ಅಂಕಣಗಳು

ಕಾಯ್ದೆಯ ಕಣ್ಣುತಪ್ಪಿಸುವ ಗತ್ತು ಗೂಗಲ್‌ಗೆ ಬೇಕಿಲ್ಲ

Published On :

ಮ್ಯಾಪ್‌ಥಾನ್ 2013 ಎಂಬ ಸ್ಪರ್ಧೆ ಆರಂಭಿಸಿರುವ ಗೂಗಲ್, ತನ್ನ ಮ್ಯಾಪ್ ಮೇಕರ್ ಸಾಧನ ಉಪಯೋಗಿಸಿಕೊಂಡು ತಮ್ಮ ಹತ್ತಿರದ ಪ್ರದೇಶಗಳ ವಿವರ ತುಂಬುವಂತೆ ಜನರಿಗೆ ಆಹ್ವಾನ ನೀಡಿದೆ. ಇದೊಂದು ಅಪಾಯಕಾರಿ ಕ್ರಮ ಎಂದು ಸರ್ವೇ ಆಫ್ ಇಂಡಿಯಾ ದೂರು ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ವಿಷಯದ ಆಯಾಮಗಳನ್ನು ಸ್ಪರ್ಶಿಸಿರುವ ಲೇಖನ.
----
ನಮ್ಮ ದೇಶದಲ್ಲಿ ಫಾರಿನ್ನು ಎಂಬ ಶಬ್ದ ಕಿವಿಗೆ ಬಿದ್ದೊಡನೆ ಅದನ್ನು ತೊಡೆ ಮೇಲೆ ಇರಿಸಿಕೊಂಡು ಮುದ್ದಿಸುವ ಜಾಯಮಾನವಿದೆ. ಅಂತೆಯೇ ಭಾರತದ ಕಾನೂನುಗಳನ್ನು ಗೂಗಲ್ ಗಾಳಿಗೆ ತೂರಿದ್ದನ್ನು ಯಾವ ತೀವ್ರತೆಯಲ್ಲಿ ನಾವು ಪರಿಭಾವಿಸಬೇಕಿತ್ತೋ ಅಂತ ಗಾಂಭೀರ್ಯ ವ್ಯಕ್ತವಾಗುತ್ತಿಲ್ಲ. ಪಾರ್ಲಿಮೆಂಟ್ ಹೌಸ್ ಮತ್ತು ಅಂಥ ಕಟ್ಟಡಗಳನ್ನು ಗೂಗಲ್ ವಿವರವಾಗಿ ಚಿತ್ರಿಸಿರುವುದು ಕಳವಳಕ್ಕೆ ಎಡೆ ಮಾಡುವಂಥದ್ದು ಎಂದು ವಿಶ್ಲೇಷಕರು ಹೇಳಿದರೆ ಅದು ಸೂಕ್ತ ಪ್ರತಿಕ್ರಿಯೆ ಆಗುವುದಿಲ್ಲ. ನಿರ್ದಿಷ್ಟ ಸಮಯಮಿತಿಯ ಮಾಹಿತಿಗಳನ್ನು ಗೂಗಲ್‌ನಲ್ಲಿ ನೀಡಲಾಗಿದೆ, ಸ್ಥಳಗಳನ್ನು ಗುರುತಿಸಲಾಗಿದೆ. ಇದು ಬಹಳ ಸೂಕ್ಷ್ಮ ವಿಷಯ. ಭಯೋತ್ಪಾದಕರು ಕ್ಷಿಪಣಿ ಧಾಳಿಗಳನ್ನು ಯೋಜಿಸುವುದಕ್ಕೆ ಈ ಮಾಹಿತಿಗಳನ್ನು ಬಳಸಿಕೊಳ್ಳಬಹುದಾಗಿದೆ. ಈ ಎಲ್ಲ ವಿವರಣಾತ್ಮಕ ಮಾಹಿತಿಗಳನ್ನು ಗೂಗಲ್ ಜಾಲವು ಭಾರತ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡದೇ ಸಂಗ್ರಹಿಸಿತು ಎಂಬುದು ಇನ್ನೂ ಕಳವಳಕ್ಕೆ ದೂಡುವಂಥ ವಿಚಾರ.
ಭಾರತದಲ್ಲಿ ನಕಾಶೆ ಗುರುತಿಸುವಿಕೆಗೆ ಸಂಬಂಧಿಸಿ ಏನಾದರೂ ಕಾನೂನುಗಳಿವೆಯೇ ಇಲ್ಲವೇ ಎಂಬುದಕ್ಕೆ ಗೂಗಲ್ ಉತ್ತರ ಕೊಡಬೇಕು. ಇವೆ ಎಂದಾದರೆ ಅವನ್ನು ಪರಿಪಾಲಿಸಬೇಕಲ್ಲವೇ? ಗೂಗಲ್‌ಗೆ ತುಂಬಾ ದೊಡ್ಡ ಅಭಿಮಾನಿ ವರ್ಗವಿದೆ ಎಂಬ ಅಂಶವು ಅದು ಭಾರತದ ಕಾನೂನುಗಳನ್ನು ಉಲ್ಲಂಘಿಸುವುದಕ್ಕೆ ನೀಡಿದ ಅನುಮತಿ ಆಗಿಬಿಡುತ್ತದೆಯೇ? ಅವರು ಯಾವೆಲ್ಲ ಮಾಹಿತಿಗಳನ್ನು ಕಲೆಹಾಕಿದ್ದಾರೆ, ಅದಕ್ಕೆ ಸಂಬಂಧಿಸಿದ ಯಾರೆಲ್ಲರ ಅನುಮತಿ ಪಡೆದಿದ್ದಾರೆ, ಕಲೆಹಾಕಿದ ಮಾಹಿತಿಗಳಲ್ಲಿ ಎಷ್ಟು ಪ್ರಮಾಣವನ್ನು ಸಾರ್ವಜನಿಕ ವ್ಯಾಪ್ತಿಗೆ ತರದೇ ಸಂಗ್ರಹದಲ್ಲಿ ಇರಿಸಿಕೊಳ್ಳಲಾಗಿದೆ ಎಂಬೆಲ್ಲದರ ಬಗ್ಗೆ ಗೂಗಲ್ ಸಂಸ್ಥೆಯು ಸರ್ಕಾರದೊಂದಿಗೆ ಮಾಹಿತಿ ಹಂಚಿಕೊಳ್ಳಬೇಕಲ್ಲವೇ?
ದು ನಮ್ಮ ದೇಶ ಹಾಗೂ ನಮ್ಮ ದೇಶದ ಸೂಕ್ಷ್ಮ ಮಾಹಿತಿಗಳು ನಮ್ಮ ಸಂಪತ್ತೇ ಆಗಿವೆ. ಈ ಬಗ್ಗೆ ಉದಾಸೀನದಿಂದ ಇರುವ ವಿದೇಶಿ ಮನಸ್ಥಿತಿಯ ಕೆಲವರು ಹಾಗೂ ಗೂಗಲ್‌ನ ಸ್ಟ್ರೀಟ್ ಮ್ಯಾಪ್ ಉಪಯೋಗದಲ್ಲಿ ಖುಷಿ ಕಂಡವರು ಇದೇನೂ ಅಂಥ ಅಪಾಯಕಾರಿ ಅಲ್ಲ ಎನ್ನುತ್ತಿದ್ದಾರೆ. ಅವರಿಗೆ ಜಿಪಿಎಸ್ ಸಾಧನದ ಮೂಲಕ ಮಾಡುವ ಮ್ಯಾಪಿಂಗ್‌ಗೂ ಮತ್ತು ಹಿಂದೋನ್ ಮತ್ತು ಅಂಬಾಲಾಗಳಂಥ ಸೂಕ್ಷ್ಮ ವಾಯುನೆಲೆಗಳ ಸಂಬಂಧದ ಬಾಹ್ಯಾಕಾಶ ಶೋಧಿತ ವಿವರಗಳಿಗೂ ನಡುವಿನ ಅಗಾಧ ಅಂತರ ಗೊತ್ತಿಲ್ಲ ಎಂದರ್ಥ. ಯಾವುದೇ ನಿಯಂತ್ರಣವಿಲ್ಲದೇ ಬೇಕುಬೇಕಾದ ಸಮಯದಲ್ಲಿ ಇಂಥ ವಿಷಯಗಳ ಮಾಹಿತಿ ಸಂಗ್ರಹಿಸುವುದಕ್ಕೆ ಯಾವ ದೇಶವೂ ಯಾರನ್ನೂ ಬಿಡುವುದಿಲ್ಲ. ವೈಟ್‌ಹೌಸ್‌ನ ಒವಲ್ ಕೋಣೆಯನ್ನೋ ಅಥವಾ ರಾಷ್ಟ್ರಪತಿ ಭವನ ಮತ್ತದರ ಅಶೋಕಾ ಹಾಲ್ ಅನ್ನು ತೋರಿಸುವುದು ಸೂಕ್ಷ್ಮ ಮಾಹಿತಿ ಎಂದೆನಿಸಿಕೊಳ್ಳುವುದಿಲ್ಲ. ಆದರೆ ಯುದ್ಧನೌಕೆಗಳು ಈ ಸಮಯದಲ್ಲಿ ಎಲ್ಲಿ ಬೀಡುಬಿಟ್ಟಿವೆ ಎಂಬುದನ್ನು ಸೂಚಿಸುವುದು, ಭಾರತದ ವಾಯುಪಡೆ ಬೀಡುಬಿಟ್ಟಿರುವ ಜಾಗಗಳನ್ನು ಗುರುತಿಸುವುದು, ಅಂಥ ಸ್ಥಳಗಳಲ್ಲಿ ಆಗಿರುವ ಬದಲಾವಣೆಗಳನ್ನು ದಾಖಲಿಸುವುದು... ಈ ಬಗೆಯ ಮಾಹಿತಿಗಳೆಲ್ಲ ತಪ್ಪು ವ್ಯಕ್ತಿಗಳ ಕೈ ಸೇರಿದರೆ ಎಂಥ ಅಧ್ವಾನಕ್ಕೆ ಕಾರಣವಾಗಬಲ್ಲುದಲ್ಲವೇ?
ಗೂಗಲ್ ಮ್ಯಾಪ್‌ಗಳಲ್ಲಿ ಸಮಯಬದ್ಧ 'ಪೋಲ್‌' (ಪಾಯಿಂಟ್ಸ್ ಆಫ್ ಇಂಟರೆಸ್ಟ್. ಉದಾ- ಕಟ್ಟಡ, ಸಂಪನ್ಮೂಲ, ಸ್ಥಳ ಇತ್ಯಾದಿ...) ತೋರಿಸುವುದು ಹಾಗೂ ಸ್ಥಳ ಮತ್ತು ಕಟ್ಟಡಗಳನ್ನು ಮಾರ್ಕ್ ಮಾಡುವುದಕ್ಕೆ ಜನರನ್ನು ಪ್ರೇರೇಪಿಸುವ ಕೆಲಸವನ್ನು ಗೂಗಲ್ ಮಾಡುತ್ತಿದೆ. ಹಿಂದೋನ್ ಮತ್ತು ಅಂಬಾಲಾದಂಥ ವಾಯುನೆಲೆಗಳನ್ನೂ ಜನ ಗುರುತಿಸುವಂತಾಗಿರುವುದು ಇದೇ ಸಾಧನದಿಂದ. ಇನ್ನೂ ಹತ್ತಿರದಿಂದ ನೋಡಿದರೆ ಗೂಗಲ್ ಮ್ಯಾಪ್‌ನವರು ಮಿಗ್‌ಗಳು, ಜಾಗ್ವಾರ್‌ಗಳು, ದಾಳಿಸನ್ನದ್ಧ ಹೆಲಿಕಾಪ್ಟರ್‌ಗಳು ಇವೆಲ್ಲವನ್ನೂ ಮ್ಯಾಪ್‌ನಲ್ಲಿ ಗುರುತಿಸಲಾಗಿತ್ತು. ಇದು ಗಂಭೀರ ವಿಷಯವೇ ಸರಿ.
ಇಂದಿನವರು ತಮ್ಮ ಮೊಬೈಲ್‌ಫೋನ್‌ಗಳಲ್ಲಿ ಹಾಗೂ ಕಾರಿನಲ್ಲಿ ಜಿಪಿಎಸ್ ಸಾಧನ ಹೊಂದಿರುತ್ತಾರೆ ಎಂಬುದೇನೋ ಸರಿ. ಆದರೆ ಅದು ಸ್ಥಳಗಳ ಅಕ್ಷಾಂಶ ಮತ್ತು ರೇಖಾಂಶಗಳನ್ನಷ್ಟೇ ತೋರಿಸುತ್ತದೆ. ತಾವು ಯಾವ ಜಾಗದಲ್ಲಿದ್ದೇವೆ ಎಂಬ ಮಾಹಿತಿಯನ್ನು ಅದರಿಂದ ಪಡೆಯಬಹುದಷ್ಟೆ. ಆದರೆ ಸೂಕ್ಷ್ಮ ಪ್ರದೇಶಗಳನ್ನು ಮ್ಯಾಪ್ ಮಾಡುವ ಸಂಗತಿಯನ್ನು ಇದರೊಂದಿಗೆ ಹೋಲಿಸಿ ಹಗುರಾಗುವುದಕ್ಕೆ ಸಾಧ್ಯವಿಲ್ಲ. ಇದು ತುಂಬ ಗಂಭೀರ ವಿಷಯ. ವ್ಯಕ್ತಿಯೊಬ್ಬ (ಆತ ಏನೂ ಅರಿವಿಲ್ಲದ ಈ ದೇಶದ ನಾಗರಿಕನೂ ಆಗಿದ್ದಿರಬಹುದು) ಸೂಕ್ಷ್ಮ ಜಾಗಗಳನ್ನು ಗುರುತು ಹಾಕುವುದಕ್ಕೆ ಅವಕಾಶವನ್ನು ನೀಡುವುದು ಯಾವ ನಿಟ್ಟಿನಿಂದಲೂ ಸ್ವೀಕಾರಾರ್ಹ ಅಲ್ಲ.
ಭಾರತದ ಯಾವುದೇ ಕಂಪನಿಗಳು 'ಪೋಲ್‌' ಒದಗಿಸುವುದಾರೆ, ಅವನ್ನು ಮ್ಯಾಪ್‌ನಲ್ಲಿ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗಿಸುವುದಕ್ಕೂ ಮೊದಲು ರಕ್ಷಣಾ ಸಚಿವಾಲಯಕ್ಕೆ ಆ ವಿವರಗಳನ್ನು ನೀಡಬೇಕಿರುತ್ತದೆ. ಯಾವುದೇ ಸೂಕ್ಷ್ಮ ಮಾಹಿತಿಗಳು ಅಚಾನಕ್ಕಾಗಿ ಸಾರ್ವಜನಿಕರಿಗೆ ದೊರೆತುಬಿಡುವ ಸಾಧ್ಯತೆಯನ್ನು ಇಲ್ಲವಾಗಿಸುವುದಕ್ಕೆ ಇಂಥದೊಂದು ಎಚ್ಚರಿಕೆ ತೆಗೆದುಕೊಳ್ಳಲಾಗಿದೆ.
ಈ ನಿಯಮಕ್ಕೆ ಗೂಗಲ್ ಒಳಪಡದೇ ಇರಬೇಕೇ? ಹೇಗೆಂದರೂ ನಮ್ಮ ಕಾಯ್ದೆಗಳು ಈ ವಿಚಾರದಲ್ಲಿ ದುರ್ಬಲವಾಗಿರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂಬ ವಾದವಂತೂ ಸರ್ವಥಾ ಸರಿಯಲ್ಲ. ಉದಾಹರಣೆಗೆ, ಒಬ್ಬ ನಟನಾಗಿ ಸಂಜಯ್‌ದತ್‌ಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ ಎಂಬ ಅಂಶವನ್ನು ಯಾರೂ ತಳ್ಳಿಹಾಕುವುದಿಲ್ಲ. ಅವರನ್ನು ಇಷ್ಟಪಡುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬ ಕಾರಣಕ್ಕೆ ಕಾನೂನಿನ ಕೈಗಳು ಅವರನ್ನು ಸ್ಪರ್ಶಿಸಬಾರದು ಎಂಬುದನ್ನು ಒಪ್ಪಲಾಗುವುದಿಲ್ಲವಲ್ಲ? ಅಂತೆಯೇ ಗೂಗಲ್ ಮುಂದುವರಿದ ತಂತ್ರಜ್ಞಾನವನ್ನು ಉಪಯೋಗಿಸಿ ಇಂದಿನ ಪೀಳಿಗೆಯವರಿಗೆ ಅಚ್ಚುಮೆಚ್ಚೆನಿಸುವಂತೆ ವಿನ್ಯಾಸಗೊಂಡಿರುವುದೇನೋ ಖರೆ. ಹಾಗೆಂದು ಅದಕ್ಕೆ ಭಾರತೀಯ ಕಾನೂನಿನ ವ್ಯಾಪ್ತಿ ಮೀರಿದ ಸ್ಥಾನದಲ್ಲಿ ಕುಳ್ಳಿರಿಸಬೇಕೇನು?
ನಮ್ಮ ನೆಲದ ಕಾನೂನಿಗೆ ಮಾನ್ಯತೆ ದೊರೆಯಲೇಬೇಕು. ಈ ನಿಟ್ಟಿನಲ್ಲಿ ಸರ್ವೇಯರ್ ಜನರಲ್ ಆಫ್ ಇಂಡಿಯಾ ಸಲ್ಲಿಸಿರುವ ಆಕ್ಷೇಪ ಸೂಕ್ತವಾದದ್ದೇ ಆಗಿದೆ. ನಮ್ಮ ಸಂವಿಧಾನದ ಪಾರಮ್ಯವನ್ನು ಹಾಗೂ ದೇಶದ ಮಾಹಿತಿ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಇಟ್ಟ ಹೆಜ್ಜೆ ಎಂದೇ ಇದನ್ನು ನೋಡಬೇಕು.

- ತರುಣ್ ವಿಜಯ್
ಅಂಕಣಕಾರರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.