- ಫೇಸ್ಬುಕ್ನಲ್ಲಿ 'ನನ್ನ 'ಡೈರೆಕ್ಟ್ ಸ್ಪೆಷಲ್' ಸಿನಿಮಾ ಈ ತಿಂಗಳು ಬಿಡುಗಡೆ ಮಾಡದೇ ಇದ್ರೆ, ಅಫ್ಜಲ್ ಗುರು ಥರ ನನ್ನನ್ನೂ ಹ್ಯಾಂಗ್ ಮಾಡಿ' ಅಂದಿದ್ರಿ, ಆಮೇಲೆ ನೀವು ಎಲ್ಲೂ ಕಾಣಿಸ್ತಿಲ್ಲ, ಯಾರಾದ್ರೂ ನಿಜವಾಗ್ಲೂ ಹ್ಯಾಂಗ್ ಮಾಡಿಬಿಟ್ರಾ ಅಂತ ಜನಕ್ಕೆ ಡೌಟಂತೆ?
'ಹ್ಯಾಂಗ್' ಆನ್. ನಾನು ಅತಿ ಶೀಘ್ರದಲ್ಲೇ ಬರ್ತಾ ಇದೀನಿ!
- ಎಲ್ಲಿ? ಮತ್ತೆ ಫೇಸ್ಬುಕ್ಕಲ್ಲಾ?
ಅಲ್ಲರೀ, ಥಿಯೇಟ್ರಲ್ಲಿ!
- 'ನೀವು ಹಿಂಗೆಲ್ಲಾ ತಡ ಮಾಡಿದ್ರೆ, ನಿಮ್ ಸಿನಿಮಾಗೆ ಅವಾರ್ಡ್ ಬಂದಿದೆ ಅಂತ ಸುದ್ದಿ ಹಬ್ಬಿಸಿಬಿಡ್ತೀವಿ, ಆಮೇಲೆ ಯಾರೂ ಥೇಟರ್ ಕಡೆ ತಲೆ ಕೂಡ ಹಾಕಲ್ಲ' ಅಂತ 'ತುಂಬಾ ಎಣ್ಣೆ ಕುಡಿದ ಕನ್ನಡದ ಜನತೆ' ನಿಮಗೆ ಧಮಕಿ ಹಾಕಿದ್ರಂತೆ?
ಹಿಂಗೆಲ್ಲಾ ಧಮಕಿ ಹಾಕಿದ್ರೆ, ಟೀವಿ ರೈಟ್ಸ್ ಕೊಟ್ಬಿಡ್ತೀನಿ ಅಷ್ಟೆ. ಫ್ಲಾಪ್ ಆದ್ರೂ 'ಸೂಪರ್ಹಿಟ್ ಚಲನಚಿತ್ರ' ಆಗಿಬಿಡುತ್ತೆ.
- ಹಂಗೆಲ್ಲಾ ಟೀವಿಯಲ್ಲಿ ಸಿನಿಮಾ ನೋಡೋದ್ರ ಬಗ್ಗೆ ಹೇಳ್ಬೇಡ್ರೀ, ಜಗ್ಗೇಶ್ ಬೈತಾರೆ. ಸರಿ, ಈ ಸಿನಿಮಾದವ್ರು ನಿಮ್ಮ ನೆಚ್ಚಿನ ಚಿತ್ರಮಂದಿರದಲ್ಲಿ ಬಿಡುಗಡೆ ಅಂತ ಜಾಹೀರಾತು ಹಾಕ್ತಾರಲ್ಲ, ಜನಕ್ಕೆ ನೆಚ್ಚಿನ ಚಿತ್ರಮಂದಿರ, ಅಲ್ಲಿ ಹಾಕಿದ್ರೆ ಮಾತ್ರ ನೋಡ್ತೀವಿ, ಎನ್ನುವಂಥ ಚಿತ್ರಮಂದಿರ ಯಾವುದಾದ್ರೂ ಇರುತ್ತಾ?
ನಮ್ ಸಿನಿಮಾನ ಎಲ್ಲಿ ಹಾಕಿದ್ರೂ ತೊಂದ್ರೆ ಇಲ್ಲ ಬಿಡಿ. ಅದು 'ಡೈರೆಕ್ಟರ್ ಸ್ಪೆಷಲ್ಲು'. ಜನ, ತಾವೇ 'ಹಾಕ್ಕೊಂಡ್ ಬಂದು', ಹುಡುಕ್ಕೊಂಡ್ ಬಂದು ಸಿನಿಮಾ ನೋಡ್ತಾರೆ.
- ಹೋಗ್ಲಿ, ಈ ಗ್ಯಾಪಲ್ಲಿ ನೀವು ಬಿಗ್ಬಾಸ್ಗಾದ್ರೂ ಹೋಗಿದ್ದಿದ್ರೆ ಅಟ್ಲೀಸ್ಟ್, ನಿಮ್ ಸಿನಿಮಾ ಲೇಟ್ ಆಗ್ತಿರೋದಕ್ಕೆ ಹೇಳ್ಕೊಳ್ಳೋಕೆ ಅಂತ ಒಂದ್ ಕಾರಣನಾದ್ರೂ ಸಿಕ್ತಿತ್ತಲ್ಲ?
ಅಯ್ಯೋ ಅದೂ ಒಂದು ರಿಯಾಲಿಟಿ ಶೋನೇನ್ರಿ. ಅಷ್ಟು ದೊಡ್ಡ ದೊಡ್ಡ ಮನೇಲಿ, ಅಷ್ಟೊಂದ್ ಕ್ಯಾಮೆರಾ ಇಟ್ಟು ಶೂಟಿಂಗ್ ಮಾಡೋದೂ ಒಂದು ದೊಡ್ಡ ವಿಷ್ಯನಾ. ನಾನು 'ಎದ್ದೇಳು ಮಂಜುನಾಥ' ಸಿನಿಮಾದಲ್ಲಿ 10 ಬೈ 10 ಮನೇಲಿ ಒಂದೇ ಕ್ಯಾಮೆರಾ ಇಟ್ಟು ಶೂಟಿಂಗ್ ಮಾಡಿದ್ದೆ ನೋಡಿ. ಅದು ತಾಕತ್ತು.
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಮನೆಯಲ್ಲೇ ಮಾಡುವಂಥ ಬ್ಯುಸಿನೆಸ್ಗಳಲ್ಲಿ ಬೇಕರಿ ಕೆಲಸ ಸಾಕಷ್ಟು ಜನಪ್ರಿಯವಾದದ್ದು. ಇದು ಬಹುತೇಕ ಗ್ಯಾರಂಟಿ ಲಾಭ ತರುವ ವ್ಯವಹಾರ ಕೂಡಾ. ಇಂಥದ್ದೇ ಬೇಕು ಎಂದು ತಮ್ಮ ನೆಚ್ಚಿನ ಬೇಕರಿಗಳನ್ನು ಹುಡುಕಿಕೊಂಡು ಹೋಗುವ ಗ್ರಾಹಕರೂ ಇದ್ದಾರೆ. ಹಾಗಾಗಿ ಅಂಥ ಪಕ್ಕಾ ಟ್ರೇಡ್ಮಾರ್ಕ್ ಇರುವ ಬೇಕರಿ ಶುರುಮಾಡುವುದು ಹೇಗೆ ಎಂಬುದರ ಬಗ್ಗೆ ಟಿಪ್ಸ್ ಬೇಕಿದ್ದರೆ ಇಲ್ಲಿ ನೋಡಿ.
- bit.ly/qb3wAD l bit.ly/g9G1jO
- bit.ly/10HCrsV l bit.ly/XvF99y
- bit.ly/140EIqV
ಹರಿ-ಕಥೆ
ಖೇಮುಗೆ ತನ್ನ ಮನೆಯ ಗಾರ್ಡನ್ನಲ್ಲಿ ಮೂರ್ನಾಲ್ಕು ಜನ ಕಳ್ಳರು ಅವಿತುಕೊಂಡಿದ್ದು ಕಾಣಿಸಿತು. ತಕ್ಷಣವೇ ಮನೆಯೊಳಗೆ ಬಂದು ಪೊಲೀಸ್ಗೆ ಕಾಲ್ ಮಾಡಿದ. 'ಸರ್, ನಮ್ಮ ಮನೆಯ ಗಾರ್ಡನ್ನಲ್ಲಿ ಕಳ್ಳರು ಅವಿತಿದ್ದಾರೆ. ದಯವಿಟ್ಟು ಬೇಗ ಬನ್ನಿ' ಎಂದು ಮನೆಯ ಅಡ್ರೆಸ್ ಹೇಳಿದ. ಆ ಕಡೆಯಿಂದ ಮಾತನಾಡುತ್ತಿದ್ದವ 'ಈಗ ಇಲ್ಲಿ ಯಾವ ಪೊಲೀಸ್ ಜೀಪೂ ಇಲ್ಲ, ಪೊಲೀಸರೂ ಇಲ್ಲ, ಬಂದ ಮೇಲೆ ಕಳಿಸುತ್ತೇನೆ' ಎಂದು ಕಾಲ್ ಕಟ್ ಮಾಡಿದ. ಮತ್ತೆ ಖೇಮು 10 ನಿಮಿಷದ ನಂತರ ಫೋನ್ ಮಾಡಿ 'ನನಗೆ ಭಯ ಆಗ್ತಿದೆ, ಬೇಗ ಪೊಲೀಸ್ ಕಳಿಸಿ' ಎಂದ. ಆ ಕಡೆಯಿಂದ 'ಆ ಕಳ್ಳರಲ್ಲಿ ನಿಮ್ಮ ಮನೆಯೊಳಗೆ ಯಾರಾದರೂ ನುಗ್ಗಿದ್ದಾರಾ?' ಎಂಬ ಪ್ರಶ್ನೆ ಬ ಂತು. ಖೇಮು 'ಇನ್ನೂ ಇಲ್ಲ' ಎಂದ. 'ಸರಿ ಬಿಡಿ ಹಾಗಾದ್ರೆ ಚಿಂತೆ ಯಾಕೆ? ಮನೆ ಬಾಗಿಲು ಭದ್ರಪಡಿಸಿಕೊಂಡು ಮಲಗಿಕೊಳ್ಳಿ, ಪೊಲೀಸ್ ಜೀಪ್ ಬಂದ ತಕ್ಷಣ ಕಳಿಸಿಕೊಡುತ್ತೇನೆ' ಎಂದು ಹೇಳಿ ಮತ್ತೆ ಕಾಲ್ ಕಟ್ ಮಾಡಲಾಯ್ತು. ಇನ್ನೆರಡು ನಿಮಿಷದ ನಂತರ ಖೇಮು ಮತ್ತೆ ಕಾಲ್ ಮಾಡಿದ. ಕಾಲ್ ರಿಸೀವ್ ಮಾಡಿದವನು 'ಏನ್ರೀ ಪ್ರಾಬ್ಲಂ ನಿಮ್ದು, ಇಲ್ಲಿ ಯಾರೂ ಇಲ್ಲ ಅಂತ ಹೇಳಿದ್ನಲ್ಲ ಇಡ್ರೀ ಪೋನು' ಎಂದು ಸಿಡಿಮಿಡಿಗೊಂಡ. ಅದಕ್ಕೆ ಖೇಮು ಹೇಳಿದ 'ಇಲ್ಲ ಸರ್, ಈಗ ತಾನೇ, ನಾನೇ ನನ್ನ ರಿವಾಲ್ವರ್ನಿಂದ ಮೂವರೂ ಕಳ್ಳರನ್ನು ಶೂಟ್ ಮಾಡಿ ಸಾಯಿಸಿದ್ದೇನೆ. ಅದಕ್ಕೇ, ಯಾರನ್ನೂ ಕಳಿಸೋದು ಬೇಡ, ಅಂತ ಹೇಳೋಕೆ ಫೋನ್ ಮಾಡಿದೆ' ಎಂದು ಕಾಲ್ ಕಟ್ ಮಾಡಿದ. ಐದೇ ನಿಮಿಷದಲ್ಲಿ ಖೇಮು ಮನೆ ಮುಂದೆ ಮೂರು ಪೊಲೀಸ್ ಜೀಪುಗಳು ಬಂದು ನಿಂತವು. ತಕ್ಷಣ ಗಾರ್ಡನ್ನಲ್ಲಿದ್ದ ಮೂವರು ಕಳ್ಳರು ಓಡಿಹೋಗಲು ಯತ್ನಿಸಿ ಪೊಲೀಸರ ಅತಿಥಿಗಳಾದರು. ಕಳ್ಳರನ್ನು ಹಿಡಿದ ನಂತರ ಬಂದಿದ್ದ ಪೊಲೀಸರಲ್ಲಿ ಒಬ್ಬ ಬಂದು ಖೇಮುವನ್ನು ಕೇಳಿದ 'ಪೋನ್ ಮಾಡಿದಾಗ, ಮೂವರನ್ನು ಶೂಟ್ ಮಾಡಿ ಸಾಯಿಸಿದೆ ಅಂತ ಹೇಳಿದ್ರಲ್ಲ ನೀವು?'. ಅದಕ್ಕೆ ಖೇಮು ಹೇಳಿದ 'ಹೌದು, ಅದಕ್ಕೂ ಮುಂಚೆ, ನಾನು ಎರಡು ಬಾರಿ ಪೋನ್ ಮಾಡಿದಾಗ, ಇಲ್ಲಿ ಯಾವ ಪೊಲೀಸರೂ, ಜೀಪೂ ಇಲ್ಲ ಅಂದ್ರಲ್ಲ ನೀವು!'
ಸ್ಕ್ಯಾಂಡಲ್ವುಡ್
ಅದು ಶಿವರಾಜ್ಕುಮಾರ್ ಅಭಿನಯದ 'ಅಂದರ್ ಬಾಹರ್' ಚಿತ್ರದ ಮೊದಲ ಶೋ. ಮಾರ್ನಿಂಗ್ ಶೋನಲ್ಲಿ ಶಿವಣ್ಣನ ಸಿನಿಮಾ ನೋಡಲು ಇಬ್ಬರು ಕಾಲೇಜು ಹುಡುಗರು ಬಂದಿದ್ದರು. ಆರಂಭದ ಒಂದು ಫೈಟು, ಸ್ಟೈಲಿಷ್ ಹಾಡು ನೋಡಿದ ಇಬ್ಬರು ಹುಡುಗರು ಉತ್ಸಾಹದಿಂದಲೇ ನೋಡುತ್ತಿದ್ದರು. ಆದರೆ ಕ್ರಮೇಣ ಅವರಿಗೆ ಇದು ನಾವಂದುಕೊಂಡಂಥ ಸಿನಿಮಾ ಅಲ್ಲ ಎಂದು ಅರಿವಾಗತೊಡಗಿ ಅವರ ಆಸಕ್ತಿ ಇಳಿಯುತ್ತಾ ಬಂದು ಅದು ಹತಾಶೆಗೆ ತಿರುಗಿ ಅವರಲ್ಲೊಬ್ಬ 'ಥುತ್ ಡಬ್ಬಾ ಪಿಕ್ಚರ್' ಎಂದುಬಿಟ್ಟ. ಮುಂದಿನ ಸಾಲಿನಲ್ಲಿ ಕುಳಿತ ಶಿವರಾಜ್ಕುಮಾರ್ ಅವರ ಅಭಿಮಾನಿಗಳಿಗೆ ಅದು ಕೇಳಿಸಿ, ಇಂಟರ್ವಲ್ ಮುಗಿಯುವುದೇ ತಡ ಆ ಇಬ್ಬರು ಹುಡುಗರ ಮೇಲೆ ಮಾತುಗಳಲ್ಲೇ ಮುಗಿಬಿದ್ದರು. 'ಲೇ, ಯಾರೋ ಕಳಿಸಿದ್ದು ನಿನ್ನ, ಮಾರ್ನಿಂಗ್ ಶೋಗೆ ಬಂದು ಸಿನಿಮಾ ಬಗ್ಗೆ ಅಪಪ್ರಚಾರ ಮಾಡು ಅಂತ ಯಾರು ಹೇಳಿಕೊಟ್ರು? ಇದಕ್ಕಿಂತ ಸಿನಿಮಾ ಬೇಕಾ ನಿಂಗೆ, ಕಿತ್ತೋಗಿರೋ ಸಿನಿಮಾಗಳೇ ಬೇಕು ನಿಮಗೆ, ಹೊಸದೇನಾದ್ರೂ ಮಾಡಿದ್ರೆ ನೋಡೋಕಾಗಲ್ಲ ಅಲ್ಲಾ? ಬಂದಿದಿಯಾ, ಸುಮ್ನೆ ನೋಡ್ಕೊಂಡ್ ಎದ್ದು ಹೋಗು, ಬಾಯಿಂಗ್ ಬಂದಂಗೆ ಕಾಮೆಂಟ್ ಮಾಡ್ಬೇಡ' ಎಂದೆಲ್ಲಾ ಮಾತುಗಳು ಮುಂದುವರಿದು ನಂತರ ಎಲ್ಲವೂ ಸರಿಹೋಯ್ತು ಅನ್ನಿ. ಆದರೆ ಇಲ್ಲಿನ ವಿಚಿತ್ರ ಎಂದರೆ, ಖಂಡಿತಾ 'ಅಂದರ್ ಬಾಹರ್' ಡಬ್ಬಾ ಸಿನಿಮಾ ಆಗಿರಲಿಲ್ಲ. ಹಾಗಾಗಿ, ಒಂದು ಹೊಸರೀತಿಯ ಚಿತ್ರವನ್ನು 'ಡಬ್ಬಾ' ಎಂದಿದ್ದಕ್ಕೆ ಅಭಿಮಾನಿಗಳು ಕೋಪಗೊಂಡಿದ್ದು ನ್ಯಾಯವಾದ ಪ್ರತಿಕ್ರಿಯೆ. ಆದರೆ ಅದೇ ವೇಳೆ, ಸಿನಿಮಾ ನಾನಂದುಕೊಂಡಂತಿಲ್ಲ ಎಂದುಕೊಳ್ಳುವ ಪ್ರೇಕ್ಷಕರಿಗೆ ನಿರಾಸೆಯಾಗಿದ್ದೂ ಸುಳ್ಳಾಗಿರಲಿಲ್ಲ. ಹೀಗಿದ್ದಾಗ, ಯಾರು ಸರಿ, ಯಾರು ತಪ್ಪು? ಯಾರನ್ನು ದೂರೋದು, ಯಾರದೂ ತಪ್ಪಿಲ್ಲ!
ಡಬ್ಕುಡಬಲ್ ತುದಾಂಡಲ್...
ಬಿಗ್ಬಾಸ್ ಬಗ್ಗೆ ತಬಲಾ ನಾಣಿ
ಯಾರ್ಯಾರೋ ಬೈಯ್ಯೋದನ್ನ, ನಮ್ ಕೈಲಿ ಲೈಟಾಗಿ ತಗೊಳ್ಳೋಕಾಗಲ್ಲಪ್ಪ, ನಾವು ಮೊದಲೇ 'ಲೈಟಾಗಿ ತಗೊಂಡಿರ್ತೀವಿ'.
ಬಿಗ್ಬಾಸ್ನಲ್ಲಿ ಭಾಗವಹಿಸಿ ಮನೆಯಿಂದ ಔಟ್ ಆದಮೇಲೆ
- ಯಡಿಯೂರಪ್ಪ
ನಮ್ಮವರೇ ನನಗೆ ಮೋಸ ಮಾಡಿ ನನ್ನ ಮನೆಯಿಂದ ಹೊರಗೆ ಹಾಕಿದಾರೆ, ನಾನು ನನ್ನದೇ ಸ್ವಂತ ಮನೆ ಕಟ್ಟಿ ತೋರಿಸ್ತೀನಿ
- ದೇವೇಗೌಡ
ನಾನು ಸೋತಿಲ್ಲ. ಬಿಗ್ಬಾಸ್ ಮನೆಯಿಂದ ನಾನು ಫೀನಿಕ್ಸ್ನಂತೆ ಎದ್ದು ಬಂದಿದ್ದೇನೆ.
ಲಾಬಿ ಮಾಡಿ ಪ್ರಶಸ್ತಿ ಗಿಟ್ಟಿಸಿಕೊಳ್ಳುವವರಿಗೆ ಇರುವ ಅನಾನುಕೂಲ
ಅವರ ಆತ್ಮ ಚರಿತ್ರೆಯಲ್ಲಿ 'ಅನೇಕ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದವು' ಅಂತ ಹೇಳೋಕಾಗಲ್ಲ. (ಇವರೇ ಹುಡುಕ್ಕೊಂಡ್ ಹೋಗಿದ್ದಲ್ವಾ!)
ಹರಿ
harikannadaprabha@gmail.com