ್ರಾಥಮಿಕ ಕೃಷಿಯಿಂದ ಉತ್ಪನ್ನವಾಗುವ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು, ಸಣ್ಣ ಹಿಡುವಳಿದಾರರು ತಮ್ಮ ಸಣ್ಣ ಜಮೀನಿನಿಂದ ಆದಾಯ ಹೆಚ್ಚಿಸಿಕೊಳ್ಳಬಹುದು, ಗ್ರಾಮೀಣ ಕೃಷಿ ಕೈಗಾರಿಕೋದ್ಯಮವನ್ನು ಹೆಚ್ಚಿಸಬಹುದು ಮತ್ತು ದೇಶದ ಕೃಷಿ ಚಟುವಟಿಕೆಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬಹುದು. ಪ್ರಪಂಚದಾದ್ಯಂತ ದ್ವಿತೀಯಕ ಕೃಷಿ ಕ್ಷೇತ್ರದಿಂದ ತಯಾರಾದ ವಸ್ತುಗಳಿಗೆ ಅಪಾರ ಬೇಡಿಕೆ ಇದೆ ಮತ್ತು ಭಾರತದ ಆ ಬೇಡಿಕೆಗಳನ್ನು ಉಪಯುಕ್ತವಾಗಿ ಪೂರೈಸಬಹುದು.' ಎಂದು ಹೇಳುತ್ತದೆ. ಪ್ರೊ. ವರ್ಮ ಸಮಿತಿಯ ವರದಿಯು ಯಾವ ರೀತಿಯಲ್ಲಿ ವ್ಯವಸಾಯವನ್ನು ದ್ವಿತೀಯಕ ಕೃಷಿಗೆ ಅನುಗುಣವಾಗಿ ರಚಿಸಬೇಕು, ಯಾವ ರೀತಿ ಸಮಗ್ರ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು ಮತ್ತು ಈ ಚಟುವಟಿಕೆಗಳಿಗೆ ಬೇಕಾಗುವ ಹಣ ಸಹಾಯ ಹೇಗೆ ಒದಗಿಸುವುದು ಎಂಬುದನ್ನು ಸವಿವರವಾಗಿ ಹೇಳಿದೆ. ಸಣ್ಣ ಹಿಡುವಳಿದಾರರು ತಮ್ಮ ಕನಿಷ್ಠ ಜಮೀನಿನಲ್ಲಿ ಎಂದೆಂದಿಗೂ ಬರೀ ಪ್ರಾಥಮಿಕ ಕೃಷಿಯಿಂದಲೇ ತಮ್ಮ ಆದಾಯ ವೃದ್ಧಿಸಿಕೊಳ್ಳಲು ಸಾಧ್ಯವೇ ಇಲ್ಲ. ಹೀಗಾಗಿ, ಸಣ್ಣ ಹಿಡುವಳಿದಾರರ ಆದಾಯ ಹೆಚ್ಚಿಸುವುದಕ್ಕೆ ದ್ವಿತೀಯಕ ಕೃಷಿ ಚಟುವಟಿಕೆಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಈ ಮಹತ್ತರ ವಿಷಯಗಳನ್ನು ಒಪ್ಪಿಕೊಂಡು, ಕೇಂದ್ರ ಯೋಜನಾ ಆಯೋಗ 200 ಮಿಲಿಯನ್ ಡಾಲರ್ ಹಣದಿಂದ "ಸರ್ಕಾರಿ ವೆಂಚೂರ್ ಕ್ಯಾಪಿಟಲ್‌' ನಿಧಿಯನ್ನು ಸ್ಥಾಪಿಸಿದೆ. ರಾಜ್ಯ ಸರ್ಕಾರಗಳು, ಈ ನಿಧಿಯಿಂದ ಹಣ ತೆಗೆದುಕೊಂಡು ತಮ್ಮ ತಮ್ಮ ರಾಜ್ಯದ ಬಡ ರೈತರಿಗೆ ಸಹಾಯ ಮಾಡಬಹುದು. ರಾಜ್ಯ ಮಟ್ಟದ ರಾಜಕಾರಣಿಗಳೇ ಆಗಲಿ ಅಥವಾ ಅಧಿಕಾರಿ ವರ್ಗಗಳಾಗಲಿ ಆಸಕ್ತಿಯಿಂದ ಮುಂದೆ ಬಂದರೆ, ದ್ವಿತೀಯಕ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬಹುದು. ದ್ವಿತೀಯಕ ಕೃಷಿಯನ್ನು ಆರಂಭಿಸಬೇಕಾದರೆ, ಕೆಲವು ಹಳೆಯ, ಕೆಲವು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಅದರ ಜೊತೆಗೆ ಹಳ್ಳಿಗಾಡಿನ ಮೂಲಭೂತ ವ್ಯವಸ್ಥೆಗಳು, ವ್ಯಾಪಾರಕ್ಕೆ ಬೇಕಾದ ಜ್ಞಾನಸಹಾಯ ಮತ್ತು ಕೆಲ ಓಬೀರಾಯನ ಕಾಲದ ಕಾನೂನು ಕಟ್ಟಳೆಗಳನ್ನು ಬದಲಾಯಿಸಬೇಕು. ಇವೆಲ್ಲಕ್ಕೂ ರಾಜ್ಯ ಸರ್ಕಾರಗಳೇ ಜವಾಬ್ದಾರಿ ಹೊರಬೇಕು, ಏಕೆಂದರೆ ಭಾರತ ಗಣರಾಜ್ಯದಲ್ಲಿ ಕೃಷಿ ವಲಯದ ಜವಾಬ್ದಾರಿ ರಾಜ್ಯ ಸರ್ಕಾರಗಳೇ ಹೊತ್ತುಕೊಂಡಿವೆ.
ಕರ್ನಾಟಕದ ಕೃಷಿ ಕ್ಷೇತ್ರದಲ್ಲಿನ ಆಗುಹೋಗುಗಳಿಗೆ ಕಳೆದ ಐದು ವರ್ಷಗಳಿಂದ ಏನೇನಾಗಿದೆ ಎಂದು ಅವಲೋಕಿಸಿದರೆ, ಎಲ್ಲವೂ ನಗಣ್ಯ ಅಥವಾ ಶೂನ್ಯವೆಂದೇ ಹೇಳಬಹುದು. ಹೆಗಲ ಮೇಲೆ ಹಸಿರು ಟವಲನ್ನು ಹೊದ್ದುಕೊಂಡು, ಮಾತು ಮಾತಿಗೆ ಬಡರೈತರ ಬಗ್ಗೆ ಕಣ್ಣೀರಿಡುವುದು ಬಿಟ್ಟು, ಯಾವುದೇ ರಚನಾತ್ಮಕ ಕೆಲಸ ಆಗಿಯೇ ಇಲ್ಲ. ಅದಲ್ಲದೆ, ಕೆಲಸಕ್ಕೆ ಬಾರದ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ಯಾವ ಪುರುಷಾರ್ಥ ಸಾಧಿಸಿದಂತಾಯಿತು? ಪ್ರತ್ಯೇಕ ಕೃಷಿ ಬಜೆಟ್ ಎಷ್ಟು ನಗೆಪಾಟಲಿನ ಸಂಗತಿಯೆಂದರೆ, ಆದಾಯವೇ ಇಲ್ಲದ ಕೃಷಿ ಕ್ಷೇತ್ರಕ್ಕೆ ಬರೀ ಖರ್ಚಿನ ಲೆಕ್ಕ ತೋರಿಸಿದರೆ, ಅದು ಬಜೆಟ್ ಅನ್ನಿಸಿಕೊಳ್ಳುವುದೇ ಇಲ್ಲ. ರೈತರ ಮೇಲೆ ಮಂಕು ಬೂದಿ ಎಸೆಯುವ ಕೈಂಕರ್ಯವೇ ಸರಿ. ಈ ವಿಷಯ ಗೊತ್ತಿದ್ದರೂ, ಯಾವುದೇ ಗುಂಪಿನ ಜನ ಇದನ್ನು ಪ್ರಶ್ನಿಸಲೂ ಇಲ್ಲ. ಇದೇ ರೀತಿ ಪಕ್ಕದ ಆಂಧ್ರಪ್ರದೇಶ ಸರ್ಕಾರವೂ ಸಹ ಕಳೆದ ತಿಂಗಳು ಪ್ರತ್ಯೇಕ ಕೃಷಿ ಬಜೆಟ್‌ನ್ನು ಮಂಡಿಸಿ ತೃಪ್ತಿಗೊಂಡಿತು. ಅದಲ್ಲದೇ, ಆಂಧ್ರದ ಮುಖ್ಯಮಂತ್ರಿ ಕರ್ನಾಟಕ ರಾಜ್ಯದ ಕೃಷಿ ಬಜೆಟ್‌ನ್ನು ಅನುಕರಿಸಿ ಆಂಧ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್‌ನ್ನು ಮಂಡಿಸಿದ್ದಾಗಿ ಬೆನ್ನು ತಟ್ಟಿಕೊಂಡಿದ್ದಾರೆ. ವಿಪರ್ಯಾಸವೆಂದರೆ, ಇದರಿಂದ ಬಡರೈತನಿಗೆ ಎಳ್ಳಷ್ಟೂ ಲಾಭವಾಗಿಲ್ಲ. ಆದರೆ, ಈ ರೀತಿಯ ರಾಜಕೀಯ ಗಿಮಿಕ್‌ಗಳನ್ನು ಮಾಡುವುದು ಬಿಟ್ಟು ಬೇರೆ ಯಾವುದೇ ರಚನಾತ್ಮಕ ಕೆಲಸ ಅಥವಾ ಯೋಜನೆಗಳನ್ನು ರಾಜ್ಯ ಸರ್ಕಾರಗಳು ರೂಪಿಸುವ ಗೋಜಿಗೇ ಹೋಗಿಲ್ಲ.

- ಪ್ರೊ. ಶಾಂತು ಶಾಂತಾರಾಮ್
ಐಯೋವ ರಾಜ್ಯ ಕೃಷಿ ವಿವಿ
Shanthus@iastate.edu


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com